Cauvery Aarti Issue Part -1 | ಸರ್ಕಾರ-ರೈತರ ಜಟಾಪಟಿ; ಸಾಧ್ಯವಾಗುವುದೇ ಕಾವೇರಿ ಆರತಿ, ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಾಣ..?
x

ಅಮ್ಯೂಸ್‌ ಮೆಂಟ್‌ ಪಾರ್ಕ್‌ ನೀಲನಕ್ಷೆ

Cauvery Aarti Issue Part -1 | ಸರ್ಕಾರ-ರೈತರ ಜಟಾಪಟಿ; ಸಾಧ್ಯವಾಗುವುದೇ ಕಾವೇರಿ ಆರತಿ, ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಾಣ..?

2616 ಕೋಟಿ ರೂ ವೆಚ್ಚದ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಾಣ ಹಾಗೂ 98ಕೋಟಿ ರೂ. ವೆಚ್ಚದ ಕಾವೇರಿ ಆರತಿಗೆ ವಿರೋಧಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಸರ್ಕಾರ ಮತ್ತು ರೈತರ ನಡುವೆ ಜಟಾಪಟಿ ನಡೆಯುತ್ತಿದೆ.


ಕೃಷ್ಣರಾಜ ಸಾಗರ ಅಣೆಕಟ್ಟೆ (ಕೆಆರ್‌ ಎಸ್‌) ಮೈತುಂಬಿ ನಳನಳಿಸುತ್ತಿದೆ. ಉಕ್ಕಿ ಹರಿವ ನೀರಿನಂತೆ ವಿವಾದವೂ ಅಣೆಕಟ್ಟೆಯನ್ನು ಆವರಿಸಿದೆ. ಗಂಗಾರತಿಯಂತೆ ಜೀವನದಿ ಕಾವೇರಿಗೆ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ಬಳಿ ಆರತಿ ಮಾಡುವ, ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಿಸುವ ರಾಜ್ಯ ಸರ್ಕಾರದ ಯೋಜನೆ ವಿವಾದ ಹುಟ್ಟು ಹಾಕಿದೆ.

ಕೆಆರ್‌ಎಸ್‌ ಅಣೆಕಟ್ಟೆ ಮುಂದೆ ನಿರ್ಮಿಸಲು ಉದ್ದೇಶಿಸಿರುವ ಅಮ್ಯೂಸ್‌ ಮೆಂಟ್‌ ಪಾರ್ಕ್‌, ಕಾವೇರಿ ಆರತಿ ಯೋಜನೆ ಕೈಬಿಡುವಂತೆ ರೈತರು ಹಾಗೂ ತಜ್ಞರು ಆಗ್ರಹಿಸುತ್ತಿದ್ದರೆ, ಸರ್ಕಾರ ಮಾತ್ರ ತನ್ನ ನಿರ್ಧಾರಕ್ಕೆ ಅಂಟಿಕೊಂಡಿರುವುದು ವಿವಾದ ತೀವ್ರಗೊಳ್ಳಲು ಕಾರಣವಾಗಿದೆ. ಸರ್ಕಾರದ ವಿರುದ್ಧ ಕಾನೂನು ಹೋರಾಟ ಮತ್ತು ಜನಾಂದೋಲನ ರೂಪಿಸಲು ರೈತರು ಮುಂದಾಗಿದ್ದಾರೆ.

ಸಿದ್ದರಾಮಯ್ಯ ಅವರು ಮೊದಲ ಅವಧಿಗೆ ಮುಖ್ಯಮಂತ್ರಿ ಆಗಿದ್ದಾಗಲೇ ಈ ಯೋಜನೆ ಕುಡಿಯೊಡೆದಿತ್ತು. 2015-16 ಮತ್ತು 2018-19ರ ಬಜೆಟ್‌ನಲ್ಲಿಯೂ ಪ್ರಸ್ತಾಪವಾಗಿತ್ತು. ಆದರೆ ನಂತರ ಬಂದ ಸರ್ಕಾರಗಳು ಈ ಯೋಜನೆಗೆ ಎಳ್ಳು ನೀರು ಬಿಟ್ಟಿದ್ದವು. ಇದೀಗ ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಬಳಿಕ 2024-25ನೇ ಸಾಲಿನ ಬಜೆಟ್‌ ನಲ್ಲಿ ಕೆಆರ್‌ ಎಸ್‌ ಎದುರಿನ ಬೃಂದಾವನ ಅಭಿವೃದ್ಧಿ ಪ್ರಸ್ತಾಪ ಮಾಡಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಅಮ್ಯೂಸ್‌ ಮೆಂಟ್‌ ಪಾರ್ಕ್‌ ನಿರ್ಮಾಣ ಮತ್ತು ಕಾವೇರಿ ಆರತಿಯಿಂದ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ, ಪ್ರವಾಸೋದ್ಯಮವೂ ಅಭಿವೃದ್ಧಿ ಆಗಲಿದೆ. ಹೀಗಾಗಿ ಇವುಗಳನ್ನು ಮಾಡಿಯೇ ಮಾಡುತ್ತೇವೆ ಎಂದಿರುವುದು ಸ್ಥಳೀಯರಲ್ಲಿ ಕಿಚ್ಚು ಹೊತ್ತಿಸಿದೆ.

