ಶ್ರೀನಿವಾಸ್‌ ಪ್ರಸಾದ್‌ ಎಂಬ ʼಸ್ವಾಭಿಮಾನಿʼಯ ಏರಿಳಿತದ ಹಾದಿಹೆಜ್ಜೆ

ರಾಜಕೀಯ ಜೀವನದಲ್ಲಿ ಸುದೀರ್ಘ ಅರೆಶತಮಾನದ ಅನುಭವ ಮತ್ತು ಪ್ರಾಮಾಣಿಕತೆಗಳ ಹೊರತಾಗಿಯೂ ನಿಜವಾಗಿಯೂ ಅವರಿಗೆ ಸಿಗಬೇಕಾದ ಸ್ಥಾನಮಾನಗಳು, ಅವಕಾಶಗಳಿಂದ ವಂಚಿತರಾಗಿದ್ದರು. ಬಹುಶಃ ಅದಕ್ಕೆ ಕಾರಣ ಅವರ ರಾಜಿಯಾಗದ ನಿಷ್ಠುರ ಸ್ವಭಾವ ಹಾಗೂ ಸ್ವಾಭಿಮಾನವೇ. ಸಾಮಾಜಿಕ ನ್ಯಾಯ ಮತ್ತು ದಲಿತ ಹಿತಾಸಕ್ತಿಯ ವಿಷಯ ಬಂದಾಗ ಮಾತ್ರ ಅವರು ಎಂದೂ ಅಧಿಕಾರ, ಅವಕಾಶಗಳನ್ನು ನೋಡದೆ ದನಿ ಎತ್ತುತ್ತಿದ್ದರು. ಅಂತಹ ಅವರ ಗುಣವೇ ಅವರಿಗೆ ʼಸ್ವಾಭಿಮಾನಿʼ ಎಂಬ ಅಭಿಮಾನದ ಹೆಸರು ತಂದುಕೊಟ್ಟಿತ್ತು. ಅಂತಹ ಅಪರೂಪದ ʼಸ್ವಾಭಿಮಾನಿʼ ಈಗ ನೆನಪು ಮಾತ್ರ..!;

Update: 2024-04-29 11:25 GMT

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಸಂಸದ ಶ್ರೀನಿವಾಸ ಪ್ರಸಾದ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೂಸಾ ಚಳವಳಿಯಿಂದ ಆರಂಭವಾದ ಅವರ ಹೋರಾಟದ ಜೀವನ, ಹಲವು ಏಳುಬೀಳುಗಳ ಮೂಲಕ ಸಾಗಿ, ರಾಜ್ಯ ರಾಜಕಾರಣದ ಒಂದು ನಿಷ್ಠುರವಾದಿ ಮತ್ತು ದಲಿತರ ಪರ ದನಿಯಾಗಿ ಬೆಳೆದಿತ್ತು. ಅಂತಹದ್ದೊಂದು ಸಾಮಾಜಿಕ ನ್ಯಾಯದ ಪರ ದನಿ ಈಗ ನಿಂತುಹೋಗಿದೆ.

ಶ್ರೀನಿವಾಸ್ ಪ್ರಸಾದ್ ಅವರು 1947ರಲ್ಲಿ ಮೈಸೂರಿನ ಅಶೋಕಪುರಂನ ದಲಿತ ಸಮುದಾಯದ ಸಾಮಾನ್ಯ ಕುಟಂಬದಲ್ಲಿ ಜನಿಸಿದವರು. ಯಾವುದೇ ರಾಜಕೀಯ ಹಿನ್ನಲೆ ಇಲ್ಲದೇ, ರಾಜಕೀಯ ರಂಗದಲ್ಲಿ ಬೆಳೆದು ನಿಂತ ದಲಿತ ನಾಯಕ ಅವರು. ಅವರ ತಂದೆ ವಿದ್ಯಾವಂತರಾಗಿದ್ದರಿಂದ ಶ್ರೀನಿವಾಸ್ ಪ್ರಸಾದ್ ಅವರು ಕೂಡ ಓದಿನಲ್ಲಿ ಹೆಚ್ಚು ಗಮನಹರಿಸಿದ್ದರು. ಹಾಗಾಗಿ ಅವರು ಮುಂದೆ ಬಿಎಸ್ಸಿ ಪದವಿ ಪಡೆಯುತ್ತಾರೆ. ಓದಿನ ಜೊತೆಗೆ ದಲಿತ ಹೋರಾಟಕ್ಕೆ ದುಮುಕಿದ್ದರಿಂದ ಅವರು ರಾಜಕಾರಣಕ್ಕೆ ಬರುವಂತಹ ಸ್ಥಿತಿ ನಿರ್ಮಾನವಾಯಿತು.

