ವಾಲ್ಮೀಕಿ ನಿಗಮ ಹಗರಣ| ಮುಖ್ಯಮಂತ್ರಿ ಹೆಸರು ಹೇಳಲು ಇಡಿ ಒತ್ತಾಯ ಆರೋಪ: ಸಿದ್ದರಾಮಯ್ಯ ಸಂಪುಟ ಪ್ರತಿಭಟನೆ
ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಮಂಗಳವಾರ ಧರಣಿ ನಡೆಸಿದರು.
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಮಾಜಿ ಸಚಿವ ಬಿ. ನಾಗೇಂದ್ರ ಅವರ ಹೆಸರು ಹೇಳುವಂತೆ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿದ್ದ ಬಿ. ಕಲ್ಲೇಶಪ್ಪ ಅವರಿಗೆ ಇ.ಡಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಮಂಗಳವಾರ ಧರಣಿ ನಡೆಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಎಂ ಸಿದ್ದರಾಮಯ್ಯ, ರಾಜಕೀಯ ಸೇಡು, ದ್ವೇಷದಿಂದ ಕೂಡಿದ ನಡೆಯನ್ನು ನಮ್ಮ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ. ಇದನ್ನು ನಾವು ಪ್ರತಿಭಟಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಒಟ್ಟಾರೆಯಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹಾಗೂ ಮುಖ್ಯಮಂತ್ರಿಗಳನ್ನು ಗುರಿಯಾಗಿಸಬೇಕು ಹಾಗೂ ನನ್ನ ಮತ್ತು ಸರ್ಕಾರದ ವರ್ಚಸ್ಸನ್ನು ಹಾಳು ಮಾಡಬೇಕು. ನಮ್ಮ ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿರುದ್ಧ ಇದ್ದೇವೆ ಎಂದು ರಾಜ್ಯದ ಜನರಿಗೆ ಹೇಳಬೇಕೆಂದು ಹೀಗೆ ಮಾಡುತ್ತಿದ್ದಾರೆ. ನಾವು ಎಂದಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ದುರ್ಬಲ ವರ್ಗದವರ, ಬಡವರ, ರೈತರ , ಕಾರ್ಮಿಕರ ಪರವಾಗಿ ಇದ್ದೇವೆ . ಆದರೂ ಹೇಗಾದರೂ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿರಬಾರದು, ದುರ್ಬಲಗೊಳಿಸಬೇಕೆಂಬ ಉದ್ದೇಶದಿಂದ ವಾಮ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಆರ್ಥಿಕ ಇಲಾಖೆಯಾಗಲಿ, ಮುಖ್ಯಮಂತ್ರಿಯಾಗಲಿ ಈ ಹಗರಣಕ್ಕೆ ಸಂಬಂಧಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು , ಹಗರಣ ಆಗಿದೆ ಎಂದು ತನಿಖೆ ಮಾಡಿಸುತ್ತಿದ್ದೇವೆ ಎಂದರು.
ವಾಲ್ಮೀಕಿ ಹಗರಣಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಆದರೂ ಈ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದೆಂದು ವಾಮಮಾರ್ಗದ ಮೂಲಕ ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಅವರು ಆರೋಪ ಮಾಡಿದರು