ಅಮ್ಯೂಸ್‌ ಮೆಂಟ್‌ ಪಾರ್ಕ್‌

ಮಾಸ್ಟರ್‌ ಪ್ಲಾನ್‌ ನಲ್ಲಿ 41 ಕಾಮಗಾರಿಗಳು

ಕೆಆರ್‌ ಎಸ್‌ ಅಣೆಕಟ್ಟೆ ಮುಂದಿನ 198 ಎಕರೆ ಪ್ರದೇಶದಲ್ಲಿ ಉದ್ದೇಶಿತ ಅಮ್ಯೂಸ್‌ ಮೆಂಟ್‌ ಪಾರ್ಕ್‌ ನ ಮಾಸ್ಟರ್‌ ಪ್ಲಾನ್‌ ನಲ್ಲಿ 41 ವಿವಿಧ ಕಾಮಗಾರಿಗಳಿಗೆ ನೀಲನಕ್ಷೆ ತಯಾರಾಗಿದೆ. 184 ಕೋಟಿ ರೂ. ವೆಚ್ಚದಲ್ಲಿ 120 ಅಡಿ ಎತ್ತರದ ಬೃಹತ್‌ ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣ, 147 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ನಿರ್ಮಾಣ, 37 ಕೋಟಿ ರೂ. ಖರ್ಚು ಮಾಡಿ ಲೇಸರ್‌ ಫೌಂಟೇನ್‌ ಶೋ ಘಟಕ, 22 ಕೋಟಿ ರೂ. ವೆಚ್ಚದಲ್ಲಿ ದಕ್ಷಿಣ ಮತ್ತು ಉತ್ತರ ಗಾರ್ಡನ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರ ಜೊತೆಗೆ 6 ಕೋಟಿ ರೂ.ಗಳಲ್ಲಿ ಟೆಕ್ನೋ ಪಾರ್ಕ್‌, 5.3 ಕೋಟಿ ರೂ. ವೆಚ್ಚದಲ್ಲಿ ಸ್ಕೈ ಬ್ರಿಡ್ಜ್‌, 32 ಕೋಟಿ ರೂ. ವೆಚ್ಚದಲ್ಲಿ ಪ್ರವೇಶ ದ್ವಾರ, ಹೆಲಿಪ್ಯಾಡ್‌ ಗಳ ನಿರ್ಮಾಣ, 4.42 ಕೋಟಿ ರೂ. ವೆಚ್ಚದಲ್ಲಿ ಜಂಗಲ್‌ ಟ್ರ್ಯಾಕ್‌, ಟ್ರೀ ವಾಕ್‌ ನಿರ್ಮಾಣಕ್ಕೆ ಯೋಜಿಸಲಾಗಿದೆ. ಇನ್ನು 371 ಕೋಟಿ ರೂ. ವೆಚ್ಚದಲ್ಲಿ ಬೃಹತ್‌ ಪ್ರಮಾಣದ ಪಾರ್ಕಿಂಗ್‌ ಪ್ರದೇಶ, 40 ಕೋಟಿ ರೂ. ವೆಚ್ಚದಲ್ಲಿ ಸುಮಾರು 5000 ಮಂದಿ ಒಟ್ಟಿಗೆ ಕೂರಬಹುದಾದ ತೆರೆದ ಸಭಾಂಗಣ, 110 ಕೋಟಿ ರೂ. ವೆಚ್ಚದಲ್ಲಿ ಸೇತುವೆ 91 ಕೋಟಿ ರೂ. ವೆಚ್ಚದ ವಾಟರ್‌ ಪಾರ್ಕ್‌ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

ಒಟ್ಟಾರೆ 2616 ಕೋಟಿ ರೂ.ಗಳ ಈ ಬೃಹತ್‌ ಯೋಜನೆಯು ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದ್ದು, 30 ವರ್ಷಗಳವರೆಗೆ ಖಾಸಗಿ ಸಂಸ್ಥೆಗೆ ನಿರ್ವಹಣೆ ಜವಾಬ್ದಾರಿ ನೀಡುವ, ಆದಾಯದಲ್ಲಿ ಪಾಲು ನೀಡುವ ಬಗ್ಗೆ ಚರ್ಚೆಗಳು ನಡೆದಿವೆ.

