BJP Infighting | ಶೋಕಾಸ್‌ ನೋಟಿಸ್ ಬೆನ್ನಲ್ಲೇ ವರಿಷ್ಠರ ಭೇಟಿಗೆ ದೆಹಲಿಗೆ ತೆರಳಿದ ಯತ್ನಾಳ್‌ ಬಣ

ಇಂತಹ ಷೋಕಾಸ್‌ ನೋಟಿಸ್‌ಗಳು ಸಾಕಷ್ಟ ಬಂದಿವೆ. ಅದಕ್ಕೆಲ್ಲಾ ಹೆದರಲ್ಲ, ರಾಜ್ಯ ಬಿಜೆಪಿಯ ಸ್ಥಿತಿ ಹಾಗೂ ನಾಯಕತ್ವದ ಕುರಿತ ವಾಸ್ತವಾಂಶಗಳನ್ನು ಹೈಕಮಾಂಡ್‌ಗೆ ಸಲ್ಲಿಸುತ್ತೇನೆ ಎಂದು ಯತ್ನಾಳ್‌ ಹೇಳಿದ್ದಾರೆ.;

Update: 2024-12-02 07:23 GMT

ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಬಣ ನಡುವಿನ ತಿಕ್ಕಾಟ ದೆಹಲಿಗೆ ಶಿಫ್ಟ್‌ ಆಗಿದೆ. ರಾಜ್ಯ ನಾಯಕತ್ವದ ವಿರುದ್ಧ ನಿರಂತರ ಬಹಿರಂಗ ಟೀಕೆ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಯತ್ನಾಳ್‌ ಅವರಿಗೆ ಷೋಕಾಷ್‌ ನೋಟಿಸ್‌ ನೀಡಿದೆ. ಷೋಕಾಸ್‌ ನೋಟಿಸ್‌ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಯತ್ನಾಳ್‌, ಇಂತಹ ನೋಟಿಸ್‌ಗಳಿಗೆ ಹೆದರಲ್ಲ ಎಂದು ಹೇಳುವ ಮೂಲಕ ಮತ್ತೆ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಷೋಕಾಸ್ ನೋಟಿಸ್ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಂದೇಶ ಪ್ರಕಟಿಸಿರುವ ಯತ್ನಾಳ್‌, ಇಂತಹ ಷೋಕಾಸ್‌ ನೋಟಿಸ್‌ಗಳು ಸಾಕಷ್ಟ ಬಂದಿವೆ. ಅದಕ್ಕೆಲ್ಲಾ ಹೆದರಲ್ಲ,  ರಾಜ್ಯ ಬಿಜೆಪಿಯ ಸ್ಥಿತಿ ಹಾಗೂ ನಾಯಕತ್ವದ ಕುರಿತ ವಾಸ್ತವಾಂಶಗಳನ್ನು ಹೈಕಮಾಂಡ್‌ಗೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಹಿಂದುತ್ವ, ಭ್ರಷ್ಟಾಚಾರ, ವಕ್ಫ್ ಸಂಬಂಧಿತ ಸಮಸ್ಯೆಗಳು ಮತ್ತು ಕುಟುಂಬ ರಾಜಕಾರಣದ ವಿರುದ್ಧದ ಹೋರಾಟ ಸಂಬಂಧ ನನ್ನ ಬದ್ಧತೆ ಅಚಲವಾಗಿ ಇರಲಿದೆ ಎಂದು ಯತ್ನಾಳ್ ಉಲ್ಲೇಖಿಸಿದ್ದಾರೆ. 

ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ನಿವಾಸದಲ್ಲಿ ಭಾನುವಾರ ವಿಜಯೇಂದ್ರ ನಿಷ್ಠರ ಸಭೆಯ ಬಳಿಕ ಬಸನಗೌಡ ಪಾಟೀಲ ಯತ್ನಾಳ್‌ಗೆ ಬಿಜೆಪಿ ಶಿಸ್ತು ಸಮಿತಿ ಷೋಕಾಸ್‌ ನೀಡಿತ್ತು.

ಷೋಕಾಸ್‌ ನೋಟಿಸ್‌ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ನೇತೃತ್ವದ ಬಣದ ನಾಯಕರು ಸೋಮವಾರ(ಡಿ.2) ದೆಹಲಿಗೆ ತೆರಳಿದ್ದು, ವಕ್ಫ್‌ ವಿರುದ್ಧದ ಮೊದಲ ಹಂತದ ಅಭಿಯಾನದ ಕುರಿತು ವರಿಷ್ಠರಿಗೆ ಮಧ್ಯಂತರ ವರದಿ ಸಲ್ಲಿಸಲಿದ್ದಾರೆ. ಇದೇ ವೇಳೆ ರಾಜ್ಯ ನಾಯಕತ್ವದ ಕುರಿತು ದೂರು ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೀದರ್, ರಾಯಚೂರು, ಯಾದಗಿರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಯತ್ನಾಳ್‌ ತಂಡ ಪ್ರವಾಸ ಮಾಡಿ ವಕ್ಫ್‌ ನೋಟಿಸ್‌ ಪಡೆದಿದ್ದ ರೈತರೊಂದಿಗೆ ಸಮಾಲೋಚನೆ ನಡೆಸಿದೆ. ರೈತರಿಗೆ ವಕ್ಫ್‌ ಮಂಡಳಿಯಿಂದ ಆಗಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳಲಾಗಿದೆ. ಬಹುತೇಕ ಕಡೆಗಳಲ್ಲಿ ಮುಸ್ಲಿಮರ ಭೂಮಿಯನ್ನೂ ಆ ಸಮುದಾಯದ ನಾಯಕರು ಪರಾಭಾರೆ ಮಾಡಿಕೊಂಡಿದ್ದಾರೆ. ಈ ಕುರಿತು ಸಮಗ್ರ ಮಾಹಿತಿ ಒಳಗೊಂಡ ವರದಿಯನ್ನು ವಕ್ಫ್‌ ಕಾಯ್ದೆ ತಿದ್ದುಪಡಿಗಾಗಿ ಕೇಂದ್ರ ಸರ್ಕಾರ ನೇಮಿಸಿರುವ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್‌, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಪಕ್ಷದ ನಾಯಕರಿಗೆ ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಭೇಟಿಗೆ ಸಮಯ ಕೋರಿದ ಯತ್ನಾಳ್ ಬಣ

