Dalit CM| ಸಿದ್ದರಾಮಯ್ಯ ಪಟ್ಟ ಉಳಿಸಲು ಹೊಸ ತಂತ್ರ; ಆಪ್ತರಿಂದಲೇ ʼದಲಿತ ಸಿಎಂʼ ಕೂಗು?

ಸಿಎಂ ಬದಲಾವಣೆ ವಿಚಾರದಲ್ಲಿ ಪದೇ ಪದೇ ಹೈಕಮಾಂಡ್‌ ಭೇಟಿ ಮಾಡಿ ಸಿದ್ದರಾಮಯ್ಯ ಪರ ವಕಾಲತು ವಹಿಸಿದ್ದ ಸಚಿವರೇ ಇದೀಗ ದಲಿತ ಸಿಎಂ ವಿಚಾರವನ್ನು ಮುನ್ನೆಲೆಗೆ ತಂದು ವರಿಷ್ಠರಿಗೆ ಖಡಕ್‌ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.;

Update: 2025-05-07 01:30 GMT

ಕಾಂಗ್ರೆಸ್ ಪಕ್ಷದೊಳಗೆ ಸದ್ದಿಲ್ಲದೇ ʼದಲಿತ ಸಿಎಂʼ ಕೂಗಿನ ರಹಸ್ಯ ಚರ್ಚೆ ಆರಂಭವಾಗಿದೆ. ಸಿಎಂ ಬದಲಾವಣೆ ಕುರಿತ ದನಿಯಡಗಿಸಲು ಸಿಎಂ ಆಪ್ತ ಸಚಿವರೇ ʼದಲಿತ ಸಿಎಂʼ ದಾಳ ಉರುಳಿಸಿದ್ದಾರೆ. ನವೆಂಬರ್‌ ಅಂತ್ಯಕ್ಕೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸಲಿದೆ. ಸರ್ಕಾರ ರಚನೆ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿಗೆ ಕಂಟಕ ಬಂದರೆ ʼದಲಿತ ಸಿಎಂʼ ಕುರಿತಂತೆ ಕ್ಷಿಪ್ರ ಬೆಳವಣಿಗೆ ನಡೆಯಲಿದೆ ಎಂಬ ಮಾತುಗಳು ‌ಕಾಂಗ್ರೆಸ್‌ ಪಡಸಾಲೆಯಲ್ಲಿ ಬಲವಾಗಿ ಕೇಳಿ ಬರುತ್ತಿವೆ. 

ಸಿಎಂ ಬದಲಾವಣೆ ವಿಚಾರದಲ್ಲಿ ಪದೇ ಪದೇ ಹೈಕಮಾಂಡ್‌ ಭೇಟಿ ಮಾಡಿ ಸಿದ್ದರಾಮಯ್ಯ ಪರ ವಕಾತು ವಹಿಸಿದ್ದ ಸಚಿವರೇ ಇದೀಗ ದಲಿತ ಸಿಎಂ ವಿಚಾರವನ್ನು ಮುನ್ನೆಲೆಗೆ ತಂದು ವರಿಷ್ಠರಿಗೆ ಖಡಕ್‌ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದ ಸಚಿವರಾದ ಕೆ.ಎನ್‌. ರಾಜಣ್ಣ, ಸತೀಶ್ ಜಾರಕಿಹೊಳಿ, ಡಾ.ಜಿ. ಪರಮೇಶ್ವರ್ ಹಾಗೂ ಮಹಾದೇವಪ್ಪ ಅವರು ಸಿಎಂ ಸ್ಥಾನ ಬದಲಾವಣೆ ಮಾಡಬಾರದು. ಒಂದು ವೇಳೆ ಮಾಡಿದ್ದೇ ಆದಲ್ಲಿ ʼದಲಿತ ಸಿಎಂʼ ಆಯ್ಕೆ ಕುರಿತು ಪರಾಮರ್ಶಿಸಬೇಕು. ರಾಜ್ಯ ರಾಜಕಾರಣದಲ್ಲಿ ಈವರೆಗೆ ದಲಿತರು ಮುಖ್ಯಮಂತ್ರಿಯಾಗಿಲ್ಲ. ಸಿಎಂ ಬದಲಾವಣೆ ಸಂದರ್ಭ ಬಂದರೆ ಮೊದಲ ಆಯ್ಕೆ ಅವಕಾಶವನ್ನು ದಲಿತರಿಗೆ ನೀಡಬೇಕು ಎಂಬ ಬೇಡಿಕೆ ಮುಂದಿರಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಪ್ರಸ್ತುತ, ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ಆಡಳಿತ ಉತ್ತಮವಾಗಿ ನಡೆಯುತ್ತಿದೆ. ಆದಾಗ್ಯೂ, ಸಿಎಂ ಬದಲಾವಣೆ ಬಗ್ಗೆ ಪಕ್ಷದ ಒಳ-ಹೊರಗೆ ಭಾರೀ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಲೇಬೇಕು. ಇದಕ್ಕೆ ನಮ್ಮ ತಕರಾರು ಇರುವುದಿಲ್ಲ. ಒಂದು ವೇಳೆ ಸಿಎಂ ಬದಲಾವಣೆಗೆ ಹೈಕಮಾಂಡ್ ಮುಂದಾದರೆ ದಲಿತರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಸಚಿವರು ನೇರವಾಗಿಯೇ ವೇಣುಗೋಪಾಲ್ ಅವರಿಗೆ ಹೇಳಿದ್ದಾರೆ. ಸಚಿವರ ‌ಅಭಿಪ್ರಾಯ ಆಲಿಸಿದ ವೇಣುಗೋಪಾಲ್ ಅವರು ಯಾವುದೇ ಪ್ರತಿಕ್ರಿಯೆ ಕೊಡದೆ ಎಲ್ಲವನ್ನೂ ಕೇಳಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಜಣ್ಣ-ಪರಮೇಶ್ವರ್ ಚರ್ಚೆ