ಯದುವೀರ್‌ ಒಡೆಯರ್‌

ರಾಜಮನೆತನ, ರೈತರು, ಪ್ರತಿಪಕ್ಷಗಳ ವಿರೋಧ

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿರುವ ರಾಜವಂಶದ ಯದುವೀರ್‌ ಅವರು ರಾಜಕಾರಣಕ್ಕೆ ಬರುವ ಮೊದಲೇ ಈ ಯೋಜನೆಯನ್ನು ವಿರೋಧಿಸಿದ್ದರು. ಇದರಿಂದ ಕೆಆರ್‌ ಎಸ್‌ ಅಣೆಕಟ್ಟೆಯ ಭದ್ರತೆಗೆ ಸಮಸ್ಯೆ ಆಗಬಹುದು. ಇದರಿಂದ ಯೋಜನೆಯನ್ನು ಕೈ ಬಿಡಿ ಎಂದು ಹೇಳಿದ್ದರು. ಈಗಲೂ ಅವರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ "ದ ಫೆಡರಲ್‌ ಕರ್ನಾಟಕ"ದೊಂದಿಗೆ ಮಾತನಾಡಿದ ಅವರು, ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಾಣ ಮಾಡಿದ್ದು ರೈತರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ. ಇದರಿಂದ ಕೋಟ್ಯಾಂತರ ಮಂದಿಗೆ ಉದ್ಯೋಗ ಸಿಕ್ಕಿದೆ, ಕುಡಿಯುವ ನೀರು ಸಿಕ್ಕಿದೆ. ರೈತರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ, ಈಗ ಅಭಿವೃದ್ಧಿ, ಪ್ರವಾಸೋದ್ಯಮದ ಹೆಸರಿನಲ್ಲಿ ಅಣೆಕಟ್ಟೆ ಭದ್ರತೆಗೆ ಧಕ್ಕೆ ತರುವಂತಹ ಕೆಲಸ ಆಗಬಾರದು. ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ.

ಇದರೊಂದಿಗೆ ಮೈಸೂರು, ಮಂಡ್ಯ ಭಾಗದ ರೈತ ಮುಖಂಡರು ಬೀದಿಗಳಿದು ಹೋರಾಟ ಆರಂಭಿಸಿದ್ದಾರೆ. ಅಲ್ಲದೇ ಹೈಕೋರ್ಟ್‌ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಯೋಜನೆಗೆ ತಡೆ ನೀಡಬೇಕು ಎಂದು ಕೋರಿದ್ದಾರೆ. ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ನಿಂದಲೂ ಈ ಯೋಜನೆಗಳಿಗೆ ವಿರೋಧ ಕೇಳಿ ಬಂದಿದ್ದು, ಇದೊಂದು ಹಣ ಕೊಳ್ಳೆ ಹೊಡೆಯುವ ತಂತ್ರ ಎಂದು ಟೀಕೆ ಮಾಡಿವೆ.

ರೈತ ನಾಯಕಿ ಸುನಂದಾ ಜಯರಾಮ್‌

ಕಾವೇರಿ ಆರತಿ ಬೇಡವೇ ಬೇಡ

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಹೆಚ್ಚಿನ ಆಸಕ್ತಿ ವಹಿಸಿ 98 ಕೋಟಿ ರೂ. ವೆಚ್ಚದಲ್ಲಿ ಮಾಡಲು ಉದ್ದೇಶಿಸಿರುವ ಕಾವೇರಿ ಆರತಿಗೆ ರೈತರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಕಾವೇರಿ ಆರತಿ ಮಾಡಿಯೇ ಸಿದ್ಧ ಎಂದು ಸರ್ಕಾರ ಇಪ್ಪತ್ತು ದಿನಗಳ ಹಿಂದೆಯೇ ರಾತ್ರೋ ರಾತ್ರಿ ವೇದಿಕೆ ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನು ಯಶಸ್ವಿಯಾಗಿ ತಡೆದಿರುವ ರೈತರು, ಕಾವೇರಿ ಮಾತೆ ಹುಟ್ಟುವ ತಲಕಾವೇರಿಯಲ್ಲಿ ನಿತ್ಯವೂ ಪೂಜೆ ಆಗುತ್ತದೆ. ಕಾವೇರಿ ತೀರದಲ್ಲಿ ಸಾಕಷ್ಟು ಪುರಾತನ ಪವಿತ್ರ ಧಾರ್ಮಿಕ ಕ್ಷೇತ್ರಗಳಿವೆ. ಅವುಗಳ ಅಭಿವೃದ್ಧಿ ಮಾಡಿ, ಅಲ್ಲಿ ಬೇಕಿದ್ದರೆ ಕಾವೇರಿ ಆರತಿ ಮಾಡಿ. ಅದನ್ನು ಬಿಟ್ಟು ಅಣೆಕಟ್ಟೆಯ ಮುಂಭಾಗ ಯಾವುದೇ ಚಟುವಟಿಕೆ ಕೈಗೊಂಡರೆ ನಾವು ಸಹಿಸುವುದಿಲ್ಲ ಎನ್ನುವ ಗಟ್ಟಿ ಸಂದೇಶವನ್ನು ಸಾರಿರುವ ರೈತ ಸಂಘ ಕಾವೇರಿ ಆರತಿಗೂ ವ್ಯಾಪಕ ವಿರೋಧ ಒಡ್ಡಿದೆ.

