ಜಾತಿ ಗಣತಿ ವರದಿ | ಸಂಪುಟ ಸಹೋದ್ಯೋಗಿಗಳಿಂದಲೇ ವಿರೋಧ, ಸಿಎಂ ಗೆ ಸಂದಿಗ್ಧ

Update: 2024-03-01 11:31 GMT

ವರ್ಷಗಳ ನಿರೀಕ್ಷೆಯ ಬಳಿಕ ಸಲ್ಲಿಕೆಯಾಗಿರುವ ಜಾತಿ ಗಣತಿ ವರದಿಯ ಬಗ್ಗೆ ರಾಜ್ಯದ ಪ್ರತಿಪಕ್ಷಗಳು ಮತ್ತು ಪ್ರಬಲ ಸಮುದಾಯಗಳಿಂದ ವಿರೋಧ ವ್ಯಕ್ತವಾಗಿದೆ. ಆದರೆ, ತಮ್ಮ ಸಂಪುಟದ ಸಹೋದ್ಯೋಗಿಗಳೇ ವರದಿಯ ವಿರುದ್ಧ ತಿಗುಗಿಬಿದ್ದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಮುಖ್ಯವಾಗಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಚಿವರಾದ ಡಾ. ಎಂ ಬಿ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಸಚಿವರು ಗುರುವಾರ ಮಧ್ಯಾಹ್ನ ಸಿಎಂ ಜಾತಿ ಗಣತಿ ವರದಿ ಸ್ವೀಕರಿಸಿದ ಬೆನ್ನಲ್ಲೇ ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಎಂ ಬಿ ಪಾಟೀಲ್ ಅವರಂಥ ಸಿದ್ದರಾಮಯ್ಯ ಆಪ್ತರೇ ಸಾರ್ವಜನಿಕವಾಗಿ ವರದಿಯ ಬಗ್ಗೆ ಆಕ್ಷೇಪವೆತ್ತಿರುವುದರಿಂದ ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರಿಗೆ ಸಂದಿಗ್ಧ ಸ್ಥಿತಿಗೆ ಸಿಲುಕಿದಂತಾಗಿದೆ.

ಅಲ್ಲದೆ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಂತೂ ವರದಿ ಸಚಿವ ಸಂಪುಟ ಮತ್ತು ಸದನದ ಮುಂದೆ ಬರಲಿ ನೋಡುತ್ತೇವೆ ಎನ್ನುವ ಮೂಲಕ ನೇರ ಸವಾಲೆಸೆದಿದ್ದಾರೆ.

ಸ್ವಂತ ಆಪ್ತ ವಲಯ ಮತ್ತು ಪಕ್ಷದ ಹಿರಿಯ ನಾಯಕರ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿಯೇ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ವರದಿಯ ವಿಷಯವನ್ನು ಪ್ರಸ್ತಾಪಿಸದೆ, ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಆ ಮೂಲಕ ವರದಿಯ ಕುರಿತ ಅಸಮಾಧಾನಕ್ಕೆ ತಣ್ಣೀರು ಸುರಿಯುವ ಯತ್ನವನ್ನು ಸಿಎಂ ಮಾಡಿದ್ದಾರೆ. ಮುಂದಿನ ಸಭೆಯ ಹೊತ್ತಿಗೆ ವಿಷಯ ತಣ್ಣಗಾಗಬಹುದು ಅಥವಾ ಅಷ್ಟರಲ್ಲಿ ಲೋಕಸಭಾ ಚುನಾವಣಾ ನೀತಿಸಂಹಿತೆ ಜಾರಿಗೆ ಬರಬಹುದು. ಹಾಗಾಗಿ ಸದ್ಯಕ್ಕೆ ವರದಿಯ ಕುರಿತ ವಿವಾದದ ಬೀಸುವ ದೊಣ್ಣೆಯಿಂದ ಪಾರಾಗಬಹುದು ಎಂಬ ಲೆಕ್ಕಾಚಾರದಲ್ಲೇ ಸಿಎಂ ವಿಷಯವನ್ನು ಮುಂದಿನ ಸಭೆಗೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ, ಪ್ರತಿಪಕ್ಷಗಳು ಹಾಗೂ ಪ್ರಬಲ ಸಮುದಾಯಗಳ ಮಠಾಧೀಶರಿಂದಲೂ ಜಾತಿ ಗಣತಿ ವರದಿಯ ಕುರಿತು ಆಕ್ರೋಶ ವ್ಯಕ್ತವಾಗಿದೆ.

ಪ್ರಮುಖವಾಗಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಜಾತಿ ಗಣತಿಯನ್ನು ಆರಂಭದಿಂದಲೂ ವಿರೋಧಿಸುತ್ತಲೇ ಬಂದಿವೆ. ನೂರು ವರ್ಷ ಹಳೆಯದಾದ 1931ರ ಗಣತಿಯ ಆಧಾರದ ಮೇಲೆ ಈಗಲೂ ನಿರ್ಧಾರ ಮಾಡುತ್ತಿರುವ ಮೀಸಲಾತಿ, ಸರ್ಕಾರಿ ಅವಕಾಶ ಮತ್ತು ಸೌಲಭ್ಯಗಳು ಕೈತಪ್ಪುಬಹುದು ಎಂಬ ಆತಂಕ ಆ ಸಮುದಾಯಗಳನ್ನು ಕಾಡುತ್ತಿದೆ.

ವಿರೋಧಕ್ಕೆ ಕಾರಣವೇನು?

