ಆಂಧ್ರಪ್ರದೇಶದಲ್ಲಿ ಬಾವಿಗೆ ಬಿದ್ದ ಕಾರು ; ಚಿಂತಾಮಣಿಯ ಮೂವರು ಸಾವು
ಆಂಧ್ರ ಪ್ರದೇಶದಲ್ಲಿ ಅಡುಗೆ ಕೆಲಸಕ್ಕೆಂದು ಹೋಗುತ್ತಿದ್ದ ಚಿಂತಾಮಣಿ ಮೂಲದ ಐವರಿದ್ದ ಕಾರು ರಸ್ತೆ ಬದಿಯ ಬಾವಿಗೆ ಬಿದ್ದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.;
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಕುರಪ್ಪಲ್ಲಿ ಗ್ರಾಮದ ಬಳಿ ಕಾರೊಂದು ಪಾಳು ಬಾವಿಗೆ ಬಿದ್ದಿದ್ದು, ಕರ್ನಾಟಕ ಮೂಲದ ಮೂವರು ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮುತ್ತಕದಲ್ಲಿ ಗ್ರಾಮದ ಲೊಕೇಶ(34), ಚಂದನಹಳ್ಳಿ ಗ್ರಾಮದ ಶಿವಾನಂದ, ಕೋಲಾರ ಜಿಲ್ಲೆಯ ಸುಗಟೂರು ಗ್ರಾಮದ ಚಲಪತಿ ಮೃತರು. ಕಾರಿನಲ್ಲಿದ್ದ ಇನ್ನಿಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಕಾರ್ಯಕ್ರಮವೊಂದರ ಅಡುಗೆ ಕೆಲಸಕ್ಕೆಂದು ಐವರು ಕಾರಿನಲ್ಲಿ ಹೋಗುತ್ತಿದ್ದರು. ಅನ್ನಮಯ್ಯ ಜಿಲ್ಲೆಯ ಕುರಪ್ಪಲ್ಲಿ ಗ್ರಾಮದ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಬಾವಿಗೆ ಬಿದ್ದಿದೆ.
ಬಾವಿ ಆಳವಾಗಿದ್ದರಿಂದ ಕಾರು ನೀರಿನಲ್ಲಿ ಮುಳುಗಿದ್ದು, ಮೂವರು ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಪೊಲೀಸರು ಕ್ರೇನ್ ಸಹಾಯದಿಂದ ಬಾವಿಗೆ ಬಿದ್ದಿದ್ದ ಕಾರನ್ನು ಮೇಲಕ್ಕೆತ್ತಿದರು.
ಮೊದಲು ಸ್ಥಳೀಯರು ಹಗ್ಗಗಳನ್ನು ಹಾಕಿ ಕಾರು ಮೇಲೆತ್ತಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗದಿದ್ದಾಗ ಕ್ರೇನ್ ಸಹಾಯದಿಂದ ಕಾರು ಮೇಲೆತ್ತಲಾಯಿತು. ಆ ಬಳಿಕ ಮೃತದೇಹಗಳನ್ನು ಹೊರತೆಗೆದು, ಆಸ್ಪತ್ರೆಗೆ ರವಾನಿಸಲಾಯಿತು. ಪಿಲೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.