ಕೋರಮಂಗಲ ಪಿಜಿಯಲ್ಲಿ ಯುವತಿ ಕೊಲೆ: ಮಧ್ಯಪ್ರದೇಶದಲ್ಲಿ ಆರೋಪಿ ಬಂಧನ
ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ 24 ವರ್ಷದ ಯುವತಿಯೊಬ್ಬಳನ್ನು ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.;
ಇತ್ತೀಚೆಗೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಪಿಜಿ ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೈದ ಆರೋಪಿಯನ್ನು ಶನಿವಾರ ಪೊಲೀಸರು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ.
೨೪ ವರ್ಷದ ಕೃತಿ ಕುಮಾರಿ ಎಂಬ ಯುವತಿಯನ್ನು ಹತ್ಯೆಗೈದು ಪರಾರಿಯಾಗಿದ್ದ ಅಭಿಷೇಕ್ ಅವರನ್ನು ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ, ಆರೋಪಿಯನ್ನು ಮಧ್ಯಪ್ರದೇಶದಿಂದ ಗುರುತಿಸಿ ಬಂಧಿಸಲಾಗಿದೆ. ಕೊಲೆಯ ಹಿಂದಿನ ಉದ್ದೇಶದ ನಮಗೆ ಇನ್ನೂ ತಿಳಿದಿಲ್ಲ, ನಾವು ಅವನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಬೇಕು ಮತ್ತು ಕೂಲಂಕುಷ ತನಿಖೆ ಮತ್ತು ವಿಚಾರಣೆ ನಡೆಸಬೇಕು. ನಂತರ ಮಾತ್ರ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಬಹುದು ಎಂದರು.
ಪೊಲೀಸ್ ಉಪ ಆಯುಕ್ತೆ (ಆಗ್ನೇಯ) ಸಾರಾ ಫಾತಿಮಾ ಮಾತನಾಡಿ, "ನಾವು ಆರೋಪಿಯನ್ನು ಮಧ್ಯಪ್ರದೇಶದ ರೈಸನ್ ಜಿಲ್ಲೆಯಿಂದ ಬಂಧಿಸಿದ್ದೇವೆ. ನಾವು ಅವನನ್ನು ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಬೆಂಗಳೂರಿಗೆ ಕರೆತಂದಿದ್ದೇವೆ. ನಾವು ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ ಮತ್ತು ವಿಚಾರಣೆಯನ್ನು ಪೂರ್ಣಗೊಳಿಸಲು ಕಸ್ಟಡಿಗೆ ಕೋರಿದ್ದೇವೆ. ಹೆಚ್ಚಿನ ತನಿಖೆಯ ನಂತರ ನಾವು ಅವನನ್ನು ಕಸ್ಟಡಿಗೆ ಪಡೆದ ಬಳಿಕ ಅವನನ್ನು ಕೂಲಂಕಷವಾಗಿ ವಿಚಾರಣೆ ಮಾಡುತ್ತೇವೆ ಮತ್ತು ಈ ಘಟನೆಯ ಹಿಂದಿನ ಉದ್ದೇಶವನ್ನು ನಾವು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಜುಲೈ 23ರ ರಾತ್ರಿ 11.13ಕ್ಕೆ ಪಿಜಿಗೆ ನುಗ್ಗಿದ್ದ ಅಭಿಷೇಕ್, 3ನೇ ಮಹಡಿಯ ಕೊಠಡಿ ಬಳಿಗೆ ಬಂದು ಕೃತಿ ಕುಮಾರಿ ಕೊಠಡಿ ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಮನಸೋಇಚ್ಛೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮಧ್ಯ ಪ್ರದೇಶಕ್ಕೆ ಹೋಗಿದ್ದ ಆರೋಪಿಯನ್ನು ಅಲ್ಲೇ ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ವಿಡಿಯೋಗಳು ವೈರಲ್ ಆಗಿವೆ. ಕೃತಿ ಕುಮಾರಿ ಕಿರಿಚಿದ ಶಬ್ಧ ಕೇಳಿ ಇತರ ಪಿಜಿಯಲ್ಲಿದ್ದ ಮಂದಿ ಧಾವಿಸಿದರೂ ಆಕೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಮೂಲತ: ಬಿಹಾದವರಾಗಿರುವ ಕೃತಿ ಕುಮಾರಿ ನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.