ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ | ಯಾರೇನೇ ಚೀರಿಕೊಂಡರೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಪ್ರಿಯಾಂಕ್‌ ಖರ್ಗೆ

Update: 2024-12-30 08:07 GMT
priyank kharge

ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಗಾಂಧಿ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆ. ಈ ನಡುವೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್‌, ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್‌ ಪಂಚಾಳ್‌ ಎಂಬ ಗುತ್ತಿಗೆದಾರ ತಮ್ಮ ಆಪ್ತ ರಾಜು ಕಪನೂರ್‌ ಸೇರಿದಂತೆ ಕೆಲವರು ಹೆಸರು ಉಲ್ಲೇಖಿಸಿ ಡೆತ್‌ ನೋಟ್‌ ಬರೆದಿತ್ತು ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಪ್ರಿಯಾಂಕ್‌ ಖರ್ಗೆ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.

ಆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಯಾರೆಷ್ಟೇ ಚೀರಾಡಲಿ, ಬಟ್ಟೆ ಹರಿದುಕೊಳ್ಳಲಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ನನ್ನ ರಾಜೀನಾಮೆ ಕೇಳಲು ವಿಜಯೇಂದ್ರ ಅವರೇನು ಸುಪ್ರೀಂಕೋರ್ಟಾ? ರಾಜು ಕಪನೂರ್ ನನ್ನ ಆಪ್ತ ಅಲ್ಲ ಎಂದು ನಾನು ಹೇಳಿಯೇ ಇಲ್ಲ. ರಾಜು ಕಪನೂರು ಕಾಂಗ್ರೆಸ್ ಸೇರುವ ಮೊದಲು ಬಿಜೆಪಿಯಲ್ಲಿದ್ದರು, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿದ್ದರು ಎಂಬುದನ್ನು ಯಾಕೆ ಬಿಜಪಿಯವರು ಮರೆಮಾಚುತ್ತಿದ್ದಾರೆ. ನನಗೂ ಈ ಪ್ರಕರಣಕ್ಕೆ ಏನು ಸಂಬಂಧ? ಯಾವುದಾದರೂ ದಾಖಲೆಗಳಿದ್ದರೆ ತೋರಿಸಲಿ ಎಂದೂ ಅವರು ಸವಾಲು ಹಾಕಿದ್ದಾರೆ.

ವಿಜಯೇಂದ್ರ ವಿರುದ್ಧ ಮನಿ ಲ್ಯಾಂಡ ರಿಂಗ್ ಕೇಸ್ ದಾಖಲಾಗಿದೆ. ಹಾಗಾದರೆ ವಿಜಯೇಂದ್ರ ಯಾಕೆ ರಾಜೀನಾಮೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಕಲಬುರಗಿ ಮುತ್ತಿಗೆಗೆ ಎಷ್ಟು ಜನ ಬರ್ತೀರಿ ಅಂತಾ ಮೊದಲೇ ಹೇಳಿ, ಅಷ್ಟು ಜನರಿಗೆ ಟೀ ವ್ಯವಸ್ಥೆ ಮಾಡ್ತೇವೆ, ಇಲ್ಲದಿದ್ದರೆ ನೀರನ್ನೂ ಕೊಟ್ಟಿಲ್ಲ ಅಂತಾ ಪ್ರತಿಭಟನೆ ಮಾಡ್ತೀರಾ ಎಂದು ವ್ಯಂಗ್ಯವಾಡಿದ್ದಾರೆ.

ಅವರ ಪಕ್ಷದಲ್ಲೇ ಬಿ.ವೈ.ವಿಜಯೇಂದ್ರ ಮಾತಿಗೆ ಕಿಮ್ಮತ್ತಿಲ್ಲ, ಉಳಿದವರು ಯಾಕೆ ಅವರ ಮಾತಿಗೆ ಕಿಮ್ಮತ್ತು ಕೊಡಬೇಕು ಎಂದು ಪ್ರಶ್ನಿಸಿದ ಅವರು, ಯಾರೇನೇ ಹೇಳಲಿ, ಬಡಿದಾಡಿಕೊಳ್ಳಲಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಬೀದರ್‌ನ 26 ವರ್ಷದ ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಳ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.27ರಂದೇ ಸಚಿವ ಪ್ರಿಯಾಂಕ್ ಖರ್ಗೆ ಗೃಹ ಸಚಿವ ಡಾ. ಪರಮೇಶ್ವರ್ಗೆ ಪತ್ರ ಬರೆದಿದ್ದಾರೆ. ಪ್ರಕರಣದಲ್ಲಿ ಸಂಶಯ ಮೂಡಿಸುವಂಥ ಹಲವು ವಿಷಯ ನಡೆಯುತ್ತಿವೆ, ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸತ್ಯಾಂಶ ತಿಳಿಯಲು ಸ್ವತಂತ್ರ ತನಿಖಾ ಸಂಸ್ಥೆಯ ಸಿಐಡಿಗೆ ವಹಿಸಬೇಕೆಂದು ಮನವಿ ಮಾಡಿದ್ದರು.

Tags:    

Similar News