Bangalore Stampede: ಆರ್‌ಸಿಬಿ, ಕೆಎಸ್‌ಸಿಎ ವಿರುದ್ಧ ಕ್ರಿಮಿನಲ್ ಕೇಸ್‌ಗೆ ಸಂಪುಟ ಒಪ್ಪಿಗೆ; ಪೊಲೀಸರಿಗೆ ಇಲಾಖಾ ವಿಚಾರಣೆ
ಮೈಕೆಲ್ ಡಿ ಕುನ್ಹಾ ಆಯೋಗದ ವರದಿಯ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ದುರಂತಕ್ಕೆ ಕಾರಣವಾದ ಅಂಶಗಳು ಮತ್ತು ಅದಕ್ಕೆ ಹೊಣೆಗಾರರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಚಿವರು ಒಮ್ಮತದ ನಿರ್ಧಾರಕ್ಕೆ ಬಂದರು.;
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ವರದಿ ಸಲ್ಲಿಸಿದ್ದ ನಿವೃತ್ತ ನ್ಯಾ. ಕುನ್ಹಾ
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ, ಮೈಕೆಲ್ ಡಿ. ಕುನ್ಹಾ ವಿಚಾರಣಾ ಆಯೋಗದ ವರದಿಯನ್ನು ರಾಜ್ಯ ಸಚಿವ ಸಂಪುಟವು ಅಂಗೀಕರಿಸಿದ್ದು, ಹಲವು ಮಹತ್ವದ ಮತ್ತು ಕಠಿಣ ನಿರ್ಧಾರಗಳನ್ನು ಕೈಗೊಂಡಿದೆ. ಆಯೋಗದ ಶಿಫಾರಸಿನಂತೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಮೈಕೆಲ್ ಡಿ ಕುನ್ಹಾ ಆಯೋಗದ ವರದಿಯ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ದುರಂತಕ್ಕೆ ಕಾರಣವಾದ ಅಂಶಗಳು ಮತ್ತು ಅದಕ್ಕೆ ಹೊಣೆಗಾರರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಚಿವರು ಒಮ್ಮತದ ನಿರ್ಧಾರಕ್ಕೆ ಬಂದರು.
ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು
ದುರಂತಕ್ಕೆ ಕಾರಣವಾದ ಭದ್ರತಾ ಲೋಪ ಮತ್ತು ನಿರ್ಲಕ್ಷ್ಯಕ್ಕಾಗಿ ಆರ್‌ಸಿಬಿ ಮತ್ತು ಕೆಎಸ್‌ಸಿಎ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸಂಪುಟವು ಹಸಿರು ನಿಶಾನೆ ತೋರಿದೆ.
ಘಟನೆಯ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾದ ಪೊಲೀಸರ ವಿರುದ್ಧ ಇಲಾಖಾ ತನಿಖೆ (Departmental Inquiry) ನಡೆಸಲು ತೀರ್ಮಾನಿಸಲಾಗಿದೆ. "ಪೊಲೀಸರದ್ದು ತಪ್ಪಿದೆ, ತನಿಖೆ ಆಗಲೇಬೇಕು," ಎಂಬ ಅಭಿಪ್ರಾಯಕ್ಕೆ ಸಭೆಯಲ್ಲಿದ್ದ ಎಲ್ಲಾ ಸಚಿವರು ಒಮ್ಮತದ ಒಪ್ಪಿಗೆ ಸೂಚಿಸಿದ್ದಾರೆ.
ಮೈಕೆಲ್ ಡಿ ಕುನ್ಹಾ ಆಯೋಗವು ವರದಿಯಲ್ಲಿ ಮಾಡಿರುವ ಎಲ್ಲಾ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೆ ತರಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.
ವರದಿಯಲ್ಲೇನಿತ್ತು?
