4,000 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ವಿಭಾಗ ಘೋಷಣೆ ಕನ್ನಡ ಅವಸಾನಕ್ಕೆ ಕಾರಣ?

ಸಿದ್ದರಾಮಯ್ಯ ಅವರು ಘೋಷಿಸಿರುವ ಬಜೆಟ್‌ನಲ್ಲಿ "ವಿದ್ಯಾರ್ಥಿಗಳಲ್ಲಿ ಮಾತೃಭಾಷೆಯ ಜೊತೆಗೆ ಆಂಗ್ಲಭಾಷೆಯ ಕೌಶಲ್ಯ ಬೆಳೆಸಲು ರಾಜ್ಯದ 4,000 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ವಿಭಾಗವನ್ನು ಪ್ರಾರಂಭಿಸಲಾಗುವುದು," ಎಂದು ಪ್ರಕಟಿಸಲಾಗಿದೆ.;

Update: 2025-03-07 15:52 GMT

ರಾಜ್ಯದ 4,000 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ವಿಭಾಗವನ್ನು ಪ್ರಾರಂಭಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಘೋಷಣೆ ಶಿಕ್ಷಣ ವಲಯದಲ್ಲಿ ಹಲವು ಗೊಂದಲಗಳನ್ನು ಸೃಷ್ಟಿಸಿದೆ.

ಮಕ್ಕಳಲ್ಲಿ ಇಂಗ್ಲಿಷ್‌ ಭಾಷೆಯ ಕೌಶಲ್ಯ ಬೆಳೆಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಘೋಷಿಸಲಾಗಿದೆಯಾದರೂ, ಮಾತೃಭಾಷೆ ಕನ್ನಡವನ್ನು ಪೋಷಿಸುವತ್ತ ತಾತ್ಸಾರ ಮನೋಭಾವ ಹೊಂದಿದೆಯೇ ಎಂಬ ಚರ್ಚೆ ಆರಂಭವಾಗಿದೆ.

ಈಗಾಗಲೇ  ಶಾಲೆಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಕಡಿಮೆಯಾಗಿದ್ದು, ಸರ್ಕಾರವೂ ಅದಕ್ಕೆ ಕಾರಣವಾಗಬಾರದು. ತ್ರಿಭಾಷಾ ಸೂತ್ರ ಬಳಕೆಯಿಂದಾಗಿ ಕನ್ನಡದ ಅವಗಣನೆ ಆಗುತ್ತಿದ್ದು, ಇಂಗ್ಲಿಷ್‌ ಮತ್ತು ಹಿಂದಿ ಮೊರೆ ಹೋಗುವ ನಿದರ್ಶನಗಳು ಕಣ್ಣ ಮುಂದಿರುವಾಗ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಈ ನೀತಿ ಅನುಸರಿಸುವ ಬಗ್ಗೆ ಆತಂಕ ಎದುರಾಗಿದೆ.

ಆದರೆ, ಬಜೆಟ್‌ನ ಘೋಷಣೆಯಲ್ಲಿ "ಆಂಗ್ಲ ಭಾಷೆಯ ಕೌಶಲ್ಯ ಬೆಳೆಸಲು ದ್ವಿಭಾಷಾ ವಿಭಾಗಗಳ ಆರಂಭ" ಮಾಡುವ ಘೋಷಣೆ ಸರಿಯಾದ ವಿವರಣೆ ಅಥವಾ ಗ್ರಹಿಕೆಯನ್ನು ಹೊಂದಿಲ್ಲ. ಹಾಗೂ ಸ್ಪಷ್ಟತೆ ಹೊಂದಿಲ್ಲ," ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಿದ್ದರಾಮಯ್ಯ ಅವರು ಘೋಷಿಸಿರುವ ಬಜೆಟ್‌ನಲ್ಲಿ "ವಿದ್ಯಾರ್ಥಿಗಳಲ್ಲಿ ಮಾತೃಭಾಷೆಯ ಜೊತೆಗೆ ಆಂಗ್ಲಭಾಷೆಯ ಕೌಶಲ್ಯ ಬೆಳೆಸಲು ರಾಜ್ಯದ 4,000 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ವಿಭಾಗವನ್ನು ಪ್ರಾರಂಭಿಸಲಾಗುವುದು," ಎಂದು ಪ್ರಕಟಿಸಲಾಗಿದೆ.

ಇದರ ಬಗ್ಗೆ ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ವಿ.ಪಿ. ಅವರು ವಿಶ್ಲೇಷಿಸಿ , ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ 4000 ಶಾಲೆಗಳಲ್ಲಿ ದ್ವಿಭಾಷಾ ವಿಭಾಗವನ್ನು ತೆರೆಯುವ ನಿರ್ಧಾರ ಅವೈಜ್ಞಾನಿಕ ಮತ್ತು ಅವಾಸ್ತವಿಕ ಎಂದು ಅಭಿಪ್ರಾಯಪಟ್ಟಿದ್ದಾರೆ.

"ವೈಜ್ಞಾನಿಕವಾಗಿ ಕಲಿಕೆ ಮಾತೃಭಾಷೆಯಲ್ಲಿದ್ದು ಆಂಗ್ಲ ಭಾಷೆಯನ್ನು ಪ್ರಭುತ್ವದ ಮಟ್ಟಕ್ಕೆ ಕಲಿಸಲು , ಆಂಗ್ಲ ಭಾಷೆಯನ್ನು ಒಂದು ಭಾಷೆಯನ್ನಾಗಿ ಕಲಿಸುವ ಮತ್ತು ಅದಕ್ಕೆ ಪೂರಕವಾದ ಸಂಪನ್ಮೂಲಗಳನ್ನು ಅಂದರೆ ನುರಿತ ಆಂಗ್ಲ ಭಾಷಾ ಶಿಕ್ಷಕರು , ದ್ವಿಭಾಷೆಯಲ್ಲಿ ಪೂರಕ ಕಲಿಕಾ ಸಾಮಗ್ರಿ, ಭಾಷಾ ಕಲಿಕಾ ಸಂಪನ್ಮೂಲ ಇತ್ಯಾದಿಗಳನ್ನು ಒದಗಿಸಬೇಕು. ಅದನ್ನು ಬಿಟ್ಟು ದ್ವಿಭಾಷಾ ವಿಭಾಗ ಪ್ರಸ್ತಾವನೆ ಕಾರ್ಯಸಾಧುವಲ್ಲ," ಎಂದು ಹೇಳಿದ್ದಾರೆ.

"ಒಂದೆಡೆ ಹಿಂದಿ ಹೇರಿಕೆ ಮೂಲಕ ಕನ್ನಡ ಮುಗಿಸುವ ಪ್ರಯತ್ನವಾದರೆ , ಇಲಾಖೆಯ ಅಧಿಕಾರಿಗಳ ತಪ್ಪು ಗ್ರಹಿಕೆಯಿಂದ ಇಂಗ್ಲೀಷನ್ನು ಅವೈಜ್ಞಾನಿಕವಾಗಿ ಅಳವಡಿಸಿ ಕನ್ನಡವನ್ನು ನಿಧಾನವಾಗಿ ಕೊಲ್ಲುವ ಕೆಲಸವನ್ನು ಮಾಡಲಾಗುತ್ತಿದೆ. ಮುಖ್ಯ ಮಂತ್ರಿಗಳು ಒತ್ತಡದಲ್ಲಿರುವಾಗ ಅರಬರೆ ಮಾಹಿತಿ ನೀಡಿ ಅವರನ್ನು ತಪ್ಪು ದಾರಿಗೆ ಎಳೆವ ಪ್ರಯತ್ನ ಇದಾಗಿದೆ . ಕನಿಷ್ಟ ಸಚಿವರಾದರೂ ಇದನ್ನು ಗಮನಿಸಬೇಕಿತ್ತು," ಎಂದು ನಿರಂಜನಾರಾಧ್ಯ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು "ದ ಫೆಡರಲ್‌ ಕರ್ನಾಟಕ"ದ ಜತೆ ಮಾತನಾಡಿ, "ಕನ್ನಡ ಮಾಧ್ಯಮದಲ್ಲಿ ಕಲಿಕೆ ಇರಬೇಕು. ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕು. ಇಂಗ್ಲಿಷ್ ಹೇಳಿಕೊಡಲು ನುರಿತ, ತರಬೇತು ಪಡೆದ ಅಧ್ಯಾಪಕರು ಮತ್ತು ಕಲಿಕಾ ಸಾಮಗ್ರಿಗಳು ಬೇಕು.‌ ಕನ್ನಡ ಹೇಳಿಕೊಡುವ ಕ್ರಮವೇ ಸಮಕಾಲೀನವಾಗಿಲ್ಲ," ಎಂದು ಹೇಳಿದ್ದಾರೆ. "ಕನ್ನಡ ಅಥವಾ ಇಂಗ್ಲಿಷನ್ನು ಮಾಧ್ಯಮವಾಗಿ ಆರಿಸಿಕೊಳ್ಳಬಹುದು. ಇಂದಿನ ಸ್ಥಿತಿಯಲ್ಲಿ ಹೆಚ್ಚಿನ ಮಕ್ಕಳು ಇಂಗ್ಲಿಷಗ್‌ ಗೆ ಆಸಕ್ತಿ ಹೊಂದುತ್ತಾರೆ. ಹಾಗಾಗಿ ಕನ್ನಡ ನಿಧಾನವಾಗಿ ಶಿಥಿಲವಾಗುತ್ತದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Tags:    

Similar News