Karnataka Budget 2025 | ಇಂದಿನಿಂದ ಬಜೆಟ್ ಅಧಿವೇಶನ ಆರಂಭ; ಸರ್ಕಾರ-ಪ್ರತಿಪಕ್ಷ ಜಟಾಪಟಿಗೆ ಅಖಾಡ ಸಜ್ಜು
ಸರ್ಕಾರದ ವಿರುದ್ಧ ಯೋಜಿತ ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿಸಲು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯತಂತ್ರ ರೂಪಿಸಿವೆ. ಪ್ರತಿಪಕ್ಷಗಳಿಗೆ ಏಟಿಗೆ ಎದುರೇಟು ನೀಡಲು ಸರ್ಕಾರ ಕೂಡ ಸಜ್ಜಾಗಿದೆ.;
ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಇಂದಿನಿಂದ (ಮಾ.3) ಆರಂಭವಾಗಲಿದೆ. ಗ್ಯಾರಂಟಿ ಯೋಜನೆಗೆ ಇತರೆ ಅನುದಾನಗಳ ಬಳಕೆ, ಭ್ರಷ್ಟಾಚಾರ, ಅಭಿವೃದ್ಧಿ ಕಡೆಗಣನೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ.
ಸರ್ಕಾರದ ವಿರುದ್ಧ ಯೋಜಿತ ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿಸಲು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯತಂತ್ರ ರೂಪಿಸಿವೆ. ಪ್ರತಿಪಕ್ಷಗಳಿಗೆ ಏಟಿಗೆ ಎದುರೇಟು ನೀಡಲು ಸರ್ಕಾರ ಕೂಡ ಸಜ್ಜಾಗಿದೆ.
ಮಾ.3 ರಂದು ವಿಧಾನಮಂಡಲ ಅಧಿವೇಶನ ವಿದ್ಯುಕ್ತವಾಗಿ ಆರಂಭವಾಗಲಿದ್ದು, ಬೆಳಿಗ್ಗೆ 11ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯಲಿದೆ. ಗುರುವಾರ ವಂದನಾ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಮಾ.7 ರಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ 16 ನೇ ಬಜೆಟ್ ಮಂಡನೆ ಮಾಡಲಿದ್ದು, ಮಾ. 10 ರಿಂದ 21ರವರೆಗೆ ಬಜೆಟ್ ಮೇಲೆ ವಿಸ್ತೃತ ಚರ್ಚೆ ನಡೆಯಲಿದೆ.
ಚರ್ಚೆಗೆ ಬರಲಿರುವ ಪ್ರಮುಖ ವಿಷಯಗಳು
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಳಿ ತಪ್ಪಿದ್ದು, ಮಂಗಳೂರು ಬ್ಯಾಂಕ್ ದರೋಡೆ, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಳಿ, ಬೆಂಗಳೂರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣಗಳ ಹೆಚ್ಚಳ, ಮೈಕ್ರೋಫೈನಾನ್ಸ್ ಕಿರುಕುಳದಿಂದ ಜನರ ಆತ್ಮಹತ್ಯೆ ಕುರಿತು ಚರ್ಚೆ ನಡೆಯಲಿದ್ದು, ಗೃಹ ಇಲಾಖೆ ವಿರುದ್ಧ ವಾಗ್ದಾಳಿ ನಡೆಸಲು ಪ್ರತಿಪಕ್ಷಗಳು ಸಜ್ಜಾಗಿವೆ.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಪಿ- ಟಿಎಸ್‌ಪಿ ಹಣ ಬಳಕೆ, ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ಸೌಲಭ್ಯ ವಿತರಣೆಯಲ್ಲಿ ವಿಳಂಬ, ಕೆಪಿಎಸ್‌ಸಿ ಅವ್ಯವಹಾರ, ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ, ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್ ಚಿಟ್ ಕುರಿತ ಚರ್ಚೆ ಜೋರಾಗುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರ ಒಂದರ ಹಿಂದೆ ಒಂದು ಬೆಲೆ ಏರಿಕೆ ಮಾಡುತ್ತಿದ್ದು, ರಾಜಕೀಯ ಕೋಲಾಹಲಕ್ಕೆ ಕಾರಣವಾದ ಬಸ್ ಹಾಗೂ ಮೆಟ್ರೊ ಪ್ರಯಾಣ ದರ ಏರಿಕೆ, ಬೆಂಗಳೂರಿನಲ್ಲಿ ಮೂಲಸೌಕರ್ಯ ಕೊರತೆ , ಬಿಬಿಎಂಪಿ ವಿಭಜನೆಗೆ ಅವಕಾಶ ಕಲ್ಪಿಸುವ ಗ್ರೇಟರ್ ಬೆಂಗಳೂರು ವಿಧೇಯಕ ಕುರಿತಂತೆ ಬಿಸಿ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸದನದಲ್ಲಿ ಹೋರಾಟಕ್ಕೆ ಸೂಚನೆ ಕೊಟ್ಟ ಹೆಚ್.ಡಿ.ಕೆ
ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಶಾಸಕರಿಗೆ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಶಾಸಕಾಂಗ ಪಕ್ಷದ ಸಭೆ ನಡೆಸಿದ ಅವರು, ಜನಪರ ವಿಷಯಗಳ ಬಗ್ಗೆ ಕಲಾಪದಲ್ಲಿ ಚರ್ಚೆ ಮಾಡುವಂತೆ ಸಲಹೆ ನೀಡಿದ್ದಾರೆ.