ಅಣೆಕಟ್ಟೆ ಸುರಕ್ಷತೆಯೇ ನಮ್ಮ ಆದ್ಯತೆ ಎನ್ನುತ್ತಿರುವ ರೈತರು

ನೂರು ವರ್ಷಗಳನ್ನು ಪೂರೈಸಿರುವ ಕೆಆರ್‌ ಎಸ್‌ ಅಣೆಕಟ್ಟೆ ನಿರ್ಮಾಣವಾಗಿರುವುದು ಕಲ್ಲು, ಸುಣ್ಣದ ಗಾರೆಯಿಂದ. ಇದಕ್ಕೆ ಯಾವುದೇ ಕಬ್ಬಿಣ, ಸಿಮೆಂಟ್‌, ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಲ್ಲ. ಹೀಗಾಗಿ ಅಣೆಕಟ್ಟೆಯ ಸುರಕ್ಷತೆ ಮತ್ತು ರಚನಾ ಕ್ರಮದ ಬಗ್ಗೆ ಯಾರಿಗೂ ಆಳವಾದ ಜ್ಞಾನ ಇಲ್ಲ. ಈಗ ಅಮ್ಯೂಸ್‌ ಮೆಂಟ್‌ ಪಾರ್ಕ್‌ ಮತ್ತು ಕಾವೇರಿ ಆರತಿಯಂತಹ ಚಟುವಟಿಕೆ ಮಾಡಲು ಹೊರಟರೆ ಅಣೆಕಟ್ಟೆಯ ಭದ್ರತೆಗೆ ಧಕ್ಕೆ ಆಗುತ್ತದೆ. ನಮ್ಮ ಬದುಕು ಕಟ್ಟಿಕೊಟ್ಟಿರುವ ಅಣೆಕಟ್ಟೆಗೆ ಸಣ್ಣ ಪ್ರಮಾಣದ ತೊಡಕು ಉಂಟಾಗುತ್ತದೆ ಎಂದರೂ ನಾವು ಅದನ್ನು ಸಹಿಸುವುದಿಲ್ಲ. ಸರ್ಕಾರ ಬೇಕಿದ್ದರೆ ಬೇರೆ ಕಡೆಗಳಲ್ಲಿ ಅಮ್ಯೂಸ್‌ ಮೆಂಟ್‌ ಪಾರ್ಕ್‌, ಕಾವೇರಿ ಆರತಿ ಮಾಡಿಕೊಳ್ಳಲಿ, ಆದರೆ ಅಣೆಕಟ್ಟೆಯ ಸುತ್ತಲಿನ 20 km ವ್ಯಾಪ್ತಿಯಲ್ಲಿ ನಾವು ಯಾವುದೇ ಚಟುವಟಿಕೆ ನಡೆಯಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಈ ಹಿಂದೆಯೇ ಬೇಬಿ ಬೆಟ್ಟ, ಹುನಗನಹಳ್ಳಿ, ಚಿನಕುರಳಿ ಸುತ್ತಮುತ್ತಲೂ ನಡೆಯುತ್ತಿದ್ದ ಕಲ್ಲುಗಣಿಗಾರಿಕೆಯನ್ನು ಅಣೆಕಟ್ಟೆಯ ಭದ್ರತೆಯ ದೃಷ್ಟಿಯಿಂದ ಸ್ಥಗಿತ ಮಾಡಿದ್ದನ್ನು ಸ್ಮರಿಸಬಹುದು.

