Gold Smuggling Case| ನಟಿ ರನ್ಯಾರಾವ್ ವಿರುದ್ಧ ಕಾಫಿಪೋಸಾ ಕಾಯ್ದೆ ಅಡಿ ಬಂಧನ ಆದೇಶ ಜಾರಿ
ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದ ನಂತರ ಮತ್ತೆ ಕಳ್ಳಸಾಗಾಣಿಕೆಯಲ್ಲಿ ತೊಡಗುವುದನ್ನು ತಡೆಯುವ ಸಲುವಾಗಿ ಪ್ರಕರಣದ ಆರೋಪಿ ರನ್ಯಾ ರಾವ್ ವಿರುದ್ಧ ಕಾಫಿಪೋಸಾ ಕಾಯ್ದೆ ಅಡಿ ಬಂಧನ ಆದೇಶ ಜಾರಿಗೊಳಿಸಲಾಗಿದೆ.;
ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಬಂಧಿತರಾಗಿರುವ ನಟಿ ರನ್ಯಾ ರಾವ್ ವಿರುದ್ಧ ಕೇಂದ್ರ ಸರ್ಕಾರ ಕಾಫಿಪೋಸಾ (COFEPOSA) ಕಾಯ್ದೆ (ಕಠಿಣ ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ) ಅಡಿ ಬಂಧನ ಆದೇಶ ಜಾರಿಗೊಳಿಸಲಾಗಿದೆ.
ಕಂದಾಯ ಇಲಾಖೆಯ ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋದ ಜಂಟಿ ಕಾರ್ಯದರ್ಶಿ ಅನುಪಮ್ ಪ್ರಕಾಶ್ ಅವರು ಏಪ್ರಿಲ್ 22 ರಂದು ಈ ಕುರಿತು ಆದೇಶ ಹೊರಡಿಸಿದ್ದಾರೆ.
ಆರೋಪಿಗಳು ಜಾಮೀನಿನ ಮೇಲೆ ಹೊರಬಂದ ನಂತರ ಕಳ್ಳಸಾಗಾಣಿಕೆಯಲ್ಲಿ ತೊಡಗುವುದನ್ನು ತಡೆಯುವ ಸಲುವಾಗಿ ಈ ಆದೇಶ ಜಾರಿಗೊಳಿಸಲಾಗಿದೆ.
ಪ್ರಕರಣದಲ್ಲಿ ರನ್ಯಾ ರಾವ್ ಮತ್ತು ಇತರರು ಜಾಮೀನು ಪಡೆಯಲು ಪದೇ ಪದೇ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ಸಂಸ್ಥೆಗಳು ಈ ಕ್ರಮಕ್ಕೆ ಮುಂದಾಗಿವೆ ಎಂದು ಮೂಲಗಳು ಬಹಿರಂಗಪಡಿಸಿವೆ. ಇತರ ಆರೋಪಿಗಳಾದ ತರುಣ್ ರಾಜು ಮತ್ತು ಸಾಹಿಲ್ ಸಕರಿಯಾ ಜೈನ್ ವಿರುದ್ಧವೂ ಕಾಫಿಪೋಸಾ ಕಾಯ್ದೆಯಡಿ ಬಂಧನ ಆದೇಶ ಜಾರಿಗೊಳಿಸಲಾಗಿದೆ.
ಏನಿದು ಕಾಫಿಪೋಸಾ ಕಾಯ್ದೆ?
ವಿದೇಶಿ ವಿನಿಮಯ ಮತ್ತು ಕಳ್ಳಸಾಗಣೆ ತಡೆ ಕಾಯ್ದೆಯನ್ನು ಕಾಫಿಪೋಸಾ ಎಂದು ಕರೆಯಲಾಗುತ್ತದೆ. ಈ ಕಾಯ್ದೆಯ ಅಡಿಯಲ್ಲಿ ಬಂಧನದ ಆದೇಶ ಹೊರಡಿಸಿದಲ್ಲಿ ಆರೋಪಿಗೆ 3 ತಿಂಗಳಿಂದ ಒಂದು ವರ್ಷದ ವರೆಗೆ ಬಂಧನ ವಿಸ್ತರಿಸಬಹುದಾಗಿದೆ. ಒಂದು ವರ್ಷಗಳ ಕಾಲ ಜಾಮೀನು ಕೂಡ ಸಿಗುವುದಿಲ್ಲ. ಪ್ರಕರಣ ಗಂಭೀರವಾಗಿದ್ದರೆ ಎರಡು ವರ್ಷಗಳ ಕಾಲವೂ ಸಹ ಬಂಧನ ವಿಸ್ತರಣೆ ಮಾಡಬಹುದಾಗಿದೆ. ಈ ಪ್ರಕರಣದಲ್ಲಿ ಜಾಮೀನು ದೊರಕುವುದು ಬಹುತೇಕ ಅಸಾಧ್ಯವಾಗಿದೆ.