ಅಕ್ರಮವಾಗಲು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ, ಉಪವ್ಯವಸ್ಥಾಪಕರು, ಕ್ರೆಡಿಟ್ ಅಧಿಕಾರಿಗಳು ಕಾರಣ ಎಂದು ಬ್ಯಾಂಕಿನಿಂದ ಸೂರು ನೀಡಲಾಗಿದ್ದು ಸಿಬಿಐ ತನಿಖೆ ಮಾಡುತ್ತಿದೆ. ಅವರೇನು ಮಾಡಿದ್ದಾರೆಂದು ತಿಳಿದಿಲ್ಲ. ಇಡಿ ಯವರು ಸ್ವಯಂ ಪ್ರೇರಿತವಾಗಿ ತನಿಖೆ ಪ್ರಾರಂಭ ಮಾಡಿದ್ದು , ನಾಗೇಂದ್ರ ಹಾಗೂ ದದ್ದಲ್ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ನಾಗೇಂದ್ರ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ,ಹೆಚ್ಚುವರಿ ನಿರ್ದೇಶಕ ಕಲ್ಲೇಶ್ ಎಂಬುವರು ಹೇಳಿಕೆಯನ್ನು ಕೊಟ್ಟಿದ್ದರೂ ಇವರೇ ಆದೇಶ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹಾಗೂ ಇತರೆ ಸಚಿವರ ಹೆಸರನ್ನು ಬರೆದು ಕೊಡುವಂತೆ ಒತ್ತಾಯ ಮಾಡಿದ್ದಾರೆ. 187.33 ಕೋಟಿಗಳಲ್ಲಿ 43.33 ಕೋಟಿ ರೂಪಾಯಿ ಖಜಾನೆಯಿಂದ ಹೋಗಿದೆ. ಅದಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ಹಾಗೂ ಆರ್ಥಿಕ ಇಲಾಖೆ ಪಾತ್ರ ಇದರಲ್ಲಿ ಇರುವುದಿಲ್ಲ. ಬಜೆಟ್ ಒಮ್ಮೆ ಅನುಮೋದನೆಯಾದ ಮೇಲೆ ಅನುದಾನ ಕಾರ್ಯದರ್ಶಿಗಳಿಗೆ, ಅಲ್ಲಿಂದ ಅದನ್ನು ನಿರ್ದೇಶಕರಿಗೆ ಹಾಗೂ ನಿರ್ದೇಶಕರು ಅನುದಾನವನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ಕೊಡುತ್ತಾರೆ. ಇದು ಪ್ರಕ್ರಿಯೆ ಎಂದು ವಿವರಿಸಿದರು
'ಇ.ಡಿ ಅಧಿಕಾರಿಗಳು ಬೆದರಿಕೆ ಒಡ್ಡಿದ ಬಗ್ಗೆ ಪೊಲೀಸರಿಗೆ ಕಲ್ಲೇಶ್ ಅವರು ದೂರು ನೀಡಿದ್ದು, ಎಫ್ಐಆರ್ ಕೂಡ ದಾಖಲಾಗಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹುನ್ನಾರ ನಡೆಸುತ್ತಿದೆ. ಮುಖ್ಯಮಂತ್ರಿಯನ್ನು ಗುರಿ ಮಾಡಲು, ಸರ್ಕಾರ ಮತ್ತು ಮುಖ್ಯಮಂತ್ರಿಯ ವರ್ಚಸ್ಸು ಕಡಿಮೆ ಮಾಡಲು ಯತ್ನಗಳು ನಡೆಯುತ್ತಿವೆ' ಎಂದೂ ಅವರು ಹೇಳಿದರು.
ನಿಗಮದಲ್ಲಿ 187 ರೂ ಕೋಟಿ ದುರುಪಯೋಗ ಆಗಿದೆ ಎಂದು ವಿರೋಧ ಪಕ್ಷದವರು ಪದೇ ಪದೇ ಹೇಳುತ್ತಿದ್ದಾರೆ. ಎಂ.ಜಿ ರಸ್ತೆಯ ಯೂನಿಯನ್ ಬ್ಯಾಂಕ್ನಿಂದ ತೆಲಂಗಾಣಕ್ಕೆ ಹೋಗಿರುವುದು 89.63 ರೂ ಕೋಟಿ ಮಾತ್ರ. ನಾವು ಎಸ್ಐಟಿ ರಚನೆ ಮಾಡಿದ ಮೇಲೆ ತ್ವರಿತವಾಗಿ ತನಿಖೆ ನಡೆಯುತ್ತಿದೆ. 34 ಕೋಟಿ ರೂ ನಗದು ವಸೂಲಿ ಮಾಡಲಾಗಿದೆ ಎಂದರು.
'ಶೇ 90ರಷ್ಟು ಎಸ್ಐಟಿ ತನಿಖೆ ಮುಗಿದಿದೆ. ಅಕ್ರಮವಾಗಿ ಹಣ ವರ್ಗಾವಣೆಯಾಗಲು ಬ್ಯಾಂಕಿನವರು ಕಾರಣ ಎಂದು ಬ್ಯಾಂಕಿನ ಅಧಿಕಾರಿಗಳೇ ದೂರು ಕೊಟ್ಟಿದ್ದಾರೆ. ಹೀಗಾಗಿ ಸಿಬಿಐನವರು ತನಿಖೆ ಮಾಡುತ್ತಿದ್ದಾರೆ. ಇ.ಡಿ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ಶಾಸಕ ದದ್ದಲ್ ಮನೆ ಮೇಲೆ ದಾಳಿ ಮಾಡಿದ್ದಾರೆ. ನಾಗೇಂದ್ರ ಅವರನ್ನು ವಶಕ್ಕೆ ಪಡೆದು, ನ್ಯಾಯಾಂಗದ ಬಂಧನಕ್ಕೆ ಕೊಟ್ಟಿದ್ದಾರೆ. ಹಣ ವರ್ಗಾವಣೆಗೆ ಮುಖ್ಯಮಂತ್ರಿ ಆದೇಶ ಇತ್ತು ಎಂದು ಬರೆದುಕೊಡುವಂತೆ ಇ.ಡಿಯವರು ಒತ್ತಡ ಹಾಕುತ್ತಿದ್ದಾರೆ' ಎಂದು ಆರೋಪಿಸಿದರು.