ಹಾಗೆ ನೋಡಿದರೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಆರಂಭದಿಂದಲೂ ವರದಿಯ ವಿರುದ್ಧವೇ ಇವೆ. ಆ ಸಮುದಾಯಗಳ ಜಾತಿ ಸಂಘಟನೆಗಳು, ಮಠಾಧೀಶರು ಮತ್ತು ಸ್ವತಃ ಸರ್ಕಾರದ ಭಾಗವಾಗಿರುವ ನಾಯಕರು ಸೇರಿದಂತೆ ರಾಜಕೀಯ ಮುಖಂಡರು ವರದಿಯನ್ನು ಸರ್ಕಾರ ಒಪ್ಪಿಕೊಳ್ಳಲೇಬಾರದು ಎಂದು ಪಟ್ಟು ಹಿಡಿದಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಸದ್ಯ ಒಟ್ಟು 224 ಶಾಸಕರ ಪೈಕಿ 56 ಮಂದಿ ಲಿಂಗಾಯತ ಶಾಸಕರಿದ್ದಾರೆ. ಒಕ್ಕಲಿಗ ಸಮುದಾಯದಿಂದ 46 ಮಂದಿ ಶಾಸಕರಿದ್ದಾರೆ. ಅಂದರೆ, ರಾಜ್ಯದ ಒಟ್ಟು ಶಾಸಕರ ಬದಲ್ಲಿ ಸರಿಸುಮಾರು ಅರ್ಧದಷ್ಟು ಈ ಎರಡು ಪ್ರಭಾವಿ ಸಮುದಾಯಗಳ ಪಾಲಿದೆ.

ಸೋರಿಕೆಯಾಗಿರುವ ಜಾತಿ ಗಣತಿಯ ಜಾತಿವಾರು ಸಂಖ್ಯಾಬಲದ ಪ್ರಕಾರ ಒಕ್ಕಲಿಗರು ಮತ್ತು ಲಿಂಗಾಯತ ಜನಸಂಖ್ಯೆಗಿಂತ ದುಪ್ಪಟ್ಟು ಇರುವ ಅಹಿಂದ(ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ಸಮುದಾಯಗಳಿಗೆ ವಿಧಾನಸಭೆಯಲ್ಲಿ ಸಿಕ್ಕಿರುವ ಅವಕಾಶ ಅವರ ಪಾಲಿನ ಅರ್ಧದಷ್ಟು ಮಾತ್ರ! ಸೋರಿಕೆಯಾದ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಲಿಂಗಾಯತ, ಒಕ್ಕಲಿಗ ಮತ್ತು ಬ್ರಾಹ್ಮಣರ ಒಟ್ಟು ಜನಸಂಖ್ಯೆ 1.87 ಕೋಟಿ. ಆದರೆ, ಅಹಿಂದ ವರ್ಗಗಳ ಒಟ್ಟು ಜನಸಂಖ್ಯೆ 3.98 ಕೋಟಿ(ಒಟ್ಟು 5.98 ಕೋಟಿ ಜನರನ್ನು ಸಮೀಕ್ಷೆ ಒಳಗೊಂಡಿದೆ)! ಅದರಲ್ಲೂ ಅಲ್ಪಸಂಖ್ಯಾರನ್ನು ಹೊರತುಪಡಿಸಿ ಕೇವಲ ದಲಿತರು ಮತ್ತು ಹಿಂದುಳಿದವರ ಜನಸಂಖ್ಯೆಯೇ 3.8 ಕೋಟಿ; ಅಂದರೆ, ರಾಜ್ಯದ ಒಟ್ಟು ಜನಸಂಖ್ಯೆಯ ಶೇ.60ರಷ್ಟು ಸಂಖ್ಯಾಬಲ ಈ ಸಮುದಾಯಗಳಿಗೆ ಇದೆ. ಆದರೆ, ಶಾಸನಸಭೆಯಲ್ಲಿ ಅವರ ಪ್ರಾತಿನಿಧ್ಯ ಇರುವುದು ಅವರ ಪಾಲಿಗಿಂತ ತೀರಾ ಕಡಿಮೆ.

ಈ ಅಂಕಿಅಂಶಗಳು ವಾಸ್ತವವೇ ಆಗಿದ್ದರೆ, ಆಗ ಈ ಅಂಕಿಅಂಶವನ್ನು ಒಳಗೊಂಡ ವರದಿ ಜಾರಿಗೆ ಬಂದಲ್ಲಿ ಅದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ದೊಡ್ಡ ಹಿನ್ನಡೆಯಾಗಲಿದೆ. ಸದ್ಯ ಅವರು ಅನುಭವಿಸುತ್ತಿರುವ ರಾಜಕೀಯ ಅವಕಾಶ ಮತ್ತು ಸರ್ಕಾರದ ಸೌಲಭ್ಯಗಳಲ್ಲಿ ದೊಡ್ಡ ಕಡಿತವಾಗಲಿದೆ. ಈ ಅಂಶವೇ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಕಡು ವಿರೋಧಕ್ಕೆ ಕಾರಣ ಎಂಬುದು ಗುಟ್ಟೇನಲ್ಲ.

ಇದೀಗ ವರದಿಯನ್ನು ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ ಬೆನ್ನಲ್ಲೇ ಸರ್ಕಾರದ ಭಾಗವಾಗಿರುವ ಸಚಿವರು ಮತ್ತು ಹಿರಿಯ ನಾಯಕರೇ ವರದಿಯ ಕುರಿತು ಬಹಿರಂಗ ವಿರೋಧ ವ್ಯಕ್ತಪಡಿಸಿದ್ದಾರೆ. ವರದಿಯ ಸಾಚಾತನದ ಬಗ್ಗೆಯೇ ಪ್ರಶ್ನೆಗಳನ್ನು ಎತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ವರದಿಯ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ನಡೆ ಕುತೂಹಲ ಮೂಡಿಸಿದೆ.

Tags:    

Similar News