BJP Infighting | ಒಗ್ಗೂಡಿಸುವ ಬದಲು ಒಡೆದು ಮೂರು ಬಾಗಿಲು ಮಾಡಿದ ವಕ್ಫ್‌ ವಿವಾದ

ರಾಜ್ಯ ಬಿಜೆಪಿಯ ಸದ್ಯದ ಬಿರುಸಿನ ಚಟುವಟಿಕೆಗಳು ಅಧಿವೇಶನದಲ್ಲಿ ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷವನ್ನು ಒಗ್ಗಟ್ಟಿನ ಹೋರಾಟಕ್ಕೆ ಇಳಿಸುವ ಬದಲು, ಪ್ರತಿಪಕ್ಷವನ್ನೇ ಒಡೆದು ʼಮನೆಯೊಂದು ಮೂರು ಬಾಗಿಲುʼ ಎಂಬಂತೆ ಮಾಡಿವೆ;

Update: 2024-11-28 14:05 GMT

ರಾಜ್ಯ ಬಿಜೆಪಿಯಲ್ಲಿ ಬೆಳಗಾವಿ ಅಧಿವೇಶನಕ್ಕೆ ಮುನ್ನವೇ ಬಿರುಸಿನ ಚಟುವಟಿಕೆಗಳು ಕಾವೇರಿವೆ.

ಆದರೆ, ಆ ಬಿರುಸಿನ ಚಟುವಟಿಕೆಗಳು ಅಧಿವೇಶನದಲ್ಲಿ ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷವನ್ನು ಒಗ್ಗಟ್ಟಿನ ಹೋರಾಟಕ್ಕೆ ಇಳಿಸುವ ಬದಲು, ಪ್ರತಿಪಕ್ಷವನ್ನೇ ಒಡೆದು ಮನೆಯೊಂದು ಮೂರು ಬಾಗಿಲು ಎಂಬಂತೆ ಮಾಡಿವೆ.

ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳ ಕುರಿತು ಚರ್ಚಿಸುವ ಮಹತ್ತರ ಉದ್ದೇಶದಿಂದ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಆ ಭಾಗದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಬಿಜೆಪಿ ಜನರ ದನಿಯಾಗಿ ಕೆಲಸ ಮಾಡಲಿದೆ ಎಂದು ಉತ್ತರಕರ್ನಾಟಕದ ಮಂದಿ ಎದುರು ನೋಡುತ್ತಿದ್ದಾರೆ. ಆದರೆ, ರಾಜ್ಯ ಬಿಜೆಪಿಯ ಒಳಗೇ ಉತ್ತರ, ದಕ್ಷಿಣ ಮತ್ತು ಮಧ್ಯ ಕರ್ನಾಟಕದ ಬಣಗಳ ಸಂಘರ್ಷ ಕೈಮೀರಿ ಹೋಗುತ್ತಿದೆ.

ಉತ್ತರ ಕರ್ನಾಟಕದ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಣ, ಮಧ್ಯ ಕರ್ನಾಟಕದ ಬಿ ವೈ ವಿಜಯೇಂದ್ರ ಬಣದ ವಿರುದ್ಧ ಬಹಿರಂಗ ಸಮರ ಸಾರಿದ್ದರೆ, ಈ ಎರಡೂ ಬಣಗಳಿಗೆ ಸೇರದೆ ತನ್ನದೇ ಲೆಕ್ಕಾಚಾರದಲ್ಲಿ ತಂತ್ರ ಹೆಣೆಯುತ್ತಿರುವ ಪ್ರತಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದ ಬಣ ಮತ್ತೊಂದು ದಿಕ್ಕಿಗೆ ಮುಖ ಮಾಡಿದೆ. ಹಾಗಾಗಿ ರಾಜ್ಯ ಬಿಜೆಪಿ ಇದೀಗ ಮನೆಯೊಂದು ಮೂರು ಬಾಗಿಲು. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ಹಿರಿಯ ಶಾಸಕ ಅರವಿಂದ್ ಬೆಲ್ಲದ್ ಮತ್ತಿತರ ನಾಯಕರು ಬಿಜೆಪಿ ಒಡೆದ ಮನೆಯಾಗಿರುವ ವಿಷಯವನ್ನು ಸ್ವತಃ ಮಾಧ್ಯಮಗಳ ಮುಂದೆ ಹೇಳಿಕೊಂಡು, ನಮ್ಮೊಳಗೆ ಗಂಭೀರ ಸಮಸ್ಯೆ ಉದ್ಭವಿಸಿದೆ ಎಂದಿದ್ದಾರೆ.

