Nandini v/s Amul | ಬ್ರಾಂಡ್ ನುಂಗಲು ಬಂದವರ 'ಮನೆ'ಗೇ ಲಗ್ಗೆ ಇಟ್ಟ ʼನಂದಿನಿʼ
ರೈತರೇ ಕಟ್ಟಿ ಬೆಳೆಸಿದ ಕೆಎಂಎಫ್ ಒಕ್ಕೂಟವನ್ನು ಗುಜರಾತಿನ ಅಮುಲ್‌ನೊಂದಿಗೆ ವಿಲೀನ ಮಾಡಲಾಗುವುದು ಎಂದು ಎರಡು ವರ್ಷದ ಹಿಂದೆ ದಿಲ್ಲಿಯ ನಾಯಕರೊಬ್ಬರು ಹೇಳಿದ್ದರು. ಆದರೆ, ಕನ್ನಡಿಗರ ಹೆಮ್ಮೆಯ 'ನಂದಿನಿ' ಬ್ರಾಂಡ್, ಇದೀಗ ಅದೇ ದಿಲ್ಲಿಗೆ ಲಗ್ಗೆ ಇಟ್ಟಿದೆ.
ಗುರುವಾರ ಕರ್ನಾಟಕದ ಹೈನುಗಾರ ರೈತರ ಪಾಲಿಗೆ ಹೆಮ್ಮೆಯ ದಿನ. ರೈತರೇ ಕಟ್ಟಿ ಬೆಳೆಸಿದ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್)ವನ್ನು ಗುಜರಾತಿನ ಆನಂದ್ ಹಾಲು ಒಕ್ಕೂಟ(ಅಮುಲ್)ದೊಂದಿಗೆ ವಿಲೀನ ಮಾಡಲಾಗುವುದು ಎಂದು ಎರಡು ವರ್ಷದ ಹಿಂದೆ ದಿಲ್ಲಿಯ ನಾಯಕರೊಬ್ಬರು ಹೇಳಿದ್ದರು. ಆದರೆ, ಕನ್ನಡಿಗರ ಹೆಮ್ಮೆಯ 'ನಂದಿನಿ' ಬ್ರಾಂಡ್, ಇದೀಗ ಅದೇ ದಿಲ್ಲಿಗೆ ಲಗ್ಗೆ ಇಟ್ಟಿದೆ.
2022ರ ಡಿಸೆಂಬರ್ ಕೊನೆಯ ವಾರ ಮಂಡ್ಯ ಜಿಲ್ಲೆಯ ಮದ್ದೂರಿನ ಗೆಜ್ಜಲಗೆರೆಯಲ್ಲಿ ಮೆಗಾ ಡೈರಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ್ದ ಕೇಂದ್ರ ಸಹಕಾರ ಖಾತೆಯನ್ನೂ ಹೊಂದಿರುವ ಗೃಹ ಸಚಿವ ಅಮಿತ್ ಶಾ, “1975ರಿಂದಲೂ ಕೆಎಂಎಫ್ ಅಭಿವೃದ್ಧಿ ಹೊಂದುತ್ತಿದೆ. ಹಾಗೆಯೇ ಗುಜರಾತಿನ ಸಹಕಾರು ಹಾಲು ಒಕ್ಕೂಟದ ʼಅಮುಲ್ʼ ಕೂಡ ಪ್ರಗತಿಯ ಹಾದಿಯಲ್ಲಿದೆ. ಹಾಗಾಗಿ ʼಅಮುಲ್ʼ ಮತ್ತು ʼನಂದಿನಿʼ ಎರಡೂ ಒಂದಾದರೆ ದೇಶದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ” ಎಂದು ಹೇಳಿದ್ದರು.
ಆ ಮೂಲಕ ಸಹಕಾರ ವಲಯದ ಎಲ್ಲಾ ಸಂಘಟನೆಗಳನ್ನು ರಾಷ್ಟ್ರಮಟ್ಟದ ಒಂದು ಸಂಘಟನೆಯ ವ್ಯವಸ್ಥೆಯ ಅಡಿಗೆ ತರಬೇಕು ಎಂಬ ತಮ್ಮ ಆಗಿನ ನಿಲುವಿಗೆ ಪೂರಕವಾಗಿ ಕರ್ನಾಟಕದ ʼಕೆಎಂಎಫ್- ನಂದಿನಿʼಯನ್ನು ತಮ್ಮ ತವರು ರಾಜ್ಯ ಗುಜರಾತಿನ ʼಆನಂದ್ ಹಾಲು ಒಕ್ಕೂಟ- ಅಮುಲ್ʼನೊಂದಿಗೆ ವಿಲೀನಗೊಳಿಸುವ ಸೂಚನೆ ನೀಡಿದ್ದರು.
