Channapatna by-poll | ಕಾಂಗ್ರೆಸ್‌ನಿಂದ ಯಾರೇ ಸ್ಪರ್ಧಿಸಿದರೂ ನಾನೇ ಅಭ್ಯರ್ಥಿ: ಡಿ.ಕೆ. ಶಿವಕುಮಾರ್

Update: 2024-08-30 09:59 GMT

ಚನ್ನಪಟ್ಟಣ ಉಪಚುನಾವಣೆ ಸಂಬಂಧ ಎನ್‌ಡಿಎ ಮೈತ್ರಿಕೂಟ(ಬಿಜೆಪಿ-ಜೆಡಿಎಸ್)ದಲ್ಲಿ ಟಿಕೆಟ್‌ ಫೈಟ್‌ ಜೋರಾಗಿದೆ. ಮತ್ತೊಂದೆಡೆ ಡಿಕೆ ಶಿವಕುಮಾರ್‌ ಅವರು ಚನ್ನಪಟ್ಟಣದ ಅಭ್ಯರ್ಥಿ ನಾನೇ, ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿ ಆದರೂ ನನಗೆ ಮತ ಹಾಕಿದಂತೆ ಎಂದು ಪುನರುಚ್ಚರಿಸಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್‌, ʻʻಬಿ ಫಾರಂ ಬರೆಯುವುದು, ಅದಕ್ಕೆ ಸಹಿ ಹಾಕುವುದು ನಾನು. ನಿಮ್ಮನ್ನು (ಮಾಧ್ಯಮದವರನ್ನು) ನಿಲ್ಲಿಸಿದರೂ ನನಗೇ ಮತ ಹಾಕಿದಂತೆಯೇ" ಎಂದು ಹೇಳಿದರು.

ಎರಡು ವಿರೋಧ ಪಕ್ಷಗಳು ಒಂದಾಗಿವೆ ಎಂದು ಕೇಳಿದಾಗ, ʻʻಒಂದು, ಎರಡು, ಮೂರಾದರೂ ಆಗಲಿ ನಮಗೆ ಅದು ಸಂಬಂಧವಿಲ್ಲ. ನಾವು ಜನಸೇವೆ ಮಾಡುತ್ತೇವೆ, ಅದರ ಮೇಲೆ ಮಿಕ್ಕಿದ್ದು ಜನರ ತೀರ್ಮಾನಕ್ಕೆ ಬಿಟ್ಟಿದ್ದುʼʼ ಎಂದರು.

ಸಿ.ಪಿ.ಯೋಗೇಶ್ವರ್ ಅವರು ಬಂದರೆ ಪಕ್ಷಕ್ಕೆ ಆಹ್ವಾನ ಮಾಡುವಿರಾ ಎಂದು ಕೇಳಿದಾಗ, ʻʻನೀವುಗಳು (ಮಾಧ್ಯಮ) ಏಕೆ ಇದರ ಬಗ್ಗೆ ಮಾತನಾಡುತ್ತೀರಾ? ನಮ್ಮ ಬಳಿಗೆ ಯಾರೂ ಬಂದಿಲ್ಲ, ಚರ್ಚೆಯನ್ನೂ ಮಾಡಿಲ್ಲ. ಅವರು ಮೈತ್ರಿ ಮಾಡಿಕೊಂಡಿರುವಾಗ ಏಕೆ ಅವರ ಬಗ್ಗೆ ಮಾತನಾಡಬೇಕು. ಮೊದಲು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತೇನೆʼʼ ಎಂದರು.

ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎನ್ನುವ ಸಿ.ಪಿ.ಯೋಗೇಶ್ವರ್ ಹೇಳಿಕೆ ಬಗ್ಗೆ ಕೇಳಿದಾಗ ʻʻನನಗೆ ನಿಮ್ಮಗಳ (ಮಾಧ್ಯಮ) ಮಾತಿನ ಮೇಲೆ ನಂಬಿಕೆ ಇಲ್ಲʼʼ ಎಂದು ಹೇಳಿದರು.

