ʼಮುಡಾʼಸ್ತ್ರದ ವಿರುದ್ಧ ಸಿದ್ದರಾಮಯ್ಯ ʼಜಾತಿ ಗಣತಿʼ ಪ್ರತ್ಯಸ್ತ್ರ?

ರಾಜ್ಯ ರಾಜಕಾರಣದಲ್ಲಿ ಜಾತಿ ಗಣತಿ ವರದಿ ಮತ್ತೊಂದು ಸುತ್ತಿನ ರಾಜಕೀಯ ಮೇಲಾಟಕ್ಕೆ ಅಸ್ತ್ರವಾಗಿದ್ದು ಮುಡಾ ಹಗರಣದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟಿರುವ ಈ ಬಾಣ ಉಪ ಚುನಾವಣೆಯಲ್ಲಿ ಪ್ರಮುಖ ವಿಷಯವಾಗುವ ಲಕ್ಷಣಗಳು ಕಾಣಿಸುತ್ತಿವೆ.

Update: 2024-10-19 02:30 GMT

ರಾಜ್ಯ ರಾಜಕಾರಣದಲ್ಲಿ ಜಾತಿ ಗಣತಿ ವರದಿ ಮತ್ತೊಂದು ಸುತ್ತಿನ ರಾಜಕೀಯ ಮೇಲಾಟಕ್ಕೆ ಅಸ್ತ್ರವಾಗಿದ್ದು ಮುಡಾ ಹಗರಣದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟಿರುವ ಈ ಬಾಣ ಉಪ ಚುನಾವಣೆಯಲ್ಲಿ ಪ್ರಮುಖ ವಿಷಯವಾಗುವ ಲಕ್ಷಣಗಳು ಕಾಣಿಸುತ್ತಿವೆ.

ಕಳೆದ ಆರು ವರ್ಷಗಳಿಂದ ಜಾತಿ ಗಣತಿ ಆಗಾಗ ಮುನ್ನೆಲೆಗೆ ಬರುತ್ತಿದ್ದು, ರಾಜಕೀಯವಾಗಿ ಹಿಂದುಳಿದ ವರ್ಗಗಳು ಹಾಗೂ ಮೇಲ್ವರ್ಗಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದು, ರಾಜಕೀಯ ಪಕ್ಷಗಳು ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಸಂದರ್ಭಕ್ಕೆ ತಕ್ಕಂತೆ ಅಸ್ತ್ರವಾಗಿ ಬಳಸಿಕೊಳ್ಳುತ್ತ ಬರುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಈಗ ಅವರ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮ ಬಾಹಿರವಾಗಿ ತಮ್ಮ ಪತ್ನಿ ಹೆಸರಲ್ಲಿ ಸೈಟ್ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ  ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿರುವುದರಿಂದ ಪ್ರತಿಪಕ್ಷಗಳು ಅವರ ರಾಜೀನಾಮೆಗೆ ತೀವ್ರ ಒತ್ತಡ ಹೇರುತ್ತಿವೆ. ಇದರ ನಡುವೆಯೇ ಅವರ ವಿರುದ್ಧ ಸ್ವಪಕ್ಷದಲ್ಲಿಯೂ ಒಂದು ಬಣ ಪರೋಕ್ಷವಾಗಿ ರಾಜೀನಾಮೆ ನೀಡುವಂತೆ ತೆರೆ ಮರೆಯಲ್ಲಿ ಒತ್ತಡ ಹೇರುವ ಪ್ರಯತ್ನ ನಡೆಸಿದ್ದು, ಅದರಿಂದ ಬಚಾವಾಗಲು ಜಾತಿ ಗಣತಿ ವರದಿಯನ್ನು ಮುಂದಿನ ಸಂಪುಟದಲ್ಲಿ ಚರ್ಚಿಸುವುದಾಗಿ ಹೇಳುವ ಮೂಲಕ ವಿರೋಧ ಪಕ್ಷ ಹಾಗೂ ತಮ್ಮದೇ ಪಕ್ಷದಲ್ಲಿನ ವಿರೋಧಿಗಳಿಗೆ ಪತೃಸ್ತ್ರ ಬಿಟ್ಟಿದ್ದಾರೆ ಎನ್ನಲಾಗಿದೆ.