ಚಿನ್ನಸ್ವಾಮಿ ಕ್ರೀಡಾಂಗಣ ಭಾರೀ ಪ್ರಮಾಣದಲ್ಲಿ ಜನಸಮೂಹ ಸೇರಿದಾಗ ನಿಯಂತ್ರಿಸುವ ಪರಿಸ್ಥಿತಿ ಇರಲಿಲ್ಲ. ಕ್ರೀಡಾಂಗಣ ಪ್ರವೇಶ ದ್ವಾರಗಳು ಕಿರಿದಾಗಿದ್ದು, ದೊಡ್ಡ ಪ್ರಮಾಣದ ಜನರ ಸೇರುವುದಕ್ಕೆ ಅಸುರಕ್ಷಿತವಾಗಿದೆ. ಅಲ್ಲದೆ, ಆಯೋಜಕರು ಸರಿಯಾದ ಸಮಯದಲ್ಲಿ ಕ್ರೀಡಾಂಗಣದೊಳಗೆ ಜನರ ಪ್ರವೇಶಕ್ಕೆ ಅನುಮತಿಸದೆ, ಕ್ರೀಡಾಂಗಣದ ಹೊರಭಾಗದಲ್ಲಿಯೇ ನಿಲ್ಲುವಂತೆ ಮಾಡಿದ್ದಾರೆ. ಇದು ಕೂಡ ಕಾಲ್ತುಳಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.ಪೊಲೀಸರ ವರ್ತನೆ ಬಗ್ಗೆ ವರದಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಕ್ರೀಡಾಂಗಣದ ಬಳಿ ಭದ್ರತೆ ನೀಡುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ.
515 ಮಂದಿ ಪೊಲೀಸರನ್ನು ಭದ್ರತೆಗೆ ನೇಮಕ ಮಾಡಿದ್ದರೆ, ಕ್ರೀಡಾಂಗಣದ ಹೊರಭಾಗ ಕೇವಲ 79 ಮಂದಿ ನಿಯೋಜಿಸಲಾಗಿತ್ತು. ಅಲ್ಲದೆ, ಪೊಲೀಸರು ಭದ್ರತೆ ಒದಗಿಸುವುದಕ್ಕಿಂತ ಆಯೋಜಕರೊಂದಿಗೆ ಆಯೋಜಕರಂತೆ ವರ್ತಿಸಿದ್ದಾರೆ. ಇದು ಭದ್ರತಾ ಲೋಪಕ್ಕೆ ಕಾರಣವಾಗಿದೆ. ಅಲ್ಲದೆ, ತುರ್ತು ಪರಿಸ್ಥಿತಿ ಎದುರಿಸುವುದಕ್ಕೆ ಅಗತ್ಯವಿರುವ ಯಾವುದೇ ಸೂಕ್ತ ಕ್ರಮಗಳನ್ನೂ ಕೈಗೊಂಡಿರಲಿಲ್ಲ ಎಂದು ಹೇಳಲಾಗಿದೆ.
ಯಾರ ಮೇಲೆ ಕ್ರಮ ಸಾಧ್ಯತೆ?