ದೆಹಲಿಗೆ ತೆರಳಿರುವ ಬಸನಗೌಡ ಯತ್ನಾಳ್ ಬಣದ ನಾಯಕರು ಹೈಕಮಾಂಡ್‌ ಭೇಟಿಗೆ ಸಮಯ ಕೋರಿದ್ದಾರೆ. ರಮೇಶ್‌ ಜಾರಕಿಹೊಳಿ ಹಾಗೂ ಯತ್ನಾಳ್ ಇಬ್ಬರೂ ಹೈಕಮಾಂಡ್ ಭೇಟಿಯಾಗಿ ವಕ್ಫ್‌ ವಸ್ತುಸ್ಥಿತಿ ಹಾಗೂ ರಾಜ್ಯ ಬಿಜೆಪಿ ನಾಯಕತ್ವದ ವಾಸ್ತವಾಂಶಗಳ ಕುರಿತು ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಡಳಿತ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ಡಿಜಿಟಲ್ ಸಾಕ್ಷ್ಯಗಳ ಸಹಿತ ದಾಖಲೆ ಸಲ್ಲಿಸಲು ಯತ್ನಾಳ್‌ ಬಣ ನಿರ್ಧರಿಸಿದೆ ಎನ್ನಲಾಗಿದೆ.

ವಕ್ಫ್‌ ಮಾಸ್ಟರ್‌ ಮೈಂಡ್‌ ಕಾಂಗ್ರೆಸ್

ಈ ನಡುವೆ, ಕಾಂಗ್ರೆಸ್ ಸರ್ಕಾರವೇ ವಕ್ಪ್ ವಿವಾದದ ಮಾಸ್ಟರ್ ಮೈಂಡ್ ಎಂದು ಶಾಸಕ ರಮೇಶ್‌ ಜಾರಕಿಹೊಳಿ ಆರೋಪಿಸಿದ್ದಾರೆ.

ಭಾನುವಾರ ಬೆಳಗಾವಿಯಲ್ಲಿ ವಕ್ಫ್‌ ವಿರುದ್ಧದ ಅಭಿಯಾನ ಉದ್ದೇಶಿಸಿ ಮಾತನಾಡಿದ ಅವರು, ವಕ್ಫ್ ವಿರುದ್ಧ ಎಲ್ಲರೂ ಗಟ್ಟಿಯಾದ ಹೋರಾಟ ಮಾಡಬೇಕು. ಯಾವುದೇ ಸುಳ್ಳು ಪ್ರಚಾರಗಳಿಗೆ ಕಿವಿಗೊಡದೆ ನಮ್ಮ ತಂಡದ ಹೋರಾಟವನ್ನು ಬೆಂಬಲಿಸಬೇಕು. ಕೆಲವರು ಸ್ವಾರ್ಥಕ್ಕಾಗಿ ದೆಹಲಿಗೆ ಹೋಗುತ್ತಾರೆ, ದೂರುಗಳನ್ನು ನೀಡುತ್ತಾರೆ, ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಬಿ.ವೈ. ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ.

ಶುಕ್ರವಾರ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ದೆಹಲಿಗೆ ತೆರಳಿ ಯತ್ನಾಳ್‌ ಬಣದ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ರಮೇಶ್‌ ಜಾರಕಿಹೊಳಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಹೊಂದಾಣಿಕೆ ರಾಜಕೀಯ ಆರೋಪ

ಬೆಳಗಾವಿಯಲ್ಲಿ ಅಭಿಯಾನದಲ್ಲಿ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮಾಜಿ ಶಾಸಕ ಅರವಿಂದ ಲಿಂಬಾವಳಿ ಕೂಡ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜೊತೆ ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇವರು ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳಲು ಅವರನ್ನು ಅಧ್ಯಕ್ಷರನ್ನಾಗಿ ಮಾಡಿಲ್ಲ ಹುಷಾರ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಹೊಂದಾಣಿಕೆ ರಾಜಕೀಯದಿಂದಾಗಿ ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತಿದೆ. ನೀವು ಏನೇನು ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂಬುದನ್ನು ಈಗ ಹೇಳುವುದಿಲ್ಲ. ರೈತರ ಬಗ್ಗೆ ಕಾಳಜಿ ಇದ್ದರೆ ಪ್ರತ್ಯೇಕವಾಗಿ ಹೋರಾಟ ಮಾಡಿ ಎಂದು ಲಿಂಬಾವಳಿ ಕಿಡಿಕಾರಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಾವು ಬೀದರ್‌ನಿಂದ ಹೋರಾಟ ಆರಂಭಿಸಿದ್ದೇವೆ. ಆದರೆ, ನೀವು ಬೆಂಗಳೂರಿನಲ್ಲಿ ಕುಳಿತು ಪಕ್ಷ ವಿರೋಧಿ ಕೆಲಸ ಎಂದು ಹೇಳುತ್ತಿದ್ದೀರಾ, ಹಾಗಾದರೆ ನೀವೇನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

Tags:    

Similar News