ಕೆರೆ, ಕಾಲುವೆ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ಝೋನ್ ನಿಗದಿ; ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ
2019 ಮಾರ್ಚ್ ತಿಂಗಳಲ್ಲಿ ಸುಪ್ರೀಂಕೋರ್ಟ್, ಹಸಿರು ನ್ಯಾಯಪೀಠದ ಆದೇಶವನ್ನು ತಿದ್ದುಪಡಿ ಮಾಡಿ ಕೆರೆಗಳ ಬಫರ್ ವಲಯವನ್ನು 30 ಮೀ ಎಂದು ನಿಗದಿಪಡಿಸಿದೆ.;
ಕರ್ನಾಟಕ ರಾಜ್ಯದಲ್ಲಿ ದೇಶದಲ್ಲೇ ಪ್ರಪ್ರಥಮವಾಗಿ ಜಲಮೂಲಗಳು, ಕೆರೆಗಳ ಗಾತ್ರಕ್ಕೆ ಅನುಗುಣವಾಗಿ ವೈಜ್ಞಾನಿವಾಗಿ ಬಫರ್ ಝೋನ್ ನಿಯಮಾವಳಿಗಳ ತಿದ್ದುಪಡಿಗೆ ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ.
ಎನ್‌ಜಿಟಿ ಆದೇಶದಡಿ ಬಫರ್ ಝೋನ್ ಎಷ್ಟಿರಬೇಕು?
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) 2016 ಮೇ ತಿಂಗಳಲ್ಲಿ ನೀಡಿದ ಆದೇಶದಲ್ಲಿ ಬೆಂಗಳೂರು ಕೆರೆಗಳ ಬಫರ್ ವಲಯವನ್ನು ನಿಗದಿಪಡಿಸಿತ್ತು. ಅದರಂತೆ ಕೆರೆಗಳಿಗೆ 75 ಮೀಟರ್, ಪ್ರಾಥಮಿಕ ಕಾಲುವೆಗೆ 50 ಮೀ, ದ್ವಿತೀಯ ಕಾಲುವೆಗೆ 35 ಮೀ, ತೃತೀಯ ಕಾಲುವೆಗೆ 25 ಮೀ. ನಿಗದಿ ಮಾಡಿತ್ತು. 2019 ಮಾರ್ಚ್ ತಿಂಗಳಲ್ಲಿ ಸುಪ್ರೀಂಕೋರ್ಟ್, ಹಸಿರು ನ್ಯಾಯಪೀಠದ ಆದೇಶವನ್ನು ತಿದ್ದುಪಡಿ ಮಾಡಿ ಕೆರೆಗಳ ಬಫರ್ ವಲಯವನ್ನು 30 ಮೀ ಎಂದು ನಿಗದಿಪಡಿಸಿದೆ. ಅಲ್ಲದೆ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ನಡುವೆ ಸಮತೋಲನ ಕಾಪಾಡುವಂತೆ ಎನ್‌ಜಿಟಿಯ ಆದೇಶವನ್ನು ಮರುನಿರೂಪಿಸಿತ್ತು. ಇದೇ ಆದೇಶದನ್ವಯ ಕರ್ನಾಟಕ ಸರ್ಕಾರ 2019 ಜುಲೈ ತಿಂಗಳಲ್ಲಿ ಸರ್ಖಾರಿ ಆದೇಶದ ಮೂಲಕ ಅನುಷ್ಠಾನಗೊಳಿಸಿತ್ತು.
ಸಾಮಾನ್ಯವಾಗಿ ಬಫರ್ ವಲಯಗಳು ಮಾನವ ಚಟುವಟಿಕೆ ಮತ್ತು ಸೂಕ್ಷ್ಮ ಪರಿಸರ ಹೊಂದಿರುವ ಜಲ ಸಂಪನ್ಮೂಲಗಳ ನಡುವೆ ರಕ್ಷಣಾ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತವೆ.
