ಬರ ಪರಿಹಾರ | ರಾಜ್ಯಕ್ಕೆ ಕೇಂದ್ರದಿಂದ 3,454 ಕೋಟಿ ರೂ. ಬಿಡುಗಡೆ

Update: 2024-04-27 10:41 GMT

ಕರ್ನಾಟಕಕ್ಕೆ ಬರ ಪರಿಹಾರವಾಗಿ ಕೇಂದ್ರ ಸರ್ಕಾರವು ಶನಿವಾರ 3,454 ಕೋಟಿ ರೂ. ಮಂಜೂರು ಮಾಡಿದೆ.

ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿಯು 2023 ರ ಖಾರಿಫ್ ಋತುವಿನ ಬರ ಪರಿಹಾರ ಕುರಿತು ಈ ನಿರ್ಧಾರ ತೆಗೆದುಕೊಂಡಿದೆ.  

ಬರ ಪರಿಹಾರ ಬಿಡುಗಡೆಯ ವಿಷಯದಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಪ್ರಶ್ನಿಸಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ರಾಜ್ಯದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಬರ ಪರಿಹಾರದಂತಹ ವಿಷಯ ನ್ಯಾಯಾಂಗದ ವರೆಗೆ ಬರಬಾರದು. ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳು ಪರಸ್ಪರ ಹೊಂದಾಣಿಕೆಯಲ್ಲಿ ಇಂತಹ ವಿಷಯಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ತಾಕೀತು ಮಾಡಿತ್ತು. ಈ ನಡುವೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ನೆಪವೊಡ್ಡಿದ್ದ ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ಅನುಮತಿ ಪಡೆದು ನಿರ್ಧರಿಸುವುದಾಗಿ ಹೇಳಿತ್ತು. ಆದರೆ, ಆಯೋಗ ಬರ ಪರಿಹಾರ ನೀಡಬಹುದು ಎಂದು ಅನುಮತಿ ನೀಡಿತ್ತು. ಆ ಬಳಿಕ ಮುಂದಿನ ಒಂದು ವಾರದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್‌ ಮುಂದೆ ಹೇಳಿಕೆ ದಾಖಲಿಸಿದ್ದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಅರ್ಜಿಯ ವಿಚಾರಣೆಯನ್ನು ಮುಂದೂಡುವಂತೆ ಕೋರಿತ್ತು. 

ಇದೀಗ ಸುಪ್ರೀಂಕೋರ್ಟ್‌ ಮಧ್ಯಪ್ರವೇಶದ ಬಳಿಕ ಕೇಂದ್ರ ಸರ್ಕಾರ, ರಾಜ್ಯಕ್ಕೆ 3,454 ಕೋಟಿ ರೂಪಾಯಿ ಬರ ಪರಿಹಾರ ನಿಧಿ ಬಿಡುಗಡೆ ಮಾಡಿದೆ. ಆದರೆ, ಕರ್ನಾಟಕ ಸರ್ಕಾರ, 18,171 ಕೋಟಿ ರೂ. ಬರ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿತ್ತು.

ಕರ್ನಾಟಕದ ಮನವಿ

ಕರ್ನಾಟಕ ಸರ್ಕಾರ, ಮಳೆ ಕೊರತೆಯಿಂದಾಗಿ ರಾಜ್ಯದ ಒಟ್ಟು 240 ತಾಲೂಕುಗಳ ಪೈಕಿ 223 ತಾಲೂಕುಗಳಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಒಟ್ಟು 35,000 ಕೋಟಿ ರೂಪಾಯಿ ನಷ್ಟ ಸಂಭವಿಸಿದ್ದು, ಬರ ಪರಿಹಾರ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ 18,171 ಕೋಟಿ ರೂ. ಪರಿಹಾರ ನೀಡಬೇಕೆಂದು ಮನವಿ ಮಾಡಿತ್ತು. ಇದರಲ್ಲಿ ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲು 5,662 ಕೋಟಿ ರೂ. ಕೂಡ ಸೇರಿತ್ತು. ಆದರೆ, ಕೇಂದ್ರ ತಂಡ ಬರ ಪರಿಶೀಲನೆ ನಡೆಸಿ ವರದಿ ನೀಡಿದ ಏಳು ತಿಂಗಳಾಗಿದ್ದರೂ ಕೇಂದ್ರ ಸರ್ಕಾರದಿಂದ ಬಿಡಿಗಾಸಿನ ಪರಿಹಾರ ಬಿಡುಗಡೆಯಾಗಿರಲಿಲ್ಲ.

