Caste census | ಪ್ರವರ್ಗ -1 ವಿಭಜನೆ; ನಿರ್ಣಾಯಕ ಪಾತ್ರ ವಹಿಸುವ ಜನಸಂಖ್ಯೆಗೆ ಮೀಸಲಾತಿಯೂ ಹೆಚ್ಚಳ

ಇತರೆ ತೀರಾ ಹಿಂದುಳಿದ ವರ್ಗಗಳ ಪ್ರವರ್ಗ 1ರಲ್ಲಿ ಒಟ್ಟು 94ಜಾತಿ ಹಾಗೂ 381 ಉಪ ಜಾತಿಗಳಿದ್ದು, ಕೇವಲ 54 ಜಾತಿಗಳಿಗೆ ಮಾತ್ರ ಪ್ರಾತಿನಿದ್ಯ ಸಿಕ್ಕಿದೆ. ಉಳಿದ ಜಾತಿಗಳು ಇಂದಿಗೂ ತೀರಾ ಹಿಂದುಳಿದಿದ್ದು, ಅವುಗಳಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿದ್ಯ ಕಲ್ಪಿಸಲು ಪ್ರವರ್ಗ 1ನ್ನು ವಿಭಜಿಸಿ ಮೀಸಲಾತಿ ಒದಗಿಸಲು ಪ್ರವರ್ಗ 1 ನ್ನು ವಿಭಜಿಸಲಾಗಿದೆ.;

Update: 2025-04-13 08:40 GMT

ರಾಜ್ಯ ಸಚಿವ ಸಂಪುಟದ ಮುಂದೆ ಮಂಡನೆಯಾಗಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಯಲ್ಲಿ ಪ್ರವರ್ಗ 1ನ್ನು ವಿಭಜಿಸಿ ಹೊಸದಾಗಿ ಪ್ರವರ್ಗ 1ಎ ಹಾಗೂ 1ಬಿ ಎಂದು ಸೃಜಿಸಿರುವುದಲ್ಲದೆ ಮೀಸಲಾತಿಯಲ್ಲಿ ಕೆನೆಪದರ ನೀತಿ ಜಾರಿಗೆ ಶಿಫಾರಸು ಮಾಡಲಾಗಿದೆ. 

ಪ್ರವರ್ಗ 1ರಲ್ಲಿ ಬರುವ ಜಾತಿಗಳು ಯಾವುವು? ಜಾತಿ ಗಣತಿಯಲ್ಲಿ ಪ್ರವರ್ಗ 1ರ ವಿಭಜನೆಯ ಉಲ್ಲೇಖ ಯಾಕಾಯಿತು? ಅದು ರಾಜಕೀಯವಾಗಿ ತೀರಾ ಹಿಂದುಳಿದ ಜಾತಿಗಳ ಶಕ್ತಿ ಪ್ರದರ್ಶನಕ್ಕೆ ಕಾರಣವಾಗುವುದೇ?  ಅಥವಾ 1.08 ಕೋಟಿ ಮೀರಿರುವ ಪ್ರವರ್ಗ 1 ಎ ಮತ್ತು ಪ್ರವರ್ಗ 1 ಬಿ - ಜನಸಂಖ್ಯೆಯನ್ನು ಬಹಿರಂಗಗೊಂಡಿರುವ ಸೋರಿಕೆ ಅಂಕಿ ಅಂಶಗಳು ತೋರಿಸಿರುವುದರ ಹಿಂದೆ ತಂತ್ರಗಾರಿಕೆ ಇದೆಯೆ? ಎಂಬ ಪ್ರಶ್ನೆಗಳು ಈಗ ಉದ್ಭವವಾಗಿವೆ.

ಪ್ರವರ್ಗ 1ರಲ್ಲಿ ಒಟ್ಟು 94ಜಾತಿ ಹಾಗೂ 381 ಉಪ ಜಾತಿಗಳಿದ್ದು, ಕೇವಲ 54 ಜಾತಿಗಳಿಗೆ ಮಾತ್ರ ಪ್ರಾತಿನಿದ್ಯ ಸಿಕ್ಕಿದೆ. ಉಳಿದ ಜಾತಿಗಳು ಇಂದಿಗೂ ತೀರಾ ಹಿಂದುಳಿದಿದ್ದು, ಅವುಗಳಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿದ್ಯ ಕಲ್ಪಿಸಲು ಪ್ರವರ್ಗ 1ನ್ನು ವಿಭಜಿಸಿ ಮೀಸಲಾತಿ ಒದಗಿಸಲು ಪ್ರವರ್ಗ 1 ನ್ನು ವಿಭಜಿಸಲಾಗಿದೆ. 

ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಹಿನ್ನೆಲೆ, ಆಯಾ ಜಾತಿಗಳ ಅಸ್ಮಿತೆ ಹಾಗೂ ಗುಣಲಕ್ಷಣಗಳನ್ನು ಆಧರಿಸಿ ಪ್ರವರ್ಗ '1 ಎ' ಹಾಗೂ ಪ್ರವರ್ಗ '1 ಬಿ' ಎಂದು ಮರುವರ್ಗೀಕರಿಸಲಾಗಿದೆ. ಪ್ರವರ್ಗ1 ಹೆಸರಿನ ಪಟ್ಟಿಯನ್ನು ಕೈಬಿಡಲಾಗಿದೆ. 

