ST Internal Reservation| ಪರಿಶಿಷ್ಠ ವರ್ಗದ ಒಳ ಮೀಸಲಾತಿ; ಕಾನೂನು ತಜ್ಞರ ಜತೆ ಚರ್ಚೆ: ಸಿದ್ದರಾಮಯ್ಯ

ಪರಿಶಿಷ್ಟ ಜಾತಿಯವರ ಒಳ ಮೀಸಲಾತಿಗೆ ಮುಂದಾಗಿರುವ ರೀತಿಯಲ್ಲೇ , ಪರಿಶಿಷ್ಠ ವರ್ಗದವರ ಒಳ ಮೀಸಲಾತಿಗೆ ಕ್ರಮ ವಹಿಸಬೇಕು ಎನ್ನುವ ಬೇಡಿಕೆ ಇದೆ. ಎಸ್‌ಸಿ ಒಳಮೀಸಲಾತಿ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಎಸ್ ಟಿ ಒಳ ಮೀಸಲಾತಿ ಬಗ್ಗೆ ಏನೂ ತೀರ್ಪು ಬಂದಿಲ್ಲ ಎಂದವರು ಹೇಳಿದರು.

Update: 2024-11-13 09:55 GMT
ಆದಿವಾಸಿ ಬುಡಕಟ್ಟು ಜನರ ಮನೆಗಳಿಗೆ ಭೇಟಿ ನೀಡಿದ ಸಿ.ಎಂ
Click the Play button to listen to article

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಮುಂದಾಗಿರುವ ರೀತಿಯಲ್ಲೇ , ಪರಿಶಿಷ್ಠ ವರ್ಗದವರ ಒಳ ಮೀಸಲಾತಿಗೆ ಕ್ರಮ ವಹಿಸಿ ಆದಿವಾಸಿಗಳಿಗೆ ಅನುಕೂಲ ಮಾಡುವ ಬಗ್ಗೆ ಕಾನೂನು ತಜ್ಞರ ಜತೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಅವರು ಮಂಗಳವಾರ ಮೈಸೂರು ಜಿಲ್ಲೆಯ ಹೆಚ್​ಡಿ ಕೋಟೆ ತಾಲೂಕಿನಲ್ಲಿನ ಉದ್ಭೂರು ಹಾಡಿ ಮತ್ತು ಕೆರೆಹಾಡಿಗೆ ಭೇಟಿ ನೀಡಿ  ಹಾಡಿ ಆದಿವಾಸಿ ಜನರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಅವರೊಂದಿಗೆ ಸಂವಾದ ನಡೆಸಿ ಮಾತನಾಡಿದ ಸಿ.ಎಂ ಸಿದ್ದರಾಮಯ್ಯ, ಪರಿಶಿಷ್ಟ ಜಾತಿಯವರ ಒಳ ಮೀಸಲಾತಿಗೆ ಮುಂದಾಗಿರುವ ರೀತಿಯಲ್ಲೇ , ಪರಿಶಿಷ್ಠ ವರ್ಗದವರ ಒಳ ಮೀಸಲಾತಿಗೆ ಕ್ರಮ ವಹಿಸಬೇಕು ಎನ್ನುವ ಬೇಡಿಕೆ ಇದೆ. ಆದರೆ ಎಸ್‌ಸಿ ಒಳಮೀಸಲಾತಿ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಅದರ ಆಧಾರದಲ್ಲಿ ಮುಂದುವರೆದಿದ್ದೇವೆ. ಎಸ್ ಟಿ ಒಳ ಮೀಸಲಾತಿ ಬಗ್ಗೆ ಏನೂ ತೀರ್ಪು ಬಂದಿಲ್ಲ. ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರತ್ಯೇಕ ಆದಿವಾಸಿ ಅಭಿವೃದ್ಧಿ ನಿಗಮ

ತಾವು ಅಲೆಮಾರಿಗಳಲ್ಲ. ಊರ ನಾಯಕರೂ ಅಲ್ಲ. ತಾವೆಲ್ಲರೂ ಕಾಡಲ್ಲೇ ಒಂದೇ ಕಡೆ ನೆಲೆಸಿರುವ ಆದಿವಾಸಿಗಳು. ಆದ್ದರಿಂದ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ತಮ್ಮನ್ನು ಸೇರಿಸಬೇಡಿ.ಅವರು  ಪ್ರತ್ಯೇಕವಾದ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಎನ್ನುವ ಬೇಡಿಕೆ ಇಟ್ಟಿದ್ದಾರೆ ಎಂದು  ಹೇಳಿದ ಮುಖ್ಯಮಂತ್ರಿ,  ಆದಿವಾಸಿ ನಿಗಮ ಸ್ಥಾಪನೆ ಸಂಬಂಧ ಆದಷ್ಟು ಶೀಘ್ರ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. 

