BJP Infighting | ಸೊರಬದಲ್ಲಿ ಸರಣಿ ಸಭೆ:‌ ಕುಮಾರ್ ಹಂಚಿಕೊಂಡ ಪೋಸ್ಟರಿನಲ್ಲಿ ವಿಜಯೇಂದ್ರ ಚಿತ್ರವೇ ಇಲ್ಲ!

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಫೋಟೋಗಳೊಂದಿಗೆ ಸಂಸದ ರಾಘವೇಂದ್ರ ಹಾಗೂ ಬಿಎಸ್‌ವೈ ಫೋಟೋ ಮಾತ್ರವಿದ್ದು, ತಂದೆ ಮತ್ತು ಸಹೋದರನ ಫೋಟೋ ಇದ್ದರೂ ಸ್ವತಃ ವಿಜಯೇಂದ್ರ ಫೋಟೋವನ್ನು ಮಾತ್ರ ಕೈಬಿಡಲಾಗಿದೆ!;

Update: 2024-12-07 07:03 GMT

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ತಿರುಗಿಬಿದ್ದಿರುವ ಬಿಜೆಪಿಯ ಭಿನ್ನಮತೀಯರ ಬಣ ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿಬಂದ ಬಳಿಕ ಇನ್ನಷ್ಟು ಚುರುಕಾಗಿದೆ.

ತಮ್ಮ ಬಣದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ವಕ್ಫ್ ಅಕ್ರಮದ ವಿರುದ್ಧ ತಾವು ತಯಾರಿಸಿದ ವರದಿಯನ್ನು ಕೇಂದ್ರ ಜೆಪಿಸಿ ಅಧ್ಯಕ್ಷರಿಗೆ ಸಲ್ಲಿಸುವ ನೆಪದಲ್ಲಿ ಕಳೆದ ವಾರ ದೆಹಲಿಗೆ ಹೋಗಿದ್ದ ಭಿನ್ನಮತೀಯರು, ಅದೇ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ, ಹಿರಿಯ ನಾಯಕ ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖರನ್ನು ಭೇಟಿ ಮಾಡಿ ಬಂದಿದ್ದಾರೆ. ಆ ಭೇಟಿಯ ಬಳಿಕ ಯತ್ನಾಳ್ ತಮ್ಮ ಎದುರಾಳಿಗಳ ಮೇಲಿನ ದಾಳಿಯನ್ನು ಸೌಮ್ಯಗೊಳಿಸಿದ್ದರು. ಆದರೆ, ಅದೇ ಬಣದ ರಮೇಶ್ ಜಾರಕಿಹೊಳಿ “ಅವರಿನ್ನೂ ಚಿಕ್ಕ ಹುಡುಗ” ಎನ್ನುವ ಮೂಲಕ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಅರ್ಹತೆಯನ್ನೇ ಪ್ರಶ್ನಿಸಿದ್ದರು.

ಅವರ ಆ ಹೇಳಿಕೆಯ ಬೆನ್ನಲ್ಲೇ ಯತ್ನಾಳ್ ಅವರು, “ನಾನಿನ್ನು ಸೈಲೆಂಟ್ ಆಗ್ತೀನಿ, ರಮೇಶ್ ಜಾರಕಿಹೊಳಿ ವೈಲೆಂಟ್ ಆಗ್ತಾರೆ” ಎನ್ನುವ ಮೂಲಕ ರಾಜ್ಯಾಧ್ಯಕ್ಷರ ವಿರುದ್ಧದ ತಮ್ಮ ವಾಗ್ದಾಳಿ ನಿಲ್ಲುವುದಿಲ್ಲ; ಬದಲಾಗಿ ವಾಗ್ದಾಳಿಯ ವರಸೆ ಬದಲಾಗಲಿದೆ ಎಂಬ ಸಂದೇಶ ನೀಡಿದ್ದರು.