ಬರ ಪರಿಹಾರದಂತಹ ಕನಿಷ್ಟ ಮಾನವೀಯ ನೆರವಿನ ವಿಷಯದಲ್ಲಿ ಕೂಡ ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌ ಕೇಂದ್ರ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸಿತ್ತು. ಜೊತೆಗೆ ರಾಜ್ಯದ ಪಾಲಿನ ತೆರಿಗೆ ಪಾಲು, ವಿಶೇಷ ಅನುದಾನ ಮತ್ತು ಇತರೆ ಅನುದಾನ ಹಂಚಿಕೆಯಲ್ಲಿಯೂ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನಿರಂತರ ಅನ್ಯಾಯ ಮಾಡುತ್ತಿದೆ ಎಂಬುದನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಅವರ ಬಿಜೆಪಿ ವಿರುದ್ಧ ಪ್ರಚಾರ ನಡೆಸಿದ್ದರು. 

ಈ ನಡುವೆ ಕೇಂದ್ರದ ಧೋರಣೆಯನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಬರ ಪರಿಹಾರದ ವಿಷಯದಲ್ಲಿ ರಾಜ್ಯ ಸರ್ಕಾರವೊಂದು ಕೇಂದ್ರದ ಸರ್ಕಾರದ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಅಪರೂಪದ ವಿದ್ಯಮಾನಕ್ಕೂ ಈ ಸಂಗತಿ ಕಾರಣವಾಗಿತ್ತು. 

ಕೋರ್ಟ್‌ ಹೇಳುವವರೆಗೆ ಯಾಕೆ ಕೊಡಲಿಲ್ಲ ಮೋದಿಯವರೇ?

ರಾಜ್ಯದ ಬರ ಪರಿಹಾರ ಬೇಡಿಕೆಗೆ ಈವರೆಗೆ ಸ್ಪಂದಿಸದೆ ಇದೀಗ ಸುಪ್ರೀಂಕೋರ್ಟ್‌ ಚಾಟಿ ಬೀಸಿದ ಬಳಿಕ ಪರಿಹಾರ ಬಿಡುಗಡೆ ಮಾಡಿರುವ ಪ್ರಧಾನಿ ಮೋದಿ ಅವರ ಸರ್ಕಾರದ ಧೋರಣೆಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಅವರು, "ರಾಜ್ಯಕ್ಕೆ ಭೀಕರ ಬಿಸಿಲು ಬರಗಾಲ ಬಂದಿದೆ. ರಾಜ್ಯದ ಪಾಲಿನ ಬರ ಪರಿಹಾರ ಕೊಡಿ ಕೊಡಿ ಅಂತ ಕೇಳಿ ಕೇಳಿ ಸಾಕಾಯ್ತು. ದೆಹಲಿಗೆ ಬಂದು ಪ್ರತಿಭಟನೆ ಮಾಡಿದ್ವಿ. ಆದ್ರೂ ರಾಜ್ಯದ ಪಾಲಿನ ಹಣ ಕೊಡಲಿಲ್ಲ. ನಾವು ಕಾನೂನು ಹೋರಾಟ ಶುರು ಮಾಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆವು. ಸುಪ್ರೀಂಕೋರ್ಟ್ ಸ್ಪಷ್ಟ ಸೂಚನೆ ಕೊಡುವವರೆಗೂ ಏಕೆ ರಾಜ್ಯಕ್ಕೆ ಒಂದು ಪೈಸೆಯನ್ನೂ ಕೊಡಲಿಲ್ಲ ಮೋದಿಯವರೇ. ಇಂಥಾ ದ್ರೋಹ ಏಕೆ ಮಾಡಿದ್ರಿ" ಎಂದು ಪ್ರಶ್ನಿಸಿದ್ದಾರೆ. 

