BJP Infighting | ಭಿನ್ನಮತ ಶಮನಕ್ಕೆ ಹೈಕಮಾಂಡ್‌ ಎಂಟ್ರಿ, ಡಿ.3ರಂದು ವಿಶೇಷ ಕೋರ್‌ ಕಮಿಟಿ ಸಭೆ

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವಿನ ಬಣ ಬಡಿದಾಟಕ್ಕೆ ಕಡಿವಾಣ ಹಾಕಲು ಡಿ.3 ರಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ.

Update: 2024-11-30 06:27 GMT

ರಾಜ್ಯ ಬಿಜೆಪಿಯ ಭಿನ್ನಮತ, ಬಣ ರಾಜಕಾರಣ ಕೊನೆಗೂ ಹೈಕಮಾಂಡ್‌ ತಲುಪಿದೆ. ನಾಯಕರ ಕಚ್ಚಾಟದಿಂದ ಪಕ್ಷಕ್ಕೆ ಹಾನಿ ಆಗುವ ಭೀತಿಯಲ್ಲಿ ಭಿನ್ನಮತ ಶಮನಗೊಳಿಸಲು ಅಖಾಡಕ್ಕೆ ಕೇಂದ್ರ ನಾಯಕರನ್ನು ಇಳಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.

ವಕ್ಫ್ ಆಸ್ತಿ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವಿನ ಬಣ ಬಡಿದಾಟಕ್ಕೆ ಕಡಿವಾಣ ಹಾಕಲು ಡಿ. 3 ರಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು ರಾಜ್ಯಕ್ಕೆ ಆಗಮಿಸಿ, ಉಭಯ ಬಣಗಳ ನಡುವೆ ಮಾತುಕತೆ ನಡೆಸಲಿದ್ದಾರೆ.

ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಣದ ನಾಯಕರು ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಹೀಗಾಗಿ ಡಿಸೆಂಬರ್ 3 ರಂದೇ ತರುಣ್ ಚುಗ್ ನೇತೃತ್ವದಲ್ಲಿ ವಿಶೇಷ ಸಮನ್ವಯ ಸಮಿತಿ ಸಭೆ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರ ಚುನಾವಣೆ ಕಡೆಗೆ ಹೆಚ್ಚು ಗಮನ ಹರಿಸಿತ್ತು. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಬಣ ಕಚ್ಚಾಟದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಬಣ ತಿಕ್ಕಾಟ ಪಕ್ಷಕ್ಕೆ ಹಾನಿ ಉಂಟು ಮಾಡುವ ಮಟ್ಟಿಗೆ ಬೆಳೆದಿರುವ ಕಾರಣ ಕೇಂದ್ರದ ಬಿಜೆಪಿ ನಾಯಕರು ಎರಡೂ ಬಣಗಳ ನಡುವೆ ಸಮನ್ವಯ ಸಾಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್‌ ಚುಗ್‌ ಅವರು ಪ್ರತ್ಯೇಕವಾಗಿ ಎರಡು ಬಣಗಳ ಜೊತೆ ಮಾತುಕತೆ ನಡೆಸಿದ ಬಳಿಕ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದ್ದಾರೆ. ಬಳಿಕ ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ಉನ್ನತ ಮಟ್ಟದ ಸಭೆಯಲ್ಲಿ ವರದಿ ಪ್ರಸ್ತಾಪವಾಗಲಿದೆ. ಇದರ ಆಧಾರದ ಮೇಲೆ ಹೈಕಮಾಂಡ್ ಶಿಸ್ತುಕ್ರಮಕ್ಕೆ ಮುಂದಾಗಲಿದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆಗೆ ಈ ಹಿಂದಿನಿಂದಲೂ ಒತ್ತಾಯಿಸುತ್ತಿರುವ ಬಸನಗೌಡ ಪಾಟೀಲ ಯತ್ನಾಳ ಅವರು ಈಗ ವಕ್ಫ್‌ ಹೋರಾಟದ ವಿಚಾರದಲ್ಲಿ ನೇರವಾಗಿ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಸಮರಕ್ಕಿಳಿದಿದ್ದಾರೆ. ವಿಜಯೇಂದ್ರ ಕೂಡ ಯತ್ನಾಳ್‌ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ನೀಡಿರುವುದರಿಂದ ಬಿಕ್ಕಟ್ಟು ತೀವ್ರಗೊಂಡಿದೆ.

ಇನ್ನೂ ನಮ್ಮ ಬಣದವರೇ ಮುಂದಿನ ಮುಖ್ಯಮಂತ್ರಿ ಎಂದು ಯತ್ನಾಳ್‌ ಹೇಳಿರುವುದು ಕುತೂಹಲ ಕೆರಳಿಸಿದೆ. ಬಿಜೆಪಿಯಲ್ಲಿ ಸಾಂಸ್ಥಿಕ ಚುನಾವಣೆಗಳು ನಡೆಯಲಿದ್ದು, ಸಂಕ್ರಾಂತಿ ನಂತರ ಅಧ್ಯಕ್ಷರ ಬದಲಾವಣೆ ಆಗಲಿದೆ ಎಂಬ ಮಾತುಗಳೂ ಕೂಡ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ. ಬಿಜೆಪಿ ರಾಜ್ಯ ನಾಯಕರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿದರೂ ಯತ್ನಾಳ್‌ ವಿರುದ್ಧ ಹೈಕಮಾಂಡ್‌ ಯಾವುದೇ ಕ್ರಮ ಜರುಗಿಸದಿರುವುದು ಕೂಡ ಅಚ್ಚರಿ ಮೂಡಿಸಿದೆ. ಈ ಮಧ್ಯೆ, ಯತ್ನಾಳ್‌ ಅವರಿಗೆ ಉನ್ನತ ಹುದ್ದೆ ಲಭಿಸುವ ಸಾಧ್ಯತೆಗಳ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ.

Tags:    

Similar News