ಬಿಗ್‌ಬಾಸ್' ಖ್ಯಾತಿಯ ರಕ್ಷಕ್ ಬುಲೆಟ್ ಕಾರು ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ
ಗಾಯಗೊಂಡ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮೂಲದ ವೇಣುಗೋಪಾಲ ಎಂದು ಗುರುತಿಸಲಾಗಿದೆ.;
ಬಿಗ್‌ಬಾಸ್' ಖ್ಯಾತಿಯ ರಕ್ಷಕ್ ಬುಲೆಟ್ ಕಾರು
'ಬಿಗ್‌ಬಾಸ್' ಕನ್ನಡದ ಸ್ಪರ್ಧಿಯಾಗಿದ್ದ ರಕ್ಷಕ್ 'ಬುಲೆಟ್' ಅವರು ಪ್ರಯಾಣಿಸುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಮಾನ್ಯತಾ ಟೆಕ್ಪಾರ್ಕ್ ಬಳಿ ನಡೆದಿದೆ.
ಗಾಯಗೊಂಡ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮೂಲದ ವೇಣುಗೋಪಾಲ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಬೈಕ್ ಸವಾರನ ಕಾಲು ಮುರಿದಿದ್ದು, ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಗುರುವಾರ ಬೆಳಿಗ್ಗೆ11:30ರ ಸುಮಾರಿಗೆ ಮಾನ್ಯತಾ ಟೆಕ್ಪಾರ್ಕ್ ಬಳಿಯ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ರಕ್ಷಕ್ ಅವರು ಕಾರು ಚಾಲನೆ ಮಾಡುತ್ತಿದ್ದರು. ಅದೇ ರಸ್ತೆಯಲ್ಲಿ ವೇಣುಗೋಪಾಲ ಮತ್ತು ಅವರ ಸ್ನೇಹಿತೆ ಪ್ರಯಾಣಿಸುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನೆಲಕ್ಕೆ ಬಿದ್ದ ವೇಣುಗೋಪಾಲ ಅವರ ಕಾಲು ಮುರಿದಿದೆ. ಕೂಡಲೇ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.