ಕೆರೆಗೆ ಅನುಗುಣವಾಗಿ ಬಫರ್ ಝೋನ್ ಪ್ರಸ್ತಾವ
ಕುಂದಾಪುರದ ಶಾಸಕರು, ಉಡುಪಿ ಜಿಲ್ಲಾಧಿಕಾರಿ ಹಾಗೂ ಇತರರು ಸರ್ಕಾರ ನಿಗದಿಪಡಿಸಿದ್ದ ಕೆರೆಯ ಬಫರ್ ವಲಯ 30 ಮೀಟರ್ ಬಗ್ಗೆ ಆಕ್ಷೇಪ ಸಲ್ಲಿಸಿದ್ದರು. ಒಂದು ಎಕರೆ ಕೆರೆ ಹಾಗೂ 100 ಎಕರೆ ಕೆರೆಗೆ ಯಾವುದೇ ವ್ಯತ್ಯಾಸವಿಲ್ಲದಂತೆ ಏಕರೂಪದ ಬಫರ್ ಝೋನ್ ನಿಗದಿಪಡಿಸಿರುವುದು ಸರಿಯಲ್ಲ. ಕೆರೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ಝೋನ್ ನಿಗದಿಪಡಿಸಲು ಕೋರಲಾಗಿತ್ತು.
ಈ ಮನವಿಯಂತೆ 2024 ಆ.31ರಂದು ಉಪಮುಖ್ಯಮಂತ್ರಿ ಮತ್ತು 2025 ಏ.22 ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಚರ್ಚಿಸಿದ್ದು, ಏಕರೂಪದ ಬಫರ್ ಝೋನ್ ನಿಗದಿಗೆ ನಿರ್ಧರಿಸಿ, ಪ್ರಸ್ತಾವನೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಇದನ್ನು ಜಾರಿಗೊಳಿಸಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಂಬಂಧಿತ ಇಲಾಖೆಗಳ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದು ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ದಿ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದ ಜಲಾಶಯಗಳ ಸಂರಕ್ಷಣೆ ಮತ್ತು ಪುನರುಜ್ಜೀವನಗೊಳಿಸುವ ಸಲುವಾಗಿ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು (KTCDA) 2014ರಲ್ಲಿ ಸ್ಥಾಪಿಸಲಾಗಿದೆ.
ಬಫರ್ ಜೋನ್ ತಿದ್ದುಪಡಿ ಸಮಿತಿ ಉದ್ದೇಶಗಳೇನು?
•ಕರ್ನಾಟಕ ರಾಜ್ಯದಲ್ಲಿ 1 ಗುಂಟೆಯಿಂದ 1000 ಎಕರೆಗಳವರೆಗೆ ವಿವಿಧ ಗಾತ್ರದ 41,849 ಕೆರೆಗಳಿವೆ. ಆದ್ದರಿಂದ ರಾಜ್ಯದಾದ್ಯಂತ ಮಾರ್ಗಸೂಚಿಗಳ ಏಕರೂಪತೆ ತರುವುದು ಅಗತ್ಯ.
•ಸಾರ್ವಜನಿಕ ಉಪಯೋಗಕ್ಕಾಗಿ ಕುಡಿಯುವ ನೀರಿನ ಪೈಪ್‌ಲೈನ್‌ಗಳು, ಭೂಗತ ವಿದ್ಯುತ್ ಕೇಬಲ್‌ಗಳು, ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ರಸ್ತೆ ಮತ್ತು ಸೇತುವೆಗಳು, ಏತ ನೀರಾವರಿ ಯೋಜನೆಗಳು, ಜ್ಯಾಕ್‌ವೆಲ್ / ಪಂಪ್ ಹೌಸ್, ಕೊಳಚೆ ನೀರು ಶುದ್ಧೀಕರಣ ಘಟಕಗಳು ಮುಂತಾದ ಸಾರ್ವಜನಿಕ ಉಪಯೋಗ ಕಾಮಗಾರಿಗಳನ್ನು ಕೆರೆ ಬಫರ್‌ನಲ್ಲಿ ಅಳವಡಿಸುವುದು ಅತ್ಯಾವಶ್ಯಕ.
