ಜಾತಿ ಗಣತಿ ವರದಿ | ಸದ್ಯ ಯಾವುದೇ ಕ್ರಮವಿಲ್ಲ: ಹೈಕೋರ್ಟ್‌ಗೆ ಸರ್ಕಾರ ಮಾಹಿತಿ
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಬಗ್ಗೆ ಜೂನ್ 6 ರವರೆಗೆ ಯಾವುದೇ ಕ್ರಮ ಜರುಗುವುದಿಲ್ಲ.
ಬೆಂಗಳೂರು: ಕಾಂತರಾಜು ಆಯೋಗದ ಅಂಕಿ-ಅಂಶಗಳನ್ನು ಆಧರಿಸಿ ಸಿದ್ದಪಡಿಸಲಾಗಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಜನ ಗಣತಿ) ವರದಿಯ ಬಗ್ಗೆ ಜೂನ್ 6 ರವರೆಗೆ ರಾಜ್ಯ ಸರಕಾರದಿಂದ ಯಾವುದೇ ಕ್ರಮ ಆಗುವುದಿಲ್ಲ ಅಡ್ವಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಅವರು ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ಚುನಾವಣೆಯ ಹಿನ್ನೆಲೆಯಲ್ಲಿ ಜಾತಿ ಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಿದೆ ಎಂದು ಪ್ರಶ್ನಿಸಿ ಸಮಾಜ ಸಂಪರ್ಕ ವೇದಿಕೆ(ರಿ) ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿದೆ.
'ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ, ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಬಗ್ಗೆ ಜೂನ್ 6 ರವರೆಗೆ ಸರ್ಕಾರದಿಂದ ಮುಂದಿನ ಯಾವುದೇ ಕ್ರಮ ಜರುಗುವುದಿಲ್ಲ' ಎಂದು ಸರ್ಕಾರದ ಪರ ಅಡ್ವಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಅವರು ಹೈಕೋರ್ಟ್ ಗೆ ತಿಳಿಸಿದ್ದಾರೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಕುಮಾರ್, 'ವರದಿ ಸಲ್ಲಿಸುವಾಗ ಆಯೋಗದ ಕಾರ್ಯದರ್ಶಿ ಅದಕ್ಕೆ ಸಹಿ ಮಾಡಿಲ್ಲ. ಆಯೋಗ ಸ್ವತಂತ್ರವಾಗಿ ಸಮೀಕ್ಷೆ ನಡೆಸಿರುವ ಬಗ್ಗೆ ಮತ್ತು ವರದಿ ಬಗ್ಗೆ ಸಾಕಷ್ಟು ಅನುಮಾನವಿದೆ. ಈ ವರದಿಯು ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅದಕ್ಕಾಗಿಯೇ ಸರ್ಕಾರ ಅವಸರದಿಂದ ವರದಿಯನ್ನು ಸ್ವೀಕರಿಸಿದೆ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಅರ್ಜಿದಾರರ ವಾದವನ್ನು ಅಲ್ಲಗಳೆದ ಶಶಿಕಿರಣ ಶೆಟ್ಟಿ ಅವರು, “ಆಯೋಗದ ಅವಧಿ ಮುಗಿದ ಕಾರಣ ಸರ್ಕಾರ ವರದಿಯನ್ನು ಸ್ವೀಕರಿಸಿದೆ. ಚುನಾವಣೆ ಘೋಷಣೆಗೂ ಮುನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಚುನಾವಣೆ ಘೋಷಣೆಗೂ ವರದಿಯನ್ನು ಸರ್ಕಾರ ಸ್ವೀಕರಿಸುವುದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಪ್ರತಿಪಾದಿಸಿದ್ದಾರೆ.
ಇದೇ ವೇಳೆ, ಆಯೋಗದ ಪರ ವಾದ ಮಂಡಿಸಿದ ವಕೀಲ ರವಿವರ್ಮ ಕುಮಾರ್, “54 ಅಂಶಗಳನ್ನು ಆಧರಿಸಿದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ-1995ರ ಕಲಂ 11ರ ಪ್ರಕಾರ ಸಮೀಕ್ಷಾ ವರದಿಗೆ ತನ್ನದೇ ಆದ ಶಾಸನಬದ್ಧತೆ ಇದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ವಾದ-ಪ್ರತಿವಾದದ ಬಳಿಕ ಕೇಂದ್ರ ಸರ್ಕಾರದ ಗೃಹ ಕಾರ್ಯದರ್ಶಿ, ಭಾರತೀಯ ಜನಗಣತಿ ಆಯೋಗ, ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ. ಇದೇ ವಿಷಯಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಇತರ ಅರ್ಜಿಗಳೊಂದಿಗೆ 'ಸಮಾಜ ಸಂಪರ್ಕ ವೇದಿಕೆʼಯ ಅರ್ಜಿ ಕೂಡಾ ಪರಿಗಣಿಸಲಾಗುವುದು ಎಂದು ಹೇಳಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.