ಒಗ್ಗೂಡಿಸುವ ಬದಲು ಒಡೆದ ವಕ್ಫ್!

ಸಾಮಾನ್ಯವಾಗಿ ರಾಜಕಾರಣದಲ್ಲಿ ಆಡಳಿತ ಪಕ್ಷದ ಹಗರಣಗಳು, ವಿವಾದಗಳು ಪ್ರತಿಪಕ್ಷಗಳ ಆಂತರಿಕ ಭಿನ್ನಮತವನ್ನು ಮೀರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ರತಿಪಕ್ಷ ಮುಖಂಡರನ್ನು ಒಗ್ಗೂಡಿಸುತ್ತವೆ. ಆದರೆ, ಆಡಳಿತರೂಢ ಕಾಂಗ್ರೆಸ್ ವಿರುದ್ಧ ವಕ್ಫ್ ಆಸ್ತಿ ವಿವಾದವನ್ನೇ ಮುಂದಿಟ್ಟುಕೊಂಡು ಸಮರ ಸಾರಿದ ಬಿಜೆಪಿಗೆ, ಆ ವಿವಾದವೇ ಪಕ್ಷದ ಒಗ್ಗಟ್ಟಿಗೆ ಮುಳುವಾಗಿದೆ.

ವಕ್ಫ್ ವಿವಾದವನ್ನು ಮೊದಲು ಪ್ರಸ್ತಾಪಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಮುಡಾ ಮತ್ತಿತರ ವಿವಾದಗಳ ವಿಷಯದಲ್ಲಿ ಆದಂತೆ ಈ ವಿಷಯದಲ್ಲಿಯೂ ಪಕ್ಷದ ರಾಜ್ಯಾಧ್ಯಕ್ಷರು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಾಮಾಣಿಕ ಹೋರಾಟ ಮಾಡುತ್ತಿಲ್ಲ ಎಂಬ ಆರೋಪದೊಂದಿಗೆ ಅವರನ್ನು ಹೊರಗಿಟ್ಟು ತಮ್ಮದೇ ಪ್ರತ್ಯೇಕ ಹೋರಾಟ ಘೋಷಿಸಿದರು. ಅವರು ಹೋರಾಟ ಆರಂಭಿಸುತ್ತಿದ್ದಂತೆ ಎಚ್ಚೆತ್ತ ರಾಜ್ಯಾಧ್ಯಕ್ಷರು ಬಳಿಕ ಪಕ್ಷದ ಅಧಿಕೃತ ಹೋರಾಟವನ್ನು ಘೋಷಿಸಿದರು.

ಇದೀಗ ಯತ್ನಾಳ್ ತಮ್ಮ ಬಣದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ ಅವರೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟ ತೀವ್ರಗೊಳಿಸುವ ಜೊತೆಗೆ ತಮ್ಮ ಪ್ರವಾಸದುದ್ದಕ್ಕೂ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಅಷ್ಟೇ ಅಲ್ಲದೆ, ಪಕ್ಷದ ಅಧ್ಯಕ್ಷ ಗಾದಿ ಮತ್ತು ಮುಂದಿನ ಮುಖ್ಯಮಂತ್ರಿ ಹುದ್ದೆಗಳನ್ನೂ ತಮ್ಮವರೇ ಪಡೆಯಲಿದ್ದು, ತಾವೇ ಪಕ್ಷದ ಅಧಿಕೃತ ಬಣ ಎಂಬ ಸಂದೇಶವನ್ನೂ ನೀಡಿದ್ದಾರೆ.