ಇದೀಗ, ಯತ್ನಾಳ್ ಬಣದ ಪ್ರಮುಖರಲ್ಲಿ ಒಬ್ಬರಾಗಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕೂಡ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧದ ತಮ್ಮ ಧೋರಣೆಯನ್ನು ಅಧಿಕೃತವಾಗಿಯೇ ಜಗಜ್ಜಾಹೀರು ಮಾಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸಹೋದರ, ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿರುವ ಕುಮಾರ್ ಬಂಗಾರಪ್ಪ ಆ ಸೋಲಿನ ಬಳಿಕ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದೇ ವಿರಳ. ಇದೀಗ ದಿಢೀರನೇ ಕ್ಷೇತ್ರದಲ್ಲಿ ಬೂತ್ ಸಭೆಗಳನ್ನು ಘೋಷಿಸಿದ್ದಾರೆ. ಆ ಸಭೆಗಳ ವೇಳಾಪಟ್ಟಿಯನ್ನು ಒಳಗೊಂಡ ಪೋಸ್ಟರ್ ಒಂದನ್ನು ಸ್ವತಃ ಕುಮಾರ್ ಬಂಗಾರಪ್ಪ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಪಕ್ಷದ ಹೆಸರಿನಲ್ಲಿ ಇರುವ ಆ ಪೋಸ್ಟರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಫೋಟೋ ಹಾಕದೇ ಸಂಸದ ಬಿ ವೈ ರಾಘವೇಂದ್ರ ಹಾಗೂ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಫೋಟೋಗಳನ್ನು ಮಾತ್ರ ಹಾಕಲಾಗಿದೆ.

ಬಿಜೆಪಿ ಭಿನ್ನಮತೀಯ ಬಣದ ಪ್ರಮುಖ ಕುಮಾರ್‌ ಬಂಗಾರಪ್ಪ ಅವರು ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಹಂಚಿಕೊಂಡಿರುವ ಸರಣಿ ಸಭೆಗಳ ಪೋಸ್ಟರ್‌

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಫೋಟೋಗಳೊಂದಿಗೆ ಸಂಸದ ರಾಘವೇಂದ್ರ ಹಾಗೂ ಬಿಎಸ್‌ವೈ ಫೋಟೋ ಮಾತ್ರವಿದ್ದು, ತಂದೆ ಮತ್ತು ಸಹೋದರನ ಫೋಟೋ ಇದ್ದರೂ ಸ್ವತಃ ವಿಜಯೇಂದ್ರ ಅವರ ಫೋಟೋವನ್ನು ಮಾತ್ರ ಕೈಬಿಡಲಾಗಿದೆ!

ಲಿಂಗಾಯತ ಸಮಾವೇಶದ ತಯಾರಿಯೆ?

ಈ ನಡುವೆ, ಯತ್ನಾಳ್ ಬಣ ತಮ್ಮ ಎದುರಾಳಿ ವಿಜಯೇಂದ್ರ ಮತ್ತು ಅವರ ಬೆನ್ನಿಗೆ ನಿಂತಿರುವ ಬಿ ಎಸ್ ಯಡಿಯೂರಪ್ಪ ವಿರುದ್ಧ ಅವರ ತವರು ಕ್ಷೇತ್ರದಲ್ಲಿಯೇ ರಣಕಹಳೆ ಮೊಳಗಿಸಲು ಮುಂದಾಗಿದೆ. ಶಿಕಾರಿಪುರದಲ್ಲೇ ಲಿಂಗಾಯತ ಸಮಾವೇಶ ನಡೆಸುವ ಯೋಜನೆ ಹಾಕಿದೆ. ಆ ಸಮಾವೇಶದ ಹಿನ್ನೆಲೆಯಲ್ಲಿಯೇ ಕುಮಾರ್ ಬಂಗಾರಪ್ಪ ಅವರು ಬಹಳ ದಿನಗಳ ಬಳಿಕ ಸ್ವಕ್ಷೇತ್ರ ಸೊರಬದಲ್ಲಿ ಸರಣಿ ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಸೊರಬದಲ್ಲಿ ಸರಣಿ ಸಭೆಗಳ ಮೂಲಕ ನೆರೆಯ ಶಿಕಾರಿಪುರದಲ್ಲಿ ನಡೆಯಲಿರುವ ಲಿಂಗಾಯತ ಸಮಾವೇಶಕ್ಕೆ ಯುವಕರು ಮತ್ತು ಕಾರ್ಯಕರ್ತರನ್ನು ಸಜ್ಜುಗೊಳಿಸುವ ಉದ್ದೇಶದಿಂದಲೇ ಕುಮಾರ್, ಈ ಸಭೆಗಳನ್ನು ಆಯೋಜಿಸಿದ್ದಾರೆ. ಆ ಮೂಲಕ ಲಿಂಗಾಯತ ಸಮಾವೇಶಕ್ಕೆ ಈಗಾಗಲೇ ಕುಮಾರ್ ಭರ್ಜರಿ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

Tags:    

Similar News