ದಸರಾ ರಜೆ‌ ಚಾರಣಕ್ಕೆ ಹೇಳಿ ಮಾಡಿಸಿದ ತಾಣ ಬಿಸಿಲೆ ಘಾಟ್

ದಸರಾ ರಜೆ ಸಮೀಪಿಸುತ್ತಿದೆ. ಒಂದಿಷ್ಟು ಪ್ರವಾಸ ಯೋಜನೆಗಳನ್ನು ಹಾಕಿಕೊಂಡವರೂ ಇರಬಹುದು. ಬಯಲು ಸೀಮೆ ಅಥವಾ ಮಲೆನಾಡು ಆಸುಪಾಸಿನವರಿಗೆ ಒಂದೇ ದಿನದಲ್ಲಿ ಸುತ್ತು ಹಾಕಿ ಬರಬಹುದಾದ ಚಾರಣ ತಾಣ ಬಿಸಿಲೆ ಘಾಟಿ ಮತ್ತು ಸುತ್ತಮುತ್ತಲಿನ ಬೆಟ್ಟ ಪ್ರದೇಶಗಳು.;

Update: 2024-09-29 01:30 GMT

ದಸರಾ ರಜೆ ಸಮೀಪಿಸುತ್ತಿದೆ. ಒಂದಿಷ್ಟು ಪ್ರವಾಸ ಯೋಜನೆಗಳನ್ನು ಹಾಕಿಕೊಂಡವರೂ ಇರಬಹುದು. ಬಯಲು ಸೀಮೆ ಅಥವಾ ಮಲೆನಾಡು ಆಸುಪಾಸಿನವರಿಗೆ ಒಂದೇ ದಿನದಲ್ಲಿ ಸುತ್ತು ಹಾಕಿ ಬರಬಹುದಾದ ಚಾರಣ ತಾಣ ಬಿಸಿಲೆ ಘಾಟಿ ಮತ್ತು ಸುತ್ತಮುತ್ತಲಿನ ಬೆಟ್ಟ ಪ್ರದೇಶಗಳು.

ಬಿಸಿಲೆ ಗ್ರಾಮ ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆಗೆ ತಾಕಿಕೊಂಡೇ ಇರುವುದರಿಂದ ಈ ಪ್ರದೇಶ ಪ್ರಚಾರದಲ್ಲಿದೆ. ಆದರೆ, ಹಸಿರಿನ ಸೌಂದರ್ಯ ಬಿಸಿಲೆಯ ಆಚೆಗೂ ವಿಸ್ತರಿಸಿದೆ. ಆನಂದಿಸುವ ಮನಸ್ಸು ಮತ್ತು ನಡೆದಾಡಲು ದೇಹ ಸರಿಯಾಗಿರಬೇಕು ಅಷ್ಟೇ.

ಬಿಸಿಲೆಯ ವೀಕ್ಷಣಾ ಗೋಪುರದಲ್ಲಿ ನಿಂತು ನೋಡಿದರೆ ಹಾಸನ ಜಿಲ್ಲೆಯ ಜೇನುಕಲ್ಲು ಬೆಟ್ಟ, ಕೊಡಗಿನ ಪುಷ್ಪಗಿರಿ ಪರ್ವತ ಮತ್ತು ದಕ್ಷಿಣಕನ್ನಡ, ಕೊಡಗು ಜಿಲ್ಲೆಗಳ ಗಡಿಗೆ ತಾಗಿಕೊಂಡಿರುವ ಕುಮಾರಪರ್ವತಗಳನ್ನು ವೀಕ್ಷಿಸಬಹುದು.

ಪ್ರವಾಸಿಗರ ದಟ್ಟಣೆ ಇಲ್ಲದ ಖಾಲಿ ಪ್ರದೇಶದಲ್ಲೊಮ್ಮೆ ನಿಂತು ಕಣ್ಣು ಹಾಯಿಸಿದಾಗ, ದಟ್ಟ ಕಾಡು, ಜೀವ ವೈವಿಧ್ಯ, ಅಪರೂಪದ ಪ್ರಾಣಿ ಪಕ್ಷಿಗಳು, ಭೋರ್ಗರೆಯುವ ಜಲಪಾತಗಳ ಸದ್ದು, ಒಮ್ಮೆ ನೀರವ ಮೌನದ ಆಸ್ವಾದನೆ ಇಲ್ಲಿ ಸಾಧ್ಯ.