ಹೋರಾಟದ ಹಾದಿ

70ರ ದಶಕದಲ್ಲಿ ಬೂಸಾ ಚಳುವಳಿ ಮೂಲಕ ಶ್ರೀನಿವಾಸ್ ಪ್ರಸಾದ್ ಅವರು ಹೋರಾಟಕ್ಕೆ ದುಮುಕುತ್ತಾರೆ. ಅಂದಿನ ಸಚಿವರಾಗಿದ್ದ ಬಿ ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯ ಕುರಿತು ನೀಡಿದ ʻಕನ್ನಡ ಸಾಹಿತ್ಯ ಬೂಸಾʼ ಎನ್ನುವ ಹೇಳಿಕೆ ಆಗ ಮೇಲ್ಜಾತಿಗಳ ಆಕ್ರೋಶಕ್ಕೆ ಕಾರಣವಾಗುತ್ತದೆ. ಆ ಹೇಳಿಕೆಗೆ ಸವರ್ಣೀಯರು ದೊಡ್ಡಮಟ್ಟದ ಹೋರಾಟ ಆರಂಭಿಸುತ್ತಾರೆ. ಆಗ ದಲಿತ ಸಮುದಾಯಗಳು ಮತ್ತು ಪ್ರಗತಿಪರರು ಸಚಿವ ಬಸವಲಿಂಗಪ್ಪ ಅವರ ಪರವಾಗಿ ಚಳವಳಿ ಆರಂಭಿಸುತ್ತಾರೆ.

ಈ ಸಂದರ್ಭದಲ್ಲಿ ಶ್ರೀನಿವಾಸ್ ಪ್ರಸಾದ್ ಅವರು ಮೈಸೂರು ಭಾಗದಲ್ಲಿ ದಲಿತ ವಿದ್ಯಾರ್ಥಿಗಳ ಸಂಘಟನೆ ಮಾಡಿ ಬಸವಲಿಂಗಪ್ಪ ಅವರ ಪರವಾಗಿ ಹೋರಾಟ ಮಾಡುತ್ತಾರೆ. ದಲಿತಪರ ಹೋರಾಟದ ಮೂಲಕವೇ ರಾಜಕೀಯ ಪ್ರವೇಶ ಮಾಡುತ್ತಾರೆ.

1993ರ ಸಮಯದಲ್ಲಿ ಸಂಸದರಾಗಿದ್ದರು. ಈ ಸಂದರ್ಭದಲ್ಲಿ ನಂಜನಗೂಡಿನ ಬದನವಾಳುನಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ನಡೆದ ಗಲಾಟೆಯಲ್ಲಿ ಮೂವರು ದಲಿತರ ಹತ್ಯೆಯಾಗುತ್ತದೆ. ಈ ವೇಳೆ ಶ್ರೀನಿವಾಸ್ ಪ್ರಸಾದ್ ಅವರು ದಲಿತರ ಪರವಾಗಿ ನಿಂತು ಪ್ರಕರಣ ತಾರ್ಕಿಕ ಅಂತ್ಯ ಕಾಣಿಸುವವರೆಗೂ ಕಾನೂನು ಹೋರಾಟ ಮಾಡುತ್ತಾರೆ. ಅಂತಿಮವಾಗಿ ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಆಗುತ್ತದೆ. ಹೀಗೆ ಅವರು ಎಷ್ಟೇ ಪಕ್ಷಗಳನ್ನು ಬದಲಾಯಿಸಿದ್ದರೂ ಅವರ ದಲಿತ ಪರ ನಿಲುವು ಎಂದೂ ಬದಲಾಗಲಿರಲಿಲ್ಲ.