ಇದೆಲ್ಲಾ ಬೆಳವಣಿಗೆಗಳ ನಡುವೆ ಡಾ.ಜಿ.ಪರಮೇಶ್ವರ್ ಹಾಗೂ ಕೆ.ಎನ್‌.ರಾಜಣ್ಣ ಅವರು ಬೆಂಗಳೂರಿನಲ್ಲಿ ರಹಸ್ಯ ಸಮಾಲೋಚನೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಮೂಲಗಳ ಮಾಹಿತಿ ಪ್ರಕಾರ ದಲಿತ ಸಿಎಂ ಕೂಗು ಮುಂದಿನ ದಿನಗಳಲ್ಲಿ ಬಹಿರಂಗ ಹೇಳಿಕೆಗಳ ಮೂಲಕ ಹೆಚ್ಚಾಗುವ ಸಾಧ್ಯತೆಯೂ ಇದೆ. ಈಗಿನಿಂದಲೇ ಹೈಕಮಾಂಡ್ ಗೆ ಒತ್ತಡ ಹೇರುವುದರ ಜೊತೆಗೆ ಡಿ.ಕೆ.ಶಿವಕುಮಾರ್ ಅವರಿಗೆ ಚೆಕ್ ಮೇಟ್‌ ನೀಡುವ ಕುರಿತು ಯೋಜಿಸಲಾಗಿದೆ ಎನ್ನಲಾಗಿದೆ. 

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಿಂದ ಆರಂಭವಾದ ಸಿಎಂ ಬದಲಾವಣೆ ವಿಚಾರವು ತೆರೆಮರೆಯಲ್ಲೇ ಚರ್ಚೆಗೆ ಒಳಗಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಸಿಎಂ ಸ್ಥಾನ ಬದಲಾವಣೆ ವಿಚಾರ ನಮ್ಮ ಮುಂದಿಲ್ಲ ಎಂದು ಹೈಕಮಾಂಡ್‌ ಸ್ಪಷ್ಟವಾಗಿ ಹೇಳಿದ ನಂತರ ಆ ಕುರಿತ ಚರ್ಚೆಗಳಿಗೆ ಕಡಿವಾಣ ಹಾಕಲಾಗಿತ್ತು. ಈಗ ಅಧಿಕಾರ ಹಂಚಿಕೆ ಒಪ್ಪಂದದ ಮಾತುಗಳು ಹೆಚ್ಚಾಗಿವೆ. ಹಾಗಾಗಿ ಈಗಿನಿಂದಲೇ ʼದಲಿತ ಸಿಎಂʼ ಚರ್ಚೆ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಲು ಸಮುದಾಯಗಳ ಸಚಿವರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. 

ಉಭಯ ಬಣಗಳ ಮಧ್ಯೆ ಪೈಫೋಟಿ

ಸಿಎಂ ಬದಲಾವಣೆಗೆ ಡಿ.ಕೆ.ಶಿವಕುಮಾರ್‌ ಬೆಂಬಗಲಿಗರು ಪಟ್ಟು ಹಿಡಿದು, ಆಗೊಂದು-ಹೀಗೊಂದು ಹೇಳಿಕೆ ನೀಡುತ್ತಿದ್ದರೆ, ಇದಕ್ಕೆ ಪ್ರತಿಯಾಗಿ ಸಿಎಂ ಸಿದ್ದರಾಮಯ್ಯ ಬಣದ ನಾಯಕರು ಕೂಡ ತೆರೆಮರೆಯಲ್ಲಿ ಚಟುವಟಿಕೆ ಆರಂಭಿಸಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಬಣದ ಸಚಿವರು ಸಿಎಂ ಬದಲಾವಣೆ ಬೇಡಿಕೆಗೆ ಠಕ್ಕರ್‌ ನೀಡಲು ಕಾಂಗ್ರೆಸ್‌ ನಾಯಕತ್ವದ ಬದಲಾವಣೆಯ ದಾಳ ಉರುಳಿಸಿದ್ದರು. ಬಹಿರಂಗ ಆರೋಪ-ಪ್ರತ್ಯಾರೋಪಗಳ ಮೂಲಕ ಪಕ್ಷದ ನಾಯಕರ ಮಧ್ಯ ಅಸಮಾಧಾನ ಸ್ಫೋಟಗೊಂಡಿತ್ತು. ಬಳಿಕ ಹೈಕಮಾಂಡ್‌ ಮಧ್ಯಪ್ರವೇಶಿಸಿ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ಹಾಕಿತ್ತು. 

