BJP Infighting | ಯತ್ನಾಳ್ ವಿರುದ್ಧ ಶಕ್ತಿ ಪ್ರದರ್ಶನ: ದಾವಣಗೆರೆಯಲ್ಲಿ ವಿಜಯೇಂದ್ರ ಸಮಾವೇಶ
ದಾವಣಗೆರೆಯಲ್ಲಿ ಶೀಘ್ರವೇ ಸಮಾವೇಶ ಆಯೋಜಿಸುವುದರೊಂದಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಣದ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕೇಂದ್ರದ ಬಿಜೆಪಿ ನಾಯಕರನ್ನು ಒತ್ತಾಯಿಸಲು ಬಿ.ವೈ.ವಿಜಯೇಂದ್ರ ಬಣದ ನಾಯಕರು ತೀರ್ಮಾನಿಸಿದ್ದಾರೆ.;
ಉಪ ಚುನಾವಣೆಯ ಬೆನ್ನಲ್ಲೇ ಬಿಜೆಪಿಯ ಆಂತರಿಕ ಸಂಘರ್ಷ, ಬಣ ರಾಜಕಾರಣ ಭುಗಿಲೆದ್ದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನಡುವಿನ ಶೀತಲ ಸಮರ ಹೊಸ ತಿರುವು ಪಡೆದುಕೊಂಡಿದೆ. ವಕ್ಫ್ ವಿವಾದ ವಿರುದ್ಧ ರಾಜ್ಯಾಧ್ಯಕ್ಷರನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ತಮ್ಮದೇ ನೇತೃತ್ವದಲ್ಲಿ ಪ್ರತ್ಯೇಕ ಹೋರಾಟ ಆರಂಭಿಸುವ ಮೂಲಕ ಯತ್ನಾಳ್ ಅವರು ಬಿ.ವೈ.ವಿಜಯೇಂದ್ರ ಹಾಗೂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಸಿಡಿದೆದ್ದಿದ್ದಾರೆ.
ಅಲ್ಲದೆ, ಕೆಲವೇ ದಿನಗಳಲ್ಲಿ ಪಕ್ಷದ ನಾಯಕತ್ವ ಬದಲಾಗಲಿದೆ. ಮುಂದೆ ಚುನಾವಣಾ ಟಿಕೆಟ್ ಹಂಚಿಕೆ ಅಧಿಕಾರ, ಮತ್ತು ಮುಂದಿನ ಮುಖ್ಯಮಂತ್ರಿಯಾಗುವ ಅವಕಾಶ ಕೂಡ ತಮಗೇ ಸಿಗಲಿದೆ ಎಂದೂ ಯತ್ನಾಳ್ ಬಣ ಬಹಿರಂಗ ಹೇಳಿಕೆ ನೀಡುವ ಮೂಲಕ ವಿಜಯೇಂದ್ರ ಅವರಿಗೆ ಸಾರ್ವಜನಿಕವಾಗಿಯೇ ಮುಖಭಂಗದ ಪರಿಸ್ಥಿತಿ ತಂದಿಟ್ಟಿದೆ. ಆ ಹಿನ್ನೆಲೆಯಲ್ಲಿ ಯತ್ನಾಳ್ ಮತ್ತು ಅವರ ಬಣದ ತಂತ್ರಗಾರಿಕೆಗೆ ತಿರುಗೇಟು ನೀಡಲು ವಿಜಯೇಂದ್ರ ನಿಷ್ಠರ ಬಣ ಹೊಸ ಕಾರ್ಯತಂತ್ರದ ಮೊರೆಹೋಗಿದೆ.
ದಾವಣಗೆರೆಯಲ್ಲಿ ಶೀಘ್ರವೇ ಬೃಹತ್ ಸಮಾವೇಶ ನಡೆಸುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಣದ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕೇಂದ್ರದ ಬಿಜೆಪಿ ನಾಯಕರನ್ನು ಒತ್ತಾಯಿಸಲು ವಿಜಯೇಂದ್ರ ನಿಷ್ಠ ಬಿಜೆಪಿ ಶಾಸಕರು ಮತ್ತು ಮುಖಂಡರು ತೀರ್ಮಾನಿಸಿದ್ದಾರೆ.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಬುಧವಾರ ನಡೆದ ಸಭೆಯಲ್ಲಿ ಬಿ.ವೈ.ವಿಜಯೇಂದ್ರದ ಪರವಿರುವ ಮುಖಂಡರು ಈ ತೀರ್ಮಾನ ಕೈಗೊಂಡಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಿಎಂ ಸಿದ್ದರಾಮಯ್ಯ ಅಡಿಯಾಳಾಗಿ, ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮನಬಂದಂತೆ ಹೇಳಿಕೆ ನೀಡುವುದನ್ನು ಸಹಿಸಲ್ಲ ಎಂದು ವಿಜಯೇಂದ್ರ ನಿಷ್ಠರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆಯ ಬಳಿಕ ಮಾಧ್ಯಮವರೊಂದಿಗೆ ಮಾತನಾಡಿದ ಮಾಜಿ ಶಾಸಕ ಹಾಗೂ ವಿಜಯೇಂದ್ರ ಆಪ್ತ ಎಂ.ಪಿ. ರೇಣುಕಾಚಾರ್ಯ, ದಾವಣಗೆರೆಯಲ್ಲಿ ನಡೆಸಲು ಉದ್ದೇಶಿಸಿರುವ ಸಮಾವೇಶ ಯಾವುದೇ ವ್ಯಕ್ತಿ ಅಥವಾ ಬಣದ ಪರವಲ್ಲ. ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಿ ಪಕ್ಷ ಸಂಘಟನೆಗೆ ಹೊಸ ಹುರುಪು ತುಂಬುವುದಾಗಿದೆ ಎಂದು ಹೇಳಿದ್ದಾರೆ.
ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ರಮೇಶ ಜಾರಕಿಹೊಳಿ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ ಅವರು ಪಕ್ಷದ ರಾಜ್ಯಾಧ್ಯಕ್ಷರ ಅನುಮತಿ ಪಡೆಯದೇ ವಕ್ಫ್ ವಿರುದ್ಧ ಹೋರಾಟದ ಜನಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ಇದು ಸರಿಯಲ್ಲ. ಯತ್ನಾಳರ ಈ ನಡೆಯಿಂದ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಕೇಂದ್ರ ನಾಯಕರು ಕೂಡಲೇ ಮಧ್ಯಪ್ರವೇಶಿಸಿ ಅಭಿಯಾನಕ್ಕೆ ತಡೆ ನೀಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.