BMTC Service | ಚಾಲಕರಿಗೆ ರಿಲೀಫ್: ಬಿಎಂಟಿಸಿ ಬಸ್ ಚಾಲನಾ ಅವಧಿ ಹೆಚ್ಚಳ
ಹೆಚ್ಚುತ್ತಿರುವ ರೋಡ್ ರೇಜ್ ಘಟನೆಗಳು ಮತ್ತು ಬಸ್ ಚಾಲಕರು ಹಾಗೂ ಕಂಡೆಕ್ಟರ್‌ಗಳ ಮೇಲಿನ ಹಲ್ಲೆಗಳಿಂದಾಗಿ ಚಾಲಕರಿಗೆ ನಿಗದಿಪಡಿಸಿರುವ ಸಮಯ ಮಿತಿಯನ್ನು ಬಿಎಂಟಿಸಿ ಹೆಚ್ಚಿಸಿದೆ.;
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ತನ್ನ ಕಾರ್ಯಾಚರಣೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಹೆಚ್ಚುತ್ತಿರುವ ರೋಡ್ ರೇಜ್ ಘಟನೆಗಳು ಮತ್ತು ಬಸ್ ಚಾಲಕರು ಹಾಗೂ ಕಂಡಕ್ಟರ್ ಮೇಲಿನ ಮೇಲೆ ನಡೆಯುತ್ತಿರುವ ಹಲ್ಲೆಗಳಿಂದಾಗಿ ಚಾಲಕರಿಗೆ ನಿಗದಿಪಡಿಸಲಾದ ಸಮಯ ಮಿತಿಯನ್ನು ಹೆಚ್ಚಿಸಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಬಿಎಂಟಿಸಿ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಸಲಾಗಿದೆ. ಚಾಲಕರಿಗೆ ಕಾಲಮಿತಿ ನೀಡಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಇದೀಗ ಬಿಎಂಟಿಸಿ ಅಧಿಕಾರಿಗಳು ಪ್ರತಿ ಮಾರ್ಗದಲ್ಲೂ ಬಸ್ ಓಡಾಟದ ಸಮಯವನ್ನು ಹೆಚ್ಚಿಸುವ ಮೂಲಕ ಚಾಲಕರ ಆತಂಕ ಕಡಿಮೆ ಮಾಡುವ ಯತ್ನ ಮಾಡಿದ್ದಾರೆ.
ಬಿಎಂಟಿಸಿ ಬಸ್‌ಗಳ ಓಡಾಟದ ಸಮಯವನ್ನು ಹೆಚ್ಚಿಸಿರುವುದರಿಂದ ಚಾಲಕರು ಕಡಿಮೆ ಸಮಯದಲ್ಲಿ ನಿಗದಿತ ನಿಲ್ದಾಣ ತಲುಪಬೇಕಾದ ಒತ್ತಡದಿಂದ ಮುಕ್ತಿ ಪಡೆಯಲಿದ್ದಾರೆ. ಬಿಎಂಟಿಸಿ ಬಸ್‌ಗಳು ಕಾರ್ಯನಿರ್ವಹಿಸುವ ಎಲ್ಲಾ 1800 ಮಾರ್ಗಗಳಲ್ಲಿ ಸಮಯದ ಮಿತಿಯನ್ನು ಕಡಿಮೆ ಮಾಡಲಾಗಿದೆ.
ಈ ಹಿಂದೆ ಮೆಜೆಸ್ಟಿಕ್ ನಿಲ್ದಾಣದಿಂದ ಉತ್ತರಹಳ್ಳಿಗೆ ಪ್ರಯಾಣಿಸಲು 55 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಈಗ ಈ ಸಮಯವನ್ನು 1 ಗಂಟೆ 15 ನಿಮಿಷಕ್ಕೆ ಹೆಚ್ಚಿಸಲಾಗಿದೆ. ಈ ಮಾರ್ಗದಲ್ಲಿ ಇನ್ನೂ 20 ನಿಮಿಷ ಕಾಲಾವಕಾಶ ನೀಡಲಾಗಿದೆ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ.
ಪ್ರತಿ ಮಾರ್ಗದಲ್ಲಿ 15 ರಿಂದ 20 ನಿಮಿಷಗಳ ಹೆಚ್ಚಿನ ಸಮಯವನ್ನು ನೀಡಲಾಗುತ್ತದೆ. ಇದರಿಂದ ನಗರದಲ್ಲಿ ಚಾಲಕರು ಮತ್ತು ನಿರ್ವಾಹಕರ ಮೇಲಿನ ಹಲ್ಲೆ ಮತ್ತು ಅಪಘಾತಗಳ ಸಂಖ್ಯೆ ಕಡಿಮೆಯಾಗಲಿದೆ. ಈ ಹಿಂದೆ ಸಂಭವಿಸಿದ ಅನೇಕ ಹಲ್ಲೆ ಮತ್ತು ಅಪಘಾತಗಳಲ್ಲಿ, ಬಿಎಂಟಿಸಿ ಚಾಲಕರು ಸಮಯವನ್ನು ಸರಿದೂಗಿಸಲು ಬಸ್‌ಗಳನ್ನು ವೇಗವಾಗಿ ಓಡಿಸುತ್ತಿದ್ದುದೂ ಒಂದು ಕಾರಣವಾಗಿತ್ತು. ಅದರಿಂದಾಗಿ ಅಪಘಾತಗಳ ಪ್ರಮಾಣ ಕೂಡ ಹಚ್ಚಿತ್ತು.
ಬಿಎಂಟಿಸಿ ಚಾಲಕರಿಗೆ ದಿನಕ್ಕೆ 8 ಗಂಟೆಯ ಪಾಳಿ ಇರುತ್ತದೆ. ಅದರಲ್ಲಿ ಇಷ್ಟು ಟ್ರಿಪ್‌ಗಳನ್ನು ಮಾಡಬೇಕು ಎಂದಿರುತ್ತದೆ. ಆದರೆ, ನಿಗದಿಪಡಿಸಿದ ಟ್ರಿಪ್ ಮಾಡಲಾಗದೇ ಇದ್ದಾಗ ಚಾಲಕರು ಒತ್ತಡಕ್ಕೆ ಸಿಲುಕುತ್ತಾರೆ. ಮಧ್ಯದಲ್ಲಿ ಟ್ರಿಪ್‌ಗಳನ್ನು ಕಡಿತಗೊಳಿಸುತ್ತಾರೆ. ಅನಧಿಕೃತವಾಗಿ ಕಡಿತಗೊಳಿಸಿದಾಗ, ಪ್ರಯಾಣಿಕರಿಗೂ ತೊಂದರೆಯಾಗುತ್ತದೆ. ಕೆಲವು ಬಾರಿ ಬಸ್ ನಿಲ್ದಾಣಕ್ಕೆ ಬಂದು ಸಮಯ ಹೊಂದಾಣಿಕೆಗಾಗಿ ತಕ್ಷಣ ಹೊರಡಬೇಕಾಗುತ್ತದೆ. ಒಂದು ಬಸ್ ಮೆಜೆಸ್ಟಿಕ್‌ನಿಂದ ಜಯನಗರಕ್ಕೆ ಒಂದು ಪಾಳಿಯಲ್ಲಿ 8 ಟ್ರಿಪ್ ಮಾಡುತ್ತಿದ್ದರೆ, ಇನ್ನು ಮುಂದೆ ಸರಾಸರಿ 6 ಟ್ರಿಪ್ ಇರಲಿದೆ. ಇದು ಚಾಲಕರ ಮತ್ತು ನಿರ್ವಾಹಕರ ಒತ್ತಡ ಕಡಿಮೆಗೊಳಿಸಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.