'ಹಿಂದೆ ಬಿಜೆಪಿ ಅವಧಿಯಲ್ಲಿ ನಡೆದ ಹಗರಣಗಳನ್ನು ಇ.ಡಿ ತನಿಖೆ ಮಾಡಿಯೇ ಇಲ್ಲ. ಸಿಬಿಐಗೂ ಕೊಟ್ಟಿಲ್ಲ. ಕೇಂದ್ರದಲ್ಲಿ ಅವರದ್ದೇ (ಬಿಜೆಪಿ) ಸರ್ಕಾರ ಇರುವುದರಿಂದ ಈಗ ಸಿಬಿಐಗೆ ಕೊಡಿ, ಸಿಬಿಐಗೆ ಕೊಡಿ ಎಂದು ಹೇಳುತ್ತಿದ್ದಾರೆ' ಎಂದರು.
ಮೂರು ತನಿಖೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ ಮೂರು ತನಿಖಾ ಸಂಸ್ಥೆಗಳು ವಿಚಾರಣೆ ಮಾಡುತ್ತಿವೆ. ಎಸ್.ಐ.ಟಿ ಯನ್ನು 31-5.2024 ರಂದು ರಚಿಸಲಾಗಿದೆ. 3-6-2024 ರಂದು ಸಿಬಿಐ ಗೆ ಬ್ಯಾಂಕ್ ವತಿಯಿಂದ ದೂರು ನೀಡಲಾಗಿದೆ. ಅದರಲ್ಲಿ ಶುಚಿ ಸ್ಮಿತಾ ರಾವುಲ್, ದೀಪಾ ಹಾಗು ಕೃಷ್ಣಮೂರ್ತಿ ಇವರ ಮೇಲೆ ದೂರು ನೀಡಲಾಗಿದೆ. ಜಾರಿ ನಿರ್ದೇಶನಾಲಯ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುತ್ತಿದೆ. ಒಂದೇ ಹಗರಣದಲ್ಲಿ ಮೂರು ತನಿಖಾ ಸಂಸ್ಥೆಗಳು ವಿಚಾರಣೆ ಮಾಡುತ್ತಿರುವುದು ವಿಶೇಷ. ಮೂರು ತನಿಖಾ ಸಂಸ್ಥೆಗಳು ಒಂದೇ ಪ್ರಕರಣದ ಬಗ್ಗೆ ತನಿಖೆ ಮಾಡುವುದು ಈವರೆಗೆ ನನ್ನ ಅನುಭವಕ್ಕೆ ಬಂದಿರಲಿಲ್ಲ ಎಂದರು.
ತ್ವರಿತ ತನಿಖೆ
ನಾವು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಎಂದು ಹೇಳಿಲ್ಲ. ವಿರೋಧ ಪಕ್ಷದವರು ಪದೇ ಪದೇ 187.33 ಕೋಟಿ ರೂ.ಗಳ ದುರುಪಯೋಗವಾಗಿದೆ ಎಂದು ಆರೋಪಿಸಿದ್ದಾರೆ . ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಂ.ಜಿ ರಸ್ತೆ ಶಾಖೆಯಿಂದ ತೆಲಂಗಾಣಕ್ಕೆ ಹೋಗಿರುವುದು 89.63 ಕೋಟಿ ರೂ.ಗಳು. ಎಸ್. ಐ.ಟಿ ರಚನೆಯಾದ ಮೇಲೆ ತ್ವರಿತವಾಗಿ ತನಿಖೆ ಕೈಗೊಂಡಿದ್ದಾರೆ. ಈಗಾಗಲೇ 12 ಜನರನ್ನು ಬಂಧಿಸಿದ್ದು, ಬೇರೆ ಬೇರೆ ಜನರು ಹಂಚಿಕೊಂಡಿದ್ದ ಮೊತ್ತದಲ್ಲಿ 34 ಕೋಟಿ ರೂಪಾಯಿ ನಗದನ್ನು ಹಿಂಪಡೆದಿದ್ದಾರೆ. 89.63 ಕೋಟಿ . 46 ಕೋಟಿ ರೂ.ಗಳನ್ನು ಫ್ಸ್ತ ಫೈನಾನ್ಸ್ ಕೋ ಆಪರೇಟಿವ್ ಬ್ಯಾಂಕ್ , ರತ್ನಾಕರ ಬ್ಯಾಂಕ್ ಲೀ., ನಲ್ಲಿ 46 ಕೋಟಿ ರೂಪಾಯಿ ಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.ಒತ್ತು 85.25 ಕೋಟಿ ಹಿಂಪಡೆದು , ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಒಟ್ಟು ಅಕ್ರಮವಾಗಿರುವುದು 85.63 ಕೋಟಿಗಳು. ಎಸ್. ಐ ಟಿ ಅವರು ಶೇ.95% ತನಿಖೆಯನ್ನು ಪೂರ್ಣಗೊಳಿಸಿದ್ದಾರೆ ಎಂದರು.