ದಲಿತ ನಾಯಕರಾಗಿದ್ದು, ತುಳಿತಕ್ಕೆ ಒಳಗಾದವರ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದ, ನೇರ-ನಿಷ್ಠುರವಾದಿಯಾಗಿದ್ದ ಪ್ರಸಾದ್ ಅವರು ಸಾಕಷ್ಟು ಬಾರಿ ʻʻನಾನು ಹಲವಾರು ಪಕ್ಷಗಳನ್ನು ಬದಲಿಸಿರಬಹುದು. ಆದರೆ ತತ್ವ ಬಿಟ್ಟಿಲ್ಲ, ನಾನು ಪಕ್ಷಾಂತರಿ ಆಗಿರಬಹುದು. ಆದರೆ ತತ್ವಾಂತರಿಯಾಗಿಲ್ಲ, ಸ್ವಾಭಿಮಾನ ಬಿಟ್ಟಿಲ್ಲʼʼ ಎನ್ನುತ್ತಿದ್ದರು. ಅದರಂತೆ, ನಡೆದುಕೊಂಡರು ಕೂಡ. ರಾಜಕೀಯ ಜೀವನದಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಾಗ ಬಂಡಾಯವೆದ್ದಿದ್ದಾರೆ. ಪಕ್ಷ ಯಾವುದೇ ಇರಲಿ, ನಾಯಕ ಯಾರೇ ಇರಲಿ; ಅವರನ್ನು ಬಿಟ್ಟು ಹೊರನಡೆದಿದ್ದು ಸ್ವಾಭಿಮಾನಿ ರಾಜಕಾರಣಿ ಎಂದೇ ಕರೆಯಿಸಿಕೊಂಡಿದ್ದಾರೆ.

ರಾಜಕೀಯ ಬದುಕಿನ ಹಾದಿ

1974ರಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಡಿ. ಸತ್ಯನಾರಾಯಣ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಎಐಡಿಎಂಕೆ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀನಿವಾಸ್ ಪ್ರಸಾದ್ ಕಣಕ್ಕೆ ಇಳಿಯುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಕಾಂಗ್ರೆಸ್ ಎಷ್ಟೇ ಒತ್ತಡ ತಂದರೂ ಸ್ಪರ್ಧೆಯಿಂದ ಹಿಂದೆ ಸರಿಯದೇ ಪೈಪೋಟಿ ನೀಡಿದ್ದರು. ಆ ಚುನಾವಣೆಯಲ್ಲಿ ಅವರು 4 ನೇ ಸ್ಥಾನ ಪಡೆದರು. ಇವರು ಒಡ್ಡಿದ್ದ ಸ್ಪರ್ಧೆ ರಾಜಕೀಯ ವಲಯದಲ್ಲಿ ಗಮನ ಸೆಳೆದು ಮುಂದೆ ಅವರು ಸಂಸ್ಥಾ ಕಾಂಗ್ರೆಸ್ ಸೇರಿ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಗಮನ ಸೆಳೆದರು.

1977 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಲೋಕದಳ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿ.ರಾಚಯ್ಯ ವಿರುದ್ಧ ಪರಾಭವಗೊಂಡರು. 1978 ರಲ್ಲಿ ಟಿ.ನರಸಿಪುರ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆದರೆ, 28,061 ಮತಗಳನ್ನು ಪಡೆದ ಇಂದಿರಾ ಕಾಂಗ್ರೆಸ್ ನ ಅಭ್ಯರ್ಥಿ ಪಿ.ವೆಂಕಟರಮಣ ಗೆದ್ದರು. ಶ್ರೀನಿವಾಸಪ್ರಸಾದ್ 20,034 ಪಡೆದು ಮೂರನೇ ಚುನಾವಣೆಯಲ್ಲೂ ಪರಾಭವಗೊಂಡರು.

1980 ರ ವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಶ್ರೀನಿವಾಸ ಪ್ರಸಾದ್ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದು ಬಿ.ರಾಚಯ್ಯ ವಿರುದ್ಧ ಗೆದ್ದು ಮೊದಲ ಬಾರಿ ಸಂಸತ್ ಸದಸ್ಯರಾದರು. ಆ ಚುನಾವಣೆಯಲ್ಲಿ ಪ್ರಸಾದ್ 2,28,748 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್-ಯು ನ ಬಿ.ರಾಚಯ್ಯ ಅವರಿಗೆ 1,18,287, ಜನತಾ ಪಕ್ಷದ ಸಿದ್ದಯ್ಯಗೆ 36 ಸಾವಿರ ಮತಗಳು ಬಂದಿದ್ದವು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಠೇವಣಿ ಹಣವನ್ನು ಅವರ ತಾಯಿ ಕೊಟ್ಟು ಶುಭ ಹಾರೈಸಿದ್ದರು ಎಂದು ತಮ್ಮ ʼಸ್ವಾಭಿಮಾನಿಯ ನೆನಪುಗಳುʼ ಎಂಬ ತಮ್ಮ ಜೀವನಗಾಥೆಯಲ್ಲಿ ಪ್ರಸಾದ್ ದಾಖಲಿಸಿದ್ದಾರೆ.

