ಚಿಕ್ಕಜಾಲದಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸುವಂತೆ ಕೋರಿದ್ದ ಪಿಐಎಲ್ ವಜಾ

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ನೇತೃತ್ವದ ವಿಭಾಗೀಯ ಪೀಠ, "ನಿರ್ದಿಷ್ಟ ಸ್ಥಳದಲ್ಲೇ ಮೆಟ್ರೊ ನಿಲ್ದಾಣವನ್ನು ನಿರ್ಮಿಸಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಲು ಸಾಧ್ಯವಿಲ್ಲ. ಇದು ನ್ಯಾಯಾಲಯದ ಪರಿಶೀಲನೆಯ ವ್ಯಾಪ್ತಿಗೆ ಬರುವುದಿಲ್ಲ," ಎಂದು ಸ್ಪಷ್ಟಪಡಿಸಿದೆ.;

Update: 2025-09-02 05:30 GMT

ಹೈಕೋರ್ಟ್‌ ಹಾಗೂ ಮೆಟ್ರೋ ರೈಲು

ಕೆ.ಆರ್. ಪುರಂನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 'ನಮ್ಮ ಮೆಟ್ರೊ' ನೀಲಿ ಮಾರ್ಗದಲ್ಲಿ (ಹಂತ-2ಬಿ) ಬರುವ ಚಿಕ್ಕಜಾಲದಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (BMRCL) ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಹೈಕೋರ್ಟ್ ವಜಾಗೊಳಿಸಿದೆ.

ಚಿಕ್ಕಜಾಲದ ನಿವಾಸಿ ಸಿ.ಆರ್. ನವೀನ್ ಕುಮಾರ್ ಮತ್ತು ಇತರ ಆರು ಮಂದಿ ಈ ಅರ್ಜಿಯನ್ನು ಸಲ್ಲಿಸಿದ್ದರು.

ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ನೇತೃತ್ವದ ವಿಭಾಗೀಯ ಪೀಠ, "ನಿರ್ದಿಷ್ಟ ಸ್ಥಳದಲ್ಲೇ ಮೆಟ್ರೊ ನಿಲ್ದಾಣವನ್ನು ನಿರ್ಮಿಸಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಲು ಸಾಧ್ಯವಿಲ್ಲ. ಇದು ನ್ಯಾಯಾಲಯದ ಪರಿಶೀಲನೆಯ ವ್ಯಾಪ್ತಿಗೆ ಬರುವುದಿಲ್ಲ," ಎಂದು ಸ್ಪಷ್ಟಪಡಿಸಿದೆ.

"ಮೆಟ್ರೊ ರೈಲು ಮಾರ್ಗ, ಅದರ ನಕ್ಷೆ ಮತ್ತು ನಿಲ್ದಾಣಗಳ ಸ್ಥಳವನ್ನು ನಿರ್ಧರಿಸುವುದು ಮೆಟ್ರೊ ನಿಗಮದ ಅಧಿಕಾರಿಗಳು ಮತ್ತು ಪ್ರಾಧಿಕಾರದ ಜವಾಬ್ದಾರಿಯಾಗಿದೆ. ಇಂತಹ ತಾಂತ್ರಿಕ ಮತ್ತು ನೀತಿಗೆ ಸಂಬಂಧಿಸಿದ ವಿಚಾರಗಳಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ," ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ವಾದವೇನಿತ್ತು?

"2023-24ರಲ್ಲಿ, ಚಿಕ್ಕಜಾಲದಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸಲು ಮೊದಲು ನಿರ್ಧರಿಸಲಾಗಿತ್ತು. ಆದರೆ, ಯಾವುದೇ ಸ್ಪಷ್ಟ ಕಾರಣ ನೀಡದೆ ಈ ಪ್ರಸ್ತಾವನೆಯನ್ನು ಕೈಬಿಡಲಾಗಿದೆ. ಇದರಿಂದ ಚಿಕ್ಕಜಾಲ ಪ್ರದೇಶದ ಜನರಿಗೆ ಅನಾನುಕೂಲವಾಗಲಿದೆ. ಆದ್ದರಿಂದ, ಹಿಂದಿನ ನಿರ್ಧಾರದಂತೆ ನಿಲ್ದಾಣವನ್ನು ನಿರ್ಮಿಸಲು ಬಿಎಂಆರ್‌ಸಿಎಲ್‌ಗೆ ನಿರ್ದೇಶನ ನೀಡಬೇಕು," ಎಂದು ಅರ್ಜಿದಾರರು ಮನವಿ ಮಾಡಿದ್ದರು.

Tags:    

Similar News