Cauvery Aarti Issue Part -2 | ಸರ್ಕಾರಕ್ಕೆ ಕಾವೇರಿ ಆರತಿ ಯೋಜನೆ ಲಾಭವಂತೆ; ತಜ್ಞರಿಗೆ ಅಣೆಕಟ್ಟೆ ಅಪಾಯದ್ದೇ ಚಿಂತೆ !

ಕಾವೇರಿ ಆರತಿಯಿಂದ ಪ್ರವಾಸೋದ್ಯಮದ ಅಭಿವೃದ್ಧಿ ಆಗುತ್ತದೆ, ಸ್ಥಳೀಯರಿಗೆ ಉದ್ಯೋಗವೂ ಸಿಗುತ್ತದೆ ಎಂಬುದು ಸ್ಥಳೀಯ ಶಾಸಕರ ವಾದವಾದರೆ, ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಾಣದಿಂದ ಅಣೆಕಟ್ಟೆಗೆ ಶೇ 80ರಷ್ಟು ಅಪಾಯ ಒದಗಲಿದೆ ಎಂಬುದು ತಜ್ಞರು ಆತಂಕವಾಗಿದೆ.;

Update: 2025-07-20 03:00 GMT

ಕಾವೇರಿ ಆರತಿ, ಅಮ್ಯೂಸ್‌ ಮೆಂಟ್‌ ಪಾರ್ಕ್‌ ನಿರ್ಮಾಣ ಸಂಬಂಧ ಸರ್ಕಾರ ಮತ್ತು ಮಂಡ್ಯದ ರೈತ ಮುಖಂಡರು, ತಜ್ಞರ ನಡುವೆ ಜಟಾಪಟಿ ಆರಂಭವಾಗಿದೆ.

ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಜನತೆಗೆ ಕುಡಿಯುವ ನೀರು ಮತ್ತು ಕೃಷಿಗೆ ನೀರೊದಗಿಸುವ ಕೆಆರ್‌ ಎಸ್‌ ಅಣೆಕಟ್ಟೆ ತಟದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಮಾಡಕೂಡದು ಎಂದು ರೈತರು ಪಟ್ಟು ಹಿಡಿದರೆ, ಸರ್ಕಾರ ಅದರಲ್ಲೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಕಾವೇರಿ ಆರತಿ ಮಾಡಿಯೇ ಮಾಡುತ್ತೇವೆ ಎಂದು ಪಣ ತೊಟ್ಟಿದ್ದಾರೆ. ಈ ವಿವಾದದ ಕುರಿತ ಪರ-ವಿರೋಧದ ಚರ್ಚೆಗಳಿಗೆ "ದ ಫೆಡರಲ್‌ ಕರ್ನಾಟಕ" ವೇದಿಕೆ ಒದಗಿಸಿದೆ.

ಕಾವೇರಿ ಆರತಿ, ಅಮ್ಯೂಸ್‌ ಮೆಂಟ್‌ ಪಾರ್ಕ್‌ ಯಾಕೆ ಬೇಕು ಎಂದು ಶ್ರೀರಂಗಪಟ್ಟಣದ ಕಾಂಗ್ರೆಸ್‌ ಶಾಸಕ ರಮೇಶ್‌ ಬಾಬು ಬಂಡಿಸಿದ್ದೇಗೌಡ ಮತ್ತು ಯಾಕೆ ಬೇಡ ಎಂದು ಪಾರಂಪರಿಕ ತಜ್ಞ ಪ್ರೊ. ಎನ್‌.ಎಸ್‌. ರಂಗರಾಜು ಅವರು ʼದ ಫೆಡರಲ್‌ ಕರ್ನಾಟಕʼದೊಂದಿಗೆ ಅಭಿಪ್ರಾಯ ಹಂಚಿಕೊಂಡು ವಾದ ಮಂಡಿಸಿದ್ದಾರೆ.

ರೈತರೊಂದಿಗೆ ಮನವೊಲಿಸಿ ಮುಂದುವರೆಯುತ್ತೇವೆ

ಕೆಆರ್‌ ಎಸ್‌ ನಮ್ಮ ಜೀವ ಅಲ್ಲವೇ..? ಅದರ ಬಗ್ಗೆ ನಮಗೆ ಅಭಿಮಾನ, ರಕ್ಷಣೆಯ ಜವಾಬ್ದಾರಿ ಇಲ್ಲವೇ..? ಹೀಗೆ ಪ್ರಶ್ನೆ ಮಾಡಿದ್ದು ಶ್ರೀರಂಗಪಟ್ಟಣ ಶಾಸಕ ರಮೇಶ್‌ ಬಾಬು ಬಂಡಿಸಿದ್ದೇಗೌಡ.