ಮೊದಲ ಬಾರಿ 1980 ರಲ್ಲಿ ಸಂಸದರಾದ ಬಳಿಕ ಪ್ರಸಾದ್ 1984, 1989, 1991 ಹೀಗೆ ಸತತ ನಾಲ್ಕು ಚುನಾವಣೆಗಳಲ್ಲಿ ಜಯಗಳಿಸಿದರು. 1984 ರಲ್ಲಿ ಜನತಾಪಕ್ಷದ ಮಲ್ಲೇಶಯ್ಯ, 1989 ರಲ್ಲಿ ಜನತಾದಳದ ದೇವನೂರು ಶಿವಮಲ್ಲು 1991 ರಲ್ಲಿ ಜನತಾದಳದ ಡಾ.ಎಚ್.ಸಿ.ಮಹಾದೇವಪ್ಪ ಅವರನ್ನು ಶ್ರೀನಿವಾಸಪ್ರಸಾದ್ ಸೋಲಿಸಿದ್ದರು.

1996 ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೇ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡರು. ಸಂಯುಕ್ತರಂಗ ಸರ್ಕಾರಗಳು ಉರುಳಿದ್ದರಿಂದ 1998 ರಲ್ಲಿ ಮತ್ತೇ ಚುನಾವಣೆ ಎದುರಾಗಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದರು. ಆದರೆ, ಎರಡನೇ ಬಾರಿ ಎ.ಸಿದ್ದರಾಜು ಜನತಾದಳದಿಂದ ಆಯ್ಕೆಯಾದರು. 1999 ರ ಲೋಕಸಭಾ ಚುನಾವಣೆಯಲ್ಲಿ ಶ್ರೀನಿವಾಸಪ್ರಸಾದ್ ಜೆಡಿಯುನಿಂದ ಸ್ಪರ್ಧೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಸಿದ್ದರಾಜು ಅವರನ್ನು ಸೋಲಿಸಿದರು.

ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರಾಮಕೃಷ್ಣ ಹೆಗಡೆ , ಜಾರ್ಜ್ ಫರ್ನಾಂಡೀಸ್ ಅವರಿಂದಾಗಿ ಶ್ರೀನಿವಾಸ ಪ್ರಸಾದ್ ಅವರಿಗೆ ಕೇಂದ್ರ ಮಂತ್ರಿ ಸ್ಥಾನ ಒಲಿಯಿತು. ಬಳಿಕ, ಜಾರ್ಜ್ ಫರ್ನಾಂಡೀಸ್ ಅವರೊಂದಿಗೆ ಗುರುತಿಸಿಕೊಂಡು ಸಮತಾ ಪಾರ್ಟಿ ಸೇರಿ 2004 ರ ಚುನಾವಣೆ ವೇಳೆಗೆ ಜೆಡಿಎಸ್ ಸೇರಿ ತಮ್ಮ ಬೆಂಬಲಿಗರಾದ ಕಾಗಲವಾಡಿ ಶಿವಣ್ಣಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡರು. ಅದಾದ ಬಳಿಕ, ಮತ್ತೆ ಕಾಂಗ್ರೆಸ್ ನತ್ತ ವಾಲಿದ ಪ್ರಸಾದ್‌, 2008ರ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಗೆದ್ದು ಮೊದಲ ಬಾರಿ ಶಾಸಕರಾದರು. 2013 ರಲ್ಲೂ ನಂಜನಗೂಡು ಕ್ಷೇತ್ರದಿಂದ ಆಯ್ಕೆಯಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದರು. ಸಚಿವ ಸಂಪುಟ ಪುನಾರಚನೆ ಹೊತ್ತಲ್ಲಿ ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದಕ್ಕೆ ಅವಮಾನಿತರಾದ ನೋವಿನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ನಿಂದ ಹೊರಬಂದರು.

ಆ ಬಳಿಕ, ಬಿಜೆಪಿ ಸೇರಿ ನಂಜನಗೂಡು ಉಪ ಚುನಾವಣೆಯಲ್ಲಿ ಪರಾಭವಗೊಂಡರು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದ ಶ್ರೀನಿವಾಸ ಪ್ರಸಾದ್, 2019ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆ ಮೂಲಕ ಚಾಮರಾಜನಗರ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಕಮಲ ಅರಳಿಸಿ ಬಿಜೆಪಿಗೆ ಜಯ ತಂದುಕೊಟ್ಟಿದ್ದರು. ಇದರೊಂದಿಗೆ ಈ ಕ್ಷೇತ್ರದಿಂದ ಆರು ಬಾರಿ ಆಯ್ಕೆಯಾದ ಹೆಗ್ಗಳಿಕೆಗೂ ಪಾತ್ರರಾಗಿದ್ದರು. 

