ಭೋವಿ ಅಭಿವೃದ್ಧಿ ನಿಗಮದ ಹಗರಣ: ವಿಚಾರಣೆ ಎದುರಿಸಿದ ಮಹಿಳಾ ಉದ್ಯಮಿ ಆತ್ಮಹತ್ಯೆ
ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಚಾರಣೆ ಎದುರಿಸಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಮನನೊಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.;
ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಚಾರಣೆ ಎದುರಿಸಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಮನನೊಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್ ನಿವಾಸಿ ಜೀವಾ (33) ಆತ್ಮಹತ್ಯೆಗೆ ಶರಣಾದವರು. ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿಸಿಐಡಿ ತನಿಖೆ ನಡೆಸುತ್ತಿರುವ ವೇಳೆ ಭೋವಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಜೀವಾ ಅವರ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಯಾಗಿರುವುದು ತನಿಖೆಯಿಂದ ಹೊರಬಿದ್ದಿದ್ದು,ಇದರಂತೆ ವಿಚಾರಣೆ ನಡೆಸಲು ಜೀವಾ ಅವರಿಗೆ ಸಿಐಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಅದರಂತೆ ಜೀವಾ ಅವರು ಗುರುವಾರ ಸಿಐಡಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿ ಮನೆಗೆ ವಾಪಸ್ ಆಗಿದ್ದರು. ಆದರೆ ಸಿಐಡಿ ಅಧಿಕಾರಿಗಳ ವಿಚಾರಣೆಯಿಂದ ಮನನೊಂದಿದ್ದ ಜೀವಾ 11 ಪುಟಗಳ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶುಕ್ರವಾರ ಮುಂಜಾನೆ ಸುಮಾರು 5.30ಕ್ಕೆ ಈ ಘಟನೆ ನಡೆದಿದೆ. ಕುಟುಂಬದ ಸದಸ್ಯರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಜೀವಾ ಅವರು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ವುಡ್ ಮೆಟೀರಿಯಲ್ಸ್ ತಯಾರಿಕಾ ಕಂಪನಿ ಹೊಂದಿದ್ದರು. ಭೋವಿ ಅಭಿವೃದ್ಧಿ ನಿಗಮಕ್ಕೆ ಈ ವುಡ್ ಮೆಟೀರಿಯಲ್‌ಗಳನ್ನು ಸರಬರಾಜು ಮಾಡುತ್ತಿದ್ದರು. ಹೀಗಾಗಿ ಅವರ ಖಾತೆಗೆ ಭೋವಿ ಅಭಿವೃದ್ಧಿ ನಿಗಮದಿಂದ ಹಣ ವರ್ಗಾವಣೆಯಾಗಿತ್ತು. ಈ ಸಂಬಂಧ ಸಿಐಡಿ ಅಧಿಕಾರಿಗಳು ಜೀವಾ ಅವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ 11 ಪುಟಗಳ ಮರಣಪತ್ರವನ್ನು ಬರೆದಿದ್ದ ಜೀವಾ, ಸಿಐಡಿ ವಿಚಾರಣೆಯಿಂದ ನನಗೆ ಅವಮಾನವಾಗಿದ್ದು, ಮಾನಸಿಕವಾಗಿ ನೊಂದಿದ್ದೇನೆ. ನನಗೆ ಅವಿವಾಹಿತ ತಂಗಿ ಇರುವುದರಿಂದ ನನ್ನ ಆತ್ಮಹತ್ಯೆ ಸುದ್ದಿಗೆ ಹೆಚ್ಚು ಪ್ರಚಾರ ನೀಡಬೇಡಿ ಎಂದಿದ್ದಾರೆ. ಜೀವಾ ಅವರ ಸಹೋದರಿ ಸಂಗೀತಾ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಪೊಲೀಸರು ಆತ್ಮಹತ್ಯೆಗೆ ಪ್ರಚೋಧನೆ ಮತ್ತು ಭ್ರಷ್ಟಚಾರ ತಡೆ ಕಾಯ್ದೆಯಡಿ ಸಿಐಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸಂಗೀತಾ ಅವರು ದೂರಿನಲ್ಲಿ ಸಿಐಡಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದು, ಹೀಗಾಗಿ ಸಿಐಡಿ ಅಧಿಕಾರಿಗಳನ್ನು ಆರೋಪಿಯನ್ನಾಗಿ ಮಾಡಿದ್ದೇವೆ. ಅಲ್ಲದೇ ಸಿಐಡಿ ಅವರು ಜೀವಾಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಸಂಗೀತಾ ಆರೋಪಿಸಿದ್ದಾರೆ.