ಮಿತ್ರಪಕ್ಷ ಬಿಜೆಪಿ ನಾಯಕರ ಜತೆಗೂಡಿ ಸರ್ಕಾರ ವೈಫಲ್ಯಗಳ ಬಗ್ಗೆ ಹೋರಾಟ ಮಾಡಬೇಕು. ಎರಡೂ ಪಕ್ಷಗಳ ಶಾಸಕರು ಉಭಯ ಸದನಗಳಲ್ಲಿ ಪರಸ್ಪರ ಒಮ್ಮತದಿಂದ ಹೋರಾಡಬೇಕು. ಸುಖಾಸುಮ್ಮನೆ ಕಲಾಪದಲ್ಲಿ ಮಾತನಾಡಬೇಡಿ. ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಿ. ಈ ವೇಳೆ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಕಲಾಪದ ಸಮಯವನ್ನು ಸದುಪಯೋಗ ಮಾಡಿಕೊಂಡು ಜನರ ಪರವಾಗಿ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಕ್ಕಿಂತ ಅವುಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಲಾಭ ಮಾಡಿಕೊಂಡಿದ್ದೇ ಹೆಚ್ಚು. ಮೂರು ನಾಲ್ಕು ತಿಂಗಳು ಕಾಲ ಗೃಹಲಕ್ಷ್ಮಿ ಗ್ಯಾರಂಟಿ ಹಣವನ್ನು ಬಾಕಿ ಇಟ್ಟುಕೊಂಡು ಯಾವುದಾದರೂ ಚುನಾವಣೆ ಬಂದಾಗ ಒಮ್ಮೆಲೇ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಇದು ಸರ್ಕಾರ ಜನರಿಗೆ ಮಾಡುತ್ತಿರುವ ಮೋಸ. ಈ ವಿಷಯವನ್ನು ಕಲಾಪದಲ್ಲಿ ಪರಿಣಾಮಕಾರಿಯಾಗಿ ಚರ್ಚೆ ನಡೆಸಬೇಕು ಎಂದು ಶಾಸಕರಿಗೆ ಸೂಚನೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ₹5000 ಅನುದಾನ ಕೊಟ್ಟು ಕ್ರಿಯಾಯೋಜನೆ ರೂಪಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಸರಕಾರ, ಈವರೆಗೆ ಕ್ರಿಯಾಯೋಜನೆ ರೂಪಿಸುವ ಮಾತಿರಲಿ, ನಯಾಪೈಸೆ ಬಿಡುಗಡೆ ಮಾಡಿಲ್ಲ. ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಸರ್ಕಾರ ನಿರಂತರವಾಗಿ ಮೋಸ ಮಾಡುತ್ತಿದೆ. ಈ ಬಗ್ಗೆಯೂ ನೀವು ಹೋರಾಟ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ತೆರಿಗೆ ಎಷ್ಟು ವಸೂಲಿ ಮಾಡಲಾಗಿದೆ, ಗ್ಯಾರಂಟಿಗಳಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ, ಉಳಿದ ಹಣ ಎಲ್ಲಿ ಹೋಗುತ್ತಿದೆ ಎಂಬ ಬಗ್ಗೆ ಪ್ರಶ್ನೆ ಮಾಡಿ. ಜನರ ತೆರಿಗೆ ಹಣ ಯಾವುದಕ್ಕೆ ಬಳಕೆ ಆಗುತ್ತಿದೆ ಎಂಬ ಮಾಹಿತಿ ಜನರಿಗೂ ಗೊತ್ತಾಗಬೇಕಿದೆ. ಅಬಕಾರಿ ಸುಂಕವನ್ನು ನಾಲ್ಕು ಬಾರಿ ಏರಿಕೆ ಮಾಡಿದ್ದಾರೆ.ಈ ಬಗ್ಗೆ ಸರ್ಕಾರವನ್ನು ಪ್ರಶ್ನೆ ಮಾಡಬೇಕು ಎಂದು ಶಾಸಕರಿಗೆ ಸಲಹೆ ನೀಡಿದ್ದಾರೆ.