27 ವರ್ಷಗಳ ಸಂಸತ್ ಸದಸ್ಯರಾಗಿದ್ದ ವೇಳೆ ವಿ.ಶ್ರೀನಿವಾಸ ಪ್ರಸಾದ್ ಅವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ವಿ.ಪಿ.ಸಿಂಗ್, ಚಂದ್ರಶೇಖರ್, ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಕಂಡಿದ್ದರು. ಉತ್ತಮ ಸಂಸದೀಯಪಟುವಾಗಿದ್ದ ಪ್ರಸಾದ್ ಎಲ್ಲಾ ಚರ್ಚೆಗಳಲ್ಲೂ ಭಾಗಿಯಾಗುತ್ತಿದ್ದರು. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸಂಸತ್ ನಲ್ಲಿ ನಿರರ್ಗಳವಾಗಿ ಮಂಡಿಸುತ್ತಿದ್ದರು.

ರಾಜಕೀಯ ಪ್ರವೇಶಿಸಿ 50 ವರ್ಷ ತುಂಬಿದ ಹಿನ್ನಲೆಯಲ್ಲಿ ಕಳೆದ ಮಾರ್ಚ್ 17 ರಂದು ಸುವರ್ಣ ಮಹೋತ್ಸವ ಆಚರಿಸಿ ಚುನಾವಣಾ ರಾಜಕೀಯ ಹಾಗೂ ಸಕ್ರಿಯ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ರಾಜಕೀಯ ನಿವೃತ್ತಿ ಘೋಷಿಸಿದ್ದರೂ ಸಹ ಪ್ರಸ್ತುತ ನಡೆದ ಲೋಕಸಭಾ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್ ಅವರ ಬೆಂಬಲ ಪಡೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಪ್ರಯತ್ನ ನಡೆಸಿದ್ದವು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ಅವರ ಆರೋಗ್ಯ ವಿಚಾರಿಸುವ ನೆಪದಲ್ಲಿ ಅವರ ಮೈಸೂರಿನ ನಿವಾಸಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಆದರೆ ಯಾರಿಗೆ ಬೆಂಬಲ ಘೋಷಿಸದ ಶ್ರೀನಿವಾಸ ಪ್ರಸಾದ್ ತಟಸ್ಥ ನಿಲುವು ತಾಳಿದ್ದರು.

ಸ್ವಾಭಿಮಾನಿಯಾಗಿದ್ದ ಪ್ರಸಾದ್‌ ಅವರು, ತಮ್ಮ ರಾಜಕೀಯ ಜೀವನದಲ್ಲಿ ಸುದೀರ್ಘ ಅರೆಶತಮಾನದ ಅನುಭವ ಮತ್ತು ಪ್ರಾಮಾಣಿಕತೆಗಳ ಹೊರತಾಗಿಯೂ ನಿಜವಾಗಿಯೂ ಅವರಿಗೆ ಸಿಗಬೇಕಾದ ಸ್ಥಾನಮಾನಗಳು, ಅವಕಾಶಗಳಿಂದ ವಂಚಿತರಾಗಿದ್ದರು. ಬಹುಶಃ ಅದಕ್ಕೆ ಕಾರಣ ಅವರ ರಾಜಿಯಾಗದ ನಿಷ್ಠುರ ಸ್ವಭಾವ ಹಾಗೂ ಸ್ವಾಭಿಮಾನವೇ. ಸಾಮಾಜಿಕ ನ್ಯಾಯ ಮತ್ತು ದಲಿತ ಹಿತಾಸಕ್ತಿಯ ವಿಷಯ ಬಂದಾಗ ಮಾತ್ರ ಅವರು ಎಂದೂ ಅಧಿಕಾರ, ಅವಕಾಶಗಳನ್ನು ನೋಡದೆ ದನಿ ಎತ್ತುತ್ತಿದ್ದರು. ಅಂತಹ ಅವರ ಗುಣವೇ ಅವರಿಗೆ ʼಸ್ವಾಭಿಮಾನಿʼ ಎಂಬ ಅಭಿಮಾನದ ಹೆಸರು ತಂದುಕೊಟ್ಟಿತ್ತು. ಅಂತಹ ಅಪರೂಪದ ʼಸ್ವಾಭಿಮಾನಿʼ ಈಗ ನೆನಪು ಮಾತ್ರ..!

Tags:    

Similar News