Jal Jeevan Mission | ಜೆಜೆಎಂನಲ್ಲಿ ಕೇಂದ್ರದಿಂದ ದ್ರೋಹ; ಅನುದಾನ ಹಂಚಿಕೆಯ ಅಂಕಿ ಅಂಶ ಮುಂದಿಟ್ಟ ಸಿಎಂ

ಜೆಜೆಎಂ ಯೋಜನೆಗಾಗಿ ರಾಜ್ಯಕ್ಕೆ ನೀಡಬೇಕಾದ ಅನುದಾನ ನೀಡದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ದ್ರೋಹ ಎಸಗಿದೆ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.;

Update: 2025-02-15 09:56 GMT
ಕೇಂದ್ರ ಸಚಿವ ವಿ ಸೋಮಣ್ಣ ಹಾಗೂ ಸಿದ್ದರಾಮಯ್ಯ

ಗ್ರಾಮೀಣ ಪ್ರದೇಶದ ಪ್ರತಿ ಮನೆ-ಮನೆಗೆ ನೀರು ಪೂರೈಸುವ ʼಜಲ ಜೀವನ್ ಮಿಷನ್ʼ ಯೋಜನೆಯನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದೆ. ಯೋಜನೆ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ನೀಡಬೇಕಾದ ಅನುದಾನ ನೀಡದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ದ್ರೋಹ ಎಸಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಜೆಜೆಎಂ ಯೋಜನೆ ಕುರಿತು ಜಲಶಕ್ತಿ ಇಲಾಖೆ ರಾಜ್ಯ ಸಚಿವರಾಗಿರುವ ವಿ.ಸೋಮಣ್ಣ ಅವರು ಸುಳ್ಳು ಹೇಳುತ್ತಿದ್ದಾರೆ. ಜಲಜೀವನ್‌ ಮಿಷನ್‌ ಯೋಜನೆಗೆ ಒಟ್ಟು 49,262 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದರಲ್ಲಿ ಕೇಂದ್ರದ ಪಾಲು 26,119 ಕೋಟಿ ರೂ. ಹಾಗೂ ರಾಜ್ಯದ ಪಾಲು 23,142 ಕೋಟಿ ರೂ.ಇದೆ. 

ಪ್ರಸ್ತುತ ಯೋಜನೆಗಾಗಿ ಒಟ್ಟು ₹32,202 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರ ಪೈಕಿ ಕೇಂದ್ರ ಸರ್ಕಾರ 11,760 ಕೋಟಿ ರೂ. ನೀಡಿದ್ದರೆ, ರಾಜ್ಯ ಸರ್ಕಾರ 20,442 ಕೋಟಿ ರೂ. ಬಿಡುಗಡೆ ಮಾಡಿದೆ. ಇಲ್ಲಿಯವರೆಗೆ ಯೋಜನೆಗಾಗಿ ಕರ್ನಾಟಕ ಸರ್ಕಾರ ತನ್ನ ಪಾಲಿಗಿಂತಲೂ (23,142 ಕೋಟಿ. ರೂ) ಹೆಚ್ಚು ಅಂದರೆ 29,413 ಕೋಟಿ ರೂ. ಖರ್ಚು ಮಾಡಿದೆ. ಆದರೆ, ಕೇಂದ್ರ ಸಚಿವ ವಿ.ಸೋಮಣ್ಣ ಅವರು ಸದನದಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕಕ್ಕೆ ಪಾಲು ನೀಡುತ್ತಿಲ್ಲ

ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಪ್ರತಿಯೊಂದು ರೂಪಾಯಿಯನ್ನು ಕರ್ನಾಟಕ ಸಂಪೂರ್ಣವಾಗಿ ಬಳಸಿಕೊಂಡಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರತಿ ವರ್ಷವೂ ಅನುದಾನ ನಿರ್ಬಂಧಿಸುತ್ತಲೇ ಇದೆ. ಕರ್ನಾಟಕಕ್ಕೆ ಅದರ ಸರಿಯಾದ ಪಾಲು ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