ಕಾವೇರಿ ಆರತಿ, ಅಮ್ಯೂಸ್‌ ಮೆಂಟ್‌ ಪಾರ್ಕ್‌ ನಿರ್ಮಾಣ ಸಂಬಂಧ ಈಗ ಕೇಳಿ ಬರುತ್ತಿರುವ ವಿರೋಧಗಳಿಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಭಾರತದಲ್ಲಿ ಗಂಗಾ ಆರತಿ ಮಾಡಿದ ಹಾಗೆಯೇ ನಾವು ಇಲ್ಲಿ ಕಾವೇರಿ ಆರತಿ ಮಾಡುತ್ತೇವೆ. ನಮ್ಮ ಸಂಪ್ರದಾಯ, ನಮ್ಮ ಅಸ್ಮಿತೆಯನ್ನು ನಾವು ಗೌರವಿಸುವುದರಲ್ಲಿ, ಪೂಜಿಸುವುದರಲ್ಲಿ ತಪ್ಪೇನಿದೆ. ಕೆಆರ್‌ ಎಸ್‌ ನಮಗೂ ಜೀವನಾಡಿಯೇ. ಈಗ ಕೆಲವರು ಅಲ್ಲಿ ಅಭಿವೃದ್ಧಿ ಚಟುವಟಿಕೆ ಬೇಡ, ಕಾವೇರಿ ಆರತಿ ಬೇಡ ಎನ್ನುತ್ತಿದ್ದಾರೆ. ಅವರನ್ನು ಕರೆದು ಮಾತನಾಡುವ ಪ್ರಯತ್ನ ಮಾಡಿದ್ದೇವೆ. ಆದರೆ, ನಾವು ಸಭೆ ಕರೆದಾಗ ಬಂದಿಲ್ಲ. ರೈತ ಮುಖಂಡರು ನೇರವಾಗಿ ಬಂದು ಸರ್ಕಾರದ ಅಭಿಪ್ರಾಯ ಕೇಳಬೇಕು. ತಮ್ಮ ಅಭಿಪ್ರಾಯವನ್ನೂ ಮುಕ್ತವಾಗಿ ಹೇಳಿಕೊಳ್ಳಲಿ. ಅವರ ಸಲಹೆ ಪಡೆಯಲು ನಾವು ಸಿದ್ಧರಿದ್ದೇವೆ ಎನ್ನುತ್ತಾರೆ.

ಕಾವೇರಿ ಆರತಿಯಿಂದ ಒಳ್ಳೆಯದ್ದೇ ಆಗುತ್ತದೆ

ಕೆಲವರು ಕಾವೇರಿ ಆರತಿ ಮಾಡುವುದರಿಂದ ಅಣೆಕಟ್ಟೆಯ ಸುರಕ್ಷತೆಗೆ ಧಕ್ಕೆ ಬರುತ್ತದೆ, ಆರತಿಯನ್ನು ಎಲ್ಲಿಯಾದರೂ ಮಾಡಿಕೊಳ್ಳಲಿ ಇಲ್ಲಿ ಬೇಡ ಎನ್ನುತ್ತಿದ್ದಾರೆ. ನಾನು ಭರವಸೆ ನೀಡುತ್ತೇನೆ, ಕಾವೇರಿ ಆರತಿಯಿಂದ ಅಣೆಕಟ್ಟೆಗೆ ಯಾವುದೇ ತೊಂದರೆ ಆಗುವುದಿಲ್ಲ. ನಾವು 35 ಅಡಿ ಎತ್ತರದ ಕಾವೇರಿ ಪ್ರತಿಮೆ ನಿರ್ಮಿಸಲು ಮುಂದಾಗಿದ್ದೇವೆ. ವೇದಿಕೆ ನಿರ್ಮಾಣದಿಂದಲೂ ಯಾವುದೇ ಹಾನಿ ಆಗುವುದಿಲ್ಲ. ಅದೂ ಅಲ್ಲದೇ ಅಣೆಕಟ್ಟೆಯ ಮುಂದೆ ಸಾಕಷ್ಟು ವಿಶಾಲವಾದ ಭೂ ಪ್ರದೇಶವಿದೆ. ಅಲ್ಲಿ ಕಾವೇರಿ ಆರತಿ ಮಾಡಿದರೆ ಪ್ರವಾಸೋದ್ಯಮದ ಅಭಿವೃದ್ಧಿಯೂ ಆಗುತ್ತದೆ, ಸ್ಥಳೀಯರಿಗೆ ಉದ್ಯೋಗವೂ ಸಿಗುತ್ತದೆ. ಇದಕ್ಕೆ ಅಡ್ಡಿ ಮಾಡುವುದು ಸರಿಯಲ್ಲ ಎನ್ನುತ್ತಾರೆ ಶಾಸಕ ರಮೇಶ್‌ ಬಾಬು.

