ಸಾರಿಗೆ ನೌಕರರ ಮುಷ್ಕರಕ್ಕೆ ತಕ್ಷಣ ಪರಿಹಾರ ಒದಗಿಸಲು ಸರ್ಕಾರಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ

ಕೆಎಸ್ಆರ್​ಟಿಸಿ ಸೇರಿದಂತೆ ಸಾರಿಗೆ ನಿಗಮಗಳು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು, ನೌಕರರಿಗೆ ಸರಿಯಾಗಿ ವೇತನವನ್ನೂ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.;

Update: 2025-08-05 07:07 GMT

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ರಾಜ್ಯಾದ್ಯಂತ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೀವ್ರ ತೊಂದರೆಯನ್ನು ನಿವಾರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಮಧ್ಯಪ್ರವೇಶಿಸಿ ಪರಿಹಾರ ಒದಗಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮುಷ್ಕರದಿಂದಾಗಿ ಗ್ರಾಮೀಣ ಭಾಗಗಳಲ್ಲಿ ಬಸ್ಸುಗಳಿಲ್ಲದೆ ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯಿಂದಾಗಿ ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರವನ್ನು ಕಡಿತಗೊಳಿಸಲಾಗಿದೆ" ಎಂದು ಗಂಭೀರ ಆರೋಪ ಮಾಡಿದರು.

"ಕೆಎಸ್ಆರ್​ಟಿಸಿ ಸೇರಿದಂತೆ ಸಾರಿಗೆ ನಿಗಮಗಳು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು, ನೌಕರರಿಗೆ ಸರಿಯಾಗಿ ವೇತನವನ್ನೂ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ತಿಂಗಳುಗಳಿಂದ ಈ ಸಮಸ್ಯೆ ಉಲ್ಬಣಗೊಂಡಿದ್ದು, ಇದರಿಂದಾಗಿಯೇ ಸರ್ಕಾರವು ನೌಕರರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿದೆ," ಎಂದು ವಿಜಯೇಂದ್ರ ಟೀಕಿಸಿದರು.

"ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ತಡಮಾಡದೆ ತಕ್ಷಣವೇ ನೌಕರರ ಸಂಘಟನೆಗಳು ಮತ್ತು ಅಧಿಕಾರಿಗಳ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಿ, ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು. ಇದು ಸರ್ಕಾರದ ಕರ್ತವ್ಯ" ಎಂದು ಅವರು ಆಗ್ರಹಿಸಿದರು. ನಿನ್ನೆ ರಾಹುಲ್ ಗಾಂಧಿಯವರ ಬೆಂಗಳೂರು ಭೇಟಿಯ ಕಾರಣಕ್ಕಾಗಿಯೇ ಮುಖ್ಯಮಂತ್ರಿಗಳು ಸಾರಿಗೆ ನೌಕರರ ಸಭೆ ಕರೆದಿದ್ದರು ಎಂದು ಅವರು ಆರೋಪಿಸಿದರು.

ಸರ್ಕಾರದ ಪರ್ಯಾಯ ವ್ಯವಸ್ಥೆಗಳ ಕುರಿತು ಪ್ರತಿಕ್ರಿಯಿಸಿದ ಅವರು, "ಗಡ್ಡಕ್ಕೆ ಬೆಂಕಿ ಹತ್ತಿಕೊಂಡಾಗ ಬಾವಿ ತೋಡಲು ಹೊರಟಿದ್ದಾರೆ. ನಿನ್ನೆ ಸುತ್ತೋಲೆ ಹೊರಡಿಸಿ, ಖಾಸಗಿ ಶಾಲಾ-ಕಾಲೇಜುಗಳ ಬಸ್ಸುಗಳನ್ನು ಕೇಳುತ್ತಿದ್ದಾರೆ. ಈಗಾಗಲೇ ಸಾರಿಗೆ ವ್ಯವಸ್ಥೆಯನ್ನು ಹಾಳುಮಾಡಿ, ಈಗ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಸಮಸ್ಯೆ ಸೃಷ್ಟಿಸಲು ಹೊರಟಿದ್ದಾರೆ," ಎಂದು ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು.

Tags:    

Similar News