* ಕೂಲಂಕಷ ಪರಿಶೀಲನೆಯ ನಂತರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ, ದೇಶದ ಇತರೆ ರಾಜ್ಯಗಳು ಅನುಸರಿಸಿರುವ ಕೆರೆ ಬಫರ್‌ಗಳನ್ನು ಪರಿಗಣಿಸಿ, ಕೆರೆಯ ಗಾತ್ರದ ಆಧಾರದ ಮೇಲೆ ಬಫರ್ ವಲಯ ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿದೆ
ಉದ್ದೇಶಿತ ಬಫರ್ ಝೋನ್ ತಿದ್ದುಪಡಿ ಎಷ್ಟು?
5 ಗುಂಟೆವರೆಗಿನ ಕೆರೆ, ಕಾಲುವೆ, ಇತರೆ ಜಲಮೂಲಗಳಿಗೆ ಯಾವುದೇ ಬಫರ್ ಝೋನ್ ಇರುವುದಿಲ್ಲ. 5 ಗುಂಟೆಯಿಂದ 1 ಎಕರೆಯವರೆಗೆ ಜಲಮೂಲಗಳಿಗೆ 3 ಮೀಟರ್, 1 ಎಕರೆಯಿಂದ 10 ಎಕರೆಯವರೆಗೆ 6 ಮೀ., 10 ಎಕರೆಯಿಂದ 25 ಎಕರೆಯವರೆಗೆ 12 ಮೀ., 25 ಎಕರೆಯಿಂದ 100 ಎಕರೆಯವರೆಗೆ 24 ಮೀ., 100 ಎಕರೆಗಿಂತ ದೊಡ್ಡದಾದ ಕೆರೆಗಳಿಗೆ 30 ಮೀಟರ್ ಬಫರ್ ಝೋನ್ ನಿಗದಿಪಡಿಸಲು ತೀರ್ಮಾನಿಸಲಾಗಿದೆ.
ಬಫರ್ ಅಂತರ ರೂಪಿಸುವಾಗ ವೈಜ್ಞಾನಿಕ ದೃಷ್ಟಿಕೋನ ಅನುಸರಿಸಲಾಗಿದೆ. ಕೆರೆ ಬಫರ್ ಎಂದರೆ ಕೆರೆಯ ಸುತ್ತಲಿನ ಪ್ರದೇಶವು ಮಳೆ ನೀರನ್ನು ಕೆರೆಗೆ ಹರಿಯಲು ಅನುಕೂಲವಾಗುವಂತೆ ಮಾಡುವುದು. ಅನೇಕ ಸಂದರ್ಭಗಳಲ್ಲಿ ಅದರಲ್ಲೂ ವಿಶೇಷವಾಗಿ ಉಡುಪಿ ಜಿಲ್ಲೆಯಲ್ಲಿ ಹಳೆಯ ಬಫರ್ ಝೋನ್ ಪ್ರದೇಶವು ಕೆರೆಯ ಗಾತ್ರಕ್ಕಿಂತ ಹೆಚ್ಚಿತ್ತು. ಕರ್ನಾಟಕ ರಾಜ್ಯದಲ್ಲಿ ಮೊದಲು, ಕೆರೆಗಳ ಮೇಲೆ ಬಂಡೆ ನಿರ್ಮಿಸಲಾಗುತ್ತಿತ್ತು. ಸಾರ್ವಜನಿಕರು ತಮ್ಮ ಸಂಚಾರಕ್ಕಾಗಿ ಕೆರೆ ಬಂಡೆಯನ್ನು ರಸ್ತೆವಾಗಿ ಬಳಸುತ್ತಿದ್ದರು. ಹೀಗಾಗಿ, ಇದೇ ರೀತಿಯಲ್ಲಿ ಈ ಬಾರಿ ಕೆರೆಗಳ ಗಾತ್ರದ ಆಧಾರದ ಮೇಲೆ ಬಫರ್ ಝೋನ್ ನಿಗದಿಪಡಿಸಲಾಗಿದೆ.