ಈ ನಡುವೆ ಪಕ್ಷದ ತಾಲೂಕು, ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳ ಬದಲಾವಣೆಗೆ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸಿ ದೆಹಲಿ ವರಿಷ್ಠರಿಗೆ ಪತ್ರ ಬರೆಯುವ ಮೂಲಕ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯ ತಮ್ಮ ಹಳೆಯ ಬೇಡಿಕೆಗೆ ಸಾಂಸ್ಥಿಕ ಚುನಾವಣೆಯ ಮೂಲಕ ಬುನಾದಿ ಹಾಕುವ ಪ್ರಸ್ತಾಪವನ್ನೂ ಮುಂದಿಟ್ಟಿದ್ದಾರೆ.

ವರಿಷ್ಠರ ಆಹ್ವಾನಕ್ಕೂ ಸೊಪ್ಪು ಹಾಕದ ಯತ್ನಾಳ್

ಸಹಜವಾಗೇ ಈ ಬೆಳವಣಿಗೆ ವಿಜಯೇಂದ್ರ ಮತ್ತು ಬಿ ಎಸ್ ಯಡಿಯೂರಪ್ಪ ಅವರನ್ನು ಕೆರಳಿಸಿದೆ. ಅಷ್ಟೇ ಅಲ್ಲ; ಪಕ್ಷದ ಹಿರಿಯ ನಾಯಕರನ್ನೂ ಆತಂಕಕ್ಕೆ ಈಡುಮಾಡಿದೆ. ಆ ಹಿನ್ನೆಲೆಯಲ್ಲಿಯೇ ವಿಜಯೇಂದ್ರ ಬಣ ದೆಹಲಿಗೆ ದೂರು ನೀಡಿದೆ. ಆದರೆ, ದೆಹಲಿ ನಾಯಕರ ಬುಲಾವ್ಗೆ ಸೊಪ್ಪು ಹಾಕದ ಯತ್ನಾಳ್, ತಮ್ಮ ವಕ್ಫ್ ಹೋರಾಟವನ್ನು ಮುಗಿಸಿಕೊಂಡು ತಮ್ಮ ಟೀಂನ ಎಲ್ಲಾ ಮುಖಂಡರೊಂದಿಗೆ ದೆಹಲಿಗೆ ಬಂದು ಮಾತನಾಡುವುದಾಗಿ ಹೇಳಿ, ವರಿಷ್ಠರ ತುರ್ತು ಮಾತುಕತೆ ಆಹ್ವಾನವನ್ನೇ ತಳ್ಳಿಹಾಕಿದ್ದಾರೆ.

ವರಿಷ್ಠರ ಆಹ್ವಾನ ಮತ್ತು ತಾವು ಅದನ್ನು ತಳ್ಳಿ ಹಾಕಿದ ವಿಷಯವನ್ನು ಸ್ವತಃ ಯತ್ನಾಳ್ ಅವರೇ ಬಹಿರಂಗಪಡಿಸಿದ್ದು, ನಿನ್ನೆ(ಬುಧವಾರ) ನನಗೆ ದೆಹಲಿಯಿಂದ ಕರೆ ಬಂದಿತ್ತು. ತಕ್ಷಣ ಹೊರಟು ಬಂದುಬಿಡಿ ಎಂದು ಕರೆದರು. ಆದರೆ, ನಾನು ಬರುವುದಿಲ್ಲ ಎಂದು ಹೇಳಿದೆ. ನಮ್ಮದು ಟೀಮ್ ಇದೆ, ನಾನು ಒಬ್ಬನೇ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ಧ, ವಕ್ಫ್ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ನಮ್ಮ ಟೀಂನ ಎಲ್ಲರನ್ನೂ ದೆಹಲಿಗೆ ಕರೆಯಿರಿ, ಆಗ ಬಂದು ಕರ್ನಾಟಕದಲ್ಲಿ ಏನು ನಡೆದಿದೆ ಎಂದು ಹೇಳುತ್ತೇವೆ ಎಂದು ಹೇಳಿದ್ದೇನೆ ಎಂದು ಯತ್ನಾಳ್ ಹೇಳಿದ್ದಾರೆ.

