ಚಿನ್ನಸ್ವಾಮಿ ಸ್ಟೇಡಿಯಂ ಪಕ್ಕ ಕಾದು ಕೂತಿದೆ ʼರಕ್ಕಸ ಗುಂಡಿʼ; ಕಾಲ್ತುಳಿತ ದುರಂತವಾದರೂ ಕಣ್ಣು ತೆರೆಯದ ಆಡಳಿತ

ದುರಂತ ನಡೆದ 12 ರಿಂದ 18ರವರೆಗಿನ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದ ಗೇಟ್‌ಗಳ ಬಳಿ ಅಂದರೆ ಸರಿಸುಮಾರು 17ನೇ ಗೇಟ್‌ ಮುಂದೆ ಜನರ ಪ್ರಾಣಹಾನಿಗೆ ʼರಾಕ್ಷಸ ಹೊಂಡʼವೊಂದು ಬಾಯ್ದೆರೆದು ಕಾದು ಕೂತಿದೆ.;

Update: 2025-08-09 06:26 GMT

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್‌ಸಿಬಿ ಕಪ್‌ ಸಂಭ್ರಮಾಚರಣೆ ಸಂದರ್ಭದಲ್ಲಿ ಸರ್ಕಾರ ಮತ್ತು ಸಂಘಟಕರ ಸಮನ್ವಯ ಕೊರತೆ ಹಾಗೂ ಪೊಲೀಸರ ಅಸಮರ್ಪಕ ನಿರ್ವಹಣೆ ಕಾರಣಗಳಿಗಾಗಿ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿ ಎರಡು ತಿಂಗಳುಗಳು ಕಳೆದಿವೆ. ಪೊಲೀಸ್‌ ತನಿಖೆ, ನ್ಯಾಯಾಂಗ ತನಿಖೆ, ಮ್ಯಾಜಿಸ್ಟೀರಿಯಲ್‌ ತನಿಖೆ.. ಹೀಗೆ ತನಿಖೆಗಳು ನಡೆದು ಸಂಬಂಧಿತರನ್ನು ಅರೋಪಿತರನ್ನಾಗಿಸುವ ಕಾರ್ಯ ನಡೆದರೂ, ಆಡಳಿತ ನಿರ್ವಹಣೆ ಮಾಡಬೇಕಾದವರು ಇನ್ನೂ ಬುದ್ಧಿಕಲಿತಂತೆ ಕಾಣುವುದಿಲ್ಲ.

ದುರಂತ ನಡೆದ 12 ರಿಂದ 18ರವರೆಗಿನ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದ ಗೇಟ್‌ಗಳ ಬಳಿ ಅಂದರೆ ಸರಿಸುಮಾರು 17ನೇ ಗೇಟ್‌ ಮುಂದೆ ಜನರ ಪ್ರಾಣಹಾನಿಗೆ ಕಾಯುತ್ತಿರುವ ʼರಾಕ್ಷಸ ಹೊಂಡʼವೊಂದು ಬಾಯ್ದೆರೆದು ಕಾದು ಕೂತಿದೆ. ಇನ್ನೊಬ್ಬ ಅಮಾಯಕನ ಪ್ರಾಣದ ಆಹುತಿಗಾಗಿ ಸಂಬಂಧಿತ ಇಲಾಖೆ (ಬಿಬಿಎಂಪಿ ಅಥವಾ ಸರ್ಕಾರ) ಕಾದು ಕೂತಿರುವಂತೆ ಕಾಣುತ್ತಿದೆ.


ಈಗ ಕೇವಲ ಸಂಚಾರ ನಿರ್ವಹಣೆಗಾಗಿ ಹಾಕಲಾಗುವ ಬ್ಯಾರಿಕೇಡನ್ನು ಅಡ್ಡಲಾಗಿ ಇಡಲಾಗಿದೆ. ವಾಹನ ಸವಾರರರು ಗುಂಡಿಗೆ ಬೀಳದಿದ್ದರೂ ಅಪಘಾತ ಆಗುವ ಸಂಭವ ಇನ್ನೂ ಹೆಚ್ಚಾಗುವಂತೆ ಮಾಡಲಾಗಿದೆ! ಈ ಬಗ್ಗೆ ಏನನ್ನಬೇಕು ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ಮಿನ್ಸ್ಕ್‌ ಚೌಕದಿಂದ ಮಹಾತ್ಮಾಗಾಂಧಿ ಉದ್ಯಾನವನ ಕಡೆ  ಚಿನ್ನಸ್ವಾಮಿ ಸ್ಟೇಡಿಯಂ ಪಕ್ಕದಲ್ಲೇ ಸಾಗುವ ಕ್ವೀನ್ಸ್‌ ರಸ್ತೆಯಲ್ಲಿ, ಬಹುತೇಕ ಸಂದರ್ಭಗಳಲ್ಲಿ ಸಂಚಾರ ದಟ್ಟಣೆಯಲ್ಲೇ ಇರುವ ಕಬ್ಬನ್‌ ರಸ್ತೆಯಲ್ಲಿ ಮಳೆ ನೀರು ಹೋಗಲು ರಚಿಸಿರುವ  ಗುಂಡಿಯೊಂದು  ಅಮಾಯಕರ ಪ್ರಾಣಕ್ಕಾಗಿ ಕಾದು ಕೂತಿದೆ. ವಿಧಾನಸೌಧ- ರಾಜಭವನಗಳಿಂದ ಒಂದು ಕಿಲೋಮೀಟರ್‌ ಅಂತರದಲ್ಲೇ ಕಾಣಸಿಗುವ ಈ ಗುಂಡಿಯ ಬಳಿ ವಾಹನಸವಾರರು, ಅದರಲ್ಲೂ ದ್ವಿಚಕ್ರ ವಾಹನ ಸವಾರರು ಸಾಗುವಾಗ ಆಪತ್ತು ಹತ್ತಿರದಲ್ಲೇ ಇದ್ದಂತೆ ಭಾಸವಾಗುತ್ತದೆ.