ದುರ್ಘಟನೆಗೆ ಸಂಬಂಧಿಸಿದಂತೆ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಮಾಜಿ ಕಾರ್ಯದರ್ಶಿ ಶಂಕರ್, ಮಾಜಿ ಖಜಾಂಚಿ ಜೈರಾಮ್, ಆರ್‌ಸಿಬಿ ಉಪಾಧ್ಯಕ್ಷ ರಾಜೇಶ್ ಮೆನನ್, ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಟಿ.ವೆಂಕಟ್ ವರ್ಧನ್, ಉಪಾಧ್ಯಕ್ಷ ಸುನೀಲ್ ಮಾಥುರ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಎಡಿಜಿಪಿ ಬಿ. ದಯಾನಂದ್, ಐಜಿ ವಿಕಾಸ್ ಕುಮಾರ್ ವಿಕಾಸ್, ಡಿಸಿಪಿ ಶೇಖರ್ ಎಚ್.ತೆಕ್ಕಣ್ಣನವರ್, ಎಸಿಪಿ ಸಿ. ಬಾಲಕೃಷ್ಣ ಹಾಗೂ ಇನ್ಸ್‌ಪೆಕ್ಟರ್ ಗಿರೀಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
ವಿರಾಟ್ ಕೊಹ್ಲಿ ́ಎಕ್ಸ್ʼ ಮಾತ್ರ ಪ್ರಸ್ತಾಪ
ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಲು ಕಂಠೀರವ ಕ್ರೀಡಾಂಗಣದಲ್ಲಿ ಲಕ್ಷಾಂತರ ಅಭಿಮಾನಿಗಳು ಭಾಗಿಯಾಗಿದ್ದರು. ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ ವಿಜಯೋತ್ಸವ ನಡೆಯುವ ಕುರಿತು ಟ್ವಿಟ್ ಮಾಡಿದ್ದರು. ಇದು ಲಕ್ಷಾಂತರ ಜನರಿಗೆ ಶೇರ್ ಆಗಿತ್ತು. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನಸ್ತೋಮ ಸೇರಲು ಕಾರಣವಾಯಿತು ಎಂಬುದಾಗಿ ನ್ಯಾ.ಕುನ್ಹಾ ವರದಿಯಲ್ಲಿ ಉಲ್ಲೇಖವಾಗಿದೆ. ಆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಯಾವುದೇ ಅಂಶವೂ ವರದಿಯಲ್ಲಿ ಇಲ್ಲ. ಹೀಗಾಗಿ ಘಟನೆಗೆ ವಿರಾಟ್ ಕೊಹ್ಲಿ ಟ್ವಿಟ್ ಮಾಡಿರುವುದು ಸಹ ಒಂದು ಕಾರಣವಾಗಿದೆ ಎಂದು ಹೇಳಲಾಗಿದೆಯೇ ಹೊರತು ಅವರನ್ನು ತಪ್ಪಿತಸ್ಥರು ಎಂದು ಪರಿಗಣಿಸಿಲ್ಲ.
ಸರ್ಕಾರ-ಅಧಿಕಾರಿಗಳ ನಡುವೆ ಕಾನೂನು ಸಮರ ತೀವ್ರ
ಮ್ಯಾಜಿಸ್ಟ್ರೇಟ್ ಮತ್ತು ನಿವೃತ್ತ ನ್ಯಾ.ಜಾನ್ ಮೈಕಲ್ ಡಿ. ಕುನ್ಹಾ ವರದಿ ಅನ್ವಯ ಕೆಎಸ್‌ಸಿಎ, ಆರ್‌ಸಿಬಿ ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ವಿರುದ್ಧ ಕ್ರಿಮಿನಲ್ ಸಂಚು ಪ್ರಕರಣ ದಾಖಲಿಸಿದರೆ ರಾಜ್ಯ ಸರ್ಕಾರಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಯಾಕಂದರೆ, ಇವರಾರು ಸರ್ಕಾರದ ಅಂಗ ಅಲ್ಲ. ಆದರೆ, ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದರೆ ಕಾನೂನು ಸಮರ ಎದುರಿಸಬೇಕಾಗುತ್ತದೆ. ಇದು ಸರ್ಕಾರ ಮತ್ತು ಅಧಿಕಾರಿಗಳ ನಡುವಿನ ತಿಕ್ಕಾಟ ಪ್ರಾರಂಭವಾಗುವ ಸಾಧ್ಯತೆ ಇದೆ. ಸಹಜವಾಗಿ ಅಧಿಕಾರಿಗಳು ಸರ್ಕಾರದ ನಡೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ಅಧಿಕಾರಿಗಳು ಸರ್ಕಾರದ ಒಂದು ಭಾಗವಾಗಿದ್ದು, ಅವರು ಅಸಹಕಾರ ತೋರಿದರೆ ಸರ್ಕಾರದ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ.
ದ ಫೆಡರಲ್ ಕರ್ನಾಟಕ ಈ ಸಂಬಂಧ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಅದರ ಲಿಂಕ್ ಇಲ್ಲಿದೆ
ಕಾಲ್ತುಳಿತ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಸಂಚು ಪ್ರಕರಣ ದಾಖಲು ಸಾಧ್ಯತೆ?