ಅಮಿತ್ ಶಾ ಅವರ ಆ ಹೇಳಿಕೆ ರಾಜ್ಯದ ಹಾಲು ಉತ್ಪಾದಕರು ಮತ್ತು ಒಕ್ಕೂಟದ ವಲಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೆ, ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಅದಾಗಿ ಆರು ತಿಂಗಳಲ್ಲೇ ಎದುರಾಗಿದ್ದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೂಡ ಕನ್ನಡಿಗರ ಹೆಮ್ಮೆಯ ಹೆಗ್ಗುರುತಾದ ʼನಂದಿನಿʼಯನ್ನು ಗುಜರಾತಿನ ಅಮುಲ್ ಕಂಪನಿಯಲ್ಲಿ ವಿಲೀನ ಮಾಡುವ ವಿಷಯ ಅಂದಿನ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತ ಪಕ್ಷ ಬಿಜೆಪಿ ನಡುವೆ ಪರ- ವಿರೋಧದ ವಾಗ್ವಾದಕ್ಕೆ ಈಡಾಗಿತ್ತು.
ಆಗಲೇ ಆಡಳಿತ ಮಂಡಳಿಯೊಳಗಿನ ಸಮಸ್ಯೆಗಳು ಮತ್ತು ಸರ್ಕಾರದ ಅತಿಯಾದ ಹಸ್ತಕ್ಷೇಪದಿಂದಾಗಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದ ʼಅಮುಲ್ʼನಲ್ಲಿ ಆಡಳಿತ ಮಂಡಳಿಯ ಕಾರ್ಯದಕ್ಷತೆ ಮತ್ತು ರೈತರ ಶ್ರಮದ ಮೂಲಕ ದೇಶದ ಅತ್ಯುತ್ತಮ ಗುಣಮಟ್ಟದ ಪರಿಶುದ್ಧ ಹಾಲಿನ ಉತ್ಪನ್ನಗಳಿಗಾಗಿ ಹೆಸರಾಗಿರುವ ʼನಂದಿನಿʼಯನ್ನು ವಿಲೀನ ಮಾಡುವ ಕೇಂದ್ರ ಬಿಜೆಪಿಯ ನಾಯಕರ ಪ್ರಯತ್ನಗಳ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಬೀದಿ ಹೋರಾಟದ ಮೂಲಕವೂ ಕನ್ನಡಿಗರು ಅಂತಹ ಪ್ರಯತ್ನವನ್ನು ಕೈಬಿಡುವಂತೆ ಆಗ್ರಹಿಸಿದ್ದರು. ಮಾತ್ರವಲ್ಲ; ಈ ವಿಷಯ ಕನ್ನಡಗಿರ ಮೇಲೆ ಉತ್ತರ ಭಾರತೀಯರ ದಬ್ಬಾಳಿಕೆ ಮತ್ತು ಅನ್ಯಾಯದ ಸರಣಿ ಪ್ರಯತ್ನಗಳ ಭಾಗವಾಗಿ ಸಾರ್ವಜನಿಕ ಅಭಿಪ್ರಾಯ ರೂಪುಗೊಂಡಿತ್ತು. ಕನ್ನಡಿಗರು ವರ್ಸಸ್ ಉತ್ತರ ಭಾರತೀಯರು, ದಕ್ಷಿಣ ರಾಜ್ಯಗಳು ವರ್ಸಸ್ ಉತ್ತರ ಭಾರತೀಯರು ಎಂಬ ವಾಗ್ವಾದದ ನೆಲೆಯಲ್ಲಿ ನಂದಿನಿ ವರ್ಸಸ್ ಅಮುಲ್ ವಿವಾದ ಭುಗಿಲೆದ್ದಿತ್ತು. #SaveNandini ಅಭಿಯಾನ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು.