ಇಲ್ಲಿ ಮಳೆನೀರು ಹೋಗಲು ಹಾಕಿರುವ ಚರಂಡಿಯೊಂದು ಬಾಯಿತೆರೆದು ಜನರ ಬಲಿಗಾಗಿ ಕಾಯುತ್ತಿದೆ. ಬಿಬಿಎಂಪಿ ನಿರ್ಲಕ್ಷ್ಯದಿಂದ ಇಲ್ಲಿ ಯಾವುದೇ ಮುನ್ನೆಚ್ಚರಿಕೆ ಫಲಕಗಳು ಕೂಡ ಇಲ್ಲ. 


ಜುಲೈ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್‌ ನಂಬರ್‌ 12, 18 ಸೇರಿದಂತೆ ನಾಲ್ಕು ಗೇಟ್‌ಗಳ ಮುಂದೆ ಜನಪ್ರವಾಹವೇ ನುಗ್ಗಿ ನೂಕಾಟ ಉಂಟಾಗಿ ಗೇಟಿನ ಬಳಿ ಇದ್ದ ಜನರು ಕುಸಿದು ಬಿದ್ದರು. ಇದರಿಂದ ಇನ್ನಷ್ಟು ಗೊಂದಲ ಉಂಟಾಗಿ ನಡೆದ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಬೇಕಾಯಿತು. ಈಗ ಇನ್ನೊಂದು ಕಾರಣಕ್ಕಾಗಿ ಜನರ ಪ್ರಾಣ ತಿನ್ನಲು ಸಂಬಂಧಿತರು ಕಾಯುತ್ತಿದ್ದಾರೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ.

ಬಿಬಿಎಂಪಿ ಬಸ್‌ ಚಾಲಕ ಸಿದ್ದೇಶ್ವರ ʻದ ಫೆಡರಲ್‌ ಕರ್ನಾಟಕ'ದೊಂದಿಗೆ ಮಾತನಾಡುತ್ತಾ, “ಈ ರೀತಿಯ ಹೊಂಡಗಳ ಬಳಿ ನಾವು ಬಸ್ ಬ್ರೇಕ್ ಹಾಕಿದರೆ, ಇನ್ನೊಂದು ಬದಿಯಲ್ಲಿ ಬೈಕ್ ಸವಾರರು ಬಿದ್ದುಹೋಗುತ್ತಾರೆ. ಇದರಿಂದ ನಾವು ದಿನವೂ ಸಂಕಷ್ಟಕ್ಕೀಡಾಗುತ್ತಿದ್ದೇವೆ. ಬಿಬಿಎಂಪಿ ಇತ್ತ ಗಮನ ಹರಿಸಿ ಸರಿಪಡಿಸಬೇಕುʼʼ ಎನ್ನುತ್ತಾರೆ. 

Full View

ವಾಹನ ಚಾಲಕ ಅಬ್ದುಲ್ ರೆಹಮಾನ್ ಆಕ್ರೋಶ ವ್ಯಕ್ತಪಡಿಸುತ್ತಾ  “ಇಂತಹ ಹೊಂಡಗಳ ಬಗ್ಗೆ ಯಾವುದೇ ಎಚ್ಚರಿಕೆ ಫಲಕಗಳು ಇಲ್ಲ. ಹೆಚ್ಚಾಗಿ ಇಂತಹ ಹೊಂಡಗಳಲ್ಲಿ ದ್ವಿಚಕ್ರ ವಾಹನ ಸವಾರರು ಬೀಳುವ ಅಪಾಯ ಹೆಚ್ಚು ಎಂದು ತಿಳಿಸಿದರು.  

ಕೆಲವೊಮ್ಮೆ ವಾಹನ ಸವಾರರು ಅವಸರವಾಗಿ, ವೇಗವಾಗಿ ಬರುತ್ತಾರೆ. ಇಂತಹ ಸಂದರ್ಭ ಇಂತಹ ಹೊಂಡಗಳಿದ್ದರೆ ಅಪಾಯ ಹೆಚ್ಚು. ಬಿಬಿಎಂಪಿಯವರದ್ದು ಪ್ರತೀ ವರ್ಷ ಇದೇ  ಕತೆ. ಮಳೆ ಬಂದರಂತೂ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ ಎನ್ನುತ್ತಾರೆ ವಾಹನ ಸವಾರ ಸಯ್ಯದ್‌ ಮಹಮ್ಮದ್‌. 

ಈ ಬಗ್ಗೆ ದ ಫೆಡರಲ್‌ ಕರ್ನಾಟಕ ರಿಯಾಲಿಟಿ ಚೆಕ್‌ ಮಾಡಿ (ಜುಲೈ 29)  ಸಂಬಂಧಿತರ ಗಮನಕ್ಕೆ ತಂದು ಹತ್ತು ದಿನಗಳಾದರೂ ಬಿಬಿಎಂಪಿಯಾಗಲಿ, ಮರಗಳ ಮರೆಯಲ್ಲಿ ನಿಂತು ಗಬಕ್ಕನೆ ವಾಹನ ಸವಾರರನ್ನು ನಿಲ್ಲಿಸಿ ತಪಾಸಣೆ ಮಾಡುವ ಸಂಚಾರ ಪೊಲೀಸರಾಗಲೀ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುವುದು ವೇದ್ಯವಾಗುತ್ತದೆ.


Tags:    

Similar News