BJP President Election | ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಪೈಫೋಟಿ ಜೋರು; ಆಕಾಂಕ್ಷಿ ಕುಮಾರ್‌ ಬಂಗಾರಪ್ಪ ಹೇಳಿದ್ದೇನು?

ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪಟ್ಟು ಹಿಡಿದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಣದ ನಾಯಕರು ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಬಿಂಬಿಸಿಕೊಂಡಿದ್ದಾರೆ;

Update: 2025-02-09 02:30 GMT
ಕುಮಾರ್‌ ಬಂಗಾರಪ್ಪ

ಬಿಜೆಪಿ ಆಂತರಿಕ ಚುನಾವಣೆ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ.

ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪಟ್ಟು ಹಿಡಿದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಣದ ನಾಯಕರು ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಬಿಂಬಿಸಿಕೊಂಡಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ ಅವರು ಸ್ವತಃ ತಾವು ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಯತ್ನಾಳ ಬಣದ ನಾಯಕರಾದ ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ ಅವರು ಕೂಡ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವುದರಿಂದ ತೀವ್ರ ಪೈಪೋಟಿ ಎದುರಾಗಿದೆ. 

ಈ ಕುರಿತು ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ಯತ್ನಾಳ ಬಣದ ನಾಯಕ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು, “ಬಿಜೆಪಿ ವರಿಷ್ಠರು ಅಧ್ಯಕ್ಷ ಸ್ಥಾನವನ್ನು ಯಾವ ಸಮುದಾಯಕ್ಕೆ ನೀಡಲಿದ್ದಾರೆ ಎಂಬುದರ ಆಧಾರದ ಮೇಲೆ ನಮ್ಮ ಸ್ಪರ್ಧೆ ನಿರ್ಧಾರವಾಗಲಿದೆ. ಹಿಂದುಳಿದ ವರ್ಗಗಳಿಗೆ ಅಧ್ಯಕ್ಷ ಸ್ಥಾನ ನೀಡುವುದಾದರೆ ನಾನು ಆಕಾಂಕ್ಷಿಯಾಗಿದ್ದೇನೆ” ಎಂದು ತಿಳಿಸಿದರು.

“ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಲಿಂಗಾಯತ ಸಮುದಾಯದಿಂದ ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ ಅವರು ಕೂಡ ಆಕಾಂಕ್ಷಿಗಳು. ಪರಿಶಿಷ್ಟ ಜಾತಿ ಹಾಗೂ ಪಂಗಡದಿಂದ ಮಾಜಿ ಸಚಿವ ಶ್ರೀರಾಮುಲು ಹಾಗೂ ಮುಖಂಡ ಅರವಿಂದ ಲಿಂಬಾವಳಿ ಸಹ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಯಾವ ಸಮುದಾಯಕ್ಕೆ ನೀಡಬೇಕು. ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ” ಎಂದು ತಿಳಿಸಿದರು.

ಈ ಮಧ್ಯೆ, ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಬಿ.ವೈ. ವಿಜಯೇಂದ್ರ ಅವರು ಕಸರತ್ತು ಆರಂಭಿಸಿದ್ದಾರೆ. ಈಗಾಗಲೇ ಭಿನ್ನರ ವಿರುದ್ಧ ದೂರು ನೀಡುವ ಸಲುವಾಗಿ ಎರಡು ಮೂರು ಬಾರಿ ದೆಹಲಿಗೆ ಭೇಟಿ ನೀಡಿ ವರಿಷ್ಠರೊಂದಿಗೆ ಚರ್ಚೆ ನಡೆಸಿದ್ದರು. ಆದರೆ, ವಿಜಯೇಂದ್ರ ವಿರುದ್ಧ ಪಕ್ಷದ ನಾಯಕರಲ್ಲಿ ಅಸಮಾಧಾನ ಹೆಚ್ಚುತ್ತಿರುವುದನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ.

ಒಕ್ಕಲಿಗ ಸಮುದಾಯವೂ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದೆ. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಹಾಗೂ ಮಾಜಿ ಸಚಿವ ಅಶ್ವತ್ಥ ನಾರಾಯಣ ಅವರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಬಿಜೆಪಿ ವರಿಷ್ಠರನ್ನು ಸಮುದಾಯದ ಶಾಸಕರು ಒತ್ತಾಯಿಸಿದ್ದಾರೆ.  

ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಎರಡು ದಿನಗಳ ಹಿಂದಷ್ಟೇ “ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಆದರೆ ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ. ನನಗೆ ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಸಾಮರ್ಥ್ಯವಿದೆ“ಎಂದು ಹೇಳುವ ಮೂಲಕ ಆಕಾಂಕ್ಷಿ ಎಂದು ಬಿಂಬಿಸಿಕೊಂಡಿದ್ದರು.

ಬಿಜೆಪಿಯಲ್ಲಿ ಹಿರಿಯ ನಾಯಕರಾದ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ವಿ ಸೋಮಣ್ಣ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದು, ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ.

ವಾರದಲ್ಲಿ ತೀರ್ಮಾನ ಸಾಧ್ಯತೆ

ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಅಧ್ಯಕ್ಷ ಚುನಾವಣೆ ಕುರಿತು ವರಿಷ್ಠರು ತಲೆ ಕೆಡಿಸಿಕೊಂಡಿರಲಿಲ್ಲ. ಈಗ ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದ್ದು, ವಾರದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಿದೆ. ಇಲ್ಲವೇ ಆಂತರಿಕ ಚುನಾವಣೆಯ ರಾಜ್ಯ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ರಾಜ್ಯಕ್ಕೆ ಕಳುಹಿಸಿ ನೂತನ ಅಧ್ಯಕ್ಷರನ್ನು ಘೋಷಣೆ ಮಾಡಿಸಲಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೂಡ ಅಧ್ಯಕ್ಷ ಚುನಾವಣಾ ಪ್ರಕ್ರಿಯೆ ಫೆ. 20 ರೊಳಗೆ ಮುಗಿಯಲಿದೆ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.

Tags:    

Similar News