ಅಲ್ಲದೆ, ಬರ ಪರಿಹಾರ ಬಿಡುಗಡೆಗಾಗಿ ಸುಪ್ರೀಂಕೋರ್ಟ್‌ಗೆ ಧನ್ಯವಾದ ಸಲ್ಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೋರ್ಟ್‌ ಮಧ್ಯಪ್ರವೇಶಿಸಿ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ ಬಳಿಕ ಈ ಪರಿಹಾರ ಸಿಕ್ಕಿದೆ. ನಾಡಿನ ರೈತರ ಸಂಕಷ್ಟ ಅರಿತು ನಾವು ಸುಪ್ರೀಂಕೋರ್ಟ್‌ ಮೊರೆ ಹೋದ ಕಾರಣಕ್ಕೆ ಕೊನೆಗೂ ಬಿಡುಗಡೆಯಾದ ಬರ ಪರಿಹಾರ. ಎನ್‌ ಡಿಆರ್‌ಎಫ್‌ ನಿಯಮದ ಪ್ರಕಾರ ನಮಗೆ ಬರಬೇಕಾಗಿದ್ದು 18,171 ಕೋಟಿ ರೂ.. ಆದರೆ ಕೇಂದ್ರ ಬಿಡುಗಡೆ ಮಾಡಿರುವುದು 3,454 ಕೋಟಿ ರೂಪಾಯಿ ಮಾತ್ರ. ಬಾಕಿ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ. 

ಈ ನಡುವೆ, ಬರ ಪರಿಹಾರದ ವಿಷಯದಲ್ಲಿ ಕೇಂದ್ರದ ಧೋರಣೆಯನ್ನು ಖಂಡಿಸಿರುವ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ, "ನಾವು ಕೇಳಿದ್ದು ಎನ್‌ ಡಿಆರ್‌ಎಫ್‌ ನಿಯಮದ ಪ್ರಕಾರ ನ್ಯಾಯಯುತವಾಗಿ ನೀಡಬೇಕಾದ 18,171 ಕೋಟಿ ರೂ. ಪರಿಹಾರ. ಆದರೆ, ಈಗ ಬಿಡುಗಡೆ ಮಾಡುತ್ತೇವೆ ಎನ್ನುತ್ತಿರುವುದು ಕೇವಲ 3,454 ಕೋಟಿ ರೂಪಾಯಿ.  ಇದು ನಾವು ಕೇಳಿದ್ದಕ್ಕಿಂತ ಶೇ.20 ಕ್ಕಿಂತಲೂ ಕಡಿಮೆ. ರಾಜ್ಯದ 240 ತಾಲೂಕುಗಳ ಪೈಕಿ ೨೨೩ ತಾಲೂಕುಗಳಲ್ಲಿ ಭೀಕರ ಬರವಿದೆ. ಹಿಂದೆಂದೂ ಕಾಣದ ಪ್ರಮಾಣದ ಬರ ಇರುವಾಗಲೂ ಅತಿ ಹೆಚ್ಚು ತೆರಿಗೆ ಕೊಡುವ ದೇಶದ ಎರಡನೇ ಪ್ರಮುಖ ರಾಜ್ಯದ ಜನರ ಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದ ರೀತಿ ಇದು" ಪ್ರತಿಕ್ತಿಯಿಸಿದ್ದಾರೆ.

Tags:    

Similar News