Caste Census | ಜಾತಿ ಗಣತಿ ವರದಿ ರಾಜ್ಯ ರಾಜಕೀಯದ ಗೇಮ್ ಚೇಂಜರ್?
ಕರ್ನಾಟಕದಲ್ಲಿ ಯಾವ ಜಾತಿಯ ಜನರು ಎಷ್ಟಿದ್ದಾರೆ, ಯಾರು ಪ್ರಾಬಲ್ಯರು ಎಂಬೆಲ್ಲ ಮಾಹಿತಿ ಇದೀಗ ಜನರ ಸಕ್ಷಮದಲ್ಲಿದೆ. ಜಾತಿ ಗಣತಿ ವರದಿಯೇ ಒಂದು ರೀತಿ ಸಂಚಲನ ಎಬ್ಬಿಸಿದ್ದರೆ, ಸೋರಿಕೆಯಾಗಿರುವ ಮಾಹಿತಿ ಕೌತುಕ ಮೂಡಿಸುವ ಜತೆಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಪರ್ವ ಸೃಷ್ಟಿಸಿದೆ.;
ಪ್ರಾತಿನಿಧಿಕ ಚಿತ್ರ
ಶುಕ್ರವಾರ (ಏಪ್ರಿಲ್ 11ರಂದು) ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯ ಪ್ರಮುಖ ಜಾತಿವಾರು ಅಂಕಿ-ಅಂಶ ಮರುದಿನವೇ ಸೋರಿಕೆಯಾಗಿದೆ.
ಕರ್ನಾಟಕದಲ್ಲಿ ಯಾವ ಜಾತಿಯ ಜನರು ಎಷ್ಟಿದ್ದಾರೆ, ಯಾರು ಪ್ರಾಬಲ್ಯರು ಎಂಬೆಲ್ಲ ಮಾಹಿತಿ ಇದೀಗ ಜನರ ಸಕ್ಷಮದಲ್ಲಿದೆ. ಜಾತಿ ಗಣತಿ ವರದಿಯೇ ಒಂದು ರೀತಿ ಸಂಚಲನ ಎಬ್ಬಿಸಿದ್ದರೆ, ಸೋರಿಕೆಯಾಗಿರುವ ಮಾಹಿತಿ ಕೌತುಕ ಮೂಡಿಸುವ ಜತೆಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಪರ್ವ ಸೃಷ್ಟಿಸಿದೆ.
ಜಾತಿ ಗಣತಿ ಕುರಿತ ಮಾಹಿತಿಗಳಷ್ಟೇ ಈಗ ಸೋರಿಕೆಯಾಗಿದೆ. ಹಾಗೆಂದು ಇದು ಅಧಿಕೃತ ಎಂದರ್ಥವಲ್ಲ. ಜಾತಿ ಗಣತಿಯ ವರದಿ ಸಂಪುಟಸಭೆಯಲ್ಲಿ ಮಂಡನೆಯಾಗಿದ್ದು, ಅದು ಒಪ್ಪಿಗೆಯಾಗಬೇಕು, ಜತೆಗೆ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಿ ಒಪ್ಪಿಗೆಯಾಗಬೇಕು, ಅ ಬಳಿಕ ಜಾತಿವಾರು ಮೀಸಲಾತಿ ಬಗ್ಗೆ ಕೆಂದ್ರ ಸರ್ಕಾರಕ್ಕೆ ಒಪ್ಪಿಗೆಗಾಗಿ ಕಳುಹಿಸಬೇಕು... ಹಾಗೂ ಅಲ್ಲಿ ಒಪ್ಪಿಗೆಯಾದರೆ ಮಾತ್ರ ಅದು ಆದೇಶದ ರೂಪ ಪಡೆಯುತ್ತದೆ. ಅದಕ್ಕಾಗಿ ಕಾನೂನು ಹೋರಾಟಗಳಂತಹ ಅಡೆತಡೆಗಳನ್ನು ದಾಟಬೇಕು. ಅವೆಲ್ಲವನ್ನೂ ಬದಿಗಿಟ್ಟು ನೋಡುವುದಾದರೂ ಈ ಜಾತಿಗಣತಿ ಅಂಕಿ ಅಂಶಗಳು ರಾಜ್ಯ ರಾಜಕೀಯದ ಮಟ್ಟಿಗೆ , ಜಾತಿ-ಜಾತಿಗಳ ಸಂಖ್ಯಾ ಪ್ರಾಬಲ್ಯದ ಮಟ್ಟಿಗೆ 'ಗೇಮ್ ಚೇಂಜರ್' ಎಂದೇ ಪರಿಗಣಿಸಬೇಕಾಗಿದೆ.
ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸೇರಿದ 1,09,29,347 ಜನರು ಕರ್ನಾಟಕದಲ್ಲಿ ಇದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು ಸೇರಿದರೆ ಸುಮಾರು ಒಂದೂವರೆ ಕೋಟಿ ಜನರಿಗಿಂತಲೂ ಹೆಚ್ಚಾಗುತ್ತಾರೆ. ಹಾಗೆಯೇ ಪರಿಶಿಷ್ಟ ಪಂಗಡಗಳ ಜನಸಂಖ್ಯೆ 42,81,289. ಅಂದರೆ ಕರ್ನಾಟಕದಲ್ಲಿ ದಲಿತ ಸಮುದಾಯದ ಪ್ರಾಬಲ್ಯ ಅತಿ ಹೆಚ್ಚು ಅಂದರೆ 1,52,10,636 ಇದೆ. ಇದು ಕರ್ನಾಟಕದ ರಾಜಕೀಯದ ನಕಾಶೆಯನ್ನು ಬದಲಿಸಲಿದೆ. ರಾಜಕೀಯ ಪ್ರಾತಿನಿಧ್ಯವನ್ನೂ ಬದಲಾಯಿಸುತ್ತದೆ. ಅದೇ ರೀತಿ ದಲಿತ ಸಮುದಾಯಗಳಿಗೆ ಅನುದಾನ ಮತ್ತು ಯೋಜನೆಗಳನ್ನು ಪ್ರಕಟಿಸುವ ರೀತಿಯೂ ಬದಲಾಗಲಿದೆ ಎಂದು ರಾಜಕೀಯ ವಿಶ್ಲೇಷಕ ಬಿ. ಸಮೀಉಲ್ಲಾ ಅಭಿಪ್ರಾಯಪಡುತ್ತಾರೆ.
ಜಾತಿ ಗಣತಿ ಪ್ರಕಟಗೊಳ್ಳುವ ಮೊದಲು ಲಿಂಗಾಯತ ಸಮುದಾಯದವರು ನಮ್ಮ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ಆದರೆ, ಸೋರಿಕೆಯಾದ ಮಾಹಿತಿ ಪ್ರಕಾರ ಪ್ರವರ್ಗ3 ಬಿ ಯಲ್ಲಿ ಬರುವ ವೀರಶೈವ ಲಿಂಗಾಯತರು 81, 37,536ರಷ್ಟಿದ್ದಾರೆ. ಆ ಸಮುದಾಯದ ಒಟ್ಟು ಶೇಕಡಾವಾರು 19.55ರಷ್ಟಿದೆ. ಎರಡನೇ ಸ್ಥಾನದಲ್ಲಿರುವ ಕಾರಣ ಆ ಸಮುದಾಯದ ನಾಯಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದೇ ಕುತೂಹಲ.
