ಬೆಳಗಾವಿ ಕಾಂಗ್ರೆಸ್‌ ಕಾರ್ಯಕಾರಿಣಿ | ʼಭಾರತ್‌ ಜೋಡೊʼ ಮಾದರಿಯಲ್ಲೇ ʼಸಂವಿಧಾನ್‌ ಬಚಾವೊ ಯಾತ್ರೆʼ ನಡೆಸಲು ತೀರ್ಮಾನ

ಬೆಳಗಾವಿಯಲ್ಲಿ ಡಿ.26ರಂದು ನಡೆದ ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ನಿರ್ಣಯಗಳನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.

Update: 2024-12-26 15:24 GMT
ಕೆ.ಸಿ. ವೇಣುಗೋಪಾಲ್‌

ದೇಶಾದ್ಯಂತ ಸಂವಿಧಾನ ಮತ್ತು ಅಂಬೇಡ್ಕರ್‌ ಕುರಿತ ಚರ್ಚೆ ಕಾವೇರಿರುವ ನಡುವೆ ಗುರುವಾರ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂವಿಧಾನದ ಮಹತ್ವ ಎತ್ತಿ ಹಿಡಿಯುವ ನಿರ್ಧಾರ ಕೈಗೊಳ್ಳಲಾಗಿದ್ದು, ಭಾರತ್‌ ಜೋಡೋ ಯಾತ್ರೆ ಮಾದರಿಯಲ್ಲೇ ದೇಶಾದ್ಯಂತ ಸಂವಿಧಾನ ಬಚಾವೊ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.

ಬೆಳಗಾವಿಯಲ್ಲಿ ಡಿ.26ರಂದು ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ನಿರ್ಣಯಗಳನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ ವೇಣುಗೋಪಾಲ್‌ ಪತ್ರಿಕಾಗೋಷ್ಠಿ ನಡೆಸಿ ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಸಭೆಯ ಪ್ರಮುಖ ಅಂಶಗಳನ್ನು ವಿವರಿಸುವ ಜತೆಗೆ ಪಕ್ಷ ಸಂಘಟನೆಯ ಯೋಜನೆಗಳನ್ನು ಪ್ರಕಟಿಸಿದರು.

2024ರ ಡಿಸೆಂಬರ್‌ 27ರಿಂದ ಆರಂಭಗೊಂಡು 2026ರ ಜನವರಿ 26 ರವರೆಗೆ 13 ತಿಂಗಳ ಕಾಲ ಪಕ್ಷ ಸಂಘಟನೆ ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯಕ್ರಮಗಳು ನಡೆಯಲಿವೆ. ಈ ಅವಧಿಯಲ್ಲಿ ಪಾದಯಾತ್ರೆ, ಸೆಮಿನಾರ್‌ಗಳು, ಸಾರ್ವಜನಿಕ ಸಭೆ ಹಾಗೂ ರ್ಯಾಲಿಗಳು ಆಯೋಜನೆಗೊಳ್ಳಲಿವೆ. ಅದೇ ರೀತಿ ಹಳ್ಳಿಗಳಲ್ಲಿ, ಜಿಲ್ಲಾ ಮಟ್ಟದಲ್ಲಿ ಹಾಗೂ ಬ್ಲಾಕ್‌ ಹಂತದಲ್ಲಿ ಪಕ್ಷ ಸಂಘಟನೆ ಕಾರ್ಯಗಳು ನಡೆಯಲಿವೆ. ಇದರಲ್ಲಿ ಪಕ್ಷದ ಹಿರಿಯ ನಾಯಕರು, ರಾಜ್ಯ, ಜಿಲ್ಲೆ ಹಾಗೂ ತಳಮಟ್ಟದ ನಾಯಕರು ತೊಡಗಿಸಿಕೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.

ಭಾರತ್‌ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ಗೆ ಚೈತನ್ಯ ಸಿಕ್ಕಿದೆ. ಪಕ್ಷವು ಎಲ್ಲರನ್ನೂ ಮುಟ್ಟಿದೆ. ಅದೇ ಮಾದರಿಯಲ್ಲಿ ಸಂವಿಧಾನ್‌ ಬಚಾವೊ ಯಾತ್ರೆಯನ್ನು ಮಾಡಲಿದ್ದೇವೆ ಹಾಗೂ ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸಲು ಸಿಡಬ್ಲ್ಯುಸಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕೆ. ಸಿ ವೇಣುಗೋಪಾಲ್‌ ಅವರು ಹೇಳಿದರು.