ಆದಿವಾಸಿ ಜನರ ಸಮಸ್ಯೆಗಳನ್ನು ಸಿ.ಎಂ ಆಲಿಸಿದರು. 

 ಆದಿವಾಸಿ ಕುಟುಂಬಗಳಿಗೆ ತಿಂಗಳೊಳಗೆ ವಿದ್ಯುತ್ ಮತ್ತು ನೀರು ಸಂಪರ್ಕ

ಆದಿವಾಸಿ/ಅರಣ್ಯವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಾಗಿ ಸದ್ಯದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವನ್ಯಜೀವಿ ಮಂಡಳಿ ಸಭೆ ಕರೆದು ಅರಣ್ಯಾಧಿಕಾರಿಗಳಿಂದ ಅರಣ್ಯವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹಲವು ದಶಲಗಳಿಂದ ಕೆರೆಹಾಡಿ ಸೇರಿದಂತೆ ಒಂಬತ್ತು ಹಾಡಿಗಳಿಗೆ ವಿದ್ಯುತ್ ಸಂಪರ್ಕ ಇಲ್ಲ, ಕುಡಿಯುವ ನೀರಿಗೆ ಸಮಸ್ಯೆ ಇದೆ. ಇದು ಗಂಭಿರವಾದುದ್ದು. ಯಾವ ಅರಣ್ಯ ಕಾಯ್ದೆ ಕೂಡ ಅರಣ್ಯವಾಸಿಗಳಿಗೆ ಕರೆಂಟು, ನೀರು ಕೊಡಬೇಡಿ ಎಂದು ಹೇಳುವುದಿಲ್ಲ. ಅರಣ್ಯಾಧಿಕಾರಗಳು ಅನಗತ್ಯ ಕಿರುಕುಳ, ತೊಂದರೆ ಕೊಡಬಾರದು. ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿಯವರು ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಒಂದು ತಿಂಗಳಲ್ಲಿ ಕೆರೆಹಾಡಿ ಮತ್ತು ಇತರೆ ಎಂಟು ಹಾಡಿಗಳ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕದ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಅವರು ತಿಳಿಸಿದರು. 

ಅರಣ್ಯಾಧಿಕಾರಿಗಳು ಮನೆ ಕಟ್ಟಲು ಬಿಡುತ್ತಿಲ್ಲ

ಹಕ್ಕುಪತ್ರ ಇದ್ದರೂ ಅರಣ್ಯಾಧಿಕಾರಿಗಳು ಮನೆ ಕಟ್ಟಲು ಬಿಡುತ್ತಿಲ್ಲ, ಎರಡು-ಮೂರು ಎಕರೆ ಜಾಗದಲ್ಲಿ ಹಲವಾರು ದಶಕಗಳಿಂದ ಉಳುಮೆ ಮಾಡುತ್ತಿದ್ದರೂ ಕೇವಲ 2, 3 ಗುಂಟೆಗೆ ಹಕ್ಕು ಪತ್ರ ನೀಡಿದ್ದಾರೆ. ಜಮೀನಿನಲ್ಲಿ ಟ್ರಾಕ್ಟರ್ ಬಳಸಲು ಅವಕಾಶ ನೀಡುತ್ತಿಲ್ಲ ಎನ್ನುವ ದೂರು ಬಂದಿದೆ. ಆದಿವಾಸಿಗಳು ಅಂದರೆ ಅವರು ಅರಣ್ಯದ ಭಾಗವೇ ಆಗಿದ್ದಾರೆ. ಇವರಿಂದ ಅರಣ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಆದ್ದರಿಂದ ಇವರಿಗೆ ಅನಗತ್ಯ ತೊಂದರೆ ಕೊಡಬಾರದು ಎಂಬ ಸ್ಪಷ್ಟ ಸೂಚನೆ ನೀಡಿದ್ದೇನೆ. ವನ್ಯ ಜೀವಿ ಮಂಡಳಿಗೆ ನಾನೇ ಅಧ್ಯಕ್ಷ ಆಗಿದ್ದೀನಿ. ಸದ್ಯದಲ್ಲೇ ಮಂಡಳಿ ಸಭೆ ಕರೆದು ಇಲ್ಲಿನ ಬುಡಕಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆ ಎಂದು ಅವರು ತಿಳಿಸಿದರು.

