ಬೆಂಗಳೂರು-ವಿಜಯಪುರ ರೈಲು ಪ್ರಯಾಣ| ಕೇಂದ್ರ ಸಚಿವ ಸೋಮಣ್ಣ ಜತೆ ಎಂ.ಬಿ. ಪಾಟೀಲ ಮಾತುಕತೆ

ವಿಜಯಪುರ, ಬಾಗಲಕೋಟೆಗೆ ಹೋಗುವ ರೈಲುಗಳು ಹುಬ್ಬಳ್ಳಿ ಮತ್ತು ಗದಗಿನಲ್ಲಿ ಎಂಜಿನ್ ಬದಲಿಸಿಕೊಳ್ಳಲು ಗಂಟೆಗಟ್ಟಲೆ ನಿಲ್ಲಬೇಕಾಗಿದೆ. ಎರಡೂ ಕಡೆ ಬೈಪಾಸ್ ಮೂಲಕ ರೈಲುಗಳು ಸಾಗಿಹೋಗುವ ವ್ಯವಸ್ಥೆ ಆಗಬೇಕು ಎಂದು ಸಚಿವ ಎಂ.ಬಿ. ಪಾಟೀಲ್‌ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಿಗೆ ಮನವಿ ಮಾಡಿದ್ದಾರೆ.;

Update: 2025-05-31 08:06 GMT

ಸೋಮಣ್ಣ ಜತೆ ಪಾಟೀಲ ಮಾತುಕತೆ

ರಾಜಧಾನಿಯಿಂದ ವಿಜಯಪುರ ಮತ್ತು ಬಾಗಲಕೋಟೆಗೆ ಈಗಿರುವ 15 ಗಂಟೆಗಳ ಪ್ರಯಾಣದ ಅವಧಿಯನ್ನು ಹತ್ತು ಗಂಟೆಗಳಿಗೆ ಇಳಿಸುವ ಸಂಬಂಧ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಅವರು ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣ ಅವರೊಂದಿಗೆ ಶನಿವಾರ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.

ಈಗ ವಿಜಯಪುರ, ಬಾಗಲಕೋಟೆಗೆ ಹೋಗುವ ರೈಲುಗಳು ಹುಬ್ಬಳ್ಳಿ ಮತ್ತು ಗದಗಿನಲ್ಲಿ ಎಂಜಿನ್ ಬದಲಿಸಿಕೊಳ್ಳಲು ಗಂಟೆಗಟ್ಟಲೆ ನಿಲ್ಲಬೇಕಾಗಿದೆ. ಎರಡೂ ಕಡೆ ಬೈಪಾಸ್ ಮೂಲಕ ರೈಲುಗಳು ಸಾಗಿಹೋಗುವ ವ್ಯವಸ್ಥೆ ಆಗಬೇಕು. ಇದರಿಂದ ಗದಗ ಭಾಗದ ಜನತೆಗೂ ಅನುಕೂಲವಾಗುತ್ತದೆ ಎಂದು ಎಂ.ಬಿ. ಪಾಟೀಲ್ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ.

ಅಕಸ್ಮಾತ್ ಈಗಾಗಲೇ ಓಡುತ್ತಿರುವ ರೈಲುಗಳನ್ನು ಬೈಪಾಸ್ ಮೂಲಕ ಓಡಿಸುವುದು ಅಸಾಧ್ಯವಾದರೆ, ಹೊಸ ರೈಲುಗಳ ಸೇವೆಯನ್ನಾದರೂ ಆರಂಭಿಸಬೇಕು ಎಂಬ ಬೇಡಿಕೆಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದ್ಯದಲ್ಲೇ ತಾವು ದೆಹಲಿಗೆ ಹೋಗುತ್ತಿದ್ದು, ಈ ಸಂದರ್ಭದಲ್ಲಿ ಅವರನ್ನೂ ರೈಲ್ವೆ ಅಧಿಕಾರಿಗಳನ್ನೂ ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು ಎಂದು ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮ ಅವರೊಂದಿಗೂ ಸಚಿವರು ಇದೇ ವೇಳೆ ಮಾತನಾಡಿದರು. ಈ ಭಾಗದಲ್ಲಿ ಬಾಕಿ ಇರುವ ರೈಲ್ವೆ ಹಳಿ ವಿದ್ಯುದೀಕರಣ ಜುಲೈ ಹೊತ್ತಿಗೆ ಮುಗಿಯಲಿದೆ ಎಂದು ಶರ್ಮ ಹೇಳಿದ್ದಾರೆ. ಇದಾದ ಮೇಲೆ ಬೆಂಗಳೂರಿನಿಂದ ವಿಜಯಪುರ ಮತ್ತು ಬಾಗಲಕೋಟೆ ನಡುವಿನ ರೈಲು ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆ ಆಗಲಿದೆ ಎಂದು ಹೇಳಿದ್ದಾರೆ ಎಂದು ಎಂ.ಬಿ.ಪಾಟೀಲ ತಿಳಿಸಿದ್ದಾರೆ.

Tags:    

Similar News