ಕಲ್ಲೇಶ್ ಅವರಿಗೆ ಜೀವ ಬೆದರಿಕೆ
ಜಾರಿ ನಿರ್ದೇನಾಲಯದವರು ಕಲ್ಲೇಶ್ ಅವರಿಗೆ ಹೆದರಿಸಿ, ಬೆದರಿಸಿ, ಜೀವ ಭಯ ಉಂಟು ಮಾಡಿ ಅನಗತ್ಯವಾಗಿ ನನ್ನ ಹೆಸರು ಹೇಳುವಂತೆ ಬೆದರಿಸಿದ್ದಾರೆ. ಪ್ರಕರಣದಲ್ಲಿ ಕಾನೂನಿನ ಪ್ರಕಾರ ನನ್ನ ಮೇಲೆ ಆರೋಪ ಬರುವಂತೆ ಮಾಡಲು ಒತ್ತಾಯಿಸಿದ್ದಾರೆ. ಕಲ್ಲೇಶ್ ದೂರು ನೀಡಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಏನೇನು ನಡೆಯಿತು ಎಂದು ಹೇಳಿದ್ದಾರೆ ಎಂದರು.
ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳಿಗೆ ಇಡಿ ಬರಲಿಲ್ಲ
ಆದರೆ ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದಿರುವ ಭೋವಿ ಅಭಿವೃದ್ಧಿ ನಿಗಮ, ದೇವರಾಜ ಅರಸ್ ಟ್ರಕ್ ಟರ್ಮಿನಲ್, ಎ.ಪಿ .ಎಂ.ಸಿ ಹಾಗೂ ಕೋವಿಡ್ ಹಗರಣಗಳಲ್ಲಿ ಇಡಿ ಬರಲೇ ಇಲ್ಲ. ಬಿಜೆಪಿ ಸಿಬಿಐ ಗೆ ವಹಿಸಲು ಹೇಳುತ್ತಾರೆ. ಅವರು ವಿರೋಧಪಕ್ಷ ದಲ್ಲಿದ್ದಾಗ ಚೋರ್ ಬಚಾವ್ ಸಂಸ್ಥೆ ಎನ್ನುತ್ತಿದ್ದರು. ಅವರ ಸರ್ಕಾರ. ಕೇಂದ್ರದಲ್ಲಿರುವುದರಿಂದ ಸಿಬಿಐ ಗೆ ವಹಿಸುವಂತೆ ಒತ್ತಾಯಿಸುತ್ತಿದ್ದಾರೆ . ನಾವು ಅನೇಕ ಪ್ರಕರಣಗಳನ್ನು ಸಿಬಿಐ ಗೆ ವಹಿಸಿದ್ದೇವೆ. ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿದೆ. ಪರೇಶ್ ಮೆಹ್ತಾ, ರವಿ, ಗಣಪತಿ, ಲಾಟರಿ ಪ್ರಕರಣಗಳನ್ನು ಸಿಬಿಐ ಗೆ ವಹಿಸಲಾಗಿದೆ. ಸರ್ಕಾರ ವಿವೇಚನೆಯನ್ನು ಆಧರಿಸಿ ಪ್ರಕರಣಗಳನ್ನು ವಹಿಸುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಗಳು ಪ್ರಕಾರ 25 ಕೋಟಿ ರೂಪಾಯಿ ಗಿಂತ ಹೆಚ್ಚಿನ ಮೊತ್ತವಿದ್ದರೆ ಸಿಬಿಐ ತನಿಖೆ ಮಾಡಬಹುದು. ತನಿಖೆಗೆ ನಮ್ಮ ತಕರಾರಿಲ್ಲ. ಆದರೆ ಕಾನೂನು ಬಾಹಿರವಾಗಿ ತನಿಖೆ ಮಾಡುವುದನ್ನು ಖಂಡಿಸುತ್ತೇವೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಮಾಡುತ್ತಿದ್ದು ಇದನ್ನು ಖಂಡಿಸಲು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿಯೂ ಇದನ್ನು ನಾವು ಪ್ರಸ್ತಾಪಿಸಲಿದ್ದೇವೆ ಎಂದರು.