ಯಾರೂ ಶಿಕ್ಷಣದಿಂದ ವಂಚಿತರಾಗಬಾರದು

ನಮ್ಮಪ್ಪ ಕೂಡ ಜನಪದ ನೃತ್ಯ ಕಲಿಯೋಕೆ ನನ್ನನ್ನು ಹಾಕ್ಬಿಟ್ಟಿದ್ರು. ನಾನು ಹಠತೊಟ್ಟು ಕಾನೂನು ಪದವಿ ಮಾಡಿದ್ದಕ್ಕೆ ಇಂದು ಮುಖ್ಯಮಂತ್ರಿ ಆಗುವ ಮಟ್ಟಕ್ಕೆ ಬೆಳೆದೆ. ಈ ಆದಿವಾಸಿ ಸಮುದಾಯದ ಮಕ್ಕಳು ಕೂಡ ಅರ್ಧಕ್ಕೇ ಶಾಲೆ ನಿಲ್ಲಿಸದೆ ಶಿಕ್ಷಣ ಪಡೆಯಬೇಕು. ಆಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಮೊದಲು ನಾಲ್ಕನೇ ತರಗತಿವರೆಗೂ ಮಾತ್ರ ಆಶ್ರಮ ಶಾಲೆಗಳನ್ನು ನಾನು ಎಂಟನೇ ತರಗತಿವರೆಗೂ ವಿಸ್ತರಿಸಿದ್ದೆ. ಇದನ್ನು ಪಿಯುಸಿ ವರೆಗೂ ವಿಸ್ತರಿಸಿ ಎನ್ನುವುದು ಆದಿವಾಸಿಗಳು ಬೇಡಿಕೆಯಾಗಿದೆ, ಈ ಬಗ್ಗೆ ಸಭೆ ಕರೆದು ಪರಿಶೀಲನೆ ನಡೆಸುತ್ತೇನೆ ಎಂದು ಅವರು ತಿಳಿಸಿದರು. 

ಅರಣ್ಯಾಧಿಕಾರಿಗಳಿಂದ ಅರಣ್ಯವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಿ.ಎಂ ಭರವಸೆ ನೀಡಿದ್ದಾರೆ. 

 ಕಾಡುಗೆಣಸು-ಜೇನುತುಪ್ಪ-ಬೆಟ್ಟದ ನೆಲ್ಲಿ ಸವಿದ ಸಿ.ಎಂ

ಆದಿವಾಸಿ ಸಮುದಾಯದ ಗಣೇಶ್ ಮತ್ತು ರಮೇಶ್ ಕುಟುಂಬದವರು ತಾವು ತಂದಿದ್ದ ಜೇನುತುಪ್ಪ ಮತ್ತು ಬೆಟ್ಟದ ನೆಲ್ಲಿಕಾಯಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿ, ಸತ್ಕರಿಸಿದರು. ಜೇನುತುಪ್ಪದಲ್ಲಿ ಕಾಡುಗೆಣಸು ಅದ್ದಿ ಸವಿದ ಮುಖ್ಯಮಂತ್ರಿಗಳು ಬಳಿಕ‌ 500 ರೂಪಾಯಿ ನೀಡಿ ಜೇನುತುಪ್ಪ ಖರೀದಿಸಿದರು. ಬಳಿಕ ತಾಲೂಕಿನ ಕೆರೆಹಾಡಿಯಲ್ಲಿ ಹಾಡಿಯ ಆದಿವಾಸಿ ಬುಡಕಟ್ಟು ಜನಾಂಗದ ಜೊತೆ‌ ಸಂವಾದ ನಡೆಸಿ, ಹಾಡಿ ಸಮಸ್ಯೆ ಆಲಿಸಿದರು.

ಜೇನುತುಪ್ಪದಲ್ಲಿ ಕಾಡುಗೆಣಸು ಅದ್ದಿ ಸವಿದ ಮುಖ್ಯಮಂತ್ರಿಗಳು ಬಳಿಕ‌ 500 ರೂಪಾಯಿ ನೀಡಿ ಜೇನುತುಪ್ಪ ಖರೀದಿಸಿದರು.

 ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ ಸಿ.ಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಡಿಗೆ ಭೇಟಿ ನೀಡುತ್ತಿದ್ದಂತೆ ಅಲ್ಲಿನ ಆದಿವಾಸಿ ಜನರು ತಮ್ಮ ಸಾಂಪ್ರದಾಯಿಕ ನೃತ್ಯ ಮಾಡುವುದರ ಮೂಲಕ ಸಿ.ಎಂ ಅವರನ್ನು ಸ್ವಾಗತಿಸಿದರು. ಈ ವೇಳೆ ಬುಡಕಟ್ಟು ಜನರ ಸಾಂಪ್ರದಾಯಿಕ ನೃತ್ಯದಲ್ಲಿ ಅವರ ಜೊತೆಗೂಡಿ ಸಿ.ಎಂ ಕೂಡ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. 

Tags:    

Similar News