ಮೂರನೇ ಸ್ಥಾನದಲ್ಲಿ ಪ್ರವರ್ಗ 2ಎ ನಲ್ಲಿ ಬರುವ ಇತರೆ ಹಿಂದುಳಿದ ವರ್ಗಗಳ ಜನಸಂಖ್ಯೆ 77,78,209 ರಷ್ಟಿದೆ. ಅವರಲ್ಲಿ ಅವರಲ್ಲಿಕುರುಬರು, ಈಡಿಗರು ಸೇರಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಪ್ರವರ್ಗ 2ಬಿ ಯಲ್ಲಿ ಬರುವ ಮುಸ್ಲಿಂ ಜನಸಂಖ್ಯೆ 75,25,880 ಇದೆ. ಹೀಗಾಗಿ ಕರ್ನಾಟಕದ ರಾಜಕೀಯದಲ್ಲಿ ಒಂದು ಧ್ರುವೀಕರಣದ ಸಾಧ್ಯತೆ ಇದೆ.
ಲಿಂಗಾಯತರು, ಒಕ್ಕಲಿಗರು ಮತ್ತು ಇನ್ನಿತರ ಪ್ರಾಬಲ್ಯ ಹೊಂದಿರು ಜಾತಿಗಳು ಒಂದು ಕಡೆ ಶಕ್ತಿ ಪ್ರದರ್ಶನ ಮಾಡಿದರೆ ಅಲ್ಪ ಸಂಖ್ಯಾತರು ಪರಿಶಿಷ್ಟ ಜಾತಿಗೆ ಸೇರಿದವರು ಇನ್ನೊಂದು ರೀತಿಯಲ್ಲಿ ತಮ್ಮ ರಾಜಕೀಯ ಪ್ರಾಬಲ್ಯ ಸಾಧಿಸಲು ಸಾಧ್ಯವಿದೆ ಎಂದು ವ್ಯಾಖ್ಯಾನಿಸಬಹುದು.
ಅಹಿಂದ ಧ್ರುವೀಕರಣವೇ ಈ ವರದಿಯ ಉದ್ದೇಶ
ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತರು ಸಂಖ್ಯೆಯು ಜಾತಿ ಗಣತಿ ವರದಿಯಲ್ಲಿ ಸಿಂಹಪಾಲು ಪಡೆದುಕೊಂಡಿದೆ. ಈ ಸಮುದಾಯವನ್ನು ಒಂದುಗೂಡಿಸಿ ರಾಜಕೀಯ ಶಕ್ತಿಯಾಗಿ ಪರಿವರ್ತಿಸುವುದೇ ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಉದ್ದೇಶ. ಆದರೆ, ವರದಿ ಬಹಿರಂಗ ಮಾಡುವ ಮೊದಲೇ ಕೆಲವು ಸಮುದಾಯದ ನಾಯಕರು, ಸ್ವಾಮೀಜಿಗಳು ಹಾಗೂ ಸಚಿವರು ವರದಿಗೆ ವಿರೋಧ ಮಾಡಿದ್ದರು. ಆದರೆ, ಇದೀಗ ವರದಿ ಬಹಿರಂಗಗೊಂಡಿದ್ದು, ಅವರ ಲೆಕ್ಕಾಚಾರ ಏನೆಂಬುದು ಯಕ್ಷಪ್ರಶ್ನೆಯಾಗಿದೆ.
ಜಾತಿ ಗಣತಿಯ ವರದಿಯ ಸಲ್ಲಿಕೆಯಲ್ಲಿ ಕಾಂಗ್ರೆಸ್ನ ಮೂಲ ಉದ್ದೇಶವೇ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದವರು ತಮ್ಮ ಪರವಾಗಿ ನಿಲ್ಲುತ್ತಾರೆ ಎಂಬುದು. ಆದರೆ, ಅವರು ಅದನ್ನು ಬೆಂಬಲಿಸುತ್ತಾರೆಯೇ ಎಂಬುದು ಖಾತ್ರಿಯಿಲ್ಲ. ಆದರೆ, ಒಂದು ವೇಳೆ ನಿಲ್ಲದೇ ಹೋದರೆ ತಿರುಗುಬಾಣವಾಗುತ್ತಾರೆ ಎಂಬ ಆತಂಕವೂ ಕಾಂಗ್ರೆಸ್‌ಗೆ ಇದೆ.
