ಧರ್ಮಸ್ಥಳ ಪ್ರಕರಣ |ಕೇಂದ್ರದ ಸೇವೆಗೆ ಪ್ರಣಬ್ ಮೊಹಾಂತಿ; ತೀರ್ಮಾನವಾಗಿಲ್ಲ ಎಂದ ಸಚಿವ ಪರಮೇಶ್ವರ್
ಕೇಂದ್ರ ಸರ್ಕಾರದ ಮುಂಬಡ್ತಿ ಪಟ್ಟಿಯಲ್ಲಿ ಅವರ ಹೆಸರಿದೆ. ಅವರನ್ನು ಕೇಂದ್ರದ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಪರಮೇಶ್ವರ್ ಹೇಳಿದರು.;
ಗೃಹ ಸಚಿವ ಡಾ. ಜಿ.ಪರಮೇಶ್ವರ್
ಕೇಂದ್ರ ಸರ್ಕಾರದ ಮುಂಬಡ್ತಿ ಪಟ್ಟಿಯಲ್ಲಿರುವ ಧರ್ಮ ಎಸ್‌ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಈ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳನ್ನು ಹುಟ್ಟುಹಾಕಲಾಗುತ್ತಿದೆ. ಡಿಜಿ ಹಂತದ ಅಧಿಕಾರಿಯನ್ನು ಎಸ್‌ಐಟಿ ಮುಖ್ಯಸ್ಥರನ್ನಾಗಿ ಮಾಡಬೇಕು ಎಂದು ಸರ್ಕಾರ ತೀರ್ಮಾನ ಮಾಡಿತು. ಪ್ರಣವ್ ಮೊಹಾಂತಿ ಅವರನ್ನು ನೇಮಿಸಿದ್ದೇವೆ. ಕೇಂದ್ರ ಸರ್ಕಾರದ ಮುಂಬಡ್ತಿ ಪಟ್ಟಿಯಲ್ಲಿ ಅವರ ಹೆಸರಿದೆ. ಅವರನ್ನು ಕೇಂದ್ರದ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಪೋಸ್ಟ್ ಮಾಡಲಾಗುತ್ತಿದೆ. ಇದು ಸರಿ ಕಾಣಿಸುವುದಿಲ್ಲ. ಪ್ರಕರಣದಲ್ಲಿ ಸರ್ಕಾರದ ಆಸಕ್ತಿ ಏನಿದೆ?, ಎಸ್‌ಐಟಿ ಯಾಕೆ ರಚಿಸುತ್ತಿದ್ದೆವು ಎಂದು ಪ್ರಶ್ನಿಸಿದ ಅವರು, ಪ್ರಕರಣದಲ್ಲಿ ಸತ್ಯಾಂಶ ಹೊರಬರಬೇಕು ಎಂಬುದಷ್ಟೆ ಸರ್ಕಾರಕ್ಕೆ ಮುಖ್ಯ ಉದ್ದೇಶ ಎಂದು ಹೇಳಿದರು.
ಎಸ್‌ಐಟಿ ಮಾಡಿದ್ದೇವೆ. ಎಸ್‌ಐಟಿ ತನಿಖೆ ನಡೆಸಿ, ವರದಿ ಸಲ್ಲಿಸಿದ ನಂತರ ಸತ್ಯಾಸತ್ಯತೆ ಹೊರಬರುತ್ತವೆ. ನಮಗೆ ಬೇಕಿರುವುದು ಅಷ್ಟೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಯಾರನ್ನು ರಕ್ಷಣೆ ಮಾಡಬೇಕು, ಯಾರನ್ನೋ ಸಿಕ್ಕಿಹಾಕಿಸಬೇಕು ಎಂಬ ಅಜೆಂಡಾ ಸರ್ಕಾರಕ್ಕೆ ಇಲ್ಲ. ಯಾರು ಕೂಡ ಅದನ್ನು ತಪ್ಪು ಭಾವನೆಯಿಂದ ನೋಡಬಾರದು. ಪಾರದರ್ಶಕವಾಗಿ ತನಿಖೆ ಮಾಡಬೇಕು ಎಂದು ಹೇಳಿದ್ದೇವೆ ಎಂದು ಹೇಳಿದರು.