ಆ ಮೂಲಕ ದೆಹಲಿ ವರಿಷ್ಠರ ವಿರುದ್ಧವೂ ಯತ್ನಾಳ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಜೊತೆಗೆ, ತಾವು ರಾಜ್ಯಾಧ್ಯಕ್ಷರ ವಿರುದ್ಧ ಮಾಡಿರುವ ಟೀಕೆಗಳಲ್ಲಿ ಒಂದು ಶಬ್ಧವನ್ನೂ ವಾಪಸ್ ಪಡೆಯುವ ಪ್ರಶ್ನೆ ಇಲ್ಲ ಎನ್ನುವ ಮೂಲಕ ತಾವು ಹಿಂದೆ ಸರಿಯುವ ಮಾತೇ ಇಲ್ಲ ಎಂದೂ ಹೇಳಿದ್ದಾರೆ.

ವಿಜಯೇಂದ್ರ ಬಲ ಪ್ರದರ್ಶನಕ್ಕೆ ಸಜ್ಜು

ಈ ನಡುವೆ, ಮತ್ತೊಂದು ಕಡೆ ಯತ್ನಾಳ್ ಬಣಕ್ಕೆ ಸೆಡ್ಡು ಹೊಡೆಯಲು ವಿಜಯೇಂದ್ರ ಬಣ ದಾವಣಗೆರೆಯಲ್ಲಿ ಬಲ ಪ್ರದರ್ಶನಕ್ಕೆ ಮುಂದಾಗಿದೆ. ಬೃಹತ್ ಸಮಾವೇಶ ನಡೆಸಿ ಯತ್ನಾಳ್ ಮತ್ತು ಅವರ ಬಣಕ್ಕೆ ಸಂದೇಶ ನೀಡುವ ಪ್ರಯತ್ನ ಅದು ಎನ್ನಲಾಗಿದೆ. ವಿಜಯೇಂದ್ರ ಅವರ ಆಪ್ತರಾಗಿರುವ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಅವರ ನಿಷ್ಠರ ಸಭೆಯ ಬಳಿಕ, ದಾವಣಗೆರೆಯಲ್ಲಿ ಶೀಘ್ರವೇ ಬೃಹತ್ ಸಮಾವೇಶ ನಡೆಸಿ ವಿಜಯೇಂದ್ರ ಅವರ ಬಲ ಪ್ರದರ್ಶನ ಮಾಡುವುದಾಗಿ ಘೋಷಿಸಲಾಗಿದೆ.

ಒಟ್ಟಾರೆ, ಬಿಜೆಪಿಯ ಬಣಗಳ ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ಸ್ಫೋಟಕ ತಿರುವು ಪಡೆಯುತ್ತಿದ್ದು, ಪಕ್ಷದ ಹಿರಿಯ ನಾಯಕರು ಸೇರಿದಂತೆ ಎಲ್ಲರೂ ಒಂದೊಂದು ಬಣದ ಪರ ಅಥವಾ ವಿರುದ್ಧ ಹೇಳಿಕೆ ನೀಡುವ ಮೂಲಕ ಬಣ ಪೈಪೋಟಿಗೆ ಇನ್ನಷ್ಟು ವೇಗ ನೀಡುತ್ತಿದ್ದಾರೆ. ವಿಶೇಷವಾಗಿ ವಕ್ಫ್ ವಿವಾದದ ವಿರುದ್ಧ ಹೋರಾಟ ರಾಜ್ಯ ಬಿಜೆಪಿಯನ್ನು ಒಗ್ಗೂಡಿಸಿ, ಆಡಳಿತರೂಢ ಕಾಂಗ್ರೆಸ್ಸನ್ನು ದುರ್ಬಲಗೊಳಿಸುವ ಬದಲು ಸ್ವತಃ ಬಿಜೆಪಿಯನ್ನೇ ಒಡೆದು ಒಂದೊಂದು ಬಣ ಒಂದೊಂದು ದಿಕ್ಕಿಗೆ ಮುಖ ಮಾಡುವಂತೆ ಮಾಡಿದೆ.

ಬೆಳಗಾವಿ ಅಧಿವೇಶನ ಆರಂಭಕ್ಕೆ ಇನ್ನೂ ಹತ್ತು ದಿನಗಳು ಬಾಕಿ ಇದ್ದು, ಆ ಅವಧಿಯಲ್ಲಿ ಕಮಲ ಪಾಳೆಯದಲ್ಲಿ ಏನೆಲ್ಲಾ ಅಂತಃಕಲಹಗಳಿಗೆ ವಕ್ಫ್ ವಿವಾದ ಕಾರಣವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

Tags:    

Similar News