ಬೇರೆ ರಾಜ್ಯಗಳ ಬಫರ್ ವಲಯ ಅಧ್ಯಯನ
ಬೇರೆ ರಾಜ್ಯಗಳಲ್ಲಿ ಯಾವ ರೀತಿಯಲ್ಲಿ ಬಫರ್ ಝೋನ್ ಅಳವಡಿಸಿಕೊಳ್ಳಲಾಗಿದೆ ಎಂದು ಅಧ್ಯಯನ ನಡೆಸಲಾಗಿದೆ. ಗುಜರಾತ್ ರಾಜ್ಯದಲ್ಲಿ ಜಲಮೂಲಗಳ ಪ್ರದೇಶದಿಂದ 9 ಮೀ ಬಫರ್ ನಿಗದಿಪಡಿಸಲಾಗಿದೆ.
ತೆಲಂಗಾಣ ರಾಜ್ಯದಲ್ಲಿ 10 ಹೆಕ್ಟೇರ್‌ಗಿಂತ ದೊಡ್ಡದಾದ ಕೆರೆಗೆ 30 ಮೀ ಮತ್ತು 9 ಹೆಕ್ಟೇರ್‌ಗಿಂತ ಕಡಿಮೆ ವಿಸ್ತೀರ್ಣದ ಕೆರೆಗೆ 9 ಮೀ. ಬಫರ್ ನಿಗದಿಪಡಿಸಲಾಗಿದೆ. ತಮಿಳುನಾಡು ರಾಜ್ಯದಲ್ಲಿ ಏಕರೂಪವಾಗಿ ಕೆರೆಗಳ ಅಂಚಿನಿಂದ 3 ಮೀ ಬಫರ್ ಝೋನ್ ಅನುಸರಿಸಲಾಗಿದೆ.
ಕರ್ನಾಟಕವು ರಾಜ್ಯವು ವೈಜ್ಞಾನಿಕವಾಗಿ ಜಲಮೂಲಗಳ ಗಾತ್ರಕ್ಕೆ ಅನುಗುಣವಾಗಿ ಹೆಚ್ಚಿಸಿರುವ ಬಫರ್ ಝೋನ್ ಮಾರ್ಗಸೂಚಿಗಳನ್ನು ರೂಪಿಸಿರುವ ಏಕೈಕ ರಾಜ್ಯವಾಗಲಿದೆ. ಕಾಲುವೆ ಬಫರ್‌ಗಳ ವಿಷಯದಲ್ಲಿ ಪ್ರಸ್ತುತ 30 ಮೀ (ಪ್ರಾಥಮಿಕ ಕಾಲುವೆ), 15 ಮೀ (ದ್ವಿತೀಯ ಕಾಲುವೆ), 10 ಮೀ (ತೃತೀಯ ಕಾಲುವೆ) ಅವೈಜ್ಞಾನಿಕವಾಗಿದ್ದು, ಅನೇಕ ಸಂದರ್ಭಗಳಲ್ಲಿ ಕಾಲುವೆಯ ಅಗಲವೇ ಬಫರ್‌ಗಿಂತ ಕಡಿಮೆಯಾಗಿದೆ.
ಹೊಸ ಕಾಲುವೆ ಬಫರ್ ಝೋನ್ ನಿಗದಿ
ಪ್ರಾಥಮಿಕ ಕಾಲುವೆಗೆ 15 ಮೀಟರ್ ಬಫರ್ ಝೋನ್ ನಿಗದಿಪಡಿಸಲಾಗಿದೆ. ದ್ವಿತೀಯ ಕಾಲುವೆಗೆ 10 ಮೀ, ತೃತೀಯ ಕಾಲುವೆಗೆ 5 ಮೀ., ನಿಗದಿಪಡಿಸಲಾಗಿದೆ.