ಕುಲಕಸುಬು ಆಧರಿತ, ಅಲೆಮಾರಿ, ಅರೆ ಅಲೆಮಾರಿ ಗುಣಲಕ್ಷಣ ಹೊಂದಿರುವವರನ್ನು ಪ್ರವರ್ಗ ‘1 ಎ’ ಪಟ್ಟಿಗೆ ಸೇರಿಲಾಗಿದೆ. ಪ್ರಸ್ತುತ ಪ್ರವರ್ಗ 1ಕ್ಕೆ ಶೇ. 4ರಷ್ಟು ಮೀಸಲಾತಿ ಇತ್ತು. ಇದು ಕೆಲವೇ ಉಪ ಜಾತಿಗಳಿಗೆ ಅನುಕೂಲವಾಗುತ್ತಿತ್ತು. ಉಳಿದ ಉಪಜಾತಿಗಳು ಈವರೆಗೂ ಮೀಸಲಾತಿಯ ಪ್ರಯೋಜನ ಪಡೆದಿರಲಿಲ್ಲ. ಹಾಗಾಗಿ ಪ್ರವರ್ಗ 1ನ್ನು ಎರಡು ಭಾಗಗಳನ್ನಾಗಿ ಮಾಡಿ 1ಎಗೆ ಶೇ. 6ರಷ್ಟು, 1ಬಿಗೆ ಶೇ. 12ರಷ್ಟು ಮೀಸಲಾತಿ ಒದಗಿಸಲು ಶಿಫಾರಸು ಮಾಡಲಾಗಿದೆ. ಇನ್ನೂ ಇತರೆ ತೀರಾ ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಿದ್ದ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇ 33 ರಿಂದ 51ಕ್ಕೆ ಹೆಚ್ಚಿಸಲು ವರದಿ ಸಲಹೆ ನೀಡಿದೆ.

ಪ್ರವರ್ಗ 1ಎ ಗೆ ಕೆನೆಪದರ ನೀತಿ ಅವಶ್ಯ

ಪ್ರವರ್ಗ1 ಎ ಪಟ್ಟಿಯಲ್ಲಿ ಸಾಕಷ್ಟು ಸಮುದಾಯಗಳು ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಮುಂದುವರೆದಿವೆ. ಹಾಗಾಗಿ, ಈ ಪಟ್ಟಿಯಲ್ಲಿರುವ ಜಾತಿಗಳಿಗೆ ಕೆನೆಪದರ ನೀತಿ ಅನ್ವಯಿಸಬೇಕು ಎಂಬ ಆಯೋಗದ ಶಿಫಾರಸು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಈ ಹಿಂದೆ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಯನ ನಡೆಸಿದ್ದ ನಾಗನೂರು, ಎಲ್‌.ಜಿ. ಹಾವನೂರು, ವೆಂಕಟಸ್ವಾಮಿ, ಓ.ಚಿನ್ನಪ್ಪರೆಡ್ಡಿ, ಪ್ರೊ.ರವಿವರ್ಮಕುಮಾರ್, ಸಿ.ಎಸ್‌. ದ್ವಾರಕನಾಥ್, ಶಂಕರಪ್ಪ ನೇತೃತ್ವದಲ್ಲಿ ರಚಿಸಿದ್ದ ಆಯೋಗಗಳು ಪ್ರವರ್ಗ 1 ರಲ್ಲಿದ್ದ ಜಾತಿಗಳಿಗೆ ಕೆನೆಪದರ ನೀತಿ ಜಾರಿಗೆ ಸೂಚಿಸಿರಲಿಲ್ಲ. ಇದೇ ಮೊದಲ ಬಾರಿಗೆ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ಕೆನೆಪದರ ನೀತಿಗೆ ಶಿಫಾರಸು ಮಾಡಿದೆ.

2002ರಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದ್ದ ಕೆನೆಪದರ ನೀತಿಯು ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ 1ರಲ್ಲಿನ ಜಾತಿಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿತ್ತು. 

ಪ್ರವರ್ಗ 1ರಲ್ಲಿ ಆಂತರಿಕವಾಗಿ ಹೆಚ್ಚಿನ ಸ್ಪರ್ಧೆ ಏರ್ಪಟ್ಟಿದೆ. ಕೆಲವರಿಗೆ ಮಾತ್ರ ಅವಕಾಶಗಳು ಸಿಗುತ್ತಿವೆ. ಆರ್ಥಿಕವಾಗಿ ಪ್ರಬಲವಾಗಿರುವ ಉಪಜಾತಿಗಳೊಂದಿಗೆ ಹಳ್ಳಿಯ ಬಡ ಕೂಲಿ ಕಾರ್ಮಿಕರೂ ಹಾಗೂ ರೈತರ ಮಕ್ಕಳು ಸ್ಪರ್ಧಿಸುವುದು ಕಷ್ಟವಾಗಿದೆ. ಹಾಗಾಗಿ ಕೆನೆ ಪದರ ಮೀಸಲಾತಿ ಅಗತ್ಯವಾಗಿದೆ ಎಂದು ಆಯೋಗ ಅಭಿಪ್ರಾಯ ಪಟ್ಟಿದೆ.

