ಕಳ್ಳೇಕಾಯ್‌ ಪರಿಷೆ | ಬಸವನಗುಡಿ ಕಡಲೆಕಾಯಿ ಪರಿಷೆ ದಿನಾಂಕ ಘೋಷಣೆ

ಈ ಬಾರಿಯ ಕಡಲೆ ಪರಿಷೆ ವ್ಯಾಪಾರಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಪರಿಷೆಗೆ ಬರುವ ವ್ಯಾಪಾರಿಗಳಿಂದ ಸುಂಕ ವಸೂಲಾತಿ ಅಕ್ರಮ ತಡೆಯಲು ಸುಂಕರಹಿತ ಕಡಲೆಕಾಯಿ ಪರಿಷೆ ನಡೆಸಲು ನಿರ್ಧರಿಸಲಾಗಿದೆ.;

Update: 2024-11-15 00:30 GMT
ಕಡಲೆಕಾಯಿ ಪರಿಷೆಗೆ ದಿನಾಂಕ ಘೋಷಣೆಯಾಗಿದೆ.
Click the Play button to listen to article

ಬೆಂಗಳೂರಿನ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಆರಂಭವಾಗಿದೆ.

ಬಸವನಗುಡಿ ಕಡಲೆಕಾಯಿ ಪರಿಷೆಯು ಪ್ರತಿವರ್ಷವೂ ಕಾರ್ತಿಕ ಮಾಸದ ಕೊನೆಯ ಸೋಮವಾರ  ನಡೆಯುತ್ತದೆ. ಅದರಂತೆ ಈ ಬಾರಿ ನವೆಂಬರ್​ 25 ಮತ್ತು 26ರಂದು ಎರಡು ದಿನಗಳ ಕಾಲ ಕಡಲೆಕಾಯಿ ಪರಿಷೆ ನಡೆಸಲು ಮುಜರಾಯಿ ಇಲಾಖೆ ಮುಂದಾಗಿದೆ. ಈ ಪರಿಷೆಗೆ ಮುಂಚಿತವಾಗಿ ಮಲ್ಲೇಶ್ವರಂನ ಶ್ರೀ ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಮತ್ತು ಕಾಡು ಮಲ್ಲೇಶ್ವರ ಗೆಳೆಯರ ಬಳಗ ವತಿಯಿಂದ ಮಲ್ಲೇಶ್ವರ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ನ.15 ರಿಂದ 18ರ ವರೆಗೆ ರೈತಸ್ನೇಹಿ ಕಡಲೆಕಾಯಿ ಪರಿಷೆಯನ್ನು ಆಯೋಜಿಸಲಾಗಿದೆ.

ಈ ಸಂಬಂಧ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳ ಜೊತೆ ಸಭೆ ಮಾಡಿ ಹಲವಾರು ಸಲಹೆ ಸೂಚನೆ ನೀಡಿದ್ದಾರೆ. ಇದಲ್ಲದೆ ಈ ಬಾರಿಯ ಕಡಲೆ ಪರಿಷೆ ವ್ಯಾಪಾರಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಪರಿಷೆಗೆ ವ್ಯಾಪಾರಿಗಳಿಂದ ಸುಂಕ ವಸೂಲಾತಿ ಅಕ್ರಮ ತಡೆಯಲು ಸುಂಕರಹಿತ ಕಡಲೆಕಾಯಿ ಪರಿಷೆ ನಡೆಸಲು ನಿರ್ಧರಿಸಲಾಗಿದೆ. ಹಾಗೆಯೇ, ಈ ಬಾರಿ ಯಾವುದೇ ರೀತಿಯ ಟೆಂಡರ್ ಪಕ್ರಿಯೆ ಕೂಡ ಇರುವುದಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. 


ಮಲ್ಲೇಶ್ವರಂ ಕಡಲೆಕಾಯಿ ಪರಿಷೆ

ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ನವೆಂಬರ್ 15 ರಿಂದ 3 ದಿನಗಳ ಕಾಲ ನಡೆಯಲಿದೆ. ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ನಿರ್ಧರಿಸಲಾಗಿದೆ. ಪರಿಷೆಗೆ ಬರುವವರು ಮತ್ತು ವ್ಯಾಪಾರಸ್ಥರು ಪ್ಲಾಸ್ಟಿಕ್ ಹೊರತುಪಡಿಸಿ, ಬಟ್ಟೆ ಚೀಲವನ್ನೆ ಬಳಸಬೇಕು ಎಂಬ ನಿಯಮ ಜಾರಿ ಮಾಡಲಾಗುತ್ತದೆ. ಇನ್ನು ಈ ಪರಿಷೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಈ ಬಾರಿ ಮೂರು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 

