ಮಾನಹಾನಿ | ಸುದ್ದಿ ಪ್ರಸಾರಕ್ಕೆ ತಡೆ ಕೋರಿ ಕೋರ್ಟ್ ಮೊರೆ ಹೋದ ʻಮಾಜಿ ಸಿಎಂʼ ಬೊಮ್ಮಾಯಿ!
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಆ.28ಕ್ಕೆ ನಡೆಸಲಿದೆ. ಇದಲ್ಲದೇ ವಕೀಲ ಜಗದೀಶ್ ಮಹದೇವ್ ವಿರುದ್ಧವೂ ನಿರ್ಬಂಧಕಾಜ್ಞೆ ಹೇರುವಂತೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.;
ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಆ.28ಕ್ಕೆ ನಡೆಸಲಿದೆ. ಇದಲ್ಲದೇ ವಕೀಲ ಜಗದೀಶ್ ಮಹದೇವ್ ವಿರುದ್ಧವೂ ನಿರ್ಬಂಧಕಾಜ್ಞೆ ಹೇರುವಂತೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.
ಆ.28ರಂದು ಅರ್ಜಿ ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ.
ಈ ನಡುವೆ, ವಕೀಲ ಜಗದೀಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಿಎಂ ಒಬ್ಬರ ಲೈಂಗಿಕ ಹಗರಣದ ಕುರಿತು ಮಾತನಾಡಿದ್ದರು. ʻʻತಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಇಬ್ಬರು ಸಚಿವರು ಮತ್ತು ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದರು. ಆ ಮಾಜಿ ಮುಖ್ಯಮಂತ್ರಿಯ ಲೈಂಗಿಕ ಹಗರಣವನ್ನು ಸುಪ್ರೀಂಕೋರ್ಟ್ ನಿಗಾವಣೆಯಲ್ಲಿ ತನಿಖೆಗೆ ಒತ್ತಾಯಿಸುತ್ತೇವೆʼʼ ಎಂದು ಹೇಳಿದ್ದರು.
ʻʻಮಾಜಿ ಮುಖ್ಯಮಂತ್ರಿಗೆ ಹೊರರಾಜ್ಯದಿಂದ ಹೆಣ್ಣು ಮಕ್ಕಳನ್ನು ಒದಗಿಸಿದ ಆರೋಪಕ್ಕೆ ಈಗ ಮಾಜಿ ಸಚಿವರಿಬ್ಬರ ಹೆಸರು ಸೇರ್ಪಡೆಗೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೇ ಇದನ್ನು ಖಾಸಗಿಯಾಗಿಯೂ ಬಳಸಿಕೊಂಡಿರುವ ಸಚಿವರು, ಘಟನೆಯ ವಿಡಿಯೋ ಮಾಡಿ ಮಾಜಿ ಸಿಎಂಗೆ ಬ್ಲ್ಯಾಕ್ ಮೇಲ್ ಮಾಡಿ, ವೈಯಕ್ತಿಕವಾಗಿ ಲಾಭ ಪಡೆದುಕೊಂಡಿದ್ದಾರೆʼʼ ಎಂದು ವಕೀಲ ಜಗದೀಶ್ ಆರೋಪಿಸಿದ್ದರು.
ಅಲ್ಲದೆ, ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರದ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಪ್ರತಿಭಟನೆಯೊಂದರಲ್ಲಿ ಮಾತನಾಡುವ ವೇಳೆ ʻʻಬಿಜೆಪಿಯಿಂದ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಒಬ್ಬರ ಸಿಡಿ ಬರುವ ಸುದ್ದಿ ಬಂದಿದೆ. ಅದನ್ನು ನೀವು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ. ನಾನು ಇವತ್ತು ಆ ಸುದ್ದಿ ಕೇಳಿದ್ದೇನೆ. ಅತಿ ಶೀಘ್ರದಲ್ಲಿ ಆ ಅಶ್ಲೀಲ ಸಿಡಿ ಹೊರಬರಲಿದೆಯಂತೆ. ಆ ಅಶ್ಲೀಲ ಸಿಡಿ ಭಾರತೀಯ ಜನತಾ ಪಾರ್ಟಿಯವರದ್ದೇ. ಬಿಜೆಪಿ ಮಾಜಿ ಮುಖ್ಯಮಂತ್ರಿಯ ಅಶ್ಲೀಲ ಸಿಡಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆʼʼ ಎಂದು ಹೇಳಿದ್ದರು.
ಈ ಇಬ್ಬರ ಹೇಳಿಕೆಗಳ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ವಕೀಲ ಜಗದೀಶ್ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರ ಬೆನ್ನಲ್ಲೇ ಇದೀಗ ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳು ಮತ್ತು ವಕೀಲ ಜಗದೀಶ್ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ.