ಡಿಕೆಶಿ ತಿರುಗೇಟಿಗೆ ಥಂಡಾ ಹೊಡೆದ ಬ್ಲ್ಯಾಕ್‌ಬಕ್ ಕಂಪನಿ; ಬೆಂಗಳೂರು ಬಿಡಲ್ಲ ಎಂದು ಸ್ಪಷ್ಟನೆ
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಅವರು,ನಮ್ಮ ಸಂಸ್ಥೆ ಬೆಂಗಳೂರಿನಿಂದ ಸ್ಥಳಾಂತರಗೊಳ್ಳುತ್ತಿಲ್ಲ. ಬದಲಿಗೆ ಉದ್ಯೋಗಿಗಳ ಪ್ರಯಾಣವನ್ನು ಕಡಿಮೆ ಮಾಡಲು ನಗರದೊಳಗಿನ ಕಚೇರಿಗಳನ್ನು ಸ್ಥಳಾಂತರಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ʼಬೆಂಗಳೂರು ಬಿಡುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡುವವರನ್ನು ನಾವು ತಡೆಯಲ್ಲʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ ಬೆನ್ನಲ್ಲೇ ಬ್ಲ್ಯಾಕ್‌ಬಕ್ ಕಂಪನಿ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದೆ.
ಬೆಂಗಳೂರು ತೊರೆಯುವ ಕುರಿತ ಊಹಾಪೋಹಗಳು ನಿರಾಧಾರ. ಬೆಂಗಳೂರು ಮೂಲದ ನಮ್ಮ ಸಂಸ್ಥೆಯು ಬೆಂಗಳೂರಿನಿಂದ ಬೇರೆಡೆ ಸ್ಥಳಾಂತರವಾಗುವುದಿಲ್ಲ. ಬದಲಿಗೆ ಉದ್ಯೋಗಿಗಳ ಪ್ರಯಾಣ ಕಡಿಮೆ ಮಾಡಲು ನಗರದೊಳಗಿನ ಹೊಸ ಕಚೇರಿಗೆ ಸ್ಥಳಾಂತರಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ನಾವು ಬೆಂಗಳೂರು ತೊರೆಯುವುದಿಲ್ಲ ಎಂದು ಬ್ಲ್ಯಾಕ್‌ಬಕ್ ಸಿಇಒ ಹಾಗೂ ಸಹ ಸಂಸ್ಥಾಪಕ ರಾಜೇಶ್ ಯಬಾಜಿ ತಮ್ಮ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮೂಲಸೌಕರ್ಯ ಹದಗೆಡುತ್ತಿದೆ. ಬೆಂಗಳೂರಿನ ಹೊರವರ್ತುಲ ರಸ್ತೆಯ ಬೆಳ್ಳಂದೂರಿನಲ್ಲಿ ನಮ್ಮ ಕಚೇರಿಯಿದೆ. ಗುಂಡಿ ಬಿದ್ದ ರಸ್ತೆಗಳು, ವಿಪರೀತ ದೂಳಿನಿಂದಾಗಿ ಕಚೇರಿಗೆ ಬರಲು ಸಹೋದ್ಯೋಗಿಗಳು ನಿತ್ಯ ಒಂದೂವರೆ ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕಂಪನಿಯನ್ನು ಇಲ್ಲಿಂದ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಐಟಿ ದಿಗ್ಗಜರು ಕಳವಳ ವ್ಯಕ್ತಪಡಿಸಿ, ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಸರಿಪಡಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು.
ಈ ಮಧ್ಯೆ, ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಕೂಡ ಬ್ಲ್ಯಾಕ್ ಬಕ್ ಸಂಸ್ಥೆಗೆ ಮುಕ್ತ ಆಹ್ವಾನ ನೀಡಿದ್ದರು. ಐಟಿ ದಿಗ್ಗಜರಾದ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಶಾ ಸೇರಿ ಹಲವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಸರ್ಕಾರದ ಉದ್ಯಮ ಸ್ನೇಹಿ ನೀತಿಗೆ ಬಣ್ಣನೆ
ಬ್ಲ್ಯಾಕ್‌ಬಕ್ 2015 ರಲ್ಲಿ ಕೋರಮಂಗಲದಲ್ಲಿ ಸಣ್ಣ ಕಚೇರಿಯಲ್ಲಿ ತನ್ನ ಪ್ರಯಾಣ ಆರಂಭಿಸಿತ್ತು. ಹೊರ ವರ್ತುಲ ರಸ್ತೆ (ORR) ಕಾರಿಡಾರ್ ಮತ್ತು ಕರ್ನಾಟಕದ ತಂತ್ರಜ್ಞಾನ, ಪರಿಸರ ವ್ಯವಸ್ಥೆಯು ತಮ್ಮ ಕಂಪನಿಯ ಬೆಳವಣಿಗೆಗೆ ಪೂರಕವಾಗಿದೆ. ತಮ್ಮ ಕಾರ್ಯಾಚರಣೆಗಳ ಕೆಲವು ಭಾಗಗಳು ಒಆರ್‌ಆರ್ ನಲ್ಲಿ ಮುಂದುವರಿಯುತ್ತವೆ. ಬೆಂಗಳೂರಿನಲ್ಲಿ ಸಂಸ್ಥೆಯ ಹೆಚ್ಚು ಶಾಖೆಗಳನ್ನು ತೆರೆಯಲು ಕಂಪನಿ ಬದ್ಧವಾಗಿದೆ. ಸರ್ಕಾರದೊಂದಿಗೆ ಕೆಲಸ ಮಾಡಲು ಆಸಕ್ತಿ ಹೊಂದಿದೆ ಎಂದು ರಾಜೇಶ್ ಯಬಾಜಿ ತಮ್ಮ ಎಕ್ಸ್ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ.
'ಬೆಂಗಳೂರಿನಲ್ಲಿ ನಾವು ಮುಂದುವರಿಯುವುದಷ್ಟೇ ಅಲ್ಲ, ನಮ್ಮ ಸಾಮರ್ಥ್ಯವನ್ನು ವಿಸ್ತರಿಸಲಿದ್ದೇವೆ. ಬೆಂಗಳೂರು ಎಂದಿಗೂ ನಮ್ಮ ನೆಲೆ. ನಮ್ಮ ಅಗತ್ಯ ಮತ್ತು ಸಮಸ್ಯೆಗಳನ್ನು ಸರ್ಕಾರ ಹಾಗೂ ಅಧಿಕಾರಿಗಳಿಗೆ ತಿಳಿಸಿ, ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತೇವೆʼ ಎಂದಿದ್ದಾರೆ.
ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ಬ್ಲ್ಯಾಕ್‌ಬಕ್ ಸಂಸ್ಥೆಯು ಬೆಂಗಳೂರು ತೊರೆಯುವುದಾಗಿ ಎಕ್ಸ್ ಖಾತೆಯಲ್ಲಿ ಮಾಡಿದ್ದ ಪೋಸ್ಟ್‌ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು.
ಸರ್ಕಾರಕ್ಕೆ ಯಾರೂ ಬೆದರಿಕೆ ಅಥವಾ ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ. ಹೋಗುವವರನ್ನು ನಾವು ತಡೆಯುವುದಿಲ್ಲ. ಹೋಗುವವರಿಗೆ ಶುಭವಾಗಲಿ. ಅವರು ನಮ್ಮ ಮಾನವಶಕ್ತಿ, ಪ್ರತಿಭೆ ಅಥವಾ ಸೌಲಭ್ಯಗಳಿಂದ ತೃಪ್ತರಾಗದಿದ್ದರೆ ನಾನು ಅವರನ್ನು ತಡೆಯಲ್ಲ. ಆದರೆ, ಸರ್ಕಾರವನ್ನು ಯಾರೂ ಬೆದರಿಸುವ ಪ್ರಯತ್ನ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರಿನಲ್ಲಿ ವ್ಯಾಪಾರಕ್ಕೆ ಸಾಟಿಯಿಲ್ಲ
ಬೆಂಗಳೂರಿನ ವ್ಯಾಪಾರ ಕೇಂದ್ರಕ್ಕೆ ಸಾಟಿಯಾಗುವ ನಗರಗಳಿಲ್ಲ. ಮೂಲಸೌಕರ್ಯ ಕಾರಣಕ್ಕಾಗಿ ಯಾರೂ ಕೂಡ ಬೆಂಗಳೂರಿನಿಂದ ಹೊರ ಹೋಗುವುದಿಲ್ಲ. ಒಂದು ವೇಳೆ ಹೋಗಲು ಬಯಸಿದರೆ ಅದು ವ್ಯಾಪಾರ ಅಥವಾ ಆರ್ಥಿಕ ಸಮಸ್ಯೆಗಳಿಂದಾಗಿರುತ್ತದೆಯೇ ಹೊರತು ಬೇರೆ ಕಾರಣಗಳಿಂದಲ್ಲ. ಈ ವಿಚಾರದಲ್ಲಿ ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡಬಾರದು. ಹೋಗುವವರು ಎಲ್ಲಿ ಬೇಕಾದರೂ ಹೋಗಲಿ, ಯಾವುದೇ ನಗರವು ಬೆಂಗಳೂರಿಗೆ ಸಾಟಿಯಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದ ಆಡಳಿತದಲ್ಲಿ ಇತ್ತೀಚೆಗೆ ಹಲವಾರು ಬದಲಾವಣೆ ಮಾಡಲಾಗಿದೆ. ಜನಸಂಖ್ಯೆ ಒತ್ತಡ ನಿಭಾಯಿಸಲು ನಗರವನ್ನು ಐದು ಪಾಲಿಕೆಗಳು ಮತ್ತು 198 ವಾರ್ಡ್‌ಗಳಾಗಿ ವಿಭಜಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆ ಸೇರಿ ಹಲವು ಸುಧಾರಣೆ ತರಲಾಗಿದೆ ಎಂದು ಹೇಳಿದ್ದಾರೆ.
ರಾಜೇಶ್ ಯಬಾಜಿ ಪೋಸ್ಟ್‌ನಲ್ಲಿ ಏನಿತ್ತು?
ಬ್ಲ್ಯಾಕ್‌ಬಕ್ ಕಂಪನಿಯು ಬೆಂಗಳೂರಿನಿಂದ ತನ್ನ ಕಚೇರಿಯನ್ನು ಸ್ಥಳಾಂತರಿಸಲು ನಿರ್ಧರಿಸಿದೆ. ಇದಕ್ಕೆ ಮುಖ್ಯ ಕಾರಣ ನಗರದಲ್ಲಿ ಹೆಚ್ಚುತ್ತಿರುವ ಪ್ರಯಾಣದ ತೊಂದರೆ ಮತ್ತು ಕಳಪೆ ರಸ್ತೆ. ಕಳೆದ 9 ವರ್ಷಗಳಿಂದ ಬೆಂಗಳೂರಿನ ಹೊರ ವರ್ತುಲ ರಸ್ತೆಯ ಬೆಳ್ಳಂದೂರಿನಲ್ಲಿ ಕಂಪನಿಯು ಕಚೇರಿ ಹೊಂದಿದೆ. ಆದರೆ, ಈಗ ಇಲ್ಲಿ ಮುಂದುವರಿಯುವುದು ಕಷ್ಟ ಎಂದು ಯಬಾಜಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಕಂಪನಿಯ ಉದ್ಯೋಗಿಗಳ ದೈನಂದಿನ ಪ್ರಯಾಣದ ಸಮಯ ಸರಾಸರಿ 1.5 ಗಂಟೆಗಳಿಗಿಂತಲೂ ಹೆಚ್ಚಾಗಿದೆ. ರಸ್ತೆಗಳು ಹೊಂಡ ಮತ್ತು ದೂಳಿನಿಂದ ತುಂಬಿವೆ. ಈ ಸಮಸ್ಯೆ ನಿಭಾಯಿಸಲು ಸ್ಥಳೀಯ ಆಡಳಿತದಿಂದ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಯಬಾಜಿ ಆಕ್ರೋಶ ವ್ಯಕ್ತಪಡಿಸಿದ್ದರು.