ಬಗೆಹರಿದ ಕೋಲಾರ ಕಗ್ಗಂಟು | ಇಬ್ಬರ ನಡುವೆ ಮೂರನೆಯವರಿಗೆ ಲಾಭ: ಗೌತಮ್ ಪಾಲಾಯ್ತು ಟಿಕೆಟ್
ಕೋಲಾರದ ಸಚಿವ ಕೆ ಎಚ್ ಮುನಿಯಪ್ಪ ಮತ್ತು ಮಾಜಿ ಸಚಿವ ರಮೇಶ್ ಕುಮಾರ್ ನಡುವಿನ ಬಣ ರಾಜಕಾರಣದಿಂದಾಗಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಗ್ಗಂಟಾಗಿತ್ತು. ಇದೀಗ, ಎರಡೂ ಗುಂಪಿಗೆ ಟಿಕೆಟ್ ನಿರಾಕರಿಸಿದ ಕಾಂಗ್ರೆಸ್, ಹೊಸ ಮುಖಕ್ಕೆ ಮಣೆ ಹಾಕಿದೆ.
ಕೋಲಾರ: ಈ ಬಾರಿಯ ಲೋಕಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ತಲೆದೋರಿದ್ದ ಗೊಂದಲ ಕೊನೆಗೂ ಬಗೆಹರಿದಿದೆ.
ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬೆಂಗಳೂರು ಕಾರ್ಪೊರೇಟರ್ ವಿಜಯ್ ಕುಮಾರ್ ಅವರ ಪುತ್ರ ಕೆ.ವಿ ಗೌತಮ್ ಅವರ ಹೆಸರನ್ನು ಎಐಸಿಸಿ ಘೋಷಿಸಿದೆ.
ಆ ಮೂಲಕ, ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಸಚಿವ ಕೆ.ಎಚ್.ಮುನಿಯಪ್ಪ ಗುಂಪುಗಳ ನಡುವಿನ ಜಗಳದಲ್ಲಿ ಮೂರನೇ ವ್ಯಕ್ತಿ ಲಾಭ ಪಡೆದುಕೊಂಡಿದ್ದಾರೆ.
ಇಬ್ಬರು ನಾಯಕರ ಬಣ ರಾಜಕಾರಣದಿಂದಾಗಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಳೆದ ಕೆಲವು ದಿನಗಳಿಂದ ಕಗ್ಗಂಟಾಗಿತ್ತು. ಇದೀಗ, ಎರಡೂ ಗುಂಪಿಗೆ ಟಿಕೆಟ್ ನಿರಾಕರಿಸಿರುವ ಕಾಂಗ್ರೆಸ್, ಹೊಸ ಮುಖಕ್ಕೆ ಮಣೆ ಹಾಕಿದೆ.
ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಚಿವ ಕೆ.ಎಚ್ ಮುನಿಯಪ್ಪ ಕುಟುಂಬಕ್ಕೆ ನೀಡಿದರೆ ರಾಜಿನಾಮೆ ನೀಡುವುದಾಗಿ ಜಿಲ್ಲೆಯ ಐವರು ಶಾಸಕರು ಹೈಕಮಾಂಡ್ ಗೆ ಎಚ್ಚರಿಕೆ ನೀಡಿದ್ದರು.
ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಸಚಿವ ಎಂ.ಸಿ.ಸುಧಾಕರ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಮತ್ತು ನಸೀರ್ ಅಹ್ಮದ್ ಅವರು ರಾಜೀನಾಮೆ ನೀಡುವುದಾಗಿ ಪಕ್ಷಕ್ಕೆ ಒತ್ತಡ ಹೇರಿದ್ದರು. ಅದಾದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಎರಡೂ ಕಡೆಯ ನಾಯಕರೊಂದಿಗೆ ಸುದೀರ್ಘ ಸಭೆ ನಡೆಸಿ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸಿದ್ದರು. ಆದರೆ, ಸಭೆಯ ಬಳಿಕವೂ ಎರಡೂ ಬಣಗಳ ನಡುವೆ ಸಹಮತ ಮೂಡದೆ ಅಭ್ಯರ್ಥಿ ಆಯ್ಕೆ ಕಗ್ಗಂಟ್ಟಾಗಿತ್ತು.