ವಿಧಾನ ಪರಿಷತ್ ಸದಸ್ಯರಾಗಿ 45 ವರ್ಷ: ಬಸವರಾಜ ಹೊರಟ್ಟಿಗೆ ಅಭಿನಂದನೆಗಳ ಮಹಾಪೂರ!

ಬೆಳಗಾವಿ, ಬಾಗಲಕೋಟೆಯಿಂದ ಆಗಮಿಸಿದ ರೈತರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಶಿಕ್ಷಕರು, ಶಿಕ್ಷಕರ ಸಂಘದ ಪ್ರತಿನಿಧಿಗಳು ಬಸವರಾಜ ಹೊರಟ್ಟಿ ಅವರನ್ನು ಗೌರವಿಸಿ ಅಭಿನಂದಿಸಿದರು.;

Update: 2025-07-04 06:36 GMT

ಬಸವರಾಜ್‌ ಹೊರಟ್ಟಿ ಅವರಿಗೆ ಅಭಿನಂದನೆಯ ಮಹಾಪೂರ

ಎಂಟು ಬಾರಿ ನಿರಂತರವಾಗಿ ಶಿಕ್ಷಕರ ಮತಕ್ಷೇತ್ರದಿಂದ ಆಯ್ಕೆಯಾಗುತ್ತಾ ವಿಶ್ವದಾಖಲೆ ನಿರ್ಮಿಸಿರುವ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ತಿನ ಸದಸ್ಯರಾಗಿ ಯಶಸ್ವಿ 45 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಶುಕ್ರವಾರ ನಾಡಿನಲ್ಲೆಡೆಯ ಜನರು ಹೊರಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

1980 ಜೂನ್ 30 ರಂದು ಪ್ರಪ್ರಥಮ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿ ತಮ್ಮ ಸಂಸದೀಯ ಪಯಣವನ್ನು ಆರಂಭಿಸಿದ ಬಸವರಾಜ ಹೊರಟ್ಟಿ ಅವರು ತಮ್ಮ ಆಯುಷ್ಯದ ಅರ್ಧ ಶತಮಾನವನ್ನೇ ವಿಧಾನ ಪರಿಷತ್‌ನ ಸದಸ್ಯರಾಗಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಕರ ಹಾಗೂ ಸಾರ್ವಜನಿಕರ ಗಟ್ಟಿ ಧ್ವನಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ಈ ಸಂದರ್ಭದಲ್ಲಿ ಬೆಳಗಾವಿ, ಬಾಗಲಕೋಟೆಯಿಂದ ಆಗಮಿಸಿದ ರೈತರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಶಿಕ್ಷಕರು, ಶಿಕ್ಷಕರ ಸಂಘದ ಪ್ರತಿನಿಧಿಗಳು ಬಸವರಾಜ ಹೊರಟ್ಟಿ ಅವರನ್ನು ಗೌರವಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಲವರು ಬಸವರಾಜ ಹೊರಟ್ಟಿ ಅವರು ಶಿಕ್ಷಕರ ಸಮುದಾಯದ ಆಸ್ತಿಯಾಗಿದ್ದು, ಸದಾಕಾಲ ಶಿಕ್ಷಕರ ಹಾಗೂ ಸಾರ್ವಜನಿಕರ ದೂರು ದುಮ್ಮಾನಗಳಿಗೆ ಕಿವಿಯಾಗಿ ಕೆಲಸ ಮಾಡುತ್ತಿರುವ ಕ್ರೀಯಾಶೀಲ ವ್ಯಕ್ತಿಯಾಗಿದ್ದಾರೆ. ಶಿಕ್ಷಕರೊಬ್ಬರು ಶಾಸಕರಾಗಿ, 5 ಖಾತೆಗಳ ಸಚಿವರಾಗಿ ಹಾಗೂ 3ನೇ ಬಾರಿಗೆ ಸಭಾಪತಿಯಾಗಿ ಸೇವೆ ಸಲ್ಲಿಸುವ ಸೌಭಾಗ್ಯ ಹೊಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಹತ್ತು ಹಲವು ಸಂಘಟನೆಗಳ ಪದಾಧಿಕಾರಿಗಳು ಬಸವರಾಜ ಹೊರಟ್ಟಿ ಅವರನ್ನು ಗೌರವದಿಂದ ಸತ್ಕರಿಸಿ 5 ದಶಕಗಳ ಕಾಲ ಸಾರ್ವಜನಿಕ ಬದುಕಿನಲ್ಲಿ ಒಂದೇ ಒಂದು ಕಳಂಕವನ್ನು ಹೊಂದಿರದ ನಿಷ್ಕಳಂಕ ವ್ಯಕ್ತಿಯಾಗಿದ್ದಾರೆ. ತಮ್ಮ ನೇರ ನಡೆ-ನುಡಿಯ ಮೂಲಕ ಕರ್ನಾಟಕ ರಾಜಕಾರಣದಲ್ಲಿ ತಮ್ಮದೇ ಆದ ವಿಶಿಷ್ಠ ಛಾಪನ್ನು ಮೂಡಿಸಿರುವ ಅಪರೂಪದ ಜನಸೇವಕರಾಗಿರುವ ಬಸವರಾಜ ಹೊರಟ್ಟಿ ಅವರು 1980 ರಿಂದ ಇಂದಿನವರೆಗೆ ಸತತವಾಗಿ 45 ವರ್ಷಗಳ ಕಾಲ ತಮ್ಮದೇ ಆದ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಧೀಮಂತ ನಾಯಕ ಎಂದು ಬಣ್ಣಿಸಿದರು.

Tags:    

Similar News