ಮಹಾರಾಜರೇ ಮೊಘಲ್‌ ಶೈಲಿಯ ಉದ್ಯಾನ ನಿರ್ಮಿಸಿದ್ದಾರೆ

ಅಣೆಕಟ್ಟೆ ಕಟ್ಟಿದ ಕೃಷ್ಣರಾಜ ಒಡೆಯರ್‌ ಅವರೇ ಮುಂದೆ ವಿಶಾಲವಾದ ಪ್ರದೇಶದಲ್ಲಿ ಮೊಘಲ್‌ ಶೈಲಿಯಲ್ಲಿ ಉದ್ಯಾನವನ ನಿರ್ಮಾಣ ಮಾಡಿದ್ದರು. ಇದರಿಂದ ಅಣೆಕಟ್ಟೆಯ ಸುರಕ್ಷತೆಗೆ ಧಕ್ಕೆ ಆಗಿದೆಯೇ..? ನಾವು ಹಾಗೆಯೇ ತಜ್ಞರ ಸಲಹೆ ಪಡೆದು, ಅಣೆಕಟ್ಟೆಯ ಸುರಕ್ಷತೆಗೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಕೆಲಸ ಮಾಡುತ್ತೇವೆ. ನಮ್ಮ ರೈತರ ಭೂಮಿಗಳಿಗೆ ಬೆಲೆ ಬರಬೇಕು, ಮಂಡ್ಯ ಅಭಿವೃದ್ಧಿ ಆಗಬೇಕು, ನಮ್ಮ ಜನ ಅವರ ಕಾಲಿನ ಮೇಲೆ ಅವರು ನಿಲ್ಲಬೇಕು. ಈ ಆಶಯದಿಂದಲೇ ನಮ್ಮ ಸರ್ಕಾರ ಮುಂದಡಿ ಇಟ್ಟಿದೆ ಎಂಬುದು ಶಾಸಕ ರಮೇಶ್‌ ಬಾಬು ಅವರ ವಾದ.

ಅಮ್ಯೂಸ್‌ ಮೆಂಟ್‌ ಪಾರ್ಕ್‌ ನಿರ್ಧಾರ ಅಂತಿಮವಾಗಿಲ್ಲ

ಕೆಆರ್‌ ಎಸ್‌ ಅಣೆಕಟ್ಟೆ ಮುಂಭಾಗ ಅಮ್ಯೂಸ್‌ ಮೆಂಟ್‌ ಪಾರ್ಕ್‌ ನಿರ್ಮಾಣ ಮಾಡುವ ಸಂಬಂಧ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಇಲ್ಲಿ ಡಿಸ್ನಿ ಲ್ಯಾಂಡ್‌ ಮಾದರಿ ಉದ್ಯಾನ ನಿರ್ಮಾಣ ಮಾಡುವ ನಿರ್ಧಾರ ಮಾಡಿದ್ದರು. ಹಾಗಿದ್ದರೆ ಅವರಿಗೆ ಅಣೆಕಟ್ಟೆಯ ಸುರಕ್ಷತೆ ಬಗ್ಗೆ ಅರಿವಿರಲಿಲ್ಲವೇ. ಈಗ ಡಿಪಿಆರ್‌ ಸಂಬಂಧಿ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಈ ಬಗ್ಗೆ ಸರ್ಕಾರ ರೈತರೊಂದಿಗೆ ಮಾತನಾಡಿಯೇ ನಿರ್ಧಾರ ಪ್ರಕಟ ಮಾಡಲಿದೆ. ನಾನು ರೈತರಲ್ಲಿ ಕೇಳಿಕೊಳ್ಳುವುದು ಇಷ್ಟೇ. ಯಾವುದೇ ಕಾರಣಕ್ಕೂ ಅಣೆಕಟ್ಟೆಯ ಭದ್ರತೆಗೆ ತೊಡಕು ಉಂಟು ಮಾಡುವ ಕೆಲಸ ಮಾಡುವುದಿಲ್ಲ. ಸರ್ಕಾರದ ದೂರದೃಷ್ಟಿಯನ್ನು ನೀವು ಅರ್ಥ ಮಾಡಿಕೊಳ್ಳಿ, ನಿಮ್ಮ ಸಲಹೆ, ಅಭಿಪ್ರಾಯಗಳನ್ನು ಪಡೆದು ನಾವು ಮುಂದುವರಿಯುತ್ತೇವೆ ಎಂದಿದ್ದಾರೆ.