ಪ್ರಸ್ತಾಪಿತ ತಿದ್ದುಪಡಿಯಿಂದ ಬಫರ್ ವಲಯದಲ್ಲಿ ಕೆರೆಯ ಸಾಮರ್ಥ್ಯ ಕುಗ್ಗಿಸದೆ ಹಾಗೂ ನೀರಿನ ಹರಿವಿಗೆ ಅಡ್ಡಿಪಡಿಸದಂತಹ ಸಾರ್ವಜನಿಕರಿಗೆ ಉಪಯೋಗವಾಗುವ ಯೋಜನೆಗಳನ್ನು ಮಾತ್ರ ಕೈಗೊಳ್ಳಲಾಗುತ್ತದೆ. ಇದರಿಂದ ಕೆರೆಯ ಸಾಮರ್ಥ್ಯ ಕಡಿಮೆಯಾಗುವುದಿಲ್ಲ ಮತ್ತು ನೀರಿನ ಹರಿವು ಅಡ್ಡಿಯಾಗುವುದಿಲ್ಲ.
ಹಲವಾರು ಪ್ರಕರಣಗಳಲ್ಲಿ ಕೆರೆ ಬಫರ್ ಝೋನ್ ಖಾಸಗಿ ಭೂಮಿಯಾಗಿದ್ದು, ‘ನಿರ್ಮಾಣ ನಿಷೇಧ ವಲಯ’ ಎಂದು ಘೋಷಿಸಲಾಗಿದೆ. ಈ ತಿದ್ದುಪಡಿಯಿಂದ ಪ್ರವಾಹ ಪ್ರಕರಣಗಳು ಹೆಚ್ಚಾಗುವುದಿಲ್ಲ, ಬದಲಾಗಿ ಉತ್ತಮ ಮೂಲಸೌಕರ್ಯ ಅಭಿವೃದ್ಧಿಯಿಂದ ನಗರ ಪ್ರದೇಶಗಳಲ್ಲಿ ಪ್ರವಾಹ ಅಪಾಯ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
ತಿದ್ದುಪಡಿಯು ರಿಯಲ್ ಎಸ್ಟೇಟ್ ಅಭಿವೃದ್ಧಿಗಾಗಿ ಅಲ್ಲ. ಇದು ಕೆರೆಯ ಗಾತ್ರಕ್ಕೆ ಅನುಗುಣವಾಗಿ ಬಫರ್ ವಲಯಗಳಲ್ಲಿ ಏಕರೂಪತೆ ನಿಗದಿಪಡಿಸುವ ಗುರಿ ಹೊಂದಿದೆ. ತಿದ್ದುಪಡಿಯಿಂದ ಜಲಮೂಲಗಳ ಜೀವವೈವಿಧ್ಯತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬದಲಿಗೆ ಸರ್ಕಾರಗಳು ನಗರಗಳಿಗೆ ಮೂಲಸೌಕರ್ಯ ಒದಗಿಸಲು ಸಹಾಯ ಮಾಡುತ್ತದೆ. ಕೆರೆಗಳಿಗೆ ಕೊಳಚೆ ನೀರು ಹರಿಯುವುದನ್ನು ತಡೆಗಟ್ಟಲು ಎಸ್‌ಟಿಪಿಗಳ ನಿರ್ಮಾಣ ಅಗತ್ಯ. ಈ ಹಿನ್ನಲೆಯಲ್ಲಿ ಹಾನಿಕಾರಕ ಕೊಳಚೆ ನೀರು ಸೇರ್ಪಡೆಯಾಗದಂತೆ ತಡೆಗಟ್ಟಲು ಕೆರೆಗಳು ಹಾಗೂ ಜಲಮೂಲಗಳ ಹತ್ತಿರ ಎಸ್‌ಟಿಪಿಗಳ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತದೆ.
ಈ ತಿದ್ದುಪಡಿ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಅಗತ್ಯಗಳ ನಡುವಿನ ಸಮತೋಲನವನ್ನು ಸಾಧಿಸುತ್ತದೆ. ಬಫರ್ ವಲಯದಲ್ಲಿ ನೀರು, ಒಳಚರಂಡಿ, ವಿದ್ಯುತ್ ಮುಂತಾದ ಉಪಯೋಗ ಜಾಲಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ, ಇದು ನಗರ ಪ್ರದೇಶಗಳ ಒಟ್ಟು ಮೂಲಸೌಕರ್ಯವನ್ನು ಸುಧಾರಿಸಲು ಸಹಾಯಕಾರಿಯಾಗಲಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.