ಸಿಎಂ ಬಣದ ಪ್ರಯತ್ನಗಳಿಗೆ ಬ್ರೇಕ್‌ ಹಾಕಿದ್ದ ಡಿಕೆಶಿ

ಡಿ.ಕೆ. ಶಿವಕುಮಾರ್‌ ಅವರು ವಿದೇಶ ಪ್ರವಾಸಲ್ಲಿ ಸಂದರ್ಭದಲ್ಲಿ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಔತಣಕೂಟ ಹೆಸರಿನಲ್ಲಿ ಸಿಎಂ ಆಪ್ತರ ಸಭೆ ನಡೆದಿತ್ತು. ಆ ಸಭೆಯಲ್ಲಿ ಸಿಎಂ ಸ್ಥಾನ ಬದಲಾವಣೆ, ದಲಿತ ಸಿಎಂ ಹಾಗೂ ಕಾಂಗ್ರೆಸ್‌ ನಾಯಕತ್ವದ ಬದಲಾವಣೆ ಕುರಿತು ವಿಚಾರಗಳು ಚರ್ಚೆಗೆ ಒಳಗಾಗಿದ್ದವು ಎಂದು ತಿಳಿದುಬಂದಿತ್ತು. 

ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ನಡೆದ ಚರ್ಚೆಯ ಮುಂದುವರಿದ ಭಾಗವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನಿವಾಸದಲ್ಲಿ ಔತಣಕೂಟ ಸಭೆ ಏರ್ಪಡಿಸಲು ಸಿದ್ಧತೆ ನಡೆದಿತ್ತು. ಆಗ ಡಿ.ಕೆ. ಶಿವಕುಮಾರ್‌ ಅವರು ರಣದೀಪ್‌ ಸುರ್ಜೇವಾಲಾ ಮೂಲಕ ಔತಣಕೂಟಕ್ಕೆ ಬ್ರೇಕ್‌ ಹಾಕಿಸಿದ್ದರು. ಇದು ಸಿಎಂ ಬಣ ಹಾಗೂ ಡಿಕೆಶಿ ಬಣದ ನಡುವೆ ಪರಸ್ಪರ ವಾಗ್ವಾದಕ್ಕೆ ಕಾರಣವಾಗಿತ್ತು.

ಮತ್ತೊಮ್ಮೆ ಹಾಸನದಲ್ಲಿ ಸಿದ್ಧರಾಮಯ್ಯ ಬೆಂಬಲಿಗರು ಅಹಿಂದ ಸಮಾವೇಶಕ್ಕೆ ಸಿದ್ಧತೆ ನಡೆಸಿದಾಗಲೂ ಡಿಕೆಶಿ ಆ ಕಾರ್ಯಕ್ರಮವನ್ನು ಪಕ್ಷದ ವೇದಿಕೆಗೆ ತಂದು ಸಿಎಂ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

ಮಠಾಧೀಶರಿಂದಲೂ ದಲಿತ ಸಿಎಂ ಕೂಗು

ಕಾಂಗ್ರೆಸ್‌ನಲ್ಲಿ ʼದಲಿತ‌ ಸಿಎಂʼ ಚರ್ಚೆ ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ದಲಿತರಿಗೆ ಅಧಿಕಾರ ನೀಡಬೇಕೆಂಬ ಚರ್ಚೆಗಳು ನಡೆದಿದ್ದವು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ಈಚೆಗೆ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಕೂಡ ದಲಿತ ಸಿಎಂ ಆಯ್ಕೆಗೆ ಆಗ್ರಹಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರನ್ನೇ ನೇರವಾಗಿ ಭೇಟಿಯಾಗಿ ಪ್ರಸ್ತಾಪ ಮುಂದಿರಿಸಿದ್ದರು.

ಪ್ರಜಾಪ್ರಭುತ್ವದಲ್ಲಿ ಶೋಷಿತ ಸಮುದಾಯದವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡದಿದ್ದರೆ ಇದಕ್ಕಿಂತ ಹೀನಾಯ ಸ್ಥಿತಿ ಮತ್ತೊಂದಿಲ್ಲ. ಸಾಮಾಜಿಕ ನ್ಯಾಯ ಪರಿಪಾಲಿಸಬೇಕಾದರೆ ಶೋಷಿತ ಸಮುದಾಯದವರಿಗೆ ಸಿಎಂ ಸ್ಥಾನ ನೀಡಬೇಕು ಎಂದು  ಆಗ್ರಹಿಸಿದ್ದರು.

Tags:    

Similar News