ಆ ವೇಳೆ, ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಯಾಗಿ ಹೇಳಿಕೆ ನೀಡಿದ್ದ ಅಂದಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, “ನಮ್ಮ ಬ್ಯಾಂಕುಗಳನ್ನು ಕಸಿದು ಆರ್ಥಿಕತೆ ನಾಶಕ್ಕೆ ಯತ್ನಿಸಿದ ಬಿಜೆಪಿಯವರು ಈಗ ನಮ್ಮ ಹಾಲಿನ ಮೂಲಕ್ಕೆ ಕೈ ಹಾಕುತ್ತಿದ್ದಾರೆ. ಈ ದುಷ್ಟ ಭಸ್ಮಾಸುರನ ಕೈಗೆ ಈಗಲೇ ಬರೆ ಹಾಕದಿದ್ದರೆ 25 ಲಕ್ಷ ರೈತ ಕುಟುಂಬಗಳನ್ನು ಬೀದಿಪಾಲು ಮಾಡಿಬಿಡುತ್ತಾರೆ” ಎಂದಿದ್ದರು. ಅಲ್ಲದೆ, “ರಾಜ್ಯದ ಹಾಲು ಉತ್ಪಾದಕ ರೈತರು ಸುಮಾರು ₹20 ಸಾವಿರ ಕೋಟಿಯವರೆಗೆ ಹಾಲಿನ ವಹಿವಾಟು ಮಾಡುತ್ತಾರೆ. ಈ ಕುಟುಂಬಗಳ ಮನೆಯಲ್ಲಿ ದೀಪ ಬೆಳಗುವುದೇ ಹಾಲಿನಿಂದ. ಮಕ್ಕಳ ಶಿಕ್ಷಣ, ಆಸ್ಪತ್ತೆ ಕರ್ಚಿನಿಂದ ಹಿಡಿದು ಅಕ್ಕಿ, ಬೇಳೆ, ಬಟ್ಟೆ-ಬರೆ ಎಲ್ಲವೂ ಹಾಲಿನಿಂದಲೇ ಬರಬೇಕು. ಇಂಥ ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಈಗ ಗುಜರಾತ್ ಕಾರ್ಪೊರೇಟ್ ಕುಳಗಳ ಕಣ್ಣುಬಿದ್ದಿದೆ. ಅವರ ಕಣ್ಣು ಬಿದ್ದ ಕಡೆ ಎಲ್ಲವೂ ಸರ್ವನಾಶವಾಗುತ್ತದೆ” ಎಂದು ಕೂಡ ಹೇಳಿದ್ದರು.
ವ್ಯಾಪಕ ವಿರೋಧ ಮತ್ತು ಸಮೀಪದಲ್ಲೇ ಇದ್ದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಆ ನಡೆ ಬಲವಾದ ಪೆಟ್ಟು ನೀಡುವ ಸೂಚನೆ ಅರಿತ ಬಿಜೆಪಿ, ನಂದಿನಿಯನ್ನು ಅಮುಲ್ ನಲ್ಲಿ ವಿಲೀನಗೊಳಿಸುವ ಯೋಚನೆಯಿಂದ ಹಿಂದೆ ಸರಿದಿತ್ತು. ಸ್ವತಃ ಅಮಿತ್ ಶಾ ಅವರೇ ಚುನಾವಣಾ ಪ್ರಚಾರದ ವೇಳೆ ಕೂಡ ತಮ್ಮ ಮುಂದೆ ಅಂತಹ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಆ ಬಳಿಕ, 2023ರ ಮಾರ್ಚ್ ಹೊತ್ತಿಗೆ ಬೆಂಗಳೂರು ಮಾರುಕಟ್ಟೆಗೆ ತಾನು ಪ್ರವೇಶಿಸುತ್ತಿರುವುದಾಗಿ ಹೇಳಿ, ವ್ಯವಹಾರ ಪ್ರಾಂಚೈಸಿ ನೀಡಲು ಜಾಹೀರಾತು ನೀಡಿದ ʼಅಮುಲ್ʼ, ಮತ್ತೊಂದು ಸುತ್ತಿನ ವಾಗ್ವಾದಕ್ಕೆ ಚಾಲನೆ ನೀಡಿತ್ತು. ಅಮುಲ್ ಬೆಂಗಳೂರಿನಲ್ಲಿ ತನ್ನ ಅಧಿಕೃತ ಮಳಿಗೆಗಳನ್ನು ತೆರೆಯಲು ಮುಂದಾದ್ದಕ್ಕೂ, ಆ ಮೊದಲು ಕೇಂದ್ರ ಗೃಹ ಸಚಿವರು ವಿಲೀನದ ಹೇಳಿಕೆ ನೀಡಿದ್ದಕ್ಕೂ ಸಂಬಂಧವಿದೆ. ವಿಲೀನದ ಉದ್ದೇಶದ ಮುಂದುವರಿದ ಭಾಗವಾಗಿ ಅಮುಲ್ ಇದೀಗ ʼನಂದಿನಿʼಯ ಮಾರುಕಟ್ಟೆ ಕಬಳಿಕೆಗೆ ಮುಂದಾಗಿದೆ ಎಂಬ ಮಾತುಗಳು ಕೇಳಿಬಂದವು. ಆಗ ಮತ್ತೊಮ್ಮೆ ರಾಜಕೀಯ ಮತ್ತು ಸಹಕಾರ ವಲಯದಲ್ಲಿ ದೊಡ್ಡ ವಿವಾದ ಭುಗಿಲೆದ್ದಿತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ಪೂರ್ವ ತಯಾರಿ ಸಭೆಗೆ ಬಂದಾಗ ಬೆಂಗಳೂರಿನಲ್ಲಿ ನಂದಿನಿ ಮಿಲ್ಕ್ ಪಾರ್ಲರ್‌ಗೆ ಹೋಗಿ ಐಸ್‌ಕ್ರೀಂ ಸೇವಿಸಿ, ಕನ್ನಡಿಗರ ಹೆಮ್ಮೆಯಾದ ʼನಂದಿನಿʼಯನ್ನು ರೈತರ ಸೊತ್ತಾಗಿ ಉಳಿಸುವ ಮಾತನಾಡುವ ಮಟ್ಟಿಗೆ ಆ ವಿವಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವ ರಾಜಕೀಯ ವಾಗ್ವಾದವಾಗಿ ಹಬ್ಬಿತ್ತು.