ಮಂಕನಹಳ್ಳಿಯಲ್ಲಿ ನೀರು ಹಂಚಿಕೆಯಾಗುವ ರೀತಿ!

ಬಿಸಿಲೆ ಗ್ರಾಮದಿಂದ ಸ್ವಲ್ಪ ಮುಂದಕ್ಕೆ ಹೋದರೆ ಮಂಕನಹಳ್ಳಿ ಸಿಗುತ್ತದೆ. ರಸ್ತೆ ಪಕ್ಕದಲ್ಲಿ ನೀರಿನ ಪುಟ್ಟ ಹೊಂಡವಿದೆ. ಅದರ ದಂಡೆಯಲ್ಲಿ ಒಂದು ಗುರುತುಕಲ್ಲು ಹಾಕಲಾಗಿದೆ. ಆ ಗುರುತುಕಲ್ಲಿನ ಪೂರ್ವಭಾಗದಲ್ಲಿ ಬಿದ್ದ ನೀರು ಬಂಗಾಳಕೊಲ್ಲಿಗೂ, ಪಶ್ಚಿಮ ಭಾಗದಲ್ಲಿ ಬಿದ್ದ ನೀರು ಅರಬಿ ಸಮುದ್ರಕ್ಕೂ ಸೇರುತ್ತದೆ ಎಂದು ಬರೆಯಲಾಗಿದೆ. ವೈಜ್ಞಾನಿಕ ಸಮೀಕ್ಷೆ, ಆಧಾರಗಳ ಸಹಿತ ಈ ಗುರುತು ಹಾಕಲಾಗಿದೆ ಎನ್ನುತ್ತಾರೆ ಸ್ಥಳೀಯರು. ಜಲ ಕ್ಷೇತ್ರಗಳ ಅಧ್ಯಯನಕಾರರಿಗೆ ಇದು ಸೂಕ್ತ ತಾಣ.

ಕಾಗಿನಹರೆ ವೀಕ್ಷಣಾ ತಾಣ

ಮಂಕನಹಳ್ಳಿಯಿಂದ ಸುಮಾರು ಐದು ಕಿಲೋಮೀಟರ್‍ ಕ್ರಮಿಸಿದರೆ ಕಾಗಿನಹರೆ (ಕಾಗಿನಹರೆ, ಕಾಗಿನೆರೆ ಎಂದೂ ಕರೆಯುತ್ತಾರೆ) ವ್ಯೂಪಾಯಿಟ್‍ ಇದೆ. ಬರಿಗಣ್ಣಿಗೆ ಅದ್ಭುತವಾಗಿ ಕಾಣುವ ಅಲ್ಲಿನ ಹಸಿರು ಗುಡ್ಡದ ವಿಹಂಗಮ ನೋಟ, ಮೇಲೆ ಮಂಜು, ಮೋಡ, ಗಾಢ ಹಸಿರಿನ ಗುಡ್ಡಗಳು, ಅಲ್ಲಲ್ಲಿ ಬಿಸಿಲಿನ ಬೆಳಕಿಗೆ ನಸು ಹಸುರಾಗುವ ಗುಡ್ಡಗಳು, ದೇಹ ಸವರುವ ಮಂಜು ಒಂದಕ್ಕೊಂದು ಅದ್ಭುತವಾದ ಸಂಯೋಜನೆಯೇ ಸರಿ.


ಇಲ್ಲಿಂದ ಮಂಗಳೂರು- ಬೆಂಗಳೂರು ರೈಲು ಮಾರ್ಗದ (ಎಡಕುಮೇರಿ ಸಮೀಪದ) ಸುರಂಗ ಮಾರ್ಗ, ಎತ್ತಿನಹೊಳೆ ಸಮೀಪದ ಜಲವಿದ್ಯುತ್‍ ಕೇಂದ್ರವನ್ನು ಕಾಣಬಹುದು.

ಇನ್ನೂ ಒಂದಿಷ್ಟು ಮುಂದೆ ಸಾಗಿದರೆ ಕಾಗಿನಹರೆಯ ವಿಶಾಲ ಬಯಲು ಸಿಗುತ್ತದೆ. ಅಲ್ಲಿಯವರೆಗೆ ವಾಹನದಲ್ಲಿ ಸಾಗಬಹುದು. ಬಯಲಿನಲ್ಲಿ ವಾಹನ ನಿಲ್ಲಿಸಿ ಸುಮಾರು ಒಂದೂವರೆ ಕಿಲೋಮೀಟರ್‍ನಷ್ಟು ನಡೆದು ಬೆಟ್ಟ ಏರಿದರೆ ಕಾಗಿನಹರೆ ಕೋಟೆಯನ್ನು ಕಾಣಬಹುದು. ಅದು ಕೋಟೆಯೋ ಅಥವಾ ಹಿಂದಿನ ಕಾಲದ ವೀಕ್ಷಣಾ ಗೋಪುರವೋ ಎಂಬ ಶಂಕೆಯಿದೆ. ಏಕೆಂದರೆ ದೂರದಲ್ಲಿ ಕಾಣುವ ಬೆಟ್ಟಗಳಲ್ಲಿ ನಿರ್ದಿಷ್ಟ ಅಂತರದಲ್ಲಿ ಗಡಿ ಗುರುತು ಮಾಡಿರುವ ಕಲ್ಲು ಗುಪ್ಪೆ (ಕಲ್ಲುಗಳಿಂದ ಮಾಡಿದ ಪುಟ್ಟ ಕಟ್ಟೆಗಳಂತಹ ರಚನೆ)ಗಳನ್ನು ಕಾಣಬಹುದು.

ಇಲ್ಲಿಯೂ ಅಷ್ಟೇ ಹವೆ ಪ್ರತಿ ಕ್ಷಣವೂ ಬದಲಾಗುತ್ತಿರುತ್ತದೆ. ಒಮ್ಮೆ ಬಿಸಿಲಿನ ವಾತಾವರಣ ಇದೆಯೆಂದು ಭಾವಿಸಿದರೆ ಮತ್ತೊಂದು ಕ್ಷಣದಲ್ಲಿ ಅದೆಲ್ಲಿಂದಲೋ ಮಂಜು, ಅದರ ಹಿಂದೆಯೇ ಮಳೆ ಆವರಿಸಿಬಿಡುತ್ತದೆ. ಅಕ್ಟೋಬರ್‍ ಅವಧಿಯಲ್ಲಿ ಪ್ರವಾಸಕ್ಕೆ ಹೊರಡುವವರು ಛತ್ರಿ, ರೈನ್‍ ಕೋಟ್‍ ಒಯ್ಯುವುದು ಸೂಕ್ತ.


ಬಿಸಿಲೆಯಲ್ಲಿ ಪುಟ್ಟ ಹೋಟೆಲ್‍, ಅಂಗಡಿಗಳು ಇವೆ. ಮುಂದೆ ನಿಮಗೆ ಬೇಕಾದ ಆಹಾರ ವಸ್ತುಗಳು ಸಿಗದಿರಬಹುದು. ಹಾಗಾಗಿ ಆಹಾರವಸ್ತುಗಳನ್ನು ಪರಿಸರ ಸ್ನೇಹಿ ವಸ್ತುಗಳಲ್ಲಿ ಕಟ್ಟಿಕೊಂಡು ಹೋಗುವುದು ಸೂಕ್ತ.

ಹಾಸನ, ಚಿಕ್ಕಮಗಳೂರಿನ ಪರಿಸರ ಪ್ರವಾಸಿ ತಾಣಗಳಲ್ಲಿ ಇರುವಂತೆ ಇಲ್ಲಿಯೂ ಆಫ್‍ರೋಡ್‍ ವಾಹನಗಳ ಮೂಲಕ ಪ್ರವಾಸಿಗರನ್ನು ಕರೆದೊಯ್ಯುವ ಜೀಪ್‍ಗಳಿವೆ. ಸರಕು ಸಾಗಿಸುವ ಪಿಕ್‍ಅಪ್ ವಾಹನಗಳನ್ನೂ ಇಲ್ಲಿ ಪ್ರವಾಸಿಗರನ್ನು ಕರೆದೊಯ್ಯಲು ಬಳಸುತ್ತಾರೆ. ಗುಡ್ಡ ಪ್ರದೇಶಗಳಲ್ಲಿ ಬೇರೆ ಯಾವ ವಾಹನಗಳೂ ಪ್ರವೇಶಿಸದಂತೆ ಸ್ಥಳೀಯ ಹಿತಾಸಕ್ತಿಗಳು ಸೇರಿ ರಸ್ತೆಯನ್ನು ಅಲ್ಲಲ್ಲಿ ಹಾಳುಗೆಡವಿದ್ದು, ಕಂದಕ ತೋಡಿದ್ದೂ ಇದೆ. ಸ್ವಂತ ವಾಹನಗಳಲ್ಲಿ ಹೋಗುವವರು ಅಪರಿಚಿತ ದಾರಿಗಳಲ್ಲಿ ಹೋಗುವಾಗ ಎಚ್ಚರ ವಹಿಸುವುದು ಉತ್ತಮ.

ವಾಪಸಾಗುವಾಗ ಅಡ್ಡಹೊಳೆಯ ನೀರಿನ ಸೆಲೆ ಮೂಕನಕಾಡು (ಮೂಕನಕಾನು ಎಂದೂ ಕರೆಯಲಾಗುತ್ತದೆ) ಜಲಪಾತದ ಭೋರ್ಗರೆತವನ್ನೂ ನೋಡಬಹದು. ಸದ್ಯ ನೀರಿಗಿಳಿಯಲು ಅರಣ್ಯ ಮತ್ತು ಪೊಲೀಸ್‍ ಇಲಾಖೆ ನಿಷೇಧ ವಿಧಿಸಿದೆ. ಆದರೂ ನೀರಿಗೆ ಮೈಒಡ್ಡುವವರೂ ಇದ್ದಾರೆ. ಬಂಡೆಯ ಮೇಲೆ ಅಗಲವಾಗಿ ಹರಡಿ ಚಿಮ್ಮುವ ಝರಿಯ ಹನಿಗಳನ್ನೂ ಆಸ್ವಾದಿಸುವುದರಲ್ಲೂ ಸೊಗಸಿದೆ. ನೀರಿಗೆ ಇಳಿಯುವುದಂತೂ ತುಂಬಾ ಅಪಾಯಕಾರಿ.


ವ್ಯವಸ್ಥಿತ ಯೋಜನೆ ಇದ್ದರೆ ಈ ಪ್ರವಾಸವನ್ನು ಒಂದೇ ದಿನದಲ್ಲಿ ಪೂರ್ಣ ಾನಂದಿಸಬಹುದು. ಅಥವಾ ಒಂದೆರಡು ದಿನ ಸಮಯವಿದ್ದರೆ ಇಲ್ಲಿನ ಹೋಮ್‍ಸ್ಟೇ, ರೆಸಾರ್ಟ್‍ಗಳಲ್ಲಿ ಉಳಿದುಕೊಂಡು ಬೆಟ್ಟ ಏರಿ, ನೀರಿಗಿಳಿದು ಖುಷಿಪಟ್ಟು ಬರಬಹುದು.

ಮುಖ್ಯ ರಸ್ತೆ ಹೇಗಿದೆ?

ಕುಲ್ಕುಂದ (ಕಡಬ ಸುಬ್ರಹ್ಮಣ್ಯ ರಸ್ತೆ ಬಳಿ ಸಿಗುವ ಊರು) ಇಲ್ಲಿಂದ ಹಾಸನ ಗಡಿ ಪ್ರದೇಶದವರೆಗೆ ಹೋಗುವ ರಸ್ತೆ ಸ್ವಲ್ಪ ಇಕ್ಕಟ್ಟಾಗಿದೆ. ಎರಡು ವಾಹನಗಳು ಎದುರು ಬದುರಾದಾಗ ತುಂಬಾ ಎಚ್ಚರಿಕೆಯಿಂದ ಚಾಲನೆ ಮಾಡಬೇಕಾಗುತ್ತದೆ. ಹಾಸನ ಜಿಲ್ಲಾ ವ್ಯಾಪ್ತಿಯ ರಸ್ತೆ ಚೆನ್ನಾಗಿದೆ. ಬಿಸಿಲೆ ನಂತರ ಸಾಗುವ ಬೆಟ್ಟ ಪ್ರದೇಶಗಳಿಗೆ ಇಕ್ಕಟ್ಟಾದ ಹಳ್ಳಿಗಾಡಿನ ರಸ್ತೆಗಳಲ್ಲಿ ಹೋಗಬೇಕಾಗುತ್ತದೆ. ಬೆಟ್ಟ, ಿಳಿಜಾರು ಪ್ರದೇಶಗಳೇ ಇಲ್ಲಿ ಇರುವುದರಿಂದ ರಸ್ತೆ ವಿಸ್ತರಣೆಯೂ ಕಷ್ಟ. ವಿಸ್ತರಿಸಿದರೆ ಈ ನಿಸರ್ಗ ಹಾಗೆಯೇ ಉಳಿಯುವುದೂ ಕಷ್ಟ.




Tags:    

Similar News