KSRTC Ticket Price: ಹೊಸ ವರ್ಷಾರಂಭದಲ್ಲೇ ಪ್ರಯಾಣ ದರ ಏರಿಕೆಗೆ ಸಜ್ಜು
ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಬಸ್ ಪ್ರಯಾಣ ದರ ಏರಿಕೆಗೆ ಅನುಮತಿ ಕೋರಿ ಸಾರಿಗೆ ನೌಕರರು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಲು ಸಜ್ಜಾಗಿದ್ದಾರೆ. ಸರ್ಕಾರ ಅನುಮತಿ ನೀಡಿದರೆ ಪ್ರಯಾಣಿಕರಿಗೆ ಪ್ರಯಾಣ ದರ ಏರಿಕೆಯ ಬಿಸಿ ತಟ್ಟಲಿದೆ.;
ʼಶಕ್ತಿ ಯೋಜನೆʼಯ ಆರ್ಥಿಕ ಹೊರೆ ತಪ್ಪಿಸಲು ಸಾರಿಗೆ ನಿಗಮಗಳಿಗೆ 2000 ಕೋಟಿ ರೂ. ಸಾಲ ಎತ್ತುವಳಿಗೆ ಸರ್ಕಾರ ಒಪ್ಪಿಗೆ ನೀಡಿರುವ ಬೆನ್ನಲ್ಲೇ ಪ್ರಯಾಣ ಏರಿಕೆಯ ಪ್ರಸ್ತಾಪ ಮುನ್ನೆಲೆಗೆ ಬಂದಿದೆ. ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಕುರಿತಂತೆ ಸಾರಿಗೆ ನೌಕರರ ಸಂಘಟನೆಗಳು ಜ.15 ರ ನಂತರ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲಿದ್ದು, ದರ ಏರಿಕೆಯ ಅಗತ್ಯತೆ ಕುರಿತು ಅಂಕಿ ಅಂಶಗಳ ಸಮೇತ ಮನವರಿಕೆ ಮಾಡಿಕೊಡಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 2014 ರಲ್ಲಿ ಕೊನೆಯ ಬಾರಿಗೆ ದರ ಏರಿಕೆ ಮಾಡಿತ್ತು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ), ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ದರಗಳನ್ನು 2020 ರಲ್ಲಿ ಪರಿಷ್ಕರಿಸಲಾಗಿತ್ತು.ಆದರೆ, ಕಳೆದ ಐದು ವರ್ಷಗಳಲ್ಲಿ ಸಾರಿಗೆ ನಿಗಮಗಳು ಒಟ್ಟಾರೆ ₹ 5,209.35 ಕೋಟಿ ನಷ್ಟ ಅನುಭವಿಸಿದ್ದವು. ಈಗ ಸಾರಿಗೆ ನೌಕರರಿಗಾಗಿಯೇ ₹ 6,244.29 ಕೋಟಿ ಹಣ ಬಿಡುಗಡೆ ಮಾಡಬೇಕಾಗಿದೆ. ಹೆಚ್ಚುತ್ತಿರುವ ವೆಚ್ಚಗಳ ಹೊರತಾಗಿಯೂ ರಾಜ್ಯ ಸರ್ಕಾರ ದರ ಹೆಚ್ಚಳ ಮಾಡಿಲ್ಲ. ಈ ನಿಟ್ಟಿನಲ್ಲಿ ಸಾರಿಗೆ ನೌಕರರ ಸಂಘಟನೆಗಳು ಟಿಕೆಟ್ ದರ ಹೆಚ್ಚಿಸಬೇಕೆಂದು ಮನವಿ ಮಾಡಲು ಸಜ್ಜಾಗಿವೆ.
ಸಾರಿಗೆ ನಿಗಮಗಳು ಕಳೆದ ವರ್ಷದ ಆರಂಭದಲ್ಲಿಯೇ ಶೇ.15 ರಷ್ಟು ದರ ಏರಿಕೆಗೆ ಪ್ರಸ್ತಾಪ ಸಲ್ಲಿಸಿದ್ದವು. ಆದರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಸ್ತಾವ ನನೆಗುದಿಗೆ ಬಿದ್ದಿತ್ತು. ಈಗ, ಸಾರಿಗೆ ನೌಕರರ ಸಂಘಗಳು ಶೇ 10-12 ರಷ್ಟು ಪ್ರಯಾಣ ದರ ಏರಿಕೆಗೆ ಒತ್ತಾಯಿಸುತ್ತಿದ್ದು, ಪ್ರಯಾಣ ದರ ಏರಿಕೆಗೆ ಸರ್ಕಾರ ಕೂಡಲ ಒಲವು ತೋರಿದೆ ಎಂದು ಹೇಳಲಾಗಿದೆ.
ಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ನಿಗಮಗಳ ದೈನಂದಿನ ವೆಚ್ಚ ಸುಮಾರು 4 ಕೋಟಿ ರೂ ಹೆಚ್ಚಳವಾಗಿದೆ. ಈ ಹಿಂದೆ ಪ್ರತಿನಿತ್ಯ 9.16 ರೂ ಕೋಟಿ ಇದ್ದ ಇಂಧನ ವೆಚ್ಚ ಈಗ 13.21 ರೂ ಕೋಟಿಗೆ ಏರಿಕೆಯಾಗಿದೆ. ಹೆಚ್ಚುವರಿಯಾಗಿ ಮಾರ್ಚ್ 2023 ರಿಂದ ಉದ್ಯೋಗಿಗಳ ಪರಿಷ್ಕೃತ ಮಾಸಿಕ ವೆಚ್ಚ 54.23 ರೂ ಕೋಟಿಗಳಷ್ಟು ಹೆಚ್ಚಿದೆ. ಈ ಎಲ್ಲಾ ಸವಾಲುಗಳ ಹೊರತಾಗಿಯೂ 2012 ರಿಂದ ವಿದ್ಯಾರ್ಥಿಗಳ ಬಸ್ ಪಾಸ್ ದರ ಪರಿಷ್ಕರಿಸಿಲ್ಲ. ಒಂದು ದಶಕದಿಂದ ಬಿಎಂಟಿಸಿ ಪ್ರಯಾಣ ದರಗಳನ್ನು ಏರಿಸಿಲ್ಲ. ಇದರಿಂದ ನಿಗಮಗಳ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಲೇ ಇದ್ದು, ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎನ್ನಲಾಗಿದೆ.
ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಸಾರಿಗೆ ನಿಗಮಗಳು ಆರ್ಥಿಕವಾಗಿ ಬಳಲುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಪ್ರಯಾಣ ದರವನ್ನು ಹೆಚ್ಚಿಸುವ ನಿರ್ಧಾರವು ಸರ್ಕಾರ ಮತ್ತು ಮುಖ್ಯಮಂತ್ರಿಗಳ ಮೇಲಿದೆ ಎಂದು ಹೇಳಿದ್ದರು.