ಉಪ ಚುನಾವಣೆ ತಯಾರಿಗಾಗಿ ಚನ್ನಪಟ್ಟಣದಲ್ಲಿ ಉದ್ಯೋಗಮೇಳ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದಾಗ ʻʻಸೇವೆ ಮಾಡಲು ನಮಗೆ ಅಧಿಕಾರ, ಅವಕಾಶ ನೀಡಿದ್ದಾರೆ. ನಾವು ನಮ್ಮ ಅಧಿಕಾರ ಬಳಸಿಕೊಂಡು ಜನರಿಗಾಗಿ ಯಾವ ರೀತಿ ಒಳ್ಳೆಯದು ಮಾಡಬೇಕು ಎಂಬುದು ನಮ್ಮ ಸರ್ಕಾರದ ಚಿಂತನೆಯಾಗಿದೆ. ಗುರುವಾರ ಎತ್ತಿನಹೊಳೆ ಯೋಜನೆ ಪರೀಕ್ಷಾರ್ಥ ಕಾರ್ಯಾಚರಣೆ ವೀಕ್ಷಣೆಗೆ ಹೋಗಿದ್ದೆ. ಕೆಲವರು ಮೂಗು, ಬಾಯಿ, ಕಿವಿ ಕತ್ತರಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. ಆದರೆ ನಾನು ಏತ ಕಾಮಗಾರಿ ಪರೀಕ್ಷಾರ್ಥ ಕಾರ್ಯಾಚರಣೆ ಚಾಲನೆ ನೀಡಿದ್ದು, ಸದ್ಯದಲ್ಲೇ ಶುಭ ಮುಹೂರ್ತ ನೋಡಿ ಉದ್ಘಾಟನಾ ದಿನಾಂಕ ನಿಗದಿ ಮಾಡಲಿದ್ದೇವೆ. ಈ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ಇದು ನಮ್ಮ ಕೆಲಸದ ವೈಖರಿʼʼ ಎಂದರು.

ʻʻಅದೇ ರೀತಿ ಉದ್ಯೋಗ ಮೇಳ ಮೂಲಕ ನಮ್ಮ ಭಾಗದ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡುತ್ತಿದ್ದೇವೆ. ನಾನು ಜಿಲ್ಲೆಗೆ ಹೋದಾಗಲೆಲ್ಲಾ ಕೆಲಸ ಕೊಡಿಸಿ ಎಂದು ಯುವಕರು ಅರ್ಜಿ ನೀಡುತ್ತಿದ್ದರು. ನಮಗೆ ಅರ್ಜಿ ಕೊಟ್ಟವರನ್ನು ಕರೆಸುತ್ತಿದ್ದೇವೆ. ಎಷ್ಟು ಜನರಿಗೆ ಉದ್ಯೋಗ ಸಿಗುತ್ತೋ ಸಿಗಲಿ. ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆʼʼ ಎಂದು ತಿಳಿಸಿದರು.

ರಾಜಭವನ ಚಲೋ ಬಗ್ಗೆ ಕೇಳಿದಾಗ ʻʻಶನಿವಾರ ರಾಜ್ಯಪಾಲರು ಭೇಟಿ ಮಾಡಲು ನಮಗೆ ಅವಕಾಶ ನೀಡಿದ್ದಾರೆ. ಇತ್ತೀಚೆಗೆ ನಡೆದ ನಿಶ್ಚಿತಾರ್ಥ ಕಾರ್ಯಕ್ರಮವೊಂದರಲ್ಲಿ ಅವರನ್ನು ಭೇಟಿ ಮಾಡಿದ್ದೆ. ಅವರು ಭೇಟಿಗೆ ಕಾಲಾವಕಾಶ ನೀಡಿದ್ದು, ನಾವು ನಮ್ಮ ಮನವಿ ಸಲ್ಲಿಸುತ್ತೇವೆʼʼ ಎಂದು ಹೇಳಿದರು.

Tags:    

Similar News