ಚಿನ್ನದ ಬೆಲೆ ಏರಿಕೆಯ ನಡುವೆಯೂ ಅಕ್ಷಯ ತೃತೀಯದಂದು ರಾಜ್ಯದಲ್ಲಿ 3000 ಕೋಟಿ ರೂಪಾಯಿ ವಹಿವಾಟು
ಅಕ್ಷಯ ತೃತೀಯ ದಿನ ಅತ್ಯಂತ ಮಂಗಳಕರವಾದ ದಿನವಾಗಿದ್ದು, ಈ ದಿನ ಚಿನ್ನಾಭರಣಗಳನ್ನು ಖರೀದಿಸಿದರೆ ಸಂಪತ್ತು ವೃದ್ಧಿಯಾಗಲಿದೆ ಎಂಬ ನಂಬಿಕೆಯಿಂದ ಗ್ರಾಹಕರು ಚಿನ್ನಾಭರಣಗಳನ್ನು ಖರೀದಿಸಿದ್ದಾರೆ.;
ಮಳಿಗೆಯೊಂದರಲ್ಲಿ ಚಿನ್ನಾಭರಣ ಖರೀದಿಸುತ್ತಿರುವ ಗ್ರಾಹಕರು.
ಬಂಗಾರದ ಬೆಲೆ ಏರಿಕೆಯ ನಡುವೆಯೂ ಅಕ್ಷಯ ತೃತೀಯದಂದು ರಾಜ್ಯದಲ್ಲಿ 3000 ಸಾವಿರ ಕೋಟಿ ರೂಪಾಯಿ ಭರ್ಜರಿ ವ್ಯಾಪಾರವಾಗಿದ್ದು, 3,380 ಕೆ.ಜಿ ಚಿನ್ನ, 4,560 ಕೆ.ಜಿ ಬೆಳ್ಳಿ ಮಾರಾಟವಾಗಿದ್ದು, ಕಳೆದ ವರ್ಷದ ಅಕ್ಷಯ ತೃತೀಯಕ್ಕೆ ಹೋಲಿಸಿದರೆ ಚಿನ್ನಾಭರಣದ ಮಾರಾಟದಲ್ಲಿ ಶೇಕಡಾ 30ರಷ್ಟು ಹೆಚ್ಚಳವಾಗಿದೆ.
ಕಳೆದ ತಿಂಗಳಷ್ಟೇ ಹತ್ತು ಗ್ರಾಂ ಚಿನ್ನದ ಬೆಲೆ ಒಂದು ಲಕ್ಷ ರೂಪಾಯಿ ದಾಟಿದ್ದರೂ, ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಾಗಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಗ್ರಾಹಕರು ಖುಷಿಯಿಂದಲೇ ಚಿನ್ನಾಭರಣ ಮಳಿಗೆಗಳಿಗೆ ತೆರಳಿ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಖರೀದಿಸಿದ್ದಾರೆ.
ಬೆಲೆ ಏರಿಕೆಗೂ ಕುಗ್ಗದ ಖರೀದಿ
ಕಳೆದ ವರ್ಷ ಅಕ್ಷಯ ತೃತೀಯದಂದು 22 ಕ್ಯಾರಟ್ನ 1 ಗ್ರಾಂ ಚಿನ್ನಕ್ಕೆ 6,756 ರೂಪಾಯಿ, 24 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ 7,369 ರೂಪಾಯಿ ಇತ್ತು. ರಾಜ್ಯದಲ್ಲಿ 2,050 ಕೆ.ಜಿ ಚಿನ್ನ ಹಾಗೂ 1900 ಕೆ.ಜಿ ಬೆಳ್ಳಿ ಮಾರಾಟವಾಗಿತ್ತು. ಆದರೆ ಈ ಬಾರಿ 10 ಗ್ರಾಂ ಚಿನ್ನದ ಬೆಲೆ ಒಂದು ಲಕ್ಷ ರೂಪಾಯಿ ದಾಟಿದರೂ 2,380 ಕೆ.ಜಿ ಚಿನ್ನ, 4560 ಕೆ.ಜಿ ಬೆಳ್ಳಿ ಮಾರಾಟವಾಗಿದ್ದು ಒಟ್ಟು 3,000 ಕೋಟಿ ರೂಪಾಯಿ ವಹಿವಾಟು ನಡೆದಿದೆ.
ಅಕ್ಷಯ ತೃತೀಯವೇ ಏಕೆ ?
ಅಕ್ಷಯ ತೃತೀಯ ದಿನ ಅತ್ಯಂತ ಮಂಗಳಕರವಾದ ದಿನವಾಗಿದ್ದು, ಈ ದಿನ ಚಿನ್ನಾಭರಣಗಳನ್ನು ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಚಿನ್ನ ಹಾಗೂ ಬೆಳ್ಳಿ ದರಗಳು ಹೆಚ್ಚಳವಾಗಿದ್ದರೂ, ಗ್ರಾಹಕರ ಉತ್ಸಾಹ ಕಡಿಮೆಯಾಗಿಲ್ಲ. ಬೆಳಗ್ಗೆಯಿಂದಲೇ ಗ್ರಾಹಕರು ಅಂಗಡಿಗಳಿಗೆ ಬಂದು ಚಿನ್ನಾಭರಣ ಖರೀದಿಸಿದ್ದಾರೆ.
ಯಾವ ಆಭರಣಗಳಿಗೆ ಬೇಡಿಕೆ ಹೆಚ್ಚು
ಈ ಬಾರಿ ಬಸವ ಜಯಂತಿಯಂದು ಅಕ್ಷಯ ತೃತೀಯ ಬಂದಿದ್ದ ಕಾರಣದಿಂದಾಗಿ ಬಸವೇಶ್ವರ ಹಾಗೂ ಶಂಕರಾಚಾರ್ಯರಿರುವ ನಾಣ್ಯಗಳಿಗೆ ಹೆಚ್ಚಿನ ಬೇಡಿಕೆಯಿತ್ತು. ಚಲನಚಿತ್ರ ನಟರು ಧರಿಸುವ ಚಿನ್ನದ ಕರುಂಗಲಿ ಮಾಲೆಗೆ ಹೆಚ್ಚಿನ ಬೇಡಿಕೆ ಹೆಚ್ಚಿತ್ತು.