ಸಿಎಂ ವಿರುದ್ಧದ ಭ್ರಷ್ಟಾಚಾರ ಆರೋಪ| ವಿವರಣೆ ಕೇಳಿದ ಕಾಂಗ್ರೆಸ್ ಹೈಕಮಾಂಡ್
ವೈಯಕ್ತಿಕವಾಗಿ ಮತ್ತು ರಾಜ್ಯ ಸರ್ಕಾರದ ವಿರುದ್ಧದ ಕೇಳಿಬಂದಿರುವ ಗಂಭೀರ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ಹೈಕಮಾಂಡ್ ವಿವರಣೆ ಕೇಳಿದೆ
ವೈಯಕ್ತಿಕವಾಗಿ ಮತ್ತು ರಾಜ್ಯ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ಹೈಕಮಾಂಡ್ ವಿವರಣೆ ಕೇಳಿದೆ ಎಂದು ವರದಿಯಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಮಂಗಳವಾರ ಕಾಂಗ್ರೆಸ್ ಸಭೆ ಕರೆದಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳ ವಿಷಯದಲ್ಲಿ ಬಿಜೆಪಿ-ಜೆಡಿ (ಎಸ್) ಆರೋಪಗಳ ಕುರಿತು ಚರ್ಚಿಸಲು ಮಂಗಳವಾರ ಸಭೆ ನಡೆಸಿತು.
ಸದ್ಯ ಸಿ.ಎಂ ಸಿದ್ದರಾಮಯ್ಯ ಅವರ ಮೇಲಿರುವ ಆರೋಪಗಳು ಪಕ್ಷದೊಳಗೆ ಕಳವಳವನ್ನು ಹೆಚ್ಚಿಸಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ ) ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನು ತೊಡಕು ಎದುರಾಗುವ ಸಾಧ್ಯತೆ ಕೂಡ ಇದೆ. ಈ ಸಭೆಯಲ್ಲಿ ಮುಂದಿನ ನಡೆಗಳು ಮತ್ತು ಸರ್ಕಾರ ಅದನ್ನು ಹೇಗೆ ಕಾರ್ಯನಿರ್ವಹಿಸಬೇಕು ಎಂಬುವುದರ ಕುರಿತು ಕೂಡ ಸಭೆಯಲ್ಲಿ ಚರ್ಚಿಸಿಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಪತ್ನಿ ಬಿಎಂ ಪಾರ್ವತಿ ಭಾಗಿಯಾಗಿದ್ದಾರೆ ಎನ್ನಲಾದ ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರ ಸಮ್ಮತಿಗೆ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಮತ್ತು ವಕೀಲ ಟಿಜೆ ಅಬ್ರಹಾಂ ಮನವಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಈಗಾಗಲೇ ರಾಜ್ಯ ಸರ್ಕಾರದಿಂದ ವರದಿ ಕೇಳಿದ್ದಾರೆ. ರಾಜ್ಯಪಾಲರಿಗೆ ವರದಿ ಸಲ್ಲಿಸಲು ಸರ್ಕಾರ ವಿಫಲವಾದಲ್ಲಿ ನಾನು ಒಂದು ವಾರ ಕಾಯುತ್ತೇನೆ ಮತ್ತು ಹೈಕೋರ್ಟಿಗೆ ಹೋಗುತ್ತೇನೆ ಎಂದು ಅಬ್ರಹಾಂ ಹೇಳಿದ್ದಾರೆ.
ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ತೀವ್ರ ಮುಜಗರಕ್ಕೆ ಒಳಗಾಗಿದ್ದು, ಮುಂದಿನ ದಿನಗಳಲ್ಲಿ ಪ್ರಕರಣಗಳು ಇನ್ನಷ್ಟು ತಿರುವು ಪಡೆಯುವ ಸಾಧ್ಯತೆ ಇದೆ. ಹಾಗಾಗಿ ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಏನೆಲ್ಲಾ ಮಾಡಬೇಕಾಗುತ್ತದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಹಗರಣಗಳನ್ನು ಹೇಗೆ ಗುರಾಣಿಯಾಗಿ ಬಳಸಬಹುದು? ಆ ಹಗರಣಗಳ ಕುರಿತ ತನಿಖೆ ಯಾಕೆ ನಿಧಾನಗತಿಯಲ್ಲಿದೆ? ಸರ್ಕಾರ ಯಾಕೆ ಬಿಜೆಪಿ ಹಗರಣಗಳ ವಿಷಯದಲ್ಲಿ ಮೃದು ಧೋರಣೆ ತಾಳಿದೆ? ಎಂಬ ಪ್ರಶ್ನೆಗಳನ್ನೂ ಹೈಕಮಾಂಡ್ ಕೇಳಿದೆ ಎನ್ನಲಾಗಿದೆ.
ಅಲ್ಲದೆ, ಕರ್ನಾಟಕದಲ್ಲಿ ಪಕ್ಷ ಅಧಿಕಾರ ಹಿಡಿಯಲು ಕಾರಣವಾಗಿದ್ದೇ ಪರಿಶಿಷ್ಟರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳು. ಆದರೆ, ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ತುಂಬುವುದರೊಂದಿಗೆ ಪರಿಶಿಷ್ಟರಿಗೆ ಸೇರಿದ ಹಣ ಮತ್ತು ಭೂಮಿಯ ವಿಷಯದಲ್ಲಿ ಭಾರೀ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಇದು ಪಕ್ಷಕ್ಕೆ ದುಬಾರಿಯಾಗಬಹುದು. ಆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರು ಎಚ್ಚರಿಕೆಯಿಂದ ಇರಬೇಕು ಮತ್ತು ಬಿಜೆಪಿ ಅವಧಿಯ ಹಗರಣಗಳ ವಿಷಯದಲ್ಲಿ ಮೃದು ಧೋರಣೆ ಬಿಡಬೇಕು ಎಂದು ಪಕ್ಷದ ಹೈಕಮಾಂಡ್ ತಾಕೀತು ಮಾಡಿದೆ ಎಂದು ಮೂಲಗಳು ತಿಳಿಸಿವೆ.