ಮೂಢ ನಂಬಿಕೆ ಬಿತ್ತಲು ಹೊರಟಿರುವುದು ಏಕೆ ; ರಂಗರಾಜು ಪ್ರಶ್ನೆ

ನನ್ನ ಪ್ರಕಾರ ಗಂಗಾ ಆರತಿ ಎನ್ನುವುದು ಮೌಢ್ಯ ಬಿತ್ತುವ, ಜನರನ್ನು ಧಾರ್ಮಿಕವಾಗಿ ಕಟ್ಟಿಹಾಕುವ ಪ್ರಯತ್ನ. ಇದು ಯಾಕೆ ಬೇಕು..? ಎಂದು ಪ್ರಶ್ನೆ ಮಾಡುತ್ತಾರೆ ಪಾರಂಪರಿಕ ತಜ್ಞ ಪ್ರೊ. ಎನ್‌.ಎಸ್‌. ರಂಗರಾಜು.

ಗಂಗಾ ನದಿ ಮಲಿನವಾಗಿದೆ. ಅದನ್ನು ಶುದ್ಧ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿತು. ಅದೆಲ್ಲಾ ಎಲ್ಲಿಗೆ ಹೋಯಿತು, ನದಿ ಸ್ವಚ್ಛವಾಯಿತೇ..? ಈಗ ಅದೇ ಮಾದರಿಯಲ್ಲಿ ಕಾವೇರಿ ಆರತಿ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಹೊರಟು ನಿಂತಿದೆ. ಇದರಿಂದ ಜನರಿಗೆ ನೀವು ಏನು ಸಂದೇಶ ನೀಡಲು ಹೊರಟಿದ್ದೀರಿ, ಮೂಢ ನಂಬಿಕೆಯನ್ನು ಬಿತ್ತುವ ಪ್ರಯತ್ನ ಅಲ್ಲವೇ ಇದು. ತಲಕಾವೇರಿಯಲ್ಲಿ ನಿತ್ಯವೂ ಕಾವೇರಿಗೆ ಪೂಜೆ ನಡೆಯುತ್ತದೆ. ನದಿ ತಟದಲ್ಲಿ ಸಾಕಷ್ಟು ದೇವಸ್ಥಾನಗಳಿವೆ, ಅಲ್ಲಿ ಪೂಜೆ ಆಗುತ್ತದೆ. ಹೀಗಿರುವಾಗ ಮತ್ತೊಂದು ಪೂಜೆ ಅಣೆಕಟ್ಟೆಯ ಮುಂದೆಯೇ ಯಾಕೆ ಮಾಡಬೇಕು. ಇದರಿಂದ ಅಣೆಕಟ್ಟೆಗೆ ಆಗುವ ಅಪಾಯದ ಅಂದಾಜು ಇವರಿಗೆ ಇದ್ದಂತೆ ಕಾಣುತ್ತಿಲ್ಲ ಎನ್ನುವುದು ಅವರ ವಾದ.

ಶೇ. 80 ರಷ್ಟು ಅಣೆಕಟ್ಟೆಗೆ ಅಪಾಯ ಇದೆ

ಕೆಆರ್‌ ಎಸ್‌ ಅಣೆಕಟ್ಟೆ ಕಟ್ಟಿರುವುದು ಕೇವಲ ಕಲ್ಲು, ಸುಣ್ಣದ ಗಾರಿಯಿಂದ ಮಾತ್ರ. ಯಾವುದೇ ರೀತಿಯ ಕಬ್ಬಿಣ, ಸಿಮೆಂಟ್‌ ಬಳಕೆ ಮಾಡಿಲ್ಲ. ಕೆಳಗಡೆ 100 ಅಡಿ ಪಾಯ ಇದ್ದರೆ, ಅದರ ಮೇಲೆ 25-25 ಅಡಿಗಳ ಕಲ್ಲಿನ ತಡೆಗೋಡೆ ನಿರ್ಮಾಣ ಮಾಡಿ ಕಟ್ಟೆ ಕಟ್ಟಲಾಗಿದೆ. ಈಗ ನೀವು ಅದರ ಮುಂದೆಯೇ ಬೃಹತ್‌ ಕಾವೇರಿ ಪ್ರತಿಮೆ ನಿರ್ಮಾಣ, ವೇದಿಕೆ ನಿರ್ಮಾಣ ಮಾಡಲು ಹೊರಟರೆ ಅಪಾಯದ ಸಾಧ್ಯತೆ ಹೆಚ್ಚು. ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದರೆ ಅವರಿಗೆ ಮೂಲ ಸೌಲಭ್ಯ ಒದಗಿಸಬೇಕಲ್ಲವೇ, ಅದಕ್ಕಾಗಿ ಮತ್ತಷ್ಟು ಕಾಮಗಾರಿ ಮಾಡಬೇಕಲ್ಲವೇ, ಹೀಗೆ ಮಾಡುತ್ತಾ ಹೋದರೆ ಅಣೆಕಟ್ಟೆಗೆ ಶೇ. 80 ರಷ್ಟು ಅಪಾಯ ಇದ್ದೇ ಇದೆ ಎನ್ನುತ್ತಾರೆ ರಂಗರಾಜು.