ಯಾವ ಸಮುದಾಯಕ್ಕೆ ಲಾಭ?
ಕರ್ನಾಟಕದಲ್ಲಿ ಎಡ ಹಾಗೂ ಬಲ ಎಂಬ ಪರಿಶಿಷ್ಟರ ನಡುವಿನ ಎರಡು ಬಣಗಳ ನಡುವಿನ ಪ್ರಾಬಲ್ಯದ ಬಗ್ಗೆಯ ಒರೆಗೆ ಹಚ್ಚಿದಂತಾಗಿದೆ ಈ ಜಾತಿ ಗಣತಿ. ಜತೆಗೆ ಒಕ್ಕಲಿಗರು ಅಥವಾ ಲಿಂಗಾಯತರು ಈ ವರದಿಯನ್ನು ವಿರೋಧಿಸಿದರೆ, ತನ್ನಿಂತಾನೇ ಅವರು ಹಿಂದುಳಿದ ಮತ್ತು ದಲಿತ ಸಮುದಾಯದ ವಿರೋಧವನ್ನೂ ಕಟ್ಟಿಕೊಂಡಂತಾಗುತ್ತದೆ. ಇದು ಇನ್ನೊಂದು ರೀತಿಯ ರಾಜಕೀಯ ಧೃವೀಕರಣಕ್ಕೂ ನೆಪವಾಗುವ ಸಾಧ್ಯತೆಯಿದೆ.
ದೊಡ್ಡ ಸಮುದಾಯಗಳಿಗೆ ಘಾಸಿಯೇ?
ವರದಿ ಬಹಿರಂಗ ಆಗುವ ತನಕ ಒಕ್ಕಲಿಗರು ಹಾಗೂ ಲಿಂಗಾಯತರು ರಾಜ್ಯದಲ್ಲಿ ಪ್ರಭಾವಿಗಳು ಎಂಬ ತಿಳಿವಳಿಕೆಯಿತ್ತು. ಆದರೆ, ಈಗ ಅದು ಬದಲಾಗಿದೆ. ಆದರೆ, ಈ ಸಮುದಾಯದ ನಾಯಕರು ಹೇಗೆ ಪ್ರತಿಕ್ರಿಯಿಸಬಹುದು ಎಂಬುದೀಗ ಕುತೂಹಲಕಾರಿ ಅಂಶ. ಏ.17ರಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯೇ ಈ ಕೌತುಕಕ್ಕೆ ಉತ್ತರ ನೀಡಲಿದೆ.
ಬಹಿರಂಗಗೊಂಡಿರುವ ವರದಿಯು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಮಂಡನೆಯಾದರೂ ಕೆಲವೊಂದು ವಿರೋಧಗಳು ಸೃಷ್ಟಿಯಾಗಬಹುದು.ಹಾಗೆಂದು ವರದಿಯನ್ನೇ ಒಪ್ಪದೇ ಹೋದರೆ ಎಲ್ಲರಿಗಿಂತ ಅತ್ಯಧಿಕ ಸ್ಥಾನದಲ್ಲಿರುವ ದಲಿತರ ಪ್ರಾಬಲ್ಯವನ್ನು ನಿರಾಕರಿಸಿದಂತಾಗುತ್ತದೆ. ಅದನ್ನು ಪರಿಶಿಷ್ಟ ಸಮುದಾಯದ ಮಂದಿ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಅವರು ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಉಪಸಮಿತಿ ರಚನೆ ಸಾಧ್ಯತೆ ಹೆಚ್ಚು
ವರದಿ ಮಂಡನೆಯಾದ ಬಳಿಕ ಕೆಲವೊಂದು ವಿರೋಧಗಳು ವ್ಯಕ್ತವಾಗಲಿರುವ ಕಾರಣ ಉಪ ಸಮಿತಿ ರಚನೆಯ ಸಾಧ್ಯತೆಗಳು ಹೆಚ್ಚಿವೆ . ಪ್ರಮುಖ ಸಚಿವರ ಅಧ್ಯಕ್ಷತೆಯ ಉಪ ಸಮಿತಿ , ಈ ವರದಿ ಕುರಿತು ನಿರ್ಧಾರಕ್ಕೆ ಬರಲಿದೆ. ಆದರೆ, ಈ ವರದಿಗೆ ಕಾಂಗ್ರೆಸ್ ಹೈಕಮಾಂಡ್ ಬೆಂಬಲವಿದೆ ಎಂಬುದು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶವಾಗಿದೆ.