ದೊಡ್ಡ ಜನಾಂದೋಲನ ರೂಪಿಸುತ್ತೇವೆ

ಅಮ್ಯೂಸ್‌ ಮೆಂಟ್‌ ಪಾರ್ಕ್‌ ನಿರ್ಮಾಣ ಮತ್ತು ಕಾವೇರಿ ಆರತಿಯಿಂದ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು. ಇಲ್ಲದೇ ಇದ್ದರೆ ಮೈಸೂರು, ಮಂಡ್ಯ, ಬೆಂಗಳೂರು ಸೇರಿ ರಾಜ್ಯಾದ್ಯಂತ ವ್ಯಾಪಕ ಜನಾಂದೋಲನ ರೂಪಿಸುತ್ತೇವೆ ಎಂದು ರೈತ ಮುಖಂಡರು ಸಭೆ ಸೇರಿ ನಿರ್ಣಯ ಮಾಡಿದ್ದಾರೆ.

ಈ ಸಂಬಂಧ "ದ ಫೆಡರಲ್‌ ಕರ್ನಾಟಕ"ದೊಂದಿಗೆ ಮಾತನಾಡಿದ ರೈತ ನಾಯಕಿ ಸುನಂದಾ ಜಯರಾಮ್‌ ಅವರು, 2616 ಕೋಟಿ ರೂ. ಖರ್ಚು ಮಾಡಿ ಅಮ್ಯುಸ್‌ ಮೆಂಟ್‌ ಪಾರ್ಕ್‌, 98 ಕೋಟಿ ರೂ. ಖರ್ಚು ಮಾಡಿ ಕಾವೇರಿ ಆರತಿ ಮಾಡುವ ಅಗತ್ಯ ಏನಿದೆ ಎನ್ನುವುದೇ ನಮ್ಮ ಪ್ರಶ್ನೆ. ಒಂದು ವೇಳೆ ಮಾಡಲೇಬೇಕು ಎನ್ನುವುದಿದ್ದರೆ ಅಣೆಕಟ್ಟೆಯಿಂದ 20 ಕಿ.ಮೀ. ವ್ಯಾಪ್ತಿ ಮೀರಿ ಎಲ್ಲಿಯಾದರೂ ಮಾಡಲಿ. ಅದನ್ನು ಬಿಟ್ಟು ಅಣೆಕಟ್ಟೆಯ ಅಸ್ತಿತ್ವಕ್ಕೆ ಧಕ್ಕೆ ತರುವ ಕೆಲಸ ಮಾಡಿದರೆ ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಇದನ್ನೆಲ್ಲಾ ಮಾಡುವುದಕ್ಕೆ ಬದಲಾಗಿ ಜಲಾಶಯ, ಕೆರೆಗಳು, ನಾಲೆಗಳ ಹೂಳು ಎತ್ತಿಸಲಿ. ಕಡೆಯ ಭಾಗದ ರೈತನಿಗೂ ನೀರು ಪೂರೈಕೆ ಆಗುವಂತೆ ನೋಡಿಕೊಳ್ಳಲಿ, ಟನ್‌ ಕಬ್ಬಿಗೆ 5000 ರೂ. ನೀಡಲಿ, ರಾಗಿ, ಭತ್ತ ಸೇರಿ ಇತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲಿ. ಆಗ ರೈತರೇ ಸಾವಿರಾರು ಮಂದಿಗೆ ಉದ್ಯೋಗ ನೀಡುತ್ತಾರೆ. ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿರುವವರು ಮತ್ತೆ ತಮ್ಮ ಹೊಲ, ಗದ್ದೆಗಳಿಗೆ ಬರುತ್ತಾರೆ. ಈ ರೀತಿ ಮಾಡಿಯೂ ಉದ್ಯೋಗ ಸೃಷ್ಟಿ ಮಾಡಬಹುದು ಅಲ್ಲವೇ. ಇದನ್ನು ಬಿಟ್ಟು ಖಾಸಗಿಯವರೊಂದಿಗೆ ಸೇರಿಕೊಂಡು ಈ ಯೋಜನೆಗಳನ್ನು ಮಾಡುತ್ತೇವೆ ಎಂದು ಹೊರಟಿರುವುದರ ಮರ್ಮ ಏನು..? ಪ್ರಶ್ನಿಸಿದರು.

ಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳದೇ ಹೋದರೆ ದೊಡ್ಡ ಜನಾಂದೋಲನ ಮಾಡುತ್ತೇವೆ. ನಮ್ಮ ಪರವಾಗಿ ಜನತೆ, ತಜ್ಞರು ಇದ್ದು ಕಾನೂನು ಹೋರಾಟವನ್ನು ಮಾಡುತ್ತೇವೆ ಎಂದು ತಿಳಿಸಿದರು.

Read More
Next Story