ನಿರ್ಣಾಯಕವಾಗುವ ಜನಸಂಖ್ಯೆ

ಪ್ರವರ್ಗ 1ನ್ನು ವಿಭಜಿಸಿ ಹೊಸದಾಗಿ ಸೃಷ್ಟಿಸಿರುವ ಪ್ರವರ್ಗ 1ಎ ಹಾಗೂ 1 ಬಿ ಪಟ್ಟಿಯಲ್ಲಿನ ಜನಸಂಖ್ಯೆ ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವಂತಿದೆ.

ಪ್ರವರ್ಗ 1ಎ ನಲ್ಲಿ 34,96,638 ಜನಸಂಖ್ಯೆ ಇದ್ದರೆ, ಪ್ರವರ್ಗ1ಬಿ ನಲ್ಲಿ 73,92,313 ಜನಸಂಖ್ಯೆ ಇದೆ. ಅಂದರೆ ಈ ಪ್ರವರ್ಗ 1 ರಲ್ಲೇ ಒಟ್ಟು 1,08,88,951 ಜನಸಂಖ್ಯೆ ಇದ್ದು, ರಾಜ್ಯದ ಜನಸಂಖ್ಯೆಯಲ್ಲಿ ಶೇ13 ರಷ್ಟು ಇದ್ದಾರೆ. ಹಾಗಾಗಿ ಪ್ರವರ್ಗ 1 ಎ ಹಾಗೂ 1 ಬಿ ನಿರ್ಣಾಯಕ ಪಾತ್ರ ವಹಿಸಲಿವೆ.

ಪ್ರವರ್ಗ 1 ರಲ್ಲಿಯೇ (1ಎ, 1ಬಿ) 1.08 ಕೋಟಿ ಜನಸಂಖ್ಯೆ ಇರುವುದರಿಂದ ಸಣ್ಣ ಸಣ್ಣ ಜಾತಿಗಳಿಗೂ ಪ್ರಾತಿನಿಧ್ಯ ಕಲ್ಪಿಸಿ, ಅವರನ್ನು ಸೆಳೆಯುವುದು ಸರ್ಕಾರದ ತಂತ್ರಗಾರಿಕೆ ಎನ್ನಲಾಗಿದೆ. 

ಪ್ರವರ್ಗ 2ಎ ಹಾಗೂ 2ಬಿ, ಪ್ರವರ್ಗ 3ಎ ಹಾಗೂ 3ಬಿ ನಂತೆ ಪ್ರವರ್ಗ 1ಎ, 1ಬಿ ಕೂಡ ರಾಜಕೀಯವಾಗಿ ಪ್ರಮುಖ ಪಾತ್ರ ವಹಿಸಲಿದೆ.

ಪ್ರವರ್ಗ 1ರಲ್ಲಿ ಬರುವ ಜಾತಿಗಳು

ಪ್ರವರ್ಗ 1ರಲ್ಲಿ ಗಂಗಾಮತ, ಗೊಲ್ಲ, ಉಪ್ಪಾರ, ಮೊಗವೀರ, ಕೋಲಿ, ಬುಡುಬುಡಕಿ, ಜೋಗಿ, ದೊಂಬಿದಾಸರು, ಹಾವಾಡಿಗ, ಕುಡುವಿ, ಕುಣವಿ, ಸೂರ್ಯವಂಶ ಕ್ಷತ್ರಿಯ, ರಾವತ್‌, ಗೂರ್ಖ, ತೆಲುಗು ಗೌಡ, ಕಾಡುಗೊಲ್ಲ ಸೇರಿ ಸುಮಾರು 95 ಜಾತಿಗಳು ಬಗ್ಗರು, ಬೈರಾಗಿ, ಗೋಸಾಯಿ, ಹೆಳವ, ಪಿಚಗುಂಟ, ಕಬ್ಬಲಿಗ, ಕೋಲಿ, ಮೊಗವೀರ, ಸುಣಗಾರ, ಬೋಗಾದಿ, ಬುಡುಬುಡುಕಿ, ದಾಸರು, ತೆಲುಗು ಶೆಟ್ಟಿ, ಹಾವಾಡಿಗ ಸೇರಿ 381 ಉಪ ಜಾತಿಗಳು ಬರುತ್ತವೆ. ಎಲ್ಲಜಾತಿಗಳಿಗೆ ಸರ್ಕಾರ ಇಲ್ಲಿಯವರೆಗೆ ಕೇವಲ ಶೇ.4 ಮೀಸಲಾತಿ ನೀಡುತ್ತಿದೆ.

Tags:    

Similar News