ಹೊಸ ಮಾನದಂಡ
ಜನ ಸಂಖ್ಯೆ ಲೆಕ್ಕಾಚಾರಕ್ಕೆ ಆಧರಿಸಿ ಬಜೆಟ್ ಮಂಡಿಸಬೇಕು ಎಂಬುದು ಮಾನದಂಡ. ಹೀಗಾಗಿ ಜಾತಿಗಣತಿ ವರದಿಯು ಹೊಸ ಮಾನದಂಡವಾಗಲಿದೆ. ಇದು ನಿಜವಾಗಿಯೂ ಗೇಮ್ ಚೇಂಜರ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ವರದಿಯನ್ನು ತಮ್ಮ ಪಕ್ಷದ ಪರವಾಗಿ ಬಳಸುವುದೇ ಕಾಂಗ್ರೆಸ್ ಮೂಲ ಉದ್ದೇಶವಾಗಿದೆ. ಅದೇ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನೂ ಅವರು ಮಾಡಲಿದ್ದಾರೆ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಒಕ್ಕಲಿಗರನ್ನು ಪ್ರಧಾನವಾಗಿ ಆಶ್ರಯಿಸಿರುವ ಜೆಡಿಎಸ್, ಲಿಂಗಾಯತರನ್ನು ಆಶ್ರಯಿಸಿರುವ ಬಿಜೆಪಿಗೆ ಈ ವರದಿಯಿಂದ ಹೆಚ್ಚು ತೊಂದರೆ ಉಂಟಾಗಬಹುದು. ಪ್ರಮುಖವಾಗಿ ಬಿಜೆಪಿಗೆ ಬೆಂಬಲಿಸುತ್ತಿರುವ ಹಿಂದುಳಿದ ವರ್ಗಗಳು, ದಲಿತರು, ಪರಿಶಿಷ್ಟರು ಒಂದು ರಾಜಕೀಯ ಶಕ್ತಿಯಾಗಿ ಬೆಳೆಯಲು ಅರಂಭಿಸಿದರೆ, ಆ ಪಕ್ಷಕ್ಕೆ ಹಿನ್ನಡೆ ಉಂಟು ಮಾಡುವ ಸಾಧ್ಯತೆಯೂ ಇಲ್ಲದಿಲ್ಲ.
'ದ ಫೆಡರಲ್ ಕರ್ನಾಟಕ', ಜಾತಿ ಗಣತಿ ವರದಿ ಸೋರಿಕೆ ಹಿನ್ನೆಲೆಯಲ್ಲಿ ನಡೆಸಿದ ಚರ್ಚೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತಗೊಂಡಿದೆ ಹಾಗೂ ಇದು ಕರ್ನಾಟಕದ ಮಟ್ಟಿಗೆ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಗೇಮ್ ಚೇಂಜರ್ (Game Changer) ಆಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
'ದ ಫೆಡರಲ್ ಕರ್ನಾಟಕ' ನಡೆಸಿದ ಲೈವ್ ಸಂವಾದದ ಲಿಂಕ್ ಇಲ್ಲಿದೆ.