ಈ ಕಡಲೆ ಕಾಯಿಪರಿಷೆಯ ಇತಿಹಾಸ 

ಬೆಂಗಳೂರು ಮಹಾನಗರವಾಗುವ ಮೊದಲು ಬಸವನಗುಡಿ ಸುಂಕೇನಹಳ್ಳಿಯಾಗಿತ್ತು. ಸುಂಕೇನಹಳ್ಳಿಯ ಮಣ್ಣು ಫಲವತ್ತಾಗಿತ್ತು. ಆ ದಿನಗಳಲ್ಲಿ ಸ್ಥಳೀಯ ಹಾಗೂ ಸುತ್ತಮುತ್ತಲ ಪ್ರದೇಶದ ರೈತರ ಪ್ರಮುಖ ಬೆಳೆಯೇ ಕಡಲೆಕಾಯಿ. ಸುಂಕೇನಹಳ್ಳಿಯ (ಬಸವನಗುಡಿ) ಹಳ್ಳಿಗಳಲ್ಲಿ ಪ್ರತಿ ವರ್ಷ ನೆಲಗಡಲೆ ಬೆಳೆಯುತ್ತಿದ್ದರು. ಆದರೆ ಇದು ರೈತರಿಗೆ ಸರಿಯಾಗಿ ಕಟಾವಿಗೆ ಸಿಗುತ್ತಿರಲಿಲ್ಲ. ಯಾಕಂದ್ರೆ ಬಸವವೊಂದು ರೈತರು ಬೆಳೆದ ನೆಲಗಡಲೆಗಳನೆಲ್ಲ ತಿಂದು ನಾಶಪಡಿಸುತ್ತಿತ್ತು. ಆಗ ರೈತರು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸುವ ಹರಕೆ ಹೊತ್ತುಕೊಂಡು, ಬಸವನನ್ನು ಪ್ರಾರ್ಥಿಸಲು ಆರಂಭಿಸಿದರು.


ಕಾಲಕ್ರಮೇಣ ಬಸವನಗುಡಿ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ದೊರಕಿತು. 16 ನೇ ಶತಮಾನದಲ್ಲಿ ಈ ಸ್ಥಳದಲ್ಲಿ ಕೆಂಪೇಗೌಡರು ನಂದಿಯ ಸುತ್ತಲೂ ದೇವಾಲಯವನ್ನು ನಿರ್ಮಿಸಿದರು. ಇದನ್ನು ಬಸವನ ಗುಡಿ ಅಥವಾ ಬಿಗ್ ಬುಲ್ ಟೆಂಪಲ್ ಎಂದು ಕರೆಯಲಾಗುತ್ತದೆ. ಕಡಲೆ ಕಾಯಿ ಪರಿಷೆ ಈ ದೇವಾಲಯದ ಸುತ್ತ ಕೇಂದ್ರೀಕೃತವಾಗಿದೆ ಮತ್ತು ಬಸವ ರೈತರು ಅರ್ಪಿಸಿದ ನೆಲಗಡಲೆಯನ್ನು ಸ್ವೀಕರಿಸಿ ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿದೆ.

ಇನ್ನು ಕಡಲೆಕಾಯಿ ಪರಿಷೆ ಸಮಯದಲ್ಲಿ ಗ್ರಾಹಕರು ನೆಲಗಡಲೆಗಳನ್ನು ಮಾರುಕಟ್ಟೆ ದರಕ್ಕಿಂತ ಅಗ್ಗವಾಗಿ ರೈತರಿಂದ ನೇರವಾಗಿ ಖರೀದಿಸುತ್ತಾರೆ. ಕಡಲೆಕಾಯಿ ಪರಿಷೆಯ ಸಂದರ್ಭದಲ್ಲಿ ಬಸವನ ಗುಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ನಡೆಯುತ್ತದೆ. ಅಲಂಕೃತ ಬೀದಿಗಳಲ್ಲಿ ಸಾಕಷ್ಟು ಶಾಪಿಂಗ್ ಆಯ್ಕೆಗಳು, ಆಹಾರ ಮಳಿಗೆಗಳು, ಆಟಗಳು ಮತ್ತು ಮಕ್ಕಳಿಗೆ ಆಟಿಕೆಗಳು ಕೂಡ ಇರುತ್ತವೆ.

ಬಸವನಗುಡಿ ಮತ್ತು ಸುತ್ತಮುತ್ತಲಿನ ಜನರು ಕಡಲೆಕಾಯಿ ಪರಿಷೆಯನ್ನು ಪ್ರತಿ ವರ್ಷ ಕಾತರದಿಂದ ಎದುರು ನೋಡುತ್ತಾರೆ. ಈ ಜಾತ್ರೆಗೆ ಕೇವಲ ಬೆಂಗಳೂರಿನ ಸುತ್ತಮುತ್ತಲ ಪ್ರದೇಶದ ಜನರು ಮಾತ್ರವಲ್ಲ, ಶ್ರೀನಿವಾಸಪುರ, ಮಾಲೂರು, ಕೋಲಾರ ಮಂಡ್ಯ, ಮೈಸೂರು, ಚಾಮರಾಜನಗರ, ಮಾಗಡಿ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು, ಚಿಂತಾಮಣಿ, ಹೊಸಕೋಟೆ ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶಗಳಿಂದ ಸಹ ರೈತರು ಹಾಗೂ ವ್ಯಾಪಾರಿಗಳು ಇಲ್ಲಿ ಬಂದು ಕಡಲೆಕಾಯಿ ವ್ಯಾಪಾರ ಮಾಡುತ್ತಾರೆ. ಇಲ್ಲಿ ನಾನಾ ತಳಿಯ ಹಾಗೂ ನಾನಾ ಗಾತ್ರದ ಕಡಲೆಕಾಯಿಗಳನ್ನು ಕಾಣಬಹುದು. ಹಸಿ ಕಡಲೆಕಾಯಿ, ಹುರಿದ ಮತ್ತು ಬೇಯಿಸಿದ, ಅರೆ ಬೆಂದ ಕಡಲೆ ಕಾಯಿಗಳು ಕೂಡ ಮಾರಾಟವಾಗುತ್ತವೆ. 

Tags:    

Similar News