KSRTC Bus Fare Hike| ಶೇ.15 ದರ ಏರಿಕೆಗೆ ಸಂಪುಟ ಒಪ್ಪಿಗೆ; ಪುರುಷರ ಜೇಬಿಗೆ ಕತ್ತರಿ!

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ 2025 ರ ಮೊದಲ ಕ್ಯಾಬಿನೆಟ್ ಸಭೆ ಗುರುವಾರ ಬೆಂಗಳೂರಿನಲ್ಲಿ ನಡೆದಿದ್ದು, ಈ ಸಭೆಯಲ್ಲಿ ಬಸ್ ಟಿಕೆಟ್ ದರ ಏರಿಕೆಯ ಕುರಿತು ಚರ್ಚೆ ನಡೆಸಿದ್ದಾರೆ.;

Update: 2025-01-02 11:50 GMT
ಟಿಕೆಟ್ ದರ ಏರಿಕೆಗೆ ಸಚಿವ ಸಂಪುಟ ಒಪ್ಪಿಗೆ ನೀಡಲಾಗಿದೆ.

ರಾಜ್ಯದಲ್ಲಿ ಬಿಎಂಟಿಸಿ , ಕೆಎಸ್‌‌ಆರ್‌ಟಿಸಿ ಸೇರಿ ಎಲ್ಲಾ ರೀತಿಯ ಸಾರಿಗೆ ಬಸ್‌ಗಳ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು,ಶೇ. 15 ರಷ್ಟು ಬಸ್ ದರ ಏರಿಕೆಗೆ ಇಂದು ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ.   ಇದರಿಂದಾಗಿ ಪ್ರಯಾಣಿಕರ ಸಂಖ್ಯೆ ಹೇರಳವಾಗಿರುವ ಹಾಗೂ ಜನಸಾಮಾನ್ಯರ ಪ್ರಯಾಣದ ಸಾಮಾನ್ಯ, ನಗರ ಸಾರಿಗೆ ಹಾಗೂ ವೇಗದೂತ ಬಸ್‌ಗಳಲ್ಲಿ ಪ್ರಯಾಣಿಸುವ  ಪುರುಷ ಪ್ರಯಾಣಿಕರಿಗೆ ಇನ್ನಷ್ಟು ಹೊರೆಯಾಗಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ 2025  ರ ಮೊದಲ ಕ್ಯಾಬಿನೆಟ್ ಸಭೆ  ಗುರುವಾರ  ಬೆಂಗಳೂರಿನಲ್ಲಿ ನಡೆದಿದ್ದು, ಈ ಸಭೆಯಲ್ಲಿ ಬಸ್ ಟಿಕೆಟ್ ದರ ಏರಿಕೆಯ ಕುರಿತು ಚರ್ಚೆ ನಡೆಸಲಾಯಿತು. ಕೆಎರ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ಸಾರಿಗೆ ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡುವ ಕುರಿತು ಚರ್ಚೆ ನಡೆಸಿದ್ದಾರೆ.

ಸಾರಿಗೆ ನಿಗಮಗಳು ಸಂಕಷ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ.  ಬಸ್ ದರ ಹೆಚ್ಚಳ ಅನಿವಾರ್ಯ ಎಂದು ಕ್ಯಾಬಿನೆಟ್ ನಲ್ಲಿ ಸಚಿವ ರಾಮಲಿಂಗಾರೆಡ್ಡಿ ಸಂಪುಟಕ್ಕೆ ತಿಳಿಸಿದ್ದು,  ಮೂರು ನಿಗಮಗಳಿಗೆ ಒಂದು ದರ, ಬಿಎಂಟಿಸಿಗೆ ಒಂದು ದರ ಏರಿಕೆಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಸ್ತಾಪಿಸಿದರು. ಆರಂಭದಲ್ಲಿ 13 ರಿಂದ 18 ರಷ್ಟು ದರ ಏರಿಕೆಗೆ ಬಗ್ಗೆ ಚರ್ಚಿಸಲಾಯಿತು. ಅಂತಿಮವಾಗಿ ಶೇ. 15 ರಷ್ಟು ಬಸ್ ದರ ಏರಿಕೆಗೆ ಸಂಪುಟ ಅನುಮತಿ ನೀಡಿದೆ.

ಈಗಾಗಲೇ ಬಸ್​ ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್​ನಲ್ಲಿ ನಾಲ್ಕು ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದವು. ಅದರ ಬೆನ್ನಲ್ಲೇ ಇಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಶಕ್ತಿ ಯೋಜನೆ

ಶಕ್ತಿ' ಯೋಜನೆ ಮೂಲಕ ರಾಜ್ಯ ಸರ್ಕಾರವು ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವನ್ನು ಕಲ್ಪಿಸಿದೆ. 2023ರ ಜೂನ್ 11ರಂದು ಜಾರಿಗೆ ಬಂದ 'ಶಕ್ತಿ' ಯೋಜನೆ, ರಾಜಹಂಸ, ವೋಲ್ವೋ, ಸ್ಲೀಪರ್‌, ಫೈಬಸ್‌, ಅಂಬಾರಿ  ಸೇರಿದಂತೆ  ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ  ಸಾಮಾನ್ಯ, ನಗರ ಸಾರಿಗೆ ಹಾಗೂ ವೇಗದೂತ ಬಸ್‌ಗಳಲ್ಲಿಎಲ್ಲಾ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದೆ.

ಇದರಿಂದ ಕೆಎಸ್‌ಆರ್‌ಟಿಸಿಗೆ ಆರ್ಥಿಕ ಹೊರೆಯಾಗಿದ್ದು, ಸಾರಿಗೆ ನೌಕರರ ವೇತನ ಸೇರಿದಂತೆ ಇತರೆ ಪಾವತಿಗಳನ್ನು ಬಾಕಿ ಉಳಿಸಿಕೊಂಡ ಪರಿಣಾಮ ಸಾರಿಗೆ ಇಲಾಖೆಗೆ (ಕೆಎಸ್‌ಆರ್‌ಟಿಸಿ) 2,000 ಕೋಟಿ ರೂ ಸಾಲ ಪಡೆಯುವುದಕ್ಕೆ ಮುಂದಾಗಿದೆ. ಈ ಸಂಬಂಧ ಆರ್ಥಿಕ ಇಲಾಖೆ ಇತ್ತೀಚೆಗೆ ಅನುಮತಿ ನೀಡಿತ್ತು.  ಆರ್ಥಿಕ ಹೊರೆ ಕಡಿಮೆ ಮಾಡಲು ಈಗ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು,  ಟಿಕೆಟ್‌ ದರ ಏರಿಕೆ ಮಾಡಲು ನಿರ್ಧರಿಸಿದೆ. ಇದರಿಂದ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಪುರುಷ ಪ್ರಯಾಣಿಕರ ಜೇಬಿಗೆ ಇನ್ನಷ್ಟು ಕತ್ತರಿ ಬಿದ್ದಂತಾಗಿದೆ.


Tags:    

Similar News