ಅಭಿವೃದ್ಧಿಯನ್ನು ಬೇರೆ ಕಡೆ ಮಾಡಬಹುದಲ್ಲವೇ..?

ಪ್ರವಾಸೋದ್ಯಮ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಆದಾಯದ ಮೂಲ ಕಂಡುಕೊಳ್ಳುವುದು ಮುಖ್ಯವೇ. ಆದರೆ ಅದಕ್ಕೆ ಬೇರೆ ಜಾಗಗಳನ್ನು ಆಯ್ಕೆ ಮಾಡಿಕೊಳ್ಳಿ. ಕೆಆರ್‌ ಎಸ್‌ ಅಣೆಕಟ್ಟೆ ಸೂಕ್ಷ್ಮ ಪ್ರದೇಶ, ಅದರ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆ ಮಾಡಬಾರದು. ಇದೆಲ್ಲಾ ಗೊತ್ತಿದ್ದೂ ಸರ್ಕಾರ ಇಷ್ಟು ದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಮಾಡಿಸಲು ಹೊರಟಿದೆ, ಅಮ್ಯೂಸ್‌ ಮೆಂಟ್‌ ಪಾರ್ಕ್‌ ಹೆಸರಿನಲ್ಲಿ ಕೆಲವರು ಲಾಭ ಮಾಡಿಕೊಳ್ಳಬಹುದು. ಆದರೆ ಅಣೆಕಟ್ಟೆ ಸುರಕ್ಷತೆಯ ದೃಷ್ಟಿಯಿಂದ ಇದು ಸೂಕ್ತವಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದರೂ ಅವರಿಗೆ ಕೇಳಿಸಿಕೊಳ್ಳುವ ತಾಳ್ಮೆಯೇ ಇದ್ದಂತೆ ಇಲ್ಲ ಎನ್ನುವುದು ರಂಗರಾಜು ಆರೋಪಿಸಿದರು.

ಜನಾಂದೋಲನ ರೂಪಿಸುತ್ತೇವೆ

ಸರ್ಕಾರದ ವಾದ ಏನೇ ಇರಬಹುದು, ಆದರೆ, ಅಣೆಕಟ್ಟೆಯ ಸುರಕ್ಷತೆಯ ವಿಚಾರದಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ. ನಾವು ಈ ನಿಟ್ಟಿನಲ್ಲಿ ಮೈಸೂರು, ಮಂಡ್ಯ, ಬೆಂಗಳೂರಿನಲ್ಲಿ ಜನಾಂದೋಲನ ನಡೆಸುತ್ತೇವೆ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು, ಇಲ್ಲದೇ ಇದ್ದರೆ ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ. ಲಕ್ಷಾಂತರ ಕುಟುಂಬಗಳಿಗೆ ಆಧಾರವಾಗಿರುವ, ಕೋಟ್ಯಾಂತರ ಜನರಿಗೆ ಬೆಳಕಾಗಿರುವ ಕೆಆರ್‌ ಎಸ್‌ ಅಣೆಕಟ್ಟೆ ಮನರಂಜನೆ, ಪ್ರವಾಸೋದ್ಯಮ, ಮೋಜು, ಮಸ್ತಿ, ಯಾರೋ ಕೆಲವರ ವೈಯಕ್ತಿಕ ಲಾಭದ ವರ್ತುಲದಲ್ಲಿ ಸಿಕ್ಕಿಕೊಂಡು ಅಪಾಯದ ಅಂಚಿಗೆ ಹೋಗಬಾರದು. ಇದೊಂದೇ ನಮ್ಮ ಮುಖ್ಯ ಆಶಯ. ಇದನ್ನು ಸರ್ಕಾರ, ಅದರ ಮುಖ್ಯಸ್ಥರು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ರಂಗರಾಜು.

Tags:    

Similar News