ರೋಹಿತ್ ವೇಮುಲಾ ಕಾಯ್ದೆ ಜಾರಿ ಪರಿಶೀಲಿಸಿ ಕ್ರಮ; ಮುಖ್ಯಮಂತ್ರಿ ಸಿದ್ದರಾಮಯ್ಯ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಏ.16ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು 'ರೋಹಿತ್ ವೇಮುಲಾ ಕಾಯ್ದೆ' ಜಾರಿಗೆ ಒತ್ತಾಯಿಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ, ಕರಡು ರಚನೆಗೆ ಸೂಚಿಸಿದ್ದಾರೆ.;
ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ, ತಾರತಮ್ಯ ತಡೆಯುವ ರೋಹಿತ್ ವೇಮುಲಾ ಕಾಯ್ದೆಯ ಕರಡು ಸಿದ್ಧಪಡಿಸಲು ಕಾನೂನು ಸಲಹೆಗಾರರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೋಹಿತ್ ವೇಮುಲಾ ಕಾಯ್ದೆಯ ಕರಡು ರಚನೆಗೆ ಕಾನೂನು ತಜ್ಞರು, ಸಲಹೆಗಾರರಿಗೆ ನಿರ್ದೇಶನ ನೀಡಲಾಗಿದೆ. ಈ ಸಂಬಂಧ ರಾಹುಲ್ ಗಾಂಧಿ ಅವರು ಬರೆದಿದ್ದ ಪತ್ರಕ್ಕೆ ಉತ್ತರ ನೀಡಿದ್ದು, ಆದಷ್ಟು ಬೇಗ ಪರಿಶೀಲಿಸಿ ಕಾಯ್ದೆ ಜಾರಿಗೆ ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏ.16ರಂದು ಪತ್ರ ಬರೆದು, ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಭೇದಭಾವ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ' ಜಾರಿಗೆ ಒತ್ತಾಯಿಸಿದ್ದರು.
ರೋಹಿತ್ ವೇಮುಲಾ, ಪಾಯಲ್ ತಡವಿ ಮತ್ತು ದರ್ಶನ್ ಸೋಲಂಕಿ ಆತ್ಮಹತ್ಯೆಗಳ ಕುರಿತು ಉಲ್ಲೇಖಿಸಿ, ಇಂತಹ ದುರ್ಘಟನೆಗಳನ್ನು ತಡೆಯಲು ಕಠಿಣ ಕಾನೂನು ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.
ರಾಹುಲ್ ಗಾಂಧಿ ಅವರ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ವಿದ್ಯಾರ್ಥಿಯು ತಾರತಮ್ಯ ಎದುರಿಸಬಾರದು. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದರು.
ರೋಹಿತ್ ವೇಮುಲಾ ಕಾಯ್ದೆ ಜಾರಿಯಿಂದ ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ವಿರೋಧಿ ಅಥವಾ ತಾರತಮ್ಯರಹಿತ ಘಟಕಗಳನ್ನು ಸ್ಥಾಪನೆಯಾಗಲಿವೆ. ಜಾತಿ ಆಧಾರಿತ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.
2016 ರಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಲೇಜಿನಲ್ಲಿ ಜಾತಿ ಆಧಾರಿತ ತಾರತಮ್ಯದ ಆರೋಪ ಮಾಡಿ, ಆತ್ಮಹತ್ಯೆಗೆ ಶರಣಾಗಿದ್ದರು. ಇದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.