ವಿಶೇಷ ಅನುದಾನ ವಾಗ್ವಾದ | ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸಿದ್ದರಾಮಯ್ಯ ತಿರುಗೇಟು

ʼʼನಿರ್ಮಲಾ ಸೀತಾರಾಮನ್ ಅವರೇ, ನಾವು ನಮ್ಮ ಗ್ಯಾರಂಟಿ ಯೋಜನೆಗಳಿಗೆ ವಿಶೇಷ ಅನುದಾನ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಬೇಡುತ್ತಿಲ್ಲ. ಈ ಯೋಜನೆಗಳಿಗೆ ಬೇಕಿರುವ ಅನುದಾನವನ್ನು ಬಜೆಟ್‌ನಲ್ಲೇ ಮೀಸಲಿಟ್ಟಿದ್ದೇವೆʼʼ ಎಂದು ಹೇಳಿದ್ದಾರೆ.

Update: 2024-03-25 14:40 GMT

ಹಣಕಾಸು ಆಯೋಗವು ಕರ್ನಾಟಕಕ್ಕೆ ವಿಶೇಷ ಅನುದಾನ ಶಿಫಾರಸು ಮಾಡಿಲ್ಲ ಎನ್ನುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಅನುದಾನ ಹಂಚಿಕೆ ಬಗ್ಗೆ ಕೇಂದ್ರ ವಿತ್ತ ಸಚಿವರು ಹಸಿ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.

ಥಿಂಕರ್ಸ್‌ ಫೋರಂ ಮೈಸೂರು ಸಂಘಟನೆಯು ಮೈಸೂರಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ʼʼರಾಜ್ಯ ಕಾಂಗ್ರೆಸ್‌ ಸರ್ಕಾರವು ಉಚಿತ ಯೋಜನೆಗಳಿಗೆ ಹಣ ಹೊಂದಿಸಲಾರದೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆʼʼ ಎಂದು ಆರೋಪಿಸಿದ್ದರು.

ನಿರ್ಮಲಾ ಸೀತಾರಾಮನ್‌ ಅವರ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು, ʼʼರಾಜ್ಯ ಸರ್ಕಾರದ ಯೋಜನೆಗಳಿಗೆ ಅವರೇ ಹಣ ಹೊಂದಿಸಿಕೊಳ್ಳಬೇಕು, ಕೇಂದ್ರ ಸರ್ಕಾರವನ್ನು ಕೇಳಬಾರದು ಎನ್ನುವ ನಿರ್ಮಲಾ ಸೀತಾರಾಮನ್ ಅವರ ಯಜಮಾನಿಕೆಯ ಧೋರಣೆ ಅತ್ಯಂತ ಖಂಡನೀಯ. ಈ ಹೇಳಿಕೆ ಆರೂವರೆ ಕೋಟಿ ಕನ್ನಡಿಗರಿಗೆ ತೋರಿರುವ ಅಗೌರವ ಮತ್ತು ಮಾಡಿರುವ ಅವಮಾನ ಎಂದು ತಿಳಿದುಕೊಳ್ಳಬೇಕಾಗುತ್ತದೆʼʼ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಶತಾಯಗತಾಯ ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿ ಬಡವರಿಗೆ ನೀಡಲಾಗಿರುವ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವಂತೆ ಮಾಡಬೇಕೆಂಬ ದುರಾಲೋಚನೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಇದೆ ಎನ್ನುವುದು ಕನ್ನಡಿಗರಿಗೆ ಈಗ ಅರ್ಥವಾಗಿದೆ. ಇದಕ್ಕೆ ತಕ್ಕ ಉತ್ತರವನ್ನು ರಾಜ್ಯದ ಮತದಾರರು ಲೋಕಸಭಾ ಚುನಾವಣೆಯಲ್ಲಿ ನೀಡಲಿದ್ದಾರೆʼʼ ಎಂದಿದ್ದಾರೆ.

ʼʼನಿರ್ಮಲಾ ಸೀತಾರಾಮನ್ ಅವರೇ, ನಾವು ನಮ್ಮ ಗ್ಯಾರಂಟಿ ಯೋಜನೆಗಳಿಗೆ ವಿಶೇಷವಾದ ಅನುದಾನ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಬೇಡಿಕೊಳ್ಳುತ್ತಿಲ್ಲ, ಈ ಯೋಜನೆಗಳಿಗೆ ಬೇಕಿರುವ ಅನುದಾನವನ್ನು ಬಜೆಟ್ನಲ್ಲೇ ಮೀಸಲಿಟ್ಟಿದ್ದೇವೆʼʼ ಎಂದು ಉತ್ತರ ಕೊಟ್ಟಿದ್ದಾರೆ.

ʼʼತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ದ ಸಿಡಿದೆದ್ದಿರುವ ಕನ್ನಡಿಗರ ಕೂಗಿಗೆ ರಾಜ್ಯ ಸರ್ಕಾರ ದನಿಯಾಗಿದೆ. ಇದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯವೂ ಹೌದು. ಅನ್ಯಾಯ ನಡೆದಿರುವ ಕಾರಣಕ್ಕಾಗಿಯೇ 2020-21ರಲ್ಲಿ 15ನೇ ಹಣಕಾಸು ಆಯೋಗವು ತನ್ನ ಮಧ್ಯಂತರ ವರದಿಯಲ್ಲಿ ಕರ್ನಾಟಕವೂ ಸೇರಿದಂತೆ 3 ರಾಜ್ಯಗಳಿಗೆ ವಿಶೇಷ ಅನುದಾನ ₹ 6,764 ಕೋಟಿ (ರಾಜ್ಯಕ್ಕೆ ₹5,495 ಕೋಟಿ, ತೆಲಂಗಾಣಕ್ಕೆ ₹723 ಕೋಟಿ ಹಾಗೂ ಮಿಜೋರಾಂಗೆ ₹546 ಕೋಟಿ) ಶಿಫಾರಸು ಮಾಡಿತ್ತು. ಕರ್ನಾಟಕಕ್ಕೆ ಮಾತ್ರವಲ್ಲ ತೆಲಂಗಾಣ ಮತ್ತು ಮಿಜೋರಾಂಗಳಿಗೂ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿತ್ತುʼʼ ಎಂದು ವಿವರಿಸಿದ್ದಾರೆ.

ʼʼ15ನೇ ಹಣಕಾಸು ಆಯೋಗದ ಅಂತಿಮ ವರದಿಯಲ್ಲಿ ಕೂಡ ಕರ್ನಾಟಕಕ್ಕೆ ₹6,000 ಕೋಟಿ ಇದರಲ್ಲಿ ರೂ.3,000 ಕೋಟಿ ಜಲಮೂಲಗಳ ಸಂರಕ್ಷಣೆ ಹಾಗೂ ₹3,000 ಕೋಟಿ ಬೆಂಗಳೂರಿನ ಫೆರಿಪೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ನೀಡುವಂತೆ ಶಿಫಾರಸು ಮಾಡಿತ್ತು. ಇದು ವಿಶೇಷ ಪ್ರೀತಿ, ಇಲ್ಲವೇ ಔದಾರ್ಯದಿಂದ ಮಾಡಿರುವ ಶಿಫಾರಸುಗಳಲ್ಲ. ಇವೆಲ್ಲವೂ ತೆರಿಗೆ ಹಂಚಿಕೆಯಲ್ಲಿನ ಅನ್ಯಾಯಕ್ಕೆ ನೀಡಿರುವ ಪರಿಹಾರ ಅಷ್ಟೆʼʼ ಎಂದು ತಿಳಿಸಿದ್ದಾರೆ.

ʼʼಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಇದೆ ಎನ್ನುವ ಏಕೈಕ ಕಾರಣಕ್ಕೆ ಈ ಎರಡೂ ಶಿಫಾರಸುಗಳನ್ನು ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ತಿರಸ್ಕರಿಸಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ ನ್ಯಾಯಯುತ ಪಾಲಿನ ಹಕ್ಕಿನಿಂದ ವಂಚಿತರನ್ನಾಗಿಸಿದರು. ಇದು ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಬಗೆದಿರುವ ದ್ರೋಹವಾಗಿದೆʼʼ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ʼʼಕಣ್ಣೆದುರೇ ದಾಖಲೆಗಳಿದ್ದರೂ ಸ್ವಲ್ಪವೂ ಅಂಜಿಕೆಯಿಲ್ಲದೆ ಕೇಂದ್ರ ವಿತ್ತ ಸಚಿವರು ಹಸಿ ಹಸಿ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುವ ಹತಾಶ ಪ್ರಯತ್ನ ನಡೆಸುತ್ತಿದ್ದಾರೆ. ಕನ್ನಡಿಗರ ಎದುರು ಕೇಂದ್ರ ಸರ್ಕಾರದ ಸುಳ್ಳಿನ ಪರದೆ ಕಳಚಿ ಬಿದ್ದು ನಿಜ ಬಣ್ಣ ಬಯಲಾಗಿ ಬಹಳ ಕಾಲ ಆಗಿದೆ. ಇನ್ನಾದರೂ ಸತ್ಯ ಒಪ್ಪಿಕೊಂಡು ಆಗಿರುವ ಅನ್ಯಾಯ ಸರಿಪಡಿಸುವ ಪ್ರಯತ್ನ ಮಾಡಿʼʼ ಎಂದು ಟೀಕಿಸಿದ್ದಾರೆ.

ʼʼಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧದ ಬಗ್ಗೆ ಈ ರೀತಿಯ ಅಜ್ಞಾನ ಹೊಂದಿರುವುದು ವಿಷಾದನೀಯʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದ್ದಾರೆ.

Tags:    

Similar News