2024-25ನೇ ಹಣಕಾಸು ವರ್ಷದಲ್ಲಿ ಯೋಜನೆಗಾಗಿ ಅಂದಾಜು 70,163 ಕೋಟಿ ರೂ. ಬಜೆಟ್‌ ನಿಗದಿ ಮಾಡಲಾಗಿತ್ತು. ಇಲ್ಲೂ ಕೂಡ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮುಂದುವರೆಸಿತು. ಈ ಸಾಲಿನಲ್ಲಿ ಕೇಂದ್ರ ಹಂಚಿಕೆ ಮಾಡಿದ 3,804 ಕೋಟಿ ಅನುದಾನದಲ್ಲಿ ಇಲ್ಲಿಯವರೆಗೆ ಕೇವಲ 570 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಅನುದಾನ ಬಿಡುಗಡೆ ಕೋರಿ ಹಲವು ಬಾರಿ ಪತ್ರ ವ್ಯವಹಾರ ನಡೆಸಿದರೂ ಹಂಚಿಕೆಯ ಹಣವನ್ನು ಬಿಡುಗಡೆ ಮಾಡಿಲ್ಲ. ಆದರೆ, ಕರ್ನಾಟಕ ಸರ್ಕಾರ 2024-25ನೇ ಸಾಲಿನಲ್ಲಿ ಹಂಚಿಕೆ ಮಾಡಿದ ಒಟ್ಟು 7,652 ಕೋಟಿ ಅನುದಾನದ ಪೈಕಿ ಈಗಾಗಲೇ 4,977 ಕೋಟಿ ರೂ. ಬಿಡುಗಡೆ ಮಾಡಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜೆಜೆಎಂ ಅನ್ನು ವ್ಯವಸ್ಥಿತವಾಗಿ ಕೊಲ್ಲುತ್ತಿದೆ. ಆದರೆ, ಸೋಮಣ್ಣ ಅವರಂತಹ ಬಿಜೆಪಿ ನಾಯಕರು ನಾಚಿಕೆಯಿಲ್ಲದೆ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ದೂರಿದ್ದಾರೆ.

ಪ್ರಧಾನಿಯವರನ್ನು ಪ್ರಶ್ನಿಸಲಿ

ಯೋಜನೆ ಅನುದಾನ ಹಂಚಿಕೆ ಕುರಿತು ಜನರನ್ನು ದಾರಿ ತಪ್ಪಿಸುವ ಬದಲು ಸೋಮಣ್ಣ ಅವರು ಬಾಕಿ ಅನುದಾನ ಬಿಡುಗಡೆ ಕುರಿತಂತೆ ಪ್ರಧಾನಿ ಅವರನ್ನು ಪ್ರಶ್ನಿಸಬೇಕು. ಬಿಜೆಪಿಯ ಈ ಧೋರಣೆ ಹೊರತಾಗಿಯೂ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಸಮರ್ಪಕವಾಗಿ ಮುನ್ನಡೆಸುತ್ತಿದೆ. ಕೇಂದ್ರವು ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಮುಂದುವರಿಸಿದರೂ ಪ್ರತಿ ಮನೆಗೆ ಸುರಕ್ಷಿತ ಕುಡಿಯುವ ನೀರು ಪೂರೈಸುವುದನ್ನು ಖಾತ್ರಿಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಜಲಜೀವನ ಮಿಷನ್‌ ಯೋಜನೆಗಾಗಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 28,623 ಕೋಟಿ ರೂ. ಹಂಚಿಕೆ ಮಾಡಿದೆ. ಆದರೆ, ಕರ್ನಾಟಕ ಸರ್ಕಾರ ಕೇವಲ 11,760 ಕೋಟಿ ರೂ. ಮಾತ್ರ ಖರ್ಚು ಮಾಡಿದೆ ಎಂದು ಸೋಮಣ್ಣ ಲೋಕಸಭೆಗೆ ತಿಳಿಸಿದ್ದಾರೆ. ಸಚಿವರ ಈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅಂಕಿ ಅಂಶಗಳ ಸಮೇತ ತಿರುಗೇಟು ನೀಡಿದ್ದಾರೆ.

Tags:    

Similar News