ಇದೀಗ ಅದೇ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ರಾಷ್ಟ್ರರಾಜಧಾನಿ ನವದೆಹಲಿಗೆ ನಂದಿನಿಯ ಮಾರುಕಟ್ಟೆ ವಿಸ್ತರಣಾ ಯೋಜನೆಯ ಭಾಗವಾಗಿ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದ್ದಾರೆ. ದಿಲ್ಲಿ ನಾಯಕರ ಮನೆಗಳಿಗೂ ಈಗ ಅದೇ ʼನಂದಿನಿʼ ಲಗ್ಗೆ ಇಟ್ಟರೂ ಅಚ್ಚರಿ ಇಲ್ಲ!
ನಂದಿನಿ- ಅಮುಲ್ ವಿಲೀನ ವಿವಾದದ ಬಳಿಕ ಕರ್ನಾಟಕದ ಹೆಮ್ಮೆಯ ಬ್ರಾಂಡ್ ಆಗಿ ಜನರ ವಿಶ್ವಾಸ ಮತ್ತು ನಂಬಿಕೆಯನ್ನು ಹೆಚ್ಚಿಕೊಳ್ಳುತ್ತಲೇ ಇರುವ ʼನಂದಿನಿʼ, ಕಳೆದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡಿ, ಇಡೀ ಜಗತ್ತಿನ ಗಮನ ಸೆಳೆಯಿತು. ಈ ನಡುವೆ, ತಿರುಪತಿ ಲಡ್ಡು ವಿವಾದದ ಬಳಿಕ ದೇವಸ್ಥಾನದ ಟ್ರಸ್ಟ್ ಅನಿವಾರ್ಯವಾಗಿ ಮತ್ತೆ ʼನಂದಿನಿʼ ತುಪ್ಪಕ್ಕೇ ಬೇಡಿಕೆ ಸಲ್ಲಿಸಿ, ತುಪ್ಪ ಸರಬರಾಜಿಗೆ ಒಪ್ಪಂದ ಮಾಡಿಕೊಂಡಿದೆ. ಹಾಗೇ ಕಳೆದ ಎರಡು ವರ್ಷಗಳಲ್ಲಿ ʼನಂದಿನಿʼಯ ಬ್ರಾಂಡ್ ಮೌಲ್ಯ ದೇಶಾದ್ಯಂತ ಮೆಚ್ಚುಗೆ ಗಳಿಸುತ್ತಿದೆ.ʼನಂದಿನಿʼ ದೆಹಲಿ ದಿಗ್ವಿಜಯದ ಕುರಿತು ಮಾತನಾಡಿದ ಕೆಎಂಎಫ್ ಅಧ್ಯಕ್ಷ ಭೀನಾ ನಾಯಕ್, ನಿತ್ಯ 3-4 ಲಕ್ಷ ಲೀಟರ್ ಹಾಲು ಸರಬರಾಜು ಮಾಡಲು ನಂದಿನಿ ಗುರಿ ಹೊಂದಿದ್ದು, ರಾಷ್ಟ್ರ ರಾಜಧಾನಿಯ ಜನ ಇನ್ನು ಶುದ್ಧ ಹಸುವಿನ ಹಾಲನ್ನು ಸವಿಯಬಹುದು. ದೆಹಲಿಯಲ್ಲಿ ನಂದಿನಿಯ ಈ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ಕೊಡಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಈಗಾಗಲೇ ದೆಹಲಿಯಲ್ಲಿ ನೆಲೆ ಕಂಡುಕೊಂಡಿರುವ ʼಆನಂದ್ʼ, ʼಮದರ್ʼ ಮತ್ತಿತರ ಬ್ರಾಂಡ್‌ಗಲ ಜೊತೆ ಇದೀಗ ʼನಂದಿನಿʼ, ಬ್ರಾಂಡ್ ಸಮರಕ್ಕೆ ಇಳಿದಿದೆ. ತನ್ನನ್ನೇ ನುಂಗಿ ಹಾಕಲು ಹೊಂಚಿದ್ದ ಗುಜರಾತಿ ಬ್ರಾಂಡ್‌ನ ಮಾರುಕಟ್ಟೆಗೇ ಈಗ ʼನಂದಿನಿʼ ಲಗ್ಗೆ ಇಟ್ಟಿದೆ!