ಸಿಎಂ ಸಿದ್ದರಾಮಯ್ಯ ಬಿಟ್ಟಿರುವ ಈ ಬಾಣ ಕೇವಲ ಪ್ರತಿಪಕ್ಷದಲ್ಲಿರುವ ಲಿಂಗಾಯತ ಮತು ಒಕ್ಕಲಿಗ ನಾಯಕರಿಗಷ್ಟೇ ಅಲ್ಲ. ಕಾಂಗ್ರೆಸ್‌ನಲ್ಲಿರುವ ಲಿಂಗಾಯತ ಮತ್ತು ಒಕ್ಕಲಿಗ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆಡಳಿತ ಪಕ್ಷದಲ್ಲಿರುವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳ ನಾಯಕರು ತಮ್ಮ ಸಮುದಾಯಗಳ ವೇದಿಕೆಗಳಲ್ಲಿ ಜಾತಿ ಗಣತಿ ವರದಿಯನ್ನು ವಿರೋಧಿಸಿದ್ದಾರೆ. ಅಲ್ಲದೇ ಈ ಕುರಿತು ನಡೆಸಿದ ಸಹಿ ಅಭಿಯಾನಕ್ಕೆ ಸಹಿ ಹಾಕುವ ಮೂಲಕ ತಮ್ಮ ವಿರೋಧ ದಾಖಲಿಸಿದ್ದಾರೆ.

ಈಗಾಗಲೇ ಒಕ್ಕಲಿಗರ ಸಂಘ ಜಾತಿ ಗಣತಿ ವಿಚಾರದಲ್ಲಿ ಸಮುದಾಯದ ಮುಖಂಡರು ಹಾಗೂ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಸಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ನಿಲುವನ್ನು ಖಂಡಿಸಿದ್ದು, ಜಾತಿ ಗಣತಿ ವರದಿಯನ್ನು ಯಾವುದೇ ಕಾರಣಕ್ಕೂ ಸರ್ಕಾರ ಒಪ್ಪಿಕೊಳ್ಳಬಾರದು ಎಂದು ಆಗ್ರಹಿಸಿದೆ.

ಈಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ತದಲ್ಲಿ ಇದೇ ಅಕ್ಟೋಬರ್ 22 ರಂದು ಲಿಂಗಾಯತ ಸಮುದಾಯದ ಮುಖಂಡರು, ಸಂಸದರು, ಶಾಸಕರ ಸಭೆ ಕರೆದಿದ್ದು, ಅಂದು ಜಾತಿಗಣತಿ ವರದಿ ವಿಚಾರದಲ್ಲಿ ಲಿಂಗಾಯತ ಸಮುದಾಯದ ಅಧಿಕೃತ ನಿಲುವು ಪ್ರಕಟಿಸಲು ತೀರ್ಮಾಣಿಸಿದ್ದಾರೆ.

ಶಾಮನೂರು ಶಿವಶಂಕರಪ್ಪ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಜಾತಿ ಸಮೀಕ್ಷೆ ವರದಿ ಬಿಡುಗಡೆ ಮಾಡಬಾರದು ಎಂದು ಬಹಿರಂಗವಾಗಿಯೇ ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸುವುದಾಗಿ ಹೇಳಿರುವುದರಿಂದ ಅದಕ್ಕೂ ಮೊದಲು ಮಹಾಸಭೆಯ ವತಿಯಿಂದ ಸಮುದಾಯದ ವಿರೋಧ ವ್ಯಕ್ತಪಡಿಸಲು ಶಾಮನೂರು ಶಿವಶಂಕರಪ್ಪ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಡಾ. ಶಾಮನೂರು ಶಿವಶಂಕರಪ್ಪ, ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರು

ಜಾತಿ ಗಣತಿ ವರದಿ ಕುರಿತು ಎಲ್ಲ ವೀರಶೈವ‌ ಲಿಂಗಾಯತ ಒಳ ಪಂಗಡಗಳ ಮುಖಂಡರ ಸಭೆ ಕರೆದಿದ್ದೇವೆ. ಜಾತಿ ಗಣತಿ ವರದಿ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ, ರಾಜ್ಯ ಸರ್ಕಾರಕ್ಕೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಕೊಡುತ್ತೇವೆ.

ಮತ್ತೊಂದು ಕಂಟಕ?

ಆದರೆ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿರುವುದರ ನಡುವೆಯೇ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿರುವುದರಿಂದ ಈ ಸಂದರ್ಭದಲ್ಲಿ ವರದಿ ಸ್ವೀಕಾರ ಮಾಡಲು ತೀರ್ಮಾನಿಸಿದರೆ, ಅದು ಉಪ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಅದು ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಕಂಟಕವಾಗುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ ಉಪ ಚುನಾವಣೆ ಮುಗಿಯುವವರೆಗೂ ಜಾತಿ ಗಣತಿ ವಿಚಾರ ಕೇವಲ ಚುನಾವಣಾ ಪ್ರಚಾರದ ರಾಜಕೀಯ ವಿಷಯವಾಗಿ ಮುಡಾ ಹಾಗೂ ವಾಲ್ಮೀಕಿ ಹಗರಣಗಳ ಆರೋಪವನ್ನು ತೆರೆಗೆ ಸರಿಸುವ ಒಂದ ಅಸ್ತ್ರವಾಗಿ ಬಳಕೆಯಾಗುವ ಸಾಧ್ಯತೆ ಇದೆ.

ಏನಿದು ಜಾತಿ ಗಣತಿ?

ಸಿದ್ದರಾಮಯ್ಯ 2013 ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ಸುಮಾರು 160 ಕೋಟಿ ವೆಚ್ಚ ಮಾಡಿ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ಹಿಂದುಳಿದ ವರ್ಗಗಳ ಶೈಕ್ಷಣಿಕ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಪ್ರಮುಖವಾಗಿ ಜಾತಿವಾರು ಸಮೀಕ್ಷೆ ನಡೆಸಿರುವುದರಿಂದ ಅದು ಜಾತಿ ಗಣತಿ ಎಂದೇ ಬಿಂಬಿತವಾಗಿದೆ.

2018ರ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವ ಮುನ್ನ ಅಂದಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವ ಮುನ್ನವೇ ವರದಿಯಲ್ಲಿನ ಜಾತಿವಾರು ಅಂಕಿ ಅಂಶಗಳು ಸೋರಿಕೆಯಾಗಿ, ರಾಜ್ಯದಲ್ಲಿ ಎಸ್ಸಿ ಎಸ್ಟಿ ಸಮುದಾಯದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಸೋರಿಕೆಯ ವರದಿ ಪ್ರಕಾರ ಎಸ್ಸಿ ಎಸ್ಟಿ ಸಮುದಾಯ ಸುಮಾರು 1.20 ಕೋಟಿ ಜನಸಂಖ್ಯೆ ಇದ್ದು, ನಂತರದ ಸ್ಥಾನದಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದವರಿದ್ದು ಅವರು ಸುಮಾರು 76 ಲಕ್ಷ ಜನಸಂಖ್ಯೆ ಇದ್ದು, ಮೂರನೇ ಸ್ಥಾನದಲ್ಲಿರುವ ವೀರಶೈವ ಲಿಂಗಾಯತ ಸಮುದಾಯ ಅಂದಾಜು 65 ಲಕ್ಷ ಜನಸಂಖ್ಯೆ ಇದ್ದು, ಮತ್ತು ನಾಲ್ಕನೇ ಸ್ಥಾನದಲ್ಲಿ ಒಕ್ಕಲಿಗ ಸಮುದಾಯ ಸುಮಾರು 56 ರಿಂದ 60 ಲಕ್ಷ ಜನಸಂಖ್ಯೆ ಇದೆ.

ಆ ಹಿನ್ನೆಲೆಯಲ್ಲಿ ಆಗಿನ ಅಧ್ಯಕ್ಷ ಕಾಂತರಾಜ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದ್ದರೂ, ಆಗ ವಿಧಾನಸಭೆ ಚುನಾವಣೆಯಲ್ಲಿ ಮೇಲ್ವರ್ಗದವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ವರದಿಯನ್ನು ಸ್ವೀಕರಿಸದೇ ಹಾಗೆಯೇ ವಿಧಾನಸಭೆ ಚುನಾವಣೆ ಎದುರಿಸಿದರು. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರದೇ ಹಿನ್ನಡೆ ಅನುಭವಿಸಬೇಕಾಯಿತು.

ಆಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಬೆಂಬಲಿತ ಜೆಡಿಎಸ್  ಮೈತ್ರಿ ಸರ್ಕಾರ ಹಾಗೂ ಬಿಜೆಪಿ ಸರ್ಕಾರಗಳು ಈ ವರದಿಯ ಗೋಜಿಗೆ ಹೋಗಲಿಲ್ಲ. ನಂತರ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಜಾತಿ ಗಣತಿ ವರದಿಯಲ್ಲಿನ ಲೋಪಗಳನ್ನು ಸರಿಪಡಿಸಲು ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರಿಗೆ ನೀಡಿದರು. ಅವರು ಕಾಂತರಾಜ್ ವರದಿಯಲ್ಲಿ ಕೆಲವು ಅಂಕಿ ಅಂಶಗಳು ವ್ಯತ್ಯಾಸವಾಗಿದ್ದನ್ನು ಸರಿಪಡಿಸಲು ಜಿಲ್ಲೆಗಳಿಂದ ಮತ್ತೊಂದು ಬಾರಿ ಮಾಹಿತಿ ಪಡೆದುಕೊಂಡು ವರದಿಯನ್ನು ಪರಿಷ್ಕರಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.

ಆದರೆ, ಆ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಬಂದಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿಯನ್ನು ಪಡೆದುಕೊಂಡು ಅದನ್ನು ಬಿಡುಗಡೆ ಮಾಡದೇ ಹಾಗೆಯೇ ಇಟ್ಟುಕೊಂಡಿದ್ದರು.

ಈಗ ಅವರ ವಿರುದ್ಧ ಮುಡಾ ಹಗರಣದ ಆರೋಪ ಕೇಳಿ ಬಂದು ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿರುವುದರಿಂದ ಮತ್ತೆ ಜಾತಿ ಗಣತಿಯ ವರದಿಯನ್ನು ಮುನ್ನೆಲೆಗೆ ತಂದಿದ್ದು, ಈಗ ಉಪ ಚುನಾವಣಡ ಘೊಷಣೆ ಆಗಿರುವುದರಿಂದ ಜಾತಿ ಗಣತಿ ವರದಿ ಚುನಾವಣೆ ಮುಗಿಯುವವರೆಗೂ ರಾಜಕೀಯ ಮೇಲಾಟಕ್ಕೆ ಮಾತ್ರ ಬಳಕೆಯಾಗಲಿದ್ದು, ಉಪ ಚುನಾವಣೆ ಮುಗಿದ ನಂತರವಾದರೂ ಸಚಿವ ಸಂಪುಟದಲ್ಲಿ ಚರ್ಚಿಸಿ ಅಧಿಕೃತವಾಗಿ ಬಿಡುಗಡೆ ಮಾಡುವ ಧೈರ್ಯ ಮಾಡುತ್ತಾರೋ ಅಥವಾ ತಮ್ಮ ಅಧಿಕಾರ ಮುಗಿಯುವವರೆಗೂ ವಿರೋಧಿಗಳನ್ನು ಹೆದರಿಸಲು ಅಸ್ತ್ರವಾಗಿ ಹಾಗೆಯೇ ಇಟ್ಟುಕೊಳ್ಳುತ್ತಾರೋ ಕಾದು ನೋಡಬೇಕು.

Tags:    

Similar News