ಸಂವಿಧಾನ ಉಳಿಸಲು ಸರ್ವಪ್ರಯತ್ನ

13 ತಿಂಗಳಿಗೂ ಅಧಿಕ ಕಾಲ ನಡೆಯಲಿರುವ ಪಕ್ಷ ಸಂಘಟನೆ ಕಾರ್ಯದಲ್ಲಿ ಸಂವಿಧಾನ ಹಾಗೂ ಮಹಾತ್ಮ ಗಾಂಧೀಜಿ ಮೇಲಿನ ಬಿಜೆಪಿ ದಾಳಿಯನ್ನು ಪ್ರತಿರೋಧಿಸಲಾಗುವುದು. ಸಂವಿಧಾನ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರಯತ್ನಿಸಲಾಗುವುದು. ಇದೇ ಸಮಯದಲ್ಲಿ ಜನ ಸಾಮಾನ್ಯರ ಸಮಸ್ಯೆಯನ್ನೂ ತೆಗೆದುಕೊಂಡು ಪರಿಹರಿಸುತ್ತೇವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹೇಳಿದರು.

ಗುಜರಾತ್‌ನಲ್ಲಿ ಸಮಾವೇಶ

ಮಹಾತ್ಮ ಗಾಂಧೀಜಿಯವರ ಮೇಲೆ ಬಿಜೆಪಿಯ ದಾಳಿಗಳು ನಿರಂತರವಾಗಿ ನಡೆಯುತ್ತಿದೆ. ಇದನ್ನು ಪ್ರತಿರೋಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ 2025ರ ಏಪ್ರಿಲ್‌ನಲ್ಲಿ ಗುಜರಾತ್‌ನಲ್ಲಿಯೇ ಕಾಂಗ್ರೆಸ್‌ ಸಮಾವೇಶ ಆಯೋಜನೆಗೊಳ್ಳಲಿದೆ. ಗಾಂಧಿಯ ನಾಡಿನಲ್ಲಿಯೇ ಅವರ ಮೌಲ್ಯದ ಮೇಲಿನ ದಾಳಿಯನ್ನು ತಡೆಯುವ ಜತೆಗೆ ಕಾಂಗ್ರೆಸ್‌ ಪಕ್ಷದ ಮರುಸಂಘಟನೆ ಕೆಲಸ ಮಾಡಲಿದ್ದೇವೆ ಎಂದು ವೇಣುಗೋಪಾಲ್‌ ಅವರು ಹೇಳಿದರು.

ಸಭೆಯಲ್ಲಿ ಏನಾಯಿತು?

ಬೆಳಗಾವಿಯಲ್ಲಿ ನಡೆದ ಅಧಿವೇಶನ ಕಾಂಗ್ರೆಸ್ ಇತಿಹಾಸದಲ್ಲಿ ಇವತ್ತು ಯಾವಾಗಲೂ ನೆನಪಿನಲ್ಲಿ ಉಳಿಯುವ ಸಭೆಯಾಗಿದೆ. ಇಡೀ ದೇಶದ ಕಾಂಗ್ರೆಸ್ಸಿಗ್ಗರು ಹೆಮ್ಮೆ ಪಡುವ ಸಂದರ್ಭ ಇದು ಎಂದು ಕೆ. ಸಿ ವೇಣುಗೋಪಾಲ್‌ ಅವರು ಹೇಳಿದರು.

ಒಟ್ಟು 132 ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಸತತವಾಗಿ 4 ಗಂಟೆಗಳ ಕಾಲ ನಡೆದ ಸಭೆಯಲ್ಲಿ 50ಕ್ಕಿಂತ ಹೆಚ್ಚು ಸದಸ್ಯರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಎರಡು ಪ್ರಸ್ತಾಪಗಳು ಹಾಗೂ ಐದು ನಿರ್ಣಯಗಳನ್ನು ಕೈಗೊಂಡಿದ್ದೇವೆ. 1924ರ ಅಧಿವೇಶನದಲ್ಲಿ ಚರ್ಚೆ ನಡೆದಿದ್ದ ಸಮಾನತೆ, ಭಾತೃತ್ವದ ಬಗ್ಗೆ ಈಗಲೂ ಚರ್ಚೆ ನಡೆದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕೆ.ಸಿ ವೇಣುಗೋಪಾಲ್‌ ವಿವರಿಸಿದರು.

ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಹೆಸರಿನಲ್ಲಿ ರಾಜಕೀಯ ಆಂದೋಲನ ಸಂಘಟಿಸಲು ಸಭೆಯಲ್ಲಿ ಸಲಹೆಗಳು ಬಂದವು ಎಂದು ಅವರು ಹೇಳಿದರು.

ಎಐಸಿಸಿ ಮಾಧ್ಯಮ ಮುಖ್ಯಸ್ಥ ಜೈರಾಂ ರಮೇಶ್ ರಮೇಶ್‌ ಮಾತನಾಡಿ ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಸಮಾವೇಶ ನಾಳೆ ಶುರುವಾಗುತ್ತದೆ. ಅದನ್ನು ಮುಂದಿನ ವರ್ಷದ ತನಕ ತೆಗೆದುಕೊಂಡು ಹೋಗುತ್ತೇವೆ. ಬೆಳಗಾವಿಯಿಂದ ದೇಶದ ಮೂಲೆ ಮೂಲೆಗೂ ತಲುಪಿಸುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು

ಅಂಬೇಡ್ಕರ್‌ ವಿರುದ್ಧ ಹೇಳಿಕೆ ನೀಡಿದ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆಗೆ ಆಗ್ರಹ

ನ್ಯಾಯಾಂಗ, ಚುನಾವಣಾ ಆಯೋಗ ಮತ್ತು ಮಾಧ್ಯಮದ ಮೇಲೆ ಸರ್ಕಾರದ ನಿಯಂತ್ರಣಕ್ಕೆ ವಿರೋಧ

ಒಂದು ದೇಶ, ಒಂದು ಚುನಾವಣೆ ವಿಧೇಯಕದ ವಿರುದ್ಧ ಹೋರಾಟ

ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣೆಗಳು ನಿಪ್ಷಕ್ಷಪಾತವಾಗಿ ನಡೆದಿಲ್ಲ ಎಂಬ ಆರೋಪ

ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಕೇಂದ್ರ ಸರ್ಕಾರ ಪ್ರಾಯೋಜಿತ ದ್ವೇಷದ ವಿರುದ್ಧ ಹೋರಾಟ

ಮಣಿಪುರದಲ್ಲಿ ಸಮುದಾಯಗಳ ನಡುವಿನ ಹಿಂಸಾಚಾರ ಕೊನೆಗೊಳಿಸಲು ಆಗ್ರಹ

ಮಂದಿರ- ಮಸೀದಿ ವಿವಾದ ಕೊನೆ ಹಾಡಲು ಒತ್ತಾಯ

ಜಾತಿ ಜನಗಣತಿಯನ್ನು ತಕ್ಷಣವೇ ನಡೆಸುವಂತೆ ಆಗ್ರಹ

ಪಂಚಾಯತ್ ಮತ್ತು ಜಾತಿ ಆಧಾರದ ಮೇಲೆ ಮೀಸಲಾತಿ ಮಿತಿ 50% ಕ್ಕಿಂತ ಹೆಚ್ಚಿಸಲು ಮನವಿ

ಜಿಎಸ್‌ಟಿ ತೆರಿಗೆ ಸರಳತೆ ಜಾರಿಗೆ ತರುವಂತೆ ಮನವಿ

ಕೃಷಿ ಮತ್ತು ಗ್ರಾಮೀಣ ಉದ್ಯೋಗವನ್ನು ನಿರ್ಲಕ್ಷಿಸುವ ಕೇಂದ್ರ ಸರ್ಕಾರದ ನೀತಿಗಳಿಗೆ ಖಂಡನೆ

ಕಾನೂನುಬದ್ಧ ಎಂಎಸ್ಪಿ (MSP) ಮತ್ತು ಬೆಳೆಗಳ ಸಮಗ್ರ ವೆಚ್ಚದ 50% ಅಳವಡಿಕೆಗೆ ಕ್ರಮ ಕೈಗೊಳ್ಳಲು ಆಗ್ರಹ